ಹುಬ್ಬಳ್ಳಿ (ನ.17) : ಮತ ವ್ಯಾಪಾರದ ಸರಕಾದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಕಾವಲುಗಾರರಾಗಬೇಕು. ಜತೆಗೆ ನನ್ನ ಮತ ಮಾರಾಟಕ್ಕಿಲ್ಲವೆಂದು ಪ್ರತಿಜ್ಞೆ ಮಾಡಿ ಸಂಕಲ್ಪ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಇಲ್ಲಿನ ಬಿವಿಬಿ ಆವರಣದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ನಡೆದ ‘ಚುನಾವಣೆ ಸುಧಾರಣಾ ಕ್ರಮ’ ಕುರಿತು ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸೌಹಾರ್ದತೆ ನಿರ್ಮಾಣ ಆಗಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ
ಇಂದು ಹಣ, ಜಾತಿ, ತೋಳ್ಬಲದ ಆಧಾರದ ಮೇಲೆ ಚುನಾವಣೆ ನಡೆಯುತ್ತಿದೆ. ಚುನಾವಣೆ ವ್ಯವಸ್ಥೆ ಸುಧಾರಣೆ ಕುರಿತು ಈಗಾಗಲೇ ಮಾಚ್‌ರ್ 28, 29ರಂದು ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅದನ್ನು ರಾಜ್ಯದಲ್ಲಿ ಮುಂದುವರಿಸಲು ನಿರ್ಣಯ ಕೈಗೊಳಲಾಗಿದೆ. ಅದರಂತೆ ರಾಯಚೂರು, ಮಂಗಳೂರು, ವಿಜಯಪುರ, ಶಿವಮೊಗ್ಗ ಮುಂತಾದೆಡೆ ಸಂವಾದ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಪತ್ರಿಕಾ, ವೈದ್ಯಕೀಯ ರಂಗ ಸೇರಿ ಎಲ್ಲ ರಂಗಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿವೆ. ಈ ರಂಗದಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಯಾವ ಕ್ಷೇತ್ರವೂ ಮಾದರಿಯಾಗಿಲ್ಲ. ಇವುಗಳ ಸ್ಥಿತಿ ಗಂಭೀರವಾಗಿದೆ. ಆದರ್ಶ, ಮೌಲ್ಯ ಅಧಃಪತನಗೊಳ್ಳುತ್ತಿವೆ. ಕೇವಲ ಹಣ ಗಳಿಕೆ, ಸ್ವಾರ್ಥಕ್ಕಾಗಿ ಮನುಷ್ಯ ನಿಂತಿದ್ದಾನೆ. ಇಂತಹ ವಿಷವರ್ತುಲದಿಂದ ನಾವು ಹೊರಬೇಕಾಗಿದೆ ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಭಾರತ ಆಹಾರ ಸಂಗ್ರಹ, ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಬಾಹ್ಯಾಕಾಶ, ಶಿಕ್ಷಣ, ಕ್ರೀಡೆ, ಆರೋಗ್ಯ ಕ್ಷೇತ್ರದಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ಆಧುನಿಕ ತಂತ್ರಜ್ಞಾನದಲ್ಲಿ ವಿಶ್ವದ ಅಗ್ರಗಣ್ಯ ದೇಶದ ಸರಿಸಮಾನವಾಗಿ ಭಾರತ ನಿಂತಿದೆ. ಇದಕ್ಕೆಲ್ಲ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ ಎಂದರು.
ವ್ಯಾಪಾರಕ್ಕಾಗಿ ಬಂದ ಪರಕೀಯರು ನಮ್ಮನ್ನು ಶತಮಾನಗಳ ಕಾಲ ಆಳಿ ಖಡ್ಗ ಹಿಡಿದು ಬಲವಂತದಿಂದ ಮತಾಂತರ ಮಾಡಿದ್ದಾರೆ. ಅದನ್ನು ಸಮರ್ಥವಾಗಿ ಎದುರಿಸಿದ ಹೋರಾಟಗಾರರನ್ನು ನಾವು ಸ್ಮರಿಸಬೇಕು. ಜತೆಗೆ ನಮ್ಮತನವನ್ನು ಜಾಗೃತಗೊಳಿಸುವ ಜತೆಗೆ ಜಗತ್ತಿಗೆ ಧೈರ್ಯ, ಜ್ಞಾನದ ಮಹತ್ವ ಸಾರಿದ ಛತ್ರಪತಿ ಶಿವಾಜಿ ಮತ್ತು ಸ್ವಾಮಿ ವಿವೇಕಾನಂದರನ್ನು ಮರೆಯಬಾರದು ಎಂದು ಕಾಗೇರಿ ಹೇಳಿದರು.
ಬಡತನ, ನಿರುದ್ಯೋಗ, ಭಯೋತ್ಪಾದನೆ, ನಕ್ಸಲ್, ಭ್ರಷ್ಟಾಚಾರ ದೇಶವನ್ನು ಕಾಡುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಬಂದಿರುವ ಸ್ವಾತಂತ್ರ್ಯ ಏನಾಗಿದೆ ಎಂಬ ಪ್ರಶ್ನೆಯೂ ಮೂಡುತ್ತದೆ. ಹಾಗಾಗಿ ನ್ಯಾಯದ ಹಾದಿಯಲ್ಲಿ ಹಣ ಗಳಿಸಿ ಮೊದಲು ನಾವು ಪರಿವರ್ತನೆಯಾಗಬೇಕು. ನಿರ್ಭೀತರಾಗಿ ಮುಕ್ತ ಮನಸ್ಸಿನಿಂದ ಮತ ಚಲಾಯಿಸುವಂತಾಗಬೇಕು ಎಂದರು.
ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಡಾ. ಸುರೇಶ ಇಟ್ನಾಳ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟರ್ ಬಸವರಾಜ ಅನಾಮಿ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಾಪಂ ಇಒ ಗಂಗಾಧರ ಕಂದಕೂರ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಹು-ಧಾ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.
ಚುನಾವಣೆಯಲ್ಲಿ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆ
ಚುನಾವಣೆ ವ್ಯವಸ್ಥೆಯಲ್ಲಿ ಹಿಂದಿನಿಂದ ಅನೇಕ ಬದಲಾವಣೆಯಾಗಿದ್ದು 1982ರಲ್ಲಿ ಇವಿಎಂ ಜಾರಿಗೆ ತರಲಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಬಲಗೊಳಿಸಲು ರಾಷ್ಟ್ರಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು. ನೋಟಾ ಬಳಕೆಗೆ ಅವಕಾಶ, ಹೆಸರು ನೋಂದಣಿಗೆ ಮುಕ್ತ ಅವಕಾಶ ನೀಡಲಾಯಿತು. ಚುನಾವಣಾ ಖರ್ಚುವೆಚ್ಚಕ್ಕೆ ಮಿತಿ ಹೇರಲಾಗಿದೆ. ಆಧಾರ್ ಸಂಖ್ಯೆಯನ್ನು ಚುನಾವಣಾ ಗುರುತಿನ ಚೀಟಿಗೆ ಜೋಡಿಸಲಾಗುತ್ತಿದೆ. ಮೊದಲು ಜನರು ಸರಿಯಾದರೆ, ಆಮೇಲೆ ವ್ಯವಸ್ಥೆ ಬದಲಾವಣೆ ಸಾಧ್ಯ. ಅದಕ್ಕಾಗಿ ಯುವಕರು ನನ್ನ ಮತ ಮಾರಾಟಕ್ಕಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಇದು ಜನಾಂದೋಲನದ ರೀತಿಯಲ್ಲಿ ಆಗಬೇಕು ಎಂದು ಅಭಿಪ್ರಾಯಿಸಿದರು.
ಮತದಾರರ ಪಟ್ಟಿಸರಿ ಇಲ್ಲ. ಚುನಾವಣಾ ಆಯೋಗ ವರ್ಷಪೂರ್ತಿ ಕಾರ್ಯಪ್ರವೃತ್ತವಾಗಿ ಮತದಾರರನ್ನು ಜಾಗೃತಗೊಳಿಸಬೇಕಾಗಿದೆ. ರಾಜಕೀಯ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವ ಶಕ್ತಿಯನ್ನು ಹೊಂದಬೇಕು ಎಂದರು.
ದೇಶದ್ರೋಹಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಸ್ಪೀಕರ್ ಕಾಗೇರಿ
ಅರ್ಥಪೂರ್ಣ ಸಂವಾದ
ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸುವವರಿಗೆ 6 ವರ್ಷ ಚುನಾವಣೆಯಿಂದ ಬ್ಯಾನ್ ಮಾಡಬೇಕು, ವಿಧಾನಸಭೆಗೆ ಸ್ಪರ್ಧಿಸುವವರ ವಯೋಮಿತಿಯನ್ನು 25ರಿಂದ 22ಕ್ಕೆ ಸಡಿಲಿಸಬೇಕು. ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು, ಗ್ರಾಪಂ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವವರಿಗೆ ವಿದ್ಯಾರ್ಹತೆ ನಿಗದಿಪಡಿಸಬೇಕು. ಚುನಾವಣೆಗೆ ಒಬ್ಬರೇ ಪದೇ ಪದೇ ಸ್ಪರ್ಧಿಸುವುದಕ್ಕೆ ಕಡಿವಾಣ ಹಾಕಬೇಕು, ಕುಟುಂಬ ರಾಜಕಾರಣಕ್ಕೆ ಇತಿಮಿತಿ ಹೇರಬೇಕು, ಚುನಾವಣೆ ವ್ಯವಸ್ಥೆಯಲ್ಲಿ ಅಕ್ರಮ ಕಡಿಮೆ ಮಾಡಬೇಕು ಸೇರಿದಂತೆ ಹಲವು ಸಲಹೆಗಳು ವಿದ್ಯಾರ್ಥಿ ವಲಯದಿಂದ ಕೇಳಿಬಂದವು.