ಚಿಕ್ಕಮಗಳೂರು: ವಕೀಲರು V/S ಪೊಲೀಸರ ಜಟಾಪಟಿ ತಾರಕಕ್ಕೆ, ಸಿಐಡಿ ತನಿಖೆಗೆ ತೀರ್ಮಾನ

By Girish GoudarFirst Published Dec 3, 2023, 8:04 PM IST
Highlights

ವಕೀಲರ ಮೇಲೆ ಪೊಲೀಸರಿಂದ ನಡೆದ ಹಲ್ಲೆ, ಘಟನೆ ಹಿನ್ನೆಲೆಯಲ್ಲಿ ವಕೀಲರು, ಪೊಲೀಸರು ನಡೆಸಿದ ಪ್ರತಿಭಟನೆ ಸೇರಿದಂತೆ ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ತೀರ್ಮಾನಿಸಿದ ಪೊಲೀಸ್ ಇಲಾಖೆ 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.03):  ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ  ಹೆಲ್ಮೆಟ್ ಧರಿಸದ ವಿಚಾರಕ್ಕೆ ವಕೀಲರ ಮೇಲೆ ಪೊಲೀಸರಿಂದ ನಡೆದ ಹಲ್ಲೆ, ಘಟನೆ ಹಿನ್ನೆಲೆಯಲ್ಲಿ ವಕೀಲರು, ಪೊಲೀಸರು ನಡೆಸಿದ ಪ್ರತಿಭಟನೆ ಸೇರಿದಂತೆ ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. 

ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ ಅವರು ಇಂದು (ಭಾನುವಾರ) ಈ ವಿಚಾರ ತಿಳಿಸಿದ್ದಾರೆ. ವಕೀಲ ಪ್ರೀತಂ ಮೇಲೆ ಪೊಲೀಸ್ ಸಿಬ್ಬಂದಿಗಳು ನಡೆಸಿದ್ದ ಹಲ್ಲೆ ವಿಚಾರವು ಎರಡೂ ಕಡೆಯ ಸಂಘರ್ಷಕ್ಕೆ ಕಾರಣವಾಗಿ ಪರಸ್ಪರ ಆಹೋರಾತ್ರಿ ಪ್ರತಿಭಟನೆ, ಮಾತಿನ ಚಕಮಕಿಯಂತಹ ಘಟನೆಗೆ ದಾರಿಮಾಡಿಕೊಟ್ಟಿತ್ತು. ವಕೀಲರ ಪ್ರತಿಭಟನೆಗೆ ಮಣಿದು ನಗರಠಾಣೆ ಪಿಎಸ್ಐ ಸೇರಿದಂತೆ 6 ಮಂದಿ ಸಿಬ್ಬಂದಿಯನ್ನು ಅಮಾನತು ಪಡಿಸಿ 307 ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿತ ಪೊಲೀಸ್ ಸಿಬ್ಬಂದಿಗಳ ಬಂಧನಕ್ಕೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಅವರ ಕುಟುಂಬಸ್ಥರೊಂದಿಗೆ ಕರ್ತವ್ಯ ನಿರತ ಇತರೆ ಪೊಲೀಸ್ ಸಿಬ್ಬಂದಿಗಳು ಬೀದಿಗಿಳಿದು ನಿನ್ನೆ(ಶನಿವಾರ) ರಾತ್ರಿಯಿಡೀ ಪ್ರತಿಭಟನೆ ನಡೆಸಿ ಪೊಲೀಸರನ್ನು ಬಂಧಿಸಬಾರದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಚಿಕ್ಕಮಗಳೂರು: ವಕೀಲನ ಮೇಲೆ ಪೊಲೀಸರ ಹಲ್ಲೆ ಪ್ರಕರಣ, ಅಮಾನತುಗೊಂಡ ಆರಕ್ಷರ ಕುಟುಂಬದಿಂದ ಧರಣಿ

ಒತ್ತಡಕ್ಕೆ ಸಿಕ್ಕಿದ ಇಲಾಖೆ

ಒಂದೆಡೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೊತ್ತಿಕೊಂಡಿದ್ದು ಅಲ್ಲದೆ ಗಂಭೀರ ಆರೋಪದಡಿ ಪೊಲೀಸರ ಮೇಲೆ ಪ್ರಕರಣ ದಾಖಲಿಸಿದ್ದ ಹಿನ್ನಲೆಯಲ್ಲಿ ಪೊಲೀಸರನ್ನು ಬಂಧಿಸಲೇ ಬೇಕಾದ ಒತ್ತಡಕ್ಕೆ ಸಿಕ್ಕಿಕೊಂಡಿದ್ದ ಪೊಲೀಸ್ ಇಲಾಖೆ ಭಾನುವಾರ ದಿನವಿಡೀ ಸಭೆ, ಸಮಾಲೋಚನೆಗಳನ್ನು ನಡೆಸಿ ಅಂತಿಮವಾಗಿ ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ತೀರ್ಮಾನಿಸಿದೆ.ಎರಡು ದಿನಗಳಿಂದ ನಗರದಲ್ಲೇ ವಾಸ್ತವ್ಯ ಮಾಡಿರುವ ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ ಅವರು ಭಾನುವಾರ ಬೆಳಗ್ಗೆ ನಗರದ ಡಿಎಆರ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆ ನಡೆಸಿ ಪ್ರತಿಭಟನೆ ನಡೆಸಿದ ಪೊಲೀಸರಿಗೆ ಇಲಾಖೆ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ನೀಡಿದರು.

ಸಾರ್ವಜನಿಕರ ಬೇಸರ

ಎರಡು ದಿನಗಳ ಕಾಲ ಪೊಲೀಸರು ಹಾಗೂ ವಕೀಲರ ನಡುವೆ ನಡೆದ ಸಂಘರ್ಷವು ಆಡಳಿತ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ಬಗ್ಗೆ ಸಾರ್ವಜನಿಕರೂ ಬೇಸರ ವ್ಯಕ್ತಪಡಿಸಿದರು. ಇಂತಹ ಘಟನೆಗಳಿಂದ ಎರಡೂ ವ್ಯವಸ್ಥೆಯು ಗಂಭೀರತೆ ಕಳೆದುಕೊಳ್ಳುತ್ತದೆ. ಪರೋಕ್ಷವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಉಂಟಾಗುತ್ತದೆ. ಎಂತಹದ್ದೇ ಸಂದರ್ಭ ಬಂದರೂ ಬೀದಿಗಿಳಿಯದೆ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುವುದು ಒಳಿತು ಎನ್ನುವ ಅಭಿಪ್ರಾಯ ಕೇಳಿಬಂತು.

ಎರಡೂ ಕಡೆ ಸಂಯಮ ಇರಲಿ

ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಹಾಗೂ ಸಾಮಾನ್ಯ ಜನತೆಗೆ ನ್ಯಾಯ ದೊರಕಿಸುವ ವಿಚಾರದಲ್ಲಿ ವಕೀಲರು ಮತ್ತು ಪೊಲೀಸರಿಬ್ಬರ ಹೊಣೆಗಾರಿಕೆ ಸಮಾನವಾದದ್ದು, ಪರಸ್ಪರ ಸಹಕಾರವಿಲ್ಲದೆ ಇದು ಸಾಕಾರವಾಗಲು ಸಾದ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಎರಡೂ ಕಡೆಯವರು ಶತ್ರುಗಳಂತೆ ವರ್ತಿಸದೆ ವಿವಾದಗಳು ತಲೆದೋರಿದ ಸಂದರ್ಭದಲ್ಲಿ ಸಂಯಮದಿಂದ ಕುಳಿತು ಬಗೆಹರಿಸಿಕೊಳ್ಳುವುದು ಒಟ್ಟು ವ್ಯವಸ್ಥೆಯ ಹಿತದೃಷ್ಠಿಯಿಂದ ಒಳಿತು ಎಂದು ವಕೀಲರೊಬ್ಬರು ಅಭಿಪ್ರಾಯಿಸಿದರು.

click me!