* ಘೋಷಾ ಆಸ್ಪತ್ರೆಯಿಂದ ಸಿಹಿ ಸುದ್ದಿ
* ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತ ಗರ್ಭಿಣಿಯರ ಸಂಖ್ಯೆಯೂ ಇಳಿಮುಖ
* 2ನೇ ಅಲೆಯಲ್ಲಿ 30 ಗರ್ಭಿಣಿಯರ ಸಾವು
ರಾಕೇಶ್ ಎನ್.ಎಸ್
ಬೆಂಗಳೂರು(ಜ.23): ಕೋವಿಡ್ ಮೂರನೇ ಅಲೆ(Covid 3rd Wave) ಮಕ್ಕಳ ಮೇಲೆ ದೊಡ್ಡ ಮಟ್ಟದ ದುಷ್ಪರಿಣಾಮ ಬೀರುತ್ತಿಲ್ಲ ಎಂಬ ಸುದ್ದಿ ಖಾತರಿ ಆಗುತ್ತಿರುವ ಹೊತ್ತಿನಲ್ಲಿಯೇ ಗರ್ಭಿಣಿ(Pregnant) ಮಹಿಳೆಯರಿಗೂ ತುಸು ನೆಮ್ಮದಿ ತರುವ ಸುದ್ದಿ ಬೆಂಗಳೂರಿನ ಘೋಷಾ ಆಸ್ಪತ್ರೆಯಿಂದ ಬರುತ್ತಿದೆ. ಮೂರನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಗರ್ಭಿಣಿಯರ ಪ್ರಾಣಕ್ಕೆ ಎರವಾದ ಘಟನೆ ಈ ತನಕ ನಡೆದಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
undefined
ಮೊದಲೆರಡು ಅಲೆಯಲ್ಲಿಯೂ ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ಘೋಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ನೀಡಿ ಹೆರಿಗೆ(Delivery) ಮಾಡಲಾಗಿತ್ತು. ಇದೀಗ ಮೂರನೇ ಅಲೆಯಲ್ಲಿಯೂ ಈ ಆಸ್ಪತ್ರೆಯನ್ನು(Hospital) ಗರ್ಭಿಣಿಯರಿಗೆಂದು ಮೀಸಲಿಡಲಾಗಿದೆ. ಕಳೆದ 11 ದಿನಗಳಿಂದ ಈ ಆಸ್ಪತ್ರೆಯಲ್ಲಿ 89 ಮಂದಿ ಗರ್ಭಿಣಿಯರು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
Corona Vaccine: 1ನೇ ಡೋಸ್ ಲಸಿಕೆ: ಶೇ.100 ಸಾಧನೆ ಹೊಸ್ತಿಲಲ್ಲಿ ಕರ್ನಾಟಕ!
ಮೊದಲೆರಡು ಅಲೆಗಳಿಗೆ ಹೋಲಿಸಿದರೆ ಸದ್ಯ ಆಸ್ಪತ್ರೆಗೆ ದಾಖಲಾಗುತ್ತಿರುವ ಗರ್ಭಿಣಿಯರ ಸಂಖ್ಯೆ ಕಡಿಮೆ ಇದೆ. ದಾಖಲಾಗುತ್ತಿರುವವರಲ್ಲಿಯೂ ಸೋಂಕಿನ ತೀವ್ರತೆ ಕ್ಷೀಣವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸುತ್ತವೆ. ಮೂರನೇ ಅಲೆಯಲ್ಲಿ ಈವರೆಗೆ 89 ಗರ್ಭಿಣಿಯರು ದಾಖಲಾಗಿದ್ದಾರೆ. ಈ ಪೈಕಿ 59 ಮಂದಿಗೆ ಹೆರಿಗೆ ಮಾಡಿಸಲಾಗಿದೆ. 45 ಮಂದಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೆರಿಗೆಗೆ ದಾಖಲಾದ ಮಹಿಳೆಯರಲ್ಲಿ ಸೋಂಕಿನ ಲಕ್ಷಣಗಳು ತೀವ್ರವಾಗಿರಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ವಿವಿಧ ಆಸ್ಪತ್ರೆಗಳಿಗೆ ಹೆರಿಗೆಗೆ ಬರುವವರಲ್ಲಿ ಕೋವಿಡ್(Covid-19) ದೃಢಪಟ್ಟರೆ ಅವರನ್ನು ಘೋಷಾ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಇಲ್ಲಿ ಅಂತವರಿಗೆ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಲಾಗುತ್ತದೆ. ಬೆಂಗಳೂರಿನ ಬಹುತೇಕ ಎಲ್ಲ ಭಾಗಗಳು ಸೇರಿದಂತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದ ಕೆಲ ಭಾಗಗಳಿಂದಲೂ ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ.
ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ತುಂಬಾ ಕಡಿಮೆ ಇದೆ. ಆದರೂ ನಾವು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಹೆರಿಗೆ ಮಾಡಿಸುತ್ತಿದ್ದೇವೆ. ಸೋಂಕಿನ ತೀವ್ರತೆ ಹೆಚ್ಚಿರುವ ಪ್ರಕರಣಗಳು ಕಡಿಮೆ ಇದೆ ಎಂದು ವೈದ್ಯರು(Doctors) ಹೇಳುತ್ತಾರೆ.
ಗರ್ಭಿಣಿಯರು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಗರಿಷ್ಠ ಮಟ್ಟದಲ್ಲಿ ಪಾಲಿಸಬೇಕು. ಜನಸಂದಣಿ ಇರುವ ಜಾಗದಿಂದ ಸದಾ ದೂರ ಇರಬೇಕು. ಗುಂಪು ಸೇರಬಾರದು. ಮನೆಯಲ್ಲಿಯೂ ಆದಷ್ಟುಪ್ರತ್ಯೇಕ ಆಗಿರುವುದು ಅವಶ್ಯಕ. ಕೈ ಸ್ವಚ್ಛತೆ ಸದಾ ಕಾಪಾಡಿಕೊಳ್ಳಬೇಕು. ವೈದ್ಯರ ಸಲಹೆಯ ಮೇರೆಗೆ ಔಷಧಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
Covid-19 Crisis: ರಾಜಧಾನಿಯ 101 ವಾರ್ಡ್‌ಗಳಲ್ಲಿ 500ಕ್ಕೂ ಹೆಚ್ಚು ಕೊರೋನಾ ಕೇಸ್
2ನೇ ಅಲೆಯಲ್ಲಿ 30 ಸಾವು
ಎರಡನೇ ಅಲೆಯಲ್ಲಿ 600ಕ್ಕೂ ಹೆಚ್ಚು ಗರ್ಭಿಣಿಯರು ಚಿಕಿತ್ಸೆಗೆ ದಾಖಲಾಗಿದ್ದರು. ಈ ಪೈಕಿ 30 ಮಂದಿ ಅಸುನೀಗಿದ್ದರು. ಅನೇಕ ಗರ್ಭಪಾತ, ಅವಧಿ ಪೂರ್ವ ಜನನ ಮುಂತಾದ ಕ್ಲಿಷ್ಟ ಸನ್ನಿವೇಶ ಆಗಾಗ ಉದ್ಭವಿಸುತ್ತಲೇ ಇತ್ತು. ತಾಯಿ ಮತ್ತು ಮಗುವಿನಲ್ಲಿ ಒಬ್ಬರನ್ನು ಉಳಿಸಬೇಕಾದ ಸನ್ನಿವೇಶ ಅನೇಕ ಬಾರಿ ಎದುರಾಗುತ್ತಿತ್ತು. ಆದರೆ ಈ ಬಾರಿ ಅಂತಹ ಪ್ರಸಂಗಗಳು ಎದುರಾಗಿದ್ದು ತೀರಾ ಕಡಿಮೆ ಎಂದು ವೈದ್ಯರೊಬ್ಬರು ಹೇಳುತ್ತಾರೆ.
ಕೊರೋನಾದಿಂದ ಗುಣಮುಖ ವರದಿ ಪಡೆಯಲು ಜನರ ಹರಸಾಹಸ..!
ಲಕ್ಷಾಂತರ ಮಂದಿ ಕೊರೋನಾ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದು(Home Isolation), ಸೋಂಕು ವಾಸಿಯಾದ ಬಳಿಕ ‘ಗುಣಮುಖ’ ಎಂದು ಸಾಭೀತು ಪಡಿಸಲು ಹರಸಾಹಸ ಪಡುತ್ತಿದ್ದಾರೆ. ಒಂದೆಡೆ ಆರೋಗ್ಯ ಇಲಾಖೆಯೇ(Department of Health) ‘ಏಳು ದಿನಗಳ ಹೋಂ ಐಸೋಲೇಷನ್ ಮುಗಿದ ಬಳಿಕ ಮತ್ತೊಮ್ಮೆ ಪರೀಕ್ಷೆ ಅವಶ್ಯಕತೆ ಇಲ್ಲ’ ಎಂದು ಸುತ್ತೋಲೆ ಹೊರಡಿಸಿದೆ. ಜತೆಗೆ ‘ಹೋಂ ಐಸೋಲೇಷನ್‌ನಲ್ಲಿರುವವರು ಅವಧಿಯನ್ನು ಪೂರ್ಣಗೊಳಿಸಿದ ಕುರಿತು ವೈದ್ಯರ ಪ್ರಮಾಣಪತ್ರ ನೀಡಿದ ನಂತರವೇ ಮನೆಯಿಂದ ಹೊರಬರಬೇಕು’ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ, ‘ಗುಣಮುಖ’ ಪ್ರಮಾಣಪತ್ರ(Certificate) ಮಾತ್ರ ಸಿಗುತ್ತಿಲ್ಲ, ಆ ಬಗ್ಗೆ ಸೂಕ್ತ ಮಾಹಿತಿಯೂ ಇಲ್ಲ. ಆರೋಗ್ಯ ಇಲಾಖೆ ಅಥವಾ ಬಿಬಿಎಂಪಿಯು ಗುಣಮುಖವಾಗಿರುವ ಅಥವಾ ಐಸೋಲೇಷನ್ ಮುಗಿದಿರುವ ಕುರಿತು ಸಾಬೀತು ಪಡಿಸಲು ಸೂಕ್ತ ವ್ಯವಸ್ಥೆ ಮಾಡದಿರುವುದು ಸಾವಿರಾರು ಮಂದಿಯನ್ನು ಸಮಸ್ಯೆಗೆ ಸಿಲುಕಿಸಿದೆ.