* 15ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸ್ಟಾಫ್ ನರ್ಸ್‌ಗಳು
* ಕಡಿಮೆ ಸಂಬಳದಿಂದಾಗಿ ಆರ್ಥಿಕ ಸ್ಥಿತಿ ಚಿಂತಾಜನಕ
* ಮಾರಕ ಕೊರೋನಾ ವಿರುದ್ಧ ಯುದ್ಧಸಾರಿದವರ ಸ್ಥಿತಿ ಇಂದು ಪಾತಾಳಕ್ಕೆ
ಜಗದೀಶ ವಿರಕ್ತಮಠ
ಬೆಳಗಾವಿ(ಆ.23): ಇಡಿ ವಿಶ್ವವನ್ನೇ ತಲ್ಲಣಗೊಳಿಸಿ, ಕಂಡಕಂಡಲ್ಲಿ ಹೆಣ ಬೀಳಿಸಿದ್ದ ಹೆಮ್ಮಾರಿ ಕೊರೋನಾ ವೈರಸ್ ಮಟ್ಟಹಾಕಲು ತೊಡೆತಟ್ಟಿ ನಿಂತಿರುವ ಪ್ರಮುಖ ಸೇನಾನಿಗಳಾದ ಸ್ಟಾಫ್ ನರ್ಸ್ಗಳ (ನರ್ಸಿಂಗ್ ಆಫೀಸರ್) ಬದುಕೇ ಇಂದು ಸೇವಾ ಭದ್ರತೆ ಇಲ್ಲದೆ ಅತಂತ್ರವಾಗಿದೆ.
ಕೋವಿಡ್‌ಗೆ ಹೆದರಿದ ಎಷ್ಟೋ ಜನ ಬಚ್ಚಿಟ್ಟುಕೊಂಡರೆ ಕೊರೋನಾ ಬಂದಾಗಿನಿಂದಲೂ ಹಗಲು ರಾತ್ರಿ ಎನ್ನದೆ ತಮ್ಮ ಜೀವವನ್ನೇ ಲೆಕ್ಕಿಸದೆ ಹೋರಾಡುತ್ತಿರುವ ಗುತ್ತಿಗೆ ಆಧಾರಿತ ಈ ಸ್ಟಾಫ್ನರ್ಸ್ಗಳ ಬದುಕು ಚಿಂತಾಜನಕಾಗುತ್ತಿದೆ. ತಟ್ಟೆ, ತಮಟೆ, ಗಂಟೆ ಬಡಿದು ಚಪ್ಪಾಳೆ ತಟ್ಟಿದ್ದು ಬಿಟ್ಟರೆ ಇವರ ಜೀವನಕ್ಕೆ ನೆರವು ನೀಡುವಂತಹ ಕೆಲಸವನ್ನು ಯಾವುದೇ ಸರ್ಕಾರವೂ ಮಾಡಿಲ್ಲ. ಯಾವ ಜನಪ್ರತಿನಿಧಿಗಳು ಇವರ ಪರ ನಿಂತಿಲ್ಲ. ಅಷ್ಟೇ ಅಲ್ಲ ಕೆಲವರ ಸಂಬಳವನ್ನೇ
ಆರೋಗ್ಯ ಇಲಾಖೆ ನೀಡಿಲ್ಲ.!
ಕಳೆದ ಒಂದೂವರೆ ವರ್ಷದಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಗಲು, ರಾತ್ರಿ ಎನ್ನದೆ ತಮ್ಮ ಜೀವದ ಹಂಗು ತೊರೆದು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಟಾಫ್‌ನರ್ಸ್ ಹಾಗೂ ವೈದ್ಯರನ್ನು ಕಾಯಂಗೊಳಿಸುವ ಬಗ್ಗೆ ಮಾತ್ರ ಸರ್ಕಾರಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಅಷ್ಟೇ ವೇತನ ಹೆಚ್ಚಿಸುವ ಕುರಿತಾಗಲಿ ಮನಸ್ಸು ಮಾಡಿಲ್ಲ. ಹಾಗೇ ಕೆಲವೆಡೆ ಕೆಲವು ಸ್ಟಾಫ್ ನಸ್Üರ್‍ಗಳ ವೇತನವನ್ನೂ ಸಹಿತ ಕಳೆದ ಮೂರು ತಿಂಗಳಿಂದ ನೀಡಿಲ್ಲ. ಇದರಿಂದಾಗಿ ಸ್ಟಾಫ್‌ನರ್ಸ್ ಬದುಕು ಅತಂತ್ರವಾಗಿದ್ದಲ್ಲದೆ, ಆರ್ಥಿಕ ಪೆಟ್ಟು ತಿಂದು ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗುತ್ತಿಗೆ ಆಧಾರಿತ ಸ್ಟಾಫ್‌ನರ್ಸ್ ಹಾಗೂ ವೈದ್ಯರ ಸೇವೆ ಕಾಯಂಗೊಳಿಸಲು ತಾಂತ್ರಿಕ ತೊಡಕು ಇದೆ. ಆದರೆ ಇವರ ಸಂಬಳ ಹೆಚ್ಚಿಸಲು ಅವಕಾಶವಿದೆ. 7ನೇ ವೇತನ ಆಯೋಗ ಜಾರಿ ಕುರಿತು ಚರ್ಚಿಸಲಾಗುತ್ತಿದೆ. ಇದು ಸರ್ಕಾರಿ ವೈದ್ಯರು ಹಾಗೂ ನರ್ಸ್ಗಳಿಗೆ ಸಾಕಷ್ಟು ಖುಷಿ ಕೊಟ್ಟಿದೆ. ಆದರೆ ಇವರಷ್ಟೇ ಕೆಲಸ ಮಾಡುವ ಗುತ್ತಿಗೆ ಆಧಾರಿತ ಈ ಸ್ಟಾಫ್ನರ್ಸ್ಗಳ ಸೇವೆಯನ್ನು ಕಾಯಂಗೊಳಿಸುವ ಬಗ್ಗೆಯಾಗಲಿ ಅಥವಾ ಕನಿಷ್ಠ ಪಕ್ಷ ಸಂಬಳ ಹೆಚ್ಚಿಸುವ ಕುರಿತಾಗಲಿ ಮುಖ್ಯಮಂತ್ರಿ ಸೇರಿದಂತೆ ಯಾವ ಜನಪ್ರತಿನಿಧಿಯೂ ಚಕಾರ ಎತ್ತಲಿಲ್ಲ. ಇದು ಇವರಲ್ಲಿ ತೀವ್ರ ಅಸಮಾಧಾನ ಹುಟ್ಟಾಕಿದ್ದಲ್ಲದೆ, ತಮ್ಮ ಸೇವೆ ಕುರಿತು ತಾವೇ ಜಿಗುಪ್ಸೆ ಪಡುವಂತಾಗಿದೆ.
ಕೋವಿಡ್ ಲಸಿಕೆ ಪಡೆಯಲು ಸ್ಟಾಫ್ ನರ್ಸ್ ಹಿಂದೇಟು
ಕೊರೋನಾ ವೈರಸ್ ಅಷ್ಟೇ ಅಲ್ಲ ಎಂತಹ ರೋಗ ಬಂದರೂ ಅದರ ವಿರುದ್ಧ ಹೋರಾಟ ನಡೆಸುವಲ್ಲಿ ವೈದ್ಯರ ನಂತರ ಪ್ರಮುಖ ಪಾತ್ರ ವಹಿಸುವವರು ಇದೇ ಸ್ಟಾಫ್ ನರ್ಸ್‌ಗಳು. ಮುಟ್ಟಿದರೆ ಅಂಟಿಕೊಳ್ಳುವ ಕೊರೋನಾ ವಿರುದ್ಧ ಸಹಿತ ನೇರಾನೇರ ಯುದ್ಧಕ್ಕಿಳಿದವರು ಇದೇ ಸ್ಟಾಫ್ ನರ್ಸ್‌ಗಳು. ಕ್ವಾರಂಟೈನ್‌ಗಳಲ್ಲಿ, ಕೊರೋನಾ ಸೋಂಕಿತ ಪ್ರದೇಶದಲ್ಲಿ, ಚೆಕ್ಪೋಸ್ಟ್ಗಳಲ್ಲಿ, ಕೊರೋನಾ ಪಾಸಿಟಿವ್ ಇರುವ ಪ್ರದೇಶದಲ್ಲಿ ಹೆಚ್ಚಾಗಿ ಈ ಗುತ್ತಿಗೆ ಆಧಾರಿತ ಸ್ಟಾಫ್ ನರ್ಸ್ಗಳೇ ಕಾರ್ಯನಿರ್ವಹಿಸುತ್ತಿದ್ದಾರೆ.
2005ರಲ್ಲಿ ಆರಂಭವಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಿಂದ ಇವರ ಸಂಕಷ್ಟ ಶುರುವಾಗಿದೆ. ಅಂದಿನಿಂದ ವಿವಿಧ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಡಿದು ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧೆಡೆ ಈ ಸ್ಟಾಫ್ ನರ್ಸ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. 15ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಪಡೆಯುವ ಸಂಬಳ ಮಾತ್ರ ಕೇವಲ 10ರಿಂದ 15 ಸಾವಿರ ಮಾತ್ರ. ಅದೇ ಸರ್ಕಾರಿ ಸ್ಟಾಫ್ನರ್ಸ್ಗಳು ಪಡೆಯುವ ಸಂಬಳ 30 ಸಾವಿರಕ್ಕೂ ಹೆಚ್ಚು. ನಾವೂ ಇವರಷ್ಟೇ ಸೇವೆ ಸಲ್ಲಿಸಿದರೂ ಪಡೆಯುವ ಸಂಬಳ ಮಾತ್ರ ತೀರಾ ಕಡಿಮೆ. ಇದು ಇಂದಿನ ತುಟ್ಟಿಕಾಲದಲ್ಲಿ ಯಾತಕ್ಕೂ ಸಾಲುವುದಿಲ್ಲ. ಕಡಿಮೆ ಸಂಬಳದಿಂದಾಗಿ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಕುಟುಂಬದ ಸ್ಥಿತಿ ಕೇಳಮಟ್ಟಕ್ಕಿಳಿಯುತ್ತಿದೆ. ಜೀವನಮಟ್ಟಕುಸಿಯುತ್ತಿದೆ. ಇನ್ನಾದರೂ ಸರ್ಕಾರ ನಮ್ಮನ್ನು ಗುರುತಿಸಿ ನಮ್ಮ ಸೇವೆಯನ್ನು ಕಾಯಂಗೊಳಿಸಬೇಕು. ನಮ್ಮ ಈ ಗುತ್ತಿಗೆ ಪದ್ಧತಿಗೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದ್ದಾರೆ.