* ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಬಂದು ಸೋಂಕು ಹಚ್ಚಿಕೊಂಡು ಹೋಗುವ ಆತಂಕದಲ್ಲಿ ಜನ
* ಸೋಂಕಿತರು ಒಂದೇ ಸ್ಥಳದಲ್ಲಿ ಇರುವ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವುದು ಅವೈಜ್ಞಾನಿಕ
* ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗದಿರುವುದು ದುರದೃಷ್ಟಕರ
ಈಶ್ವರ ಶೆಟ್ಟರ
ಬಾಗಲಕೋಟೆ(ಮೇ.13): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಶರವೇಗದಲ್ಲಿ ಹೆಚ್ಚಾತ್ತಾ ಸಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುವ ಆಸ್ಪತ್ರೆಗಳಲ್ಲಿ ಕೋವಿಡ್‌ಲಸಿಕೆ ನೀಡಲಾಗುತ್ತಿದೆ. ಈ ಪ್ರಕ್ರಿಯೆಯಿಂದ ಲಸಿಕೆ ಹಾಕಿಕೊಳ್ಳಲು ಬಂದವರು ಆತಂಕದಲ್ಲೇ ಮನೆಗೆ ಹೋಗುವಂತಾಗಿದೆ.
ಜಿಲ್ಲೆಯಲ್ಲಿ ನಿತ್ಯ ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ದೃಢವಾಗುತ್ತಿವೆ. ಸೋಂಕಿತರ ಚಿಕಿತ್ಸೆಗಾಗಿ ಹಾಗೂ ಸೋಂಕಿನ ಪರೀಕ್ಷೆಗಾಗಿ ಜಿಲ್ಲಾ ಕೇಂದ್ರವಾದ ನವನಗರದ 250 ಹಾಸಿಗೆಯ ಆಸ್ಪತ್ರೆ, ಹಳೆ ನಗರದ 50 ಹಾಸಿಗೆಯ ಆಸ್ಪತ್ರೆಗಳಲ್ಲಿ ಸಾಲುಗಟ್ಟಿ ಜನತೆ ನಿಲ್ಲುತ್ತಿದೆ. ಸೋಂಕಿತರ ಚಿಕಿತ್ಸೆ ಸಹ ಇಲ್ಲಿರುವ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ. ಹೀಗಾದರೆ ಕೋವಿಡ್‌ಅನ್ನು ನಿಯಂತ್ರಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಬವವಾಗಿದೆ.
ಲಸಿಕೆ ನೀಡುವಿಕೆಯೂ ಇಲ್ಲಿಯೇ:
ಕೋವಿಡ್‌ಎಂಬ ಸಾಂಕ್ರಾಮಿಕ ರೋಗದ ತೀವ್ರತೆ ಜಗತ್ತನ್ನೇ ತಲ್ಲಣಿಸಿದೆ. ಅದರಲ್ಲೂ ಎರಡನೇ ಅಲೆ ಸೃಷ್ಟಿಸಿದ ಭಯಾನಕ ವಾತಾವರಣ ಜನಸಾಮಾನ್ಯರನ್ನು ಕಂಗೆಡಿಸಿದೆ. ಇಂತಹ ಸಂದರ್ಭದಲ್ಲಿ ಸುರಕ್ಷತೆ, ಮುನ್ನೆಚ್ಚರಿಕೆ ಅಗತ್ಯವಾಗಿದೆ. ಅದನ್ನು ಕಾಯ್ದುಕೊಂಡು ಚಿಕಿತ್ಸೆ ನೀಡಬೇಕಾದ ಆರೋಗ್ಯ ಇಲಾಖೆ ಈ ರೀತಿ ನಡೆದುಕೊಳ್ಳುತ್ತಿರುವುದು ಮಾತ್ರ ದುರಂತವೇ ಸರಿ.
ಮುಧೋಳ: ಆಕ್ಸಿಜನ್ ಬೆಡ್ ಸಿಗದೆ ನರಳಿ ನರಳಿ ಪ್ರಾಣಬಿಟ್ಟ ಯುವಕ
ಬಾಗಲಕೋಟೆ ನವನಗರದ ಜಿಲ್ಲಾಸ್ಪತ್ರೆಯಲ್ಲಿ 250 ಸೋಂಕಿತರು ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ತೀವ್ರ ತರವಾದ ಉಸಿರಾಟದ ಸಮಸ್ಯೆ ಎದುರಿಸುವ 40 ರೋಗಿಗಳು ಆಕ್ಸಿಜನ್‌ನೆರವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಆಸ್ಪತ್ರೆಯಲ್ಲಿಯೇ ನಿತ್ಯ ನೂರಾರು ರೋಗಿಗಳ ಕೋವಿಡ್‌ಪರೀಕ್ಷೆ ನಡೆಯುತ್ತಿದೆ. ಆದರೆ, ಸೋಂಕಿತರು ಹಾಗೂ ಸೋಂಕನ್ನು ಪರೀಕ್ಷಿಸಲು ಬಂದ ಆಸ್ಪತ್ರೆಯಲ್ಲಿಯೇ ಕೋವಿಡ್‌ಲಸಿಕೆಯನ್ನು ನೀಡುತ್ತಿರುವುದು ಎಷ್ಟುಸರಿ? ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಪ್ಪಿಸಬೇಕಾದ ಸ್ಥಳದಲ್ಲಿ ಇಂತಹ ಅಗತ್ಯತೆ ಏನಿತ್ತು ಮತ್ತು ಯಾಕಾಗಿ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹಳೆ ನಗರದ 50 ಆಸ್ಪತ್ರೆಯೂ ಸೋಂಕಿತರ ಪರೀಕ್ಷೆ, ಸೋಂಕಿತರಿಗೆ ಚಿಕಿತ್ಸೆ ಜೊತೆಗೆ ಕೋವಿಡ್‌ಲಸಿಕೆ ನೀಡುವ ಎಲ್ಲ ಬಗೆಯ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇದು ನಿಜಕ್ಕೂ ಅಪಾಯವನ್ನು ತಂದೊಡ್ಡುವದಾಗಿದೆ.
ಪರ್ಯಾಯ ಸ್ಥಳಗಳಲ್ಲಿ ಲಸಿಕೆ ನೀಡಿ:
ಸಾಮಾಜಿಕ ಅಂತರ, ಮಾಸ್ಕ್‌ಕಡ್ಡಾಯ ಎನ್ನುವ ಆರೋಗ್ಯ ಇಲಾಖೆ ಇಂತಹ ವಿಷಯದಲ್ಲಿ ಏಕೆ ಎಡವಿದೆ? ರೋಗ ಹರಡುವಿಕೆಯ ತೀವ್ರತೆಯನ್ನು ಊಹಿಸಲು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸೋಂಕಿತರ ಸಮೀಪ, ಸೋಂಕನ್ನು ಪರೀಕ್ಷಿಸುವವರ ಸಮೀಪ ಕೋವಿಡ್‌ಲಸಿಕೆ ನೀಡುವ ಅನಿವಾರ್ಯತೆ ಏಕೆ ಜಿಲ್ಲಾಡಳಿತಕ್ಕೆ ಬಂದಿದೆ ಎಂದು ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಸೋಂಕು ನಿಯಂತ್ರಿಸಲು ಇನ್ನಿಲ್ಲದ ಪರಿಶ್ರಮ ಪಡುತ್ತಿರುವ ಜಿಲ್ಲಾಡಳಿತ ಈ ವಿಷಯದಲ್ಲಿ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗದಿರುವುದು ದುರದೃಷ್ಟಕರವಾಗಿದೆ. ಕೂಡಲೇ ಬಾಗಲಕೋಟೆ ನಗರ ಹಾಗೂ ನವನಗರದಲ್ಲಿ ಸರ್ಕಾರಿ ವ್ಯವಸ್ಥೆಯ ಸಾಕಷ್ಟು ಕಟ್ಟಡಗಳು ಇವೆ. ಜೊತೆಗೆ ಶಾಲಾ ಕಾಲೇಜುಗಳು ಸಹ ರಜೆ ಇರುವುದರಿಂದ ಅತ್ಯಾಧುನಿಕ ಸೌಲಭ್ಯಗಳುಳ್ಳ ವಸತಿ ನಿಲಯಗಳಿವೆ. ಅವುಗಳನ್ನು ಬಳಸಿಕೊಂಡು ಕೋವಿಡ್ ನಿಯಂತ್ರಣಕ್ಕಾಗಿಯೇ ಬಂದಿರುವ ಕೋವಿಡ್ ಲಸಿಕೆಯನ್ನು ವಿತರಿಸುವತ್ತ ಜಿಲ್ಲಾಡಳಿತ ಯೋಚನೆ ಮಾಡಲಿ.
ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ತಪ್ಪು. ಸೋಂಕಿತರ ಸಂಪರ್ಕಿತರು ಹಾಗೂ ಸೋಂಕಿತರಿಗೆ ನೀಡುವ ಚಿಕಿತ್ಸೆಯ ಪ್ರದೇಶ ಸಹಜವಾಗಿ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ಜಿಲ್ಲೆಯಲ್ಲಿ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಬದಲಾಗಿ ಪರ್ಯಾಯ ಸ್ಥಳಗಳನ್ನು ಗುರುತಿಸಿ ಲಸಿಕೆ ನೀಡುವುದು ಒಳ್ಳೆಯದು ಎಂದು ಬಾಗಲಕೋಟೆ ಸ್ತ್ರೀರೋಗ ತಜ್ಞರು ಡಾ.ಭಾಗ್ಯಾ ಪಾಟೀಲ ತಿಳಿಸಿದ್ದಾರೆ.
ಕೋವಿಡ್ ಪರೀಕ್ಷಾ ಕೇಂದ್ರಗಳು, ಕೋವಿಡ್ ಸೋಂಕಿತರು ಒಂದೇ ಸ್ಥಳದಲ್ಲಿ ಇರುವ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಾಚರಣೆ ಅವೈಜ್ಞಾನಿಕವಾಗಿದೆ. ಇದರು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ಯುವ ಮುಖಂಡ ರಾಕೇಶ ಕರಿಗಾರ ಹೇಳಿದ್ದಾರೆ.