ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಡೆಂಗ್ಯೂ ಜ್ವರ: ಹೆಚ್ಚಿದ ಆತಂಕ..!

By Girish GoudarFirst Published Oct 7, 2023, 2:00 AM IST
Highlights

ಕಳೆದ ಒಂದು ತಿಂಗಳಿಂದ ಜಿಲ್ಲೆಯ ಜನರಲ್ಲಿ ಜ್ವರ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಡೆಂಗ್ಯೂ ಪತ್ತೆಗಾಗಿ ಒಟ್ಟು 467 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೊಳಪಡಿಸಲಾಗಿದೆ. ಇದರಲ್ಲಿ ಕೆಲವರದ್ದು ನೆಗೆಟಿವ್ ಬಂದಿದ್ದರೆ, ಇನ್ನು ಹಲವರ ರಕ್ತ ಮಾದರಿಯ ವರದಿ ಬರಬೇಕಾಗಿದೆ. ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದಂತೆ ಬ್ಲಡ್ ಬ್ಯಾಂಕ್‌ಗಳಲ್ಲಿ ಪ್ಲೇಟ್ಲೆಟ್ಸ್ ಕೊರತೆ ಕೂಡ ಉಂಟಾಗುತ್ತಿದೆ.‌ 

ಉತ್ತರಕನ್ನಡ(ಅ.07):  ಉತ್ತರಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ ಶುರುವಾಗಿದ್ದು, ಜಿಲ್ಲೆಯಲ್ಲಿ ಮೂರೇ ತಿಂಗಳಲ್ಲಿ 42 ಜನರಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಈ ಪ್ರಕರಣಗಳ ಹೆಚ್ಚಳದಿಂದ ಜಿಲ್ಲೆಯ ಜನರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. 

ಕಳೆದ ಒಂದು ತಿಂಗಳಿಂದ ಜಿಲ್ಲೆಯ ಜನರಲ್ಲಿ ಜ್ವರ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಡೆಂಗ್ಯೂ ಪತ್ತೆಗಾಗಿ ಒಟ್ಟು 467 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೊಳಪಡಿಸಲಾಗಿದೆ. ಇದರಲ್ಲಿ ಕೆಲವರದ್ದು ನೆಗೆಟಿವ್ ಬಂದಿದ್ದರೆ, ಇನ್ನು ಹಲವರ ರಕ್ತ ಮಾದರಿಯ ವರದಿ ಬರಬೇಕಾಗಿದೆ. ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದಂತೆ ಬ್ಲಡ್ ಬ್ಯಾಂಕ್‌ಗಳಲ್ಲಿ ಪ್ಲೇಟ್ಲೆಟ್ಸ್ ಕೊರತೆ ಕೂಡ ಉಂಟಾಗುತ್ತಿದೆ.‌ 

ಉತ್ತರಕನ್ನಡ: ಮತ್ತೆ ಮುನ್ನೆಲೆಗೆ ಬಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ, ಕರವೇಯಿಂದ ಬಂದ್ ಎಚ್ಚರಿಕೆ

ಉತ್ತರಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಯನ್ನು ಕೂಡಾ ಆರೋಗ್ಯ ಇಲಾಖೆ ಮಾಡಿಕೊಂಡಿದೆ. ಕಾರವಾರದ ಕ್ರಿಮ್ಸ್ ನಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಸೋಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸಲಾಗಿದ್ದು, ಸುಮಾರು 100 ಹಾಸಿಗೆಯ ಕೊಠಡಿ ತೆರೆಯಲಾಗಿದೆ. ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. 

ಇನ್ನು ಡೆಂಗ್ಯೂ ತಡೆಗಟ್ಟಲು ಉತ್ತರಕನ್ನಡ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೊಳಚೆ ಮತ್ತು ನೀರು ನಿಲ್ಲುವ ತಗ್ಗು ಪ್ರದೇಶದಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಲಾಗಿದೆ. ರೋಗ ಹರಡದಂತೆ ಆರೋಗ್ಯ ಇಲಾಖೆಯಿಂದ ಜಾಗೃತಿ ಕರಪತ್ರ ಹಂಚಿಕೆ ಮಾಡಲಾಗಿದ್ದು, ಗ್ರಾಮೀಣ ಭಾಗದಲ್ಲೂ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ ಡೆಂಗ್ಯೂ ತಡೆಗೆ ಸೂಕ್ತ ಕ್ರಮಕ್ಕೆ ಆಡಳಿತ ವ್ಯವಸ್ಥೆ ಮುಂದಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ತರಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಉತ್ತರಕನ್ನಡ ಜಿಲ್ಲೆಯಲ್ಲಿ ಸೆ.15ರವರೆಗೂ ಡೆಂಗ್ಯೂಗೆ ಸಂಬಂಧಿಸಿದಂತೆ ಒಟ್ಟು 467 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 42 ಪಾಸಿಟಿವ್ ವರದಿ ಬಂದಿವೆ. ಈವರೆಗೂ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಚಿಕೂನ್ ಗುನ್ಯಾ ಶಂಕೆಯಲ್ಲೂ 47 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಅವರಲ್ಲಿ ಒಂದು ಮಾತ್ರ ಪಾಸಿಟಿವ್ ವರದಿಯಾಗಿದೆ. ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಕಾಯಿಲೆಗಳು ಈಡಿಸ್ ಈಜಿಪ್ಟೆ ಜಾತಿಯ ಸೊಳ್ಳೆಯಿಂದ ಹರಡುತ್ತವೆ. ಈ ಸೊಳ್ಳೆಗಳು ಮನೆ ಸುತ್ತಮುತ್ತ ನಿಂತ ನೀರಿನಲ್ಲಿ ತಮ್ಮ ವಂಶಾಭಿವೃದ್ಧಿಯನ್ನು ಮಾಡುತ್ತವೆ. ಹಳೇಯ ಎಸೆದಿರುವ ಬಾಟಲ್ ಗಳು, ಟಯರ್ ಗಳು, ಹೂವಿನ ಕುಂಡಗಳು, ಏರ್ ಕೂಲರ್ ಗಳಲ್ಲಿ ಕೇವಲ 20 ಎಂಎಲ್ ನೀರು ನಿಂತರೂ ಸಹ ಈ ಸೊಳ್ಳೆಗಳು ತಮ್ಮ ವಂಶಾಭಿವೃದ್ಧಿ ಮಾಡುತ್ತವೆ. ಈ ಸೊಳ್ಳೆಗಳು ಡೆಂಗ್ಯೂ ಅಥವಾ ಚಿಕೂನ್ ಗುನ್ಯಾ ರೋಗಿಯನ್ನು ಕಚ್ಚಿ ಬಳಿಕ ಆರೋಗ್ಯವಂತ ಮನುಷ್ಯನಿಗೆ ಕಡಿದಾಗ ರೋಗ ಹರಡುವ ಸಾಧ್ಯತೆಗಳು ಜಾಸ್ತಿ. ಮನೆ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡುವ ಮೂಲಕ ಈ ರೋಗ ಹರಡುವುದನ್ನು ತಡೆಗಟ್ಟಬಹುದು ಅಂತಾರೆ ವೈದ್ಯರು. 

click me!