ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಡಿ.27): ಕಳೆದೆರಡು ವರ್ಷಗಳಲ್ಲಿ ದೇಶಾದ್ಯಂತ ಕೊರೊನಾ ಮಹಾಮಾರಿಗೆ ಹಲವಾರು ಜನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ನಮ್ಮ ಧಾರವಾಡ ಜಿಲ್ಲೆಯಲ್ಲಿಯೂ ಹಾನಿಯಾಗಿದ್ದು, ಆದರೆ ಬಹುತೇಕ ನಮ್ಮ ಹಾಗೂ ಸುತ್ತಲಿನ ಜಿಲ್ಲೆಗಳ ಕೋವಿಡ್ ಭಾದಿತರು ಉತ್ತಮ ಚಿಕಿತ್ಸೆ ಪಡೆದು ಕೋವಿಡ್ ಅಪಾಯದಿಂದ ಪಾರಾಗಿದ್ದಾರೆ ಮತ್ತು ಕೋವಿಡ್ ನಿರ್ವಹಣೆಯಲ್ಲಿ ರಾಜ್ಯಸರ್ಕಾರದಿಂದ ಧಾರವಾಡ ಜಿಲ್ಲೆ ಭೇಷ್ ಎನಿಸಿಕೊಂಡಿದೆ. ಈಗ ಸಂಭಾವ್ಯ ಕೋವಿಡ್ ಅಲೆಯನ್ನು ಸಮರ್ಥವಾಗಿ ನಿಭಾಯಿಸಿ ನಿಯಂತ್ರಿಸುವ ಜವಾಬ್ದಾರಿಯು ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಕೋವಿಡ್(Covid-19) ಅಲೆಯ ನಿಯಂತ್ರಣಕ್ಕಾಗಿ ಮತ್ತು ಉತ್ತಮ ಚಿಕಿತ್ಸೆಗಾಗಿ ಕೈಗೊಂಡಿರುವ ಮುಂಜಾಗೃತಾ ಕ್ರಮಗಳ ಕುರಿತು ಆರೋಗ್ಯ, ಕಂದಾಯ, ಪೊಲೀಸ್, ಮಹಾನಗರ ಪಾಲಿಕೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಮೊದಲ ಮತ್ತು 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಕೋವಿಡ್ ಸಾವುಗಳು ಸಂಭವಿಸದಂತೆ ಮತ್ತು ಪಾಸಿಟಿವ್ ಪ್ರಕರಣಗಳಲ್ಲಿ ಭಾದಿತರಿಗೆ ಸಕಾಲಕ್ಕೆ ಉತ್ತಮ ಚಿಕಿತ್ಸೆ ನೀಡಲಾಗಿತ್ತು. ಈಗ ಕೋವಿಡ್ ರೂಪಾಂತರಿ ತಳಿ ಬಿಎಫ್.7 ಸೋಂಕು ವಿಶ್ವದಲ್ಲೆಡೆ ಹಬ್ಬುತ್ತಿದ್ದು, ಅದು ಭಾರತಕ್ಕೂ ಬರುವ ನಿರೀಕ್ಷೆ ಇದೆ ಎಂದು ತಜ್ಞರು ಹಾಗೂ ಸರ್ಕಾರ ಅಭಿಪ್ರಾಯಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ. ಹೊರದೇಶಗಳಿಂದ ಬರುವ ಪ್ರಯಾಣಿಕರಿಗೆ ರ್ಯಾಂಡಮ್ ಕೋವಿಡ್ ಟೆಸ್ಟ್(Covid test) ಮಾಡಲು ಕ್ರಮವಹಿಸಿದೆ ಎಂದು ಅವರು ಹೇಳಿದರು.
ಕೊವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಆತಂಕ ಬೇಡ: ಸಿಎಂ ಬಸವರಾಜ ಬೊಮ್ಮಾಯಿ
ಕಳೆದ 2 ವರ್ಷಗಳ ಕೋವಿಡ್ ಸಮಯದಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಸಹಾಯದಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ(Government hospitals)ಗಳಲ್ಲಿ ಈಗಾಗಲೇ ಆರೋಗ್ಯ ಮೂಲ ಸೌಕರ್ಯಗಳನ್ನು ಉನ್ನತೀಕರಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್(Oxygen), ಬೆಡ್(Bed), ಐಸಿಯು ಬೆಡ್(ICU bed), ವೆಂಟಿಲೇಟರ್(ventilator), ಆಂಬುಲೆನ್ಸ್(Ambulance) ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಹೊಂದಲಾಗಿದೆ. ಸಾರ್ವಜನಿಕರಲ್ಲಿ ಕೋವಿಡ್ ಅಲೆಯ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಆದಷ್ಟು ಶೀಘ್ರ ಮಾಸ್ಕ್‍ಡ್ರೈವಗಳನ್ನು ಆರಂಭಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಲಸಿಕಾಕರಣವನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ ವಿವಿಧ ಪ್ರಮುಖ ಕಾರ್ಯಕ್ರಮಗಳು ಜರುಗುತ್ತಿರುವುದರಿಂದ ಜಿಲ್ಲೆಯ ಜನರು ಮೂರು ಡೋಸ್ ಲಸಿಕೆ ಪಡೆಯುವಂತೆ ಮತ್ತು ಮಾಸ್ಕ್ ಧರಿಸುವಂತೆ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ತಾಲೂಕಾ ಮಟ್ಟದಲ್ಲಿ ಕಂದಾಯ ಇಲಾಖೆಯ ಸಹಯೋಗದಲ್ಲಿ ಆರೋಗ್ಯ ಇಲಾಖೆ ಮಾಸ್ಕ್ ಧಾರಣೆ ಹಾಗೂ ಲಸಿಕಾಕರಣ ಕುರಿತು ಜಾಗೃತಿ ಮೂಡಿಸಬೇಕೆಂದು ಅವರು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಟೀಲ ಶಶಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಮೊದಲ, ಎರಡನೇಯ ಮತ್ತು ಮೂರನೆಯ ಅಲೆಯ ನಿರ್ವಹಣೆ ಕುರಿತು ವಿವರಿಸಿದರು. ಸಂಭಾವ್ಯ ಕೋವಿಡ್ ಅಲೆಯನ್ನು ತಡೆಯಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ತಿಳಿಸಿದರು. ಲಸಿಕಾಕರಣಕ್ಕೆ ಒತ್ತು ನೀಡಲು ಎಲ್ಲ ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಲಾಗಿದ್ದು, ಲಸಿಕಾಕರಣದ ನೋಡಲ್ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ, ಜಿಲ್ಲಾ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕಾ ವೈಧ್ಯಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಆಸ್ಪತ್ರೆಗಳ ಮುಖ್ಯ ವೈಧ್ಯಾಧಿಕಾರಿಗಳು, ಎಲ್ಲ ತಾಲೂಕುಗಳ ತಹಶೀಲ್ದಾರರು, ಎಸ್‍ಡಿಎಂ ಆಸ್ಪತ್ರೆಯ ವೈದ್ಯಕೀಯ ಉಪ ಅಧೀಕ್ಷಕರು, ಜಿಲ್ಲಾಸ್ಪತ್ರೆಯ ಹಾಗೂ ಕಿಮ್ಸ್ ಆಸ್ಪತ್ರೆಯ ಸ್ಥಾನಿಕ ವೈಧ್ಯಾಧಿಕಾರಿಗಳು, ಪೊಲೀಸ್ ಮಹಾಗನರ ಪಾಲಿಕೆ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕರಿಗಳು ಭಾಗವಹಿಸಿದ್ದರು.
ಕೋವಿಡ್-19 ಪ್ರಕರಣಗಳು: 2020 ಮಾರ್ಚ್‍ನಿಂದ ಫೆಬ್ರುವರಿಯ 2021 ರವರೆಗೆ ಕೋವಿಡ-19 ನ ಮೊದಲ ಅಲೆಯಲ್ಲಿ ಧಾರವಾಡದಲ್ಲಿ ಒಟ್ಟು 22,339 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ 21,678 ಜನ ಬಿಡುಗಡೆ ಹೊಂದಿದ್ದಾರೆ. ಇದರಲ್ಲಿ 615 ಮರಣ ಹೊಂದಿದ್ದಾರೆ.
2021 ರ ಮಾರ್ಚ್‍ನಿಂದ ಡಿಸೆಂಬರ್ 31 ರವರೆಗೆ ಕೊವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 39,178 ಪ್ರಕರಣಗಳು ದಾಖಲಾಗಿ, ಇದರಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ 38,475 ಜನ ಬಿಡುಗಡೆ ಹೊಂದಿದ್ದು, ಮತ್ತು 706 ಜನ ಮರಣ ಹೊಂದಿದ್ದಾರೆ.
2022 ಜನೆವರಿಯಿಂದ ಡಿಸೆಂಬರ್ 25 ರವರೆಗೆ ಜಿಲ್ಲೆಯಲ್ಲಿ ಒಟ್ಟು 24, 874 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ 24,824 ಜನ ಬಿಡುಗಡೆ ಹೊಂದಿದ್ದಾರೆ. ಮತ್ತು 89 ಜನ ಮರಣ ಹೊಂದಿದ್ದಾರೆ.
ಜಿಲ್ಲೆಯ ಒಟ್ಟು ಕೋವಿಡ್ ಪ್ರಕರಣಗಳು: 2020 ಮಾರ್ಚ್‍ನಿಂದ 2022 ಡಿಸೆಂಬರ್ 25 ರವರೆಗೆ ಜಿಲ್ಲೆಯಾದ್ಯಂತ ಒಟ್ಟು 86,391 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ 84,977 ಜನ ಬಿಡುಗಡೆ ಹೊಂದಿದ್ದಾರೆ. ಮತ್ತು ಇದರಲ್ಲಿ 1,410 ಜನ ಮರಣ ಹೊಂದಿದ್ದಾರೆ.
ಕಳೆದ 7 ದಿನಗಳಲ್ಲಿ ಕೋವಿಡ್-19: ಪಾಸಿಟಿವಿಟಿ ದರ ಜೀರೋ ಆಗಿದ್ದು, ಕಳೆದ 7 ದಿನಗಳಲ್ಲಿ ಜಿಲ್ಲೆಯಾದ್ಯಂತ 854 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಲಾಗಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಜಿಲ್ಲೆಯಲ್ಲಿರುವ ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳು: ಜಿಲ್ಲೆಯಲ್ಲಿ ಮೂರು ಆಸ್ಪತ್ರೆಗಳಲ್ಲಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಕಿಮ್ಸ್ ಹಾಗೂ ಡಿಮ್ಹಾನ್ಸ್ ಸರಕಾರಿ ಆಸ್ಪತ್ರೆಗಳು ಹಾಗೂ ಒಂದು ಎಸ್.ಡಿ.ಎಮ್. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಬಹುದು.
ಜನವರಿ 16 ರಿಂದ 2022 ಡಿಸೆಂಬರ್ 23 ರವರೆಗಿನ ಕೋವಿಡ್-19 ಲಸಿಕಾಕರಣ ವಿವರ:
ಜಿಲ್ಲೆಯಲ್ಲಿನ 18 ವರ್ಷ ಮೇಲ್ಮಟ್ಟ ಜನರ ತಾಲುಕುವಾರು ಲಸಿಕಾ ಸಾಧನೆ ಧಾರವಾಡ ತಾಲೂಕಿನಲ್ಲಿ ಒಟ್ಟು 4,35,547 ಲಸಿಕೆಗಳನ್ನು ಹಾಕುವ ಗುರಿ ಹೊಂದಲಾಗಿತ್ತು. ಇದರಲ್ಲಿ ಮೊದಲನೇ ಡೋಸ್ 4,74,966 ಲಸಿಕೆಗಳನ್ನು ಹಾಕಲಾಗಿದ್ದು, ಶೇ.109.05 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು ಎರಡನೇ ಡೋಸ್ 5,06,150 ಜನರಿಗೆ ಲಸಿಕೆ ನೀಡಲಾಗಿದ್ದು, ಶೇ.116.21 ರಷ್ಟು ಗುರಿ ಸಾಧಿಸಲಾಗಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ ಒಟ್ಟು 6,17,078 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇದರಲ್ಲಿ ಮೊದಲನೇ ಡೋಸ್ ಆಗಿ 6,38,113 ಜನರಿಗೆ ಲಸಿಕೆ ನೀಡಿ ಶೇ.103.41 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು ಎರಡನೇ ಡೋಸ್ ಆಗಿ 6,23,739 ಜನರಿಗೆ ಲಸಿಕೆಗಳನ್ನು ನೀಡಿ ಶೇ.101.08 ರಷ್ಟು ಗುರಿ ಸಾಧಿಸಲಾಗಿದೆ.
ಕಲಘಟಗಿ ತಾಲೂಕನಲ್ಲಿ ಒಟ್ಟು 1,20,386 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇದರಲ್ಲಿ ಮೊದಲನೇ ಡೋಸ್ ಆಗಿ 1,26,022 ಜನರಿಗೆ ನೀಡಿ ಶೇ.104.68 ರಷ್ಟು ಗುರಿ ಸಾಧಿಸಲಾಗಿದೆ. ಎರಡನೇ ಡೋಸ್ ಆಗಿ 1,19,062 ಜನರಿಗೆ ಲಸಿಕೆಗಳನ್ನು ನೀಡಿ ಶೇ.98.90 ರಷ್ಟು ಗುರಿ ಸಾಧಿಸಲಾಗಿದೆ.
ಕುಂದಗೋಳ ತಾಲೂಕಿನಲ್ಲಿ ಒಟ್ಟು 1,29,189 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇದರಲ್ಲಿ ಮೊದಲ ಡೋಸ್ ಆಗಿ 1,30,577 ಜನರಿಗೆ ಲಸಿಕೆ ನೀಡಿ ಶೇ.101.07 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು ಎರಡನೇ ಡೋಸ್ ಆಗಿ 1,31,975 ಜನರಿಗೆ ಲಸಿಕೆಗಳನ್ನು ನೀಡಿ ಶೇ.102.16 ರಷ್ಟು ಗುರಿ ಸಾಧಿಸಲಾಗಿದೆ.
ನವಲಗುಂದ ತಾಲೂಕಿನಲ್ಲಿ ಒಟ್ಟು 1,41,799 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇದರಲ್ಲಿ ಮೊದಲ ಡೋಸ್ ಆಗಿ 1,40,787 ಜನರಿಗೆ ಲಸಿಕೆ ನೀಡಿ ಶೇ.99.29 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು ಎರಡನೇ ಡೋಸ್ ಆಗಿ 1,49,267 ಜನರಿಗೆ ಲಸಿಕೆ ನೀಡಿ ಶೇ.105.27 ರಷ್ಟು ಗುರಿ ಸಾಧಿಸಲಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 14,44,000 ಲಸಿಕೆಗಳನ್ನು ನೀಡುವ ಗುರಿ ಹೊಂದಲಾಗಿತ್ತು. ಇದರಲ್ಲಿ ಒಟ್ಟು 15,10,465 ಜನರಿಗೆ ಮೊದಲ ಡೋಸ್ ನೀಡಿ ಶೇ.104.60 ರಷ್ಟು ಗುರಿ ಸಾಧಿಸಲಾಗಿದೆ. ಎರಡನೇ ಡೋಸ್ ಆಗಿ 15,30,193 ಜನರಿಗೆ ಲಸಿಕೆಗಳನ್ನು ನೀಡಿ, ಶೇ.105.97 ರಷ್ಟು ಗುರಿ ಸಾಧಿಸಲಾಗಿದೆ.
12 ರಿಂದ 14 ವರ್ಷದವರೊಳಗಿನ ಮಕ್ಕಳ ಲಸಿಕಾ ಸಾಧನೆ:
ಒಟ್ಟು ಜಿಲ್ಲೆಯಾದ್ಯಂತ 60,020 ಮಕ್ಕಳಿಗೆ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿತ್ತು. ಮೊದಲ ಡೋಸ್ ಆಗಿ 74,375 ಮಕ್ಕಳಿಗೆ ಲಸಿಕೆಯನ್ನು ನೀಡಿ ಶೇ.123.92 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು ಎರಡನೇ ಡೋಸ್ ಆಗಿ 64,792 ಮಕ್ಕಳಿಗೆ ಲಸಿಕೆಯನ್ನು ನೀಡಿ ಶೇ.107.95 ರಷ್ಟು ಗುರಿ ಸಾಧಿಸಲಾಗಿದೆ. ನಿಗದಿತ ಗುರಿಗಿಂತ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಲಾಗಿದೆ.
15 ರಿಂದ 17 ವರ್ಷದ ಒಳಗಿನ ಮಕ್ಕಳ ಲಸಿಕಾ ಸಾಧನೆ:
ಜಿಲ್ಲೆಯಾದ್ಯಂತ ಒಟ್ಟು 95,774 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಆಗಿ 84,011 ಜನ ಮಕ್ಕಳಿಗೆ ಲಸಿಕೆ ನೀಡಿ ಶೇ.87.72 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು ಎರಡನೇ ಡೋಸ್ ಆಗಿ 79,364 ಜನ ಮಕ್ಕಳಿಗೆ ಲಸಿಕೆ ನೀಡಿ ಶೇ.82.87 ರಷ್ಟು ಗುರಿ ಸಾಧಿಸಲಾಗಿದೆ.
18 ವರ್ಷ ಮೆಲ್ಪಟ್ಟ ಜನರಿಗೆ ನೀಡಲಾದ ಮುಂಜಾಗ್ರತಾ ಡೋಸ್‍ಗಳ ವಿವರ:
ಒಟ್ಟು ಜಿಲ್ಲೆಯಾದ್ಯಂತ 14,70,994 ಜನರಿಗೆ ಮುಂಜಾಗ್ರತಾ ಲಸಿಕೆಯನ್ನು ನೀಡಲಾಗಿದೆ. ಅದರಲ್ಲಿ 3,01,432 ಜನರಿಗೆ ಮುಂಜಾಗ್ರತಾ ಲಸಿಕೆಯನ್ನು ನೀಡಿ ಇದುವರೆಗೆ ಶೇ.20.49 ರಷ್ಟು ಗುರಿ ಸಾಧಿಸಲಾಗಿದೆ.
ಕೋವಿಡ್ -19 ಆಸ್ಪತ್ರೆ ಹಾಸಿಗೆಗಳ ವಿವರ:
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಟ್ಟು 1,115 ಹಾಸಿಗೆಗಳು, 760 ಆಕ್ಸಿಜನ್ ಹಾಸಿಗೆಗಳು, 240 ಐಸಿಯು ಹಾಗೂ 115 ವೆಂಟಿಲೇಟರ್‍ಗಳ ಸೌಲಭ್ಯವಿರವ ಹಾಸಿಗೆಗಳನ್ನು (ಬೆಡ್) ಹೊಂದಲಾಗಿದೆ. ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 163 ಹಾಸಿಗೆಗಳು, 121 ಆಕ್ಸಿಜನ್ ಹಾಸಿಗೆಗಳು, 21 ಐ.ಸಿ.ಯು ಹಾಗೂ 21 ವೆಂಟಿಲೇಟರ್‍ಗಳು ಕೋವಿಡ್ ಚಿಕಿತ್ಸೆಗೆ ಲಭ್ಯ ಇವೆ. ಹುಬ್ಬಳ್ಳಿಯ ರೇಲ್ವೆ ಆಸ್ಪತ್ರೆಯಲ್ಲಿ ಒಟ್ಟು 52 ಹಾಸಿಗೆಗಳು, 34 ಆಕ್ಸಿಜನ್ ಹಾಸಿಗೆಗಳು, 9 ಐಸಿಯು ಹಾಗೂ 9 ವೆಂಟಿಲೇಟರ್‍ಗಳು ಕೋವಿಡ್ ಚಿಕಿತ್ಸೆಗೆ ಲಭ್ಯ ಇವೆ. ಕಲಘಟಗಿ ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 50 ಹಾಸಿಗೆಗಳು, 40 ಆಕ್ಸಿಜನ್ ಹಾಸಿಗೆಗಳು, 7 ಐಸಿಯು ಹಾಗೂ 3 ವೆಂಟಿಲೇಟರ್‍ಗಳು ಕೋವಿಡ್ ಚಿಕಿತ್ಸೆಗೆ ಲಭ್ಯ ಇವೆ.. ಕುಂದಗೋಳ ತಾಲೂಕಾ ಆಸ್ಪತ್ರೆಯಲ್ಲಿ ಒಟ್ಟು 50 ಹಾಸಿಗೆಗಳು, 40 ಆಕ್ಸಿಜನ್ ಹಾಸಿಗೆಗಳು, 7 ಐಸಿಯುಗಳು ಹಾಗೂ 3 ವೆಂಟಿಲೇಟರ್‍ಗಳು ಕೋವಿಡ್ ಚಿಕಿತ್ಸೆಗೆ ಲಭ್ಯ ಇವೆ.
Nasal vaccine: ಕೋವಿಡ್‌ಗೆ ಇನ್ನು ಮೂಗಿನ ಮೂಲಕವೂ ಲಸಿಕೆ ವಿತರಣೆ!
ನವಲಗುಂದ ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 50 ಹಾಸಿಗೆಗಳು, 40 ಆಕ್ಸಿಜನ್ ಹಾಸಿಗೆಗಳು, 7 ಐಸಿಯು ಹಾಗೂ 3 ವೆಂಟಿಲೇಟರ್‍ಗಳು ಕೋವಿಡ್ ಚಿಕಿತ್ಸೆಗೆ ಲಭ್ಯ ಇವೆ.. ಹುಬ್ಬಳ್ಳಿಯ ಸರಕಾರಿ ಇ.ಎಸ್.ಐ ಆಸ್ಪತ್ರೆಯಲ್ಲಿ ಒಟ್ಟು 14 ಹಾಸಿಗೆಗಳು, 14 ಆಕ್ಸಿಜನ್ ಹಾಸಿಗೆಗಳು ಕೋವಿಡ್ ಚಿಕಿತ್ಸೆಗೆ ಲಭ್ಯ ಇವೆ. ಹೀಗೆ ಜಿಲ್ಲೆಯಲ್ಲಿ ಒಟ್ಟು 7 ಸರಕಾರಿ ಆಸ್ಪತ್ರೆಗಳಲ್ಲಿ 1,494 ಹಾಸಿಗೆಗಳು, 1,049 ಆಕ್ಸಿಜನ್ ಹಾಸಿಗೆಗಳು, 291 ಐಸಿಯು ಹಾಗೂ 154 ವೆಂಟಿಲೇಟರ್ ಗಳು ಕೋವಿಡ್ ಚಿಕಿತ್ಸೆಗೆ ಲಭ್ಯ ಇವೆ. ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 815 ಹಾಸಿಗೆಗಳು, 682 ಆಕ್ಸಿಜನ್ ಹಾಸಿಗೆಗಳು, 89 ಐಸಿಯು ಹಾಗೂ 44 ವೆಂಟಿಲೇಟರ್‍ಗಳು ಕೋವಿಡ್ ಚಿಕಿತ್ಸೆಗೆ ಲಭ್ಯ ಇವೆ.
ಒಟ್ಟು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಜಿಲ್ಲೆಯಾದ್ಯಂತ ಒಟ್ಟು 2,309 ಹಾಸಿಗೆಗಳು, 1,731 ಆಕ್ಸಿಜನ್ ಹಾಸಿಗೆಗಳು, 380 ಐಸಿಯು ಹಾಗೂ 198 ವೆಂಟಿಲೇಟರ್‍ಗಳು ಕೋವಿಡ್ ಚಿಕಿತ್ಸೆಗೆ ಲಭ್ಯ ಇವೆ.