ಹೈದರಾಬಾದ್ ಮೂಲದ ಕರೋನಾ ಸೋಂಕಿತ ಟೆಕ್ಕಿ ಬೆಂಗಳೂರಿಗೆ ಬಂದಿದ್ದ ಎಂಬ ಕಾರಣಕ್ಕಾಗಿಯೇ ಬಹುತೇಕ ಜನರು ಜನದಟ್ಟಣೆ ಇರುವ ಪ್ರದೇಶದತ್ತ ಸುಳಿಯದಂತಾಗಿದ್ದಾರೆ. ಸಿಟಿ ಲೈಫ್ ಮೇಲೆ ಕೊರೋನಾ ಕರಿನೆರಳು ಬಿದ್ದಿದೆ.
ಬೆಂಗಳೂರು [ಮಾ.08]: ದೇಶಾದ್ಯಂತ ಭೀತಿಯ ವಾತಾವರಣ ಸೃಷ್ಟಿಸಿರುವ ಕೊರೋನಾ ಸೋಂಕು ಬೆಂಗಳೂರು ನಾಗರೀಕರಲ್ಲೂ ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಒಂದೂ ಪ್ರಕರಣ ದೃಢಪಡದಿದ್ದರೂ ಹೈದರಾಬಾದ್ ಮೂಲದ ಕರೋನಾ ಸೋಂಕಿತ ಟೆಕ್ಕಿ ಬೆಂಗಳೂರಿಗೆ ಬಂದಿದ್ದ ಎಂಬ ಕಾರಣಕ್ಕಾಗಿಯೇ ಬಹುತೇಕ ಜನರು ಜನದಟ್ಟಣೆ ಇರುವ ಪ್ರದೇಶದತ್ತ ಸುಳಿಯದಂತಾಗಿದ್ದಾರೆ.
ಪರಿಣಾಮ, ವಾರಾಂತ್ಯದ ಶನಿವಾರವೂ ಶಾಪಿಂಗ್ ಮಾಲ್, ಚಿತ್ರಮಂದಿರಗಳತ್ತ ಜನ ಸುಳಿದಿಲ್ಲ. ಕೇಂದ್ರ ಸರ್ಕಾರವು ಕೊರೋನಾ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ಮುಂದೂಡುವಂತೆ ಸಲಹೆ ನೀಡಲಾಗಿದೆ. ಇದೂ ಸಹ ಜನರು ಜನದಟ್ಟಣೆ ಇರುವ ಪ್ರದೇಶಗಳತ್ತ ಸುಳಿಯದಿರಲು ಕಾರಣ ಎನ್ನಲಾಗಿದೆ.
undefined
ಉಳಿದಂತೆ ಸಮೂಹ ಸಾರಿಗೆ ಬಸ್ಸುಗಲ್ಲಿ ಪ್ರಯಾಣಿಸುವವರ ಪ್ರಮಾಣವೂ ಶೇ.5 ರಿಂದ 8ರಷ್ಟುಕಡಿಮೆಯಾಗಿದೆ. ಅಲ್ಲದೆ, ಕೋಳಿ ಮಾಂಸ ಸೇವನೆಯಿಂದ ಕೊರೋನಾ ಹರಡಲಿದೆ ಎಂಬ ಸುಳ್ಳು ವದಂತಿ ಹಿನ್ನೆಲೆಯಲ್ಲಿ ಚಿಕನ್ ಮಾರಾಟದಲ್ಲೂ ಗಂಭೀರ ಪ್ರಮಾಣದ ಕುಸಿತ ಉಂಟಾಗಿದೆ. ಫಾರಂ ಧಾರಣೆಯಲ್ಲಿ ಶೇ.50ರಷ್ಟುದರ ಕುಸಿತ ಉಂಟಾಗಿದ್ದು, ಚಿಲ್ಲರೆ ಮಾರಾಟದಲ್ಲಿ ಶೇ.30 ರಷ್ಟುದರ ಕುಸಿತ ಉಂಟಾಗಿದೆ. ಕೋಳಿ ಮಾಂಸ ಖರೀದಿಗೂ ಶೇ.50 ರಷ್ಟುಮಂದಿ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಪೌಲ್ಟಿ್ರ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮಂಜೇಶ್ ಕುಮಾರ್ ಜಾಧವ್.
ಚಿಕಾನ್ ಮಾರಾಟ ಅರ್ಧದಷ್ಟುಕುಸಿತ:
ಮಂಜೇಶ್ ಕುಮಾರ್ ಪ್ರಕಾರ, ಕಳೆದ 15 ದಿನಗಳಿಂದ ಚಿಕನ್ ಮಾರಾಟ ಶೇ.50ರಷ್ಟುಕುಸಿದಿದೆ. ಕೋಳಿ ಮೊಟ್ಟೆಬೆಲೆ ಕೂಡ ಕಡಿಮೆಯಾಗಿದ್ದು, 5.25 ರು.ಗಳಿಂದ 3.5 ರು.ಗಳಿಗೆ ಕುಸಿತವಾಗಿದೆ.
ಸಮೂಹ ಸಾರಿಗೆ ಬಳಕೆಯೂ ಕುಸಿತ:
ಸಮೂಹ ಸಾರಿಗೆಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ನಮ್ಮ ಮೆಟ್ರೋ, ಟ್ಯಾಕ್ಸಿಗಳ ಬಳಕೆಗೂ ಜನ ಹಿಂಜರಿಯುವಂತಾಗಿದೆ. ವಿಮಾನ ನಿಲ್ದಾಣ ಸೇರಿದಂತೆ ನಗರದಲ್ಲಿಯೂ ಸಂಚರಿಸುವ ಟ್ಯಾಕ್ಸಿಗಳ ಬುಕ್ಕಿಂಗ್ ಕೂಡ ಶೇ.30ರಷ್ಟುಕುಸಿತ ಕಂಡಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಪ್ರಯಾಣದಲ್ಲಿ ಶೇ.5 ರಿಂದ 8ರಷ್ಟುಕಡಿತ ಉಂಟಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಗಾಜಿಯಾಬಾದ್ ವ್ಯಕ್ತಿಗೆ ಕೊರೋನಾ: 30ಕ್ಕೆ ಏರಿದ ಸೋಂಕು ಪೀಡಿತರ ಸಂಖ್ಯೆ!...
ವಿದೇಶಿ ಪ್ರವಾಸಕ್ಕೆ ಜನರು ಬೆಚ್ಚಿ ಬೀಳುತ್ತಿದ್ದಾರೆ. 84 ದೇಶಗಳು ಕರೋನಾ ಎಚ್ಚರಿಕೆಯ ದೇಶಗಳಾಗಿವೆ. ಹೀಗಾಗಿ ಮೋಜು, ಮಸ್ತಿ ಹಾಗೂ ವ್ಯಾಪಾರದ ಕೆಲಸಗಳ ಮೇಲೆ ವಿದೇಶದತ್ತ ಹೋಗುವವರು ಸಹ ಬಹುತೇ ಕಡಿಮೆಯಾಗಿದ್ದಾರೆ. ಹೀಗಾಗಿ ನಮ್ಮ ಏರ್‌ಪೋರ್ಟ್ ಟ್ಯಾಕ್ಸಿ ವಹಿವಾಟು ಕೂಡ ಕುಸಿತಗೊಂಡಿದೆ ಎನ್ನುತ್ತಾರೆ ಟ್ಯಾಕ್ಸಿ ಚಾಲಕ ಕುಮಾರ್.
ಮಾಸ್ಕ್ ಮಾರಾಟ ದಂಧೆ
ಇನ್ನು ಕಾಯಿಲೆಯಿಂದ ಎಚ್ಚರಿಕೆ ವಹಿಸಲು ಎನ್-95 ಮಾಸ್ಕ್, ಕೈತೊಳೆಯುವ ದ್ರಾವಣಗಳಿಗೆ ಸಾಕಷ್ಟುಬೇಡಿಕೆ ಸೃಷ್ಟಿಯಾಗಿದ್ದು, ಬಹುತೇಕ ಕಡೆ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೀಗೆ ಕೊರೋನಾ ಸೋಂಕಿನ ಆತಂಕ ಬಹುತೇಕ ವಹಿವಾಟುಗಳಿಗೆ ಕಡಿವಾಣ ಹಾಕಿದರೆ, ಕೊರೋನಾ ಆತಂಕವನ್ನು ಹಣ ಮಾಡಿಕೊಳ್ಳುವವರಿಗೆ ಬಂಪರ್ ಅವಕಾಶಗಳನ್ನು ಒದಗಿಸಿದೆ.
ಕೊರೋನಾ ವೈರಸ್ ಹರಡದಂತೆ ತಪ್ಪಿಸಿಕೊಳ್ಳುವುದಕ್ಕಾಗಿ ಜನರು ‘ಎನ್-95 ಮಾಸ್ಕ್’ ಮೊರೆ ಹೋಗುತ್ತಿದ್ದಾರೆ. ಇದರಿಂದ ಮೆಡಿಕಲ್ ಸ್ಚೋರ್‌ನಲ್ಲಿ ಒಂದೊಂದು ಕಡೆ ಒಂದೊಂದು ಬೆಲೆ ಮಾರಾಟ ಮಾಡಲಾಗುತ್ತಿದೆ. ಎಂಆರ್‌ಪಿಗಿಂತ 50 ರಿಂದ 100 ರು. ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿವೆ. ವಿಧಿಯಿಲ್ಲದೆ ಜನರು ಕೂಡ ಖರೀದಿ ಮಾಡುತ್ತಿದ್ದಾರೆ. ಎನ್-95 ಮಾತ್ರವಲ್ಲದೆ, ಸಾಮಾನ್ಯ ಮಾಸ್ಕ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಒಟ್ಟಾರೆ ಜನದಟ್ಟಣೆ ಕಂಡಲ್ಲಿ ಜನರು ಮುಖಗವಸು ಧರಿಸಿ ಸಂಚರಿಸುತ್ತಿದ್ದಾರೆ.
ಮಾಸ್ಕ್ ಅನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ ನಡೆಸಿ ನಕಲಿ ಮಾಸ್ಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮೆಡಿಕಲ್ ಸ್ಟೋರ್‌ಗಳ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರಿಗೆ ಪೀಕಲಾಟ
ಕೊರೋನಾ ವೈರಸ್ ಹರಡುವ ಭೀತಿಯಲ್ಲಿರುವ ಪೊಲೀಸರು ಪಾನಮತ್ತ ಚಾಲಕರ ಪರಿಶೀಲನೆಗೂ ಆತಂಕ ಪಡುತ್ತಿದ್ದಾರೆ. ವಾಹನ ಚಾಲಕರು ಮದ್ಯಪಾನ ಮಾಡಿದ್ದಾರೆಯೇ ಎಂದು ಮುಖದ ಹತ್ತಿರ ಹೋಗಿ ಪರಿಶೀಲನೆ ಮಾಡಬೇಕಿರುವುದರಿಂದ ತಮಗೂ ಕೊರೊನಾ ಹರಡಬಹುದು ಎಂಬ ಭಯದಲ್ಲಿದ್ದಾರೆ.