Asianet Suvarna News Asianet Suvarna News

ಗಂಗಾವತಿ: ಕಾಯ​ಕ​ಲ್ಪಕ್ಕೆ ಕಾದಿದೆ ವಿಜಯನಗರ ಕಾಲದ ಅಮೃತೇಶ್ವರ ದೇವಸ್ಥಾನ

ವಿಜಯನಗರ ಕಾಲದಲ್ಲಿ ನಿರ್ಮಿಸಿದ ಪುರಾತನ ಅಮೃತೇಶ್ವರ ಮತ್ತು ಗಣೇಶ ದೇಗುಲ| ಈ ದೇಗುಲವನ್ನು ಬೆಟ್ಟದಮೇಲೆ ಹತ್ತು ಸಾಲಿನ ಕಲ್ಲಿನ ಬುನಾದಿ ಹಾಕಿ ಅದರ ಮೇಲೆ ನಿರ್ಮಾಣವಾದ ದೇವಸ್ಥಾನ| ಇದರ ಕೆಳಗೆ ವಿಜಯನಗರ ಮೇಲ್ಪಟ್ಟಕೆಳಮಟ್ಟದ ಕಾಲುವೆಗಳ ನಿರ್ಮಾಣ| ಕಾಲುವೆಯ ನೀರು ಸೋರಿಕೆಯ ಪರಿಣಾಮವಾಗಿ ಗೋಡೆಗಳಿಗೆ ಜೋಡಿಸಲಾಗಿದ್ದ ಕಲ್ಲುಗಳು ಕುಸಿದು ಕಾಲುವೆಗೆ ಬಿದ್ದಿದೆ|

Amruteshwara Temple Need Renovation in Gangavati in Koppal District
Author
Bengaluru, First Published May 25, 2020, 8:32 AM IST

ರಾಮಮೂರ್ತಿ ನವಲಿ

ಗಂಗಾವತಿ(ಮೇ.25): ಸಮೀಪದ ದೇವಘಾಟ್‌ ಬಳಿ ಇರುವ ವಿಜಯನಗರ ಕಾಲದ ಅಮೃತೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದು, ಕಾಯಕಲ್ಪಕ್ಕಾಗಿ ಕಾದಿದೆ. ಸಮೀಪದ ಹಿರೇಜಂತಗಲ್‌ ವ್ಯಾಪ್ತಿಯಲ್ಲಿ ಬರುವ ವಿಜಯನಗರ ಕಾಲದ ಪುರಾತನ ಅಮೃತೇಶ್ವರ ದೇಗುಲ ಶಿಥಿಲಾವಸ್ಥೆಯಲ್ಲಿದೆ. ಗಂಗಾವತಿಯಿಂದ ದೇವಘಾಟ್‌ಕ್ಕೆ ಹೋಗುವ ಕಾಲುವೆ ಪಕ್ಕದಲ್ಲಿ ದೇವಸ್ಥಾನ ಇದ್ದು, ಕಂಬಗಳು ಸೇರಿದಂತೆ ಗೋಪುರಗಳು ಶಿಥಿಲಾವಸ್ಥೆಯಲ್ಲಿವೆ.

ವಿಜಯನಗರ ಕಾಲದಲ್ಲಿ ನಿರ್ಮಿಸಿದ ಪುರಾತನ ಅಮೃತೇಶ್ವರ ಮತ್ತು ಗಣೇಶ ದೇಗುಲ ಇದಾಗಿದ್ದು, ಈ ದೇಗುಲವನ್ನು ಬೆಟ್ಟದಮೇಲೆ ಹತ್ತು ಸಾಲಿನ ಕಲ್ಲಿನ ಬುನಾದಿ ಹಾಕಿ ಅದರ ಮೇಲೆ ನಿರ್ಮಿಸಲಾಗಿದೆ. ಇದರ ಕೆಳಗೆ ವಿಜಯನಗರ ಮೇಲ್ಪಟ್ಟಕೆಳಮಟ್ಟದ ಕಾಲುವೆಗಳನ್ನು ನಿರ್ಮಿಸಲಾಗಿದೆ. ಇದೀಗ ಕಾಲುವೆಯ ನೀರು ಸೋರಿಕೆಯ ಪರಿಣಾಮವಾಗಿ ಗೋಡೆಗಳಿಗೆ ಜೋಡಿಸಲಾಗಿದ್ದ ಕಲ್ಲುಗಳು ಕುಸಿದು ಕಾಲುವೆಗೆ ಬಿದ್ದಿದೆ.

ಹಿನ್ನೆಲೆ

ವಿಜಯನಗರ ಸಾಮ್ರಾಜ್ಯದ ಆರಾಧ್ಯದೈವ ಪಂಪಾ ವಿರೂಪಾಕ್ಷೇಶ್ವರ ಮೂರ್ತಿ ಸ್ಥಾಪನೆ ಸಂದರ್ಭದಲ್ಲಿ ಹಂಪಿಗೆ ಎಂಟು ದಿಕ್ಕುಗಳಲ್ಲಿ ವಿವಿಧ ಹೆಸರಿನ ಈಶ್ವರ ಲಿಂಗವನ್ನು ಸ್ಥಾಪಿಸಲಾಗಿದೆ. ಗಂಗಾವತಿ ತಾಲೂಕಿನ ದೇವಘಾಟ್‌ನಲ್ಲಿ ಅಮೃತೇಶ್ವರ, ಏಳುಗುಡ್ಡದ ಸಾಲಿನಲ್ಲಿ ವಾಣಿಭದ್ರೇಶ್ವರ ದೇಗುಲ ನಿರ್ಮಿಸಲಾಗಿದೆ. ಶಿವರಾತ್ರಿ ಸಂದರ್ಭದಲ್ಲಿ ಈಗಲೂ ಭಕ್ತರು ಹಂಪಿ ವಿರೂಪಾಕ್ಷ ಸೇರಿ ಎಂಟು ಈಶ್ವರ ಲಿಂಗಗಳ ದರ್ಶನ ಪಡೆಯುವ ಪದ್ಧತಿ ಇದೆ. ಇಂತಹ ಮಹತ್ವದ ದೇಗುಲ ಬೀಳುವ ಹಂತದಲ್ಲಿ ಇದ್ದು, ಇದರ ರಕ್ಷಣೆ ಅಗತ್ಯವಾಗಿದೆ.

ಮುಂದುವರೆದ ತಿಕ್ಕಾಟ: ಬಿಜೆಪಿ, ಕಾಂಗ್ರೆಸ್‌ನಿಂದ ಕಾನೂನು ಸಮರ

ಕಾನೂನುಬಾಹಿರ ಚಟುವಟಿಕೆ

ದೇವಘಾಟ್‌ನಲ್ಲಿ ತುಂಗಭದ್ರಾ ನದಿ, ಮಾವಿನ ತೋಪುಗಳು, ಬತ್ತ ಮತ್ತು ಬಾಳೆ ತೋಟ ಇದ್ದು, ಈ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತವೆ. ನದಿ ತೀರದಲ್ಲಿ ಅಮೃತೇಶ್ವರ ದೇವಸ್ಥಾನ ಇದ್ದರೂ ಮದ್ಯಪ್ರಿಯರು ಬಾಟಲ್‌ ಸೇರಿದಂತೆ ಕಸಗಳನ್ನು ಚೆಲ್ಲಿ ಹೋಗಿದ್ದಾರೆ. ದಿನ ನಿತ್ಯ ಪೂಜಾ ಕಾರ್ಯಕ್ಕೆ ಬರುವ ಅರ್ಚಕರು ಈ ಹೊಲಸು ನೋಡಿ ರೋಸಿ ಹೋಗಿದ್ದಾರೆ. ಅಲ್ಲದೆ ಮೃತಪಟ್ಟವರ ಕರ್ಮ-ಕಾರ್ಯಗಳನ್ನು ಮಾಡುವರೂ ಈ ಪ್ರದೇಶದಲ್ಲಿ ಬಂದು ಹೋಗುತ್ತಾರೆ. ಬಟ್ಟೆಗಳು ಸೇರಿದಂತೆ ಧಾರ್ಮಿಕ ಕಾರ್ಯಗಳ ವಸ್ತುಗಳನ್ನು ದೇಗುಲ ಮತ್ತು ನದಿಯಲ್ಲಿ ಹಾಕುತ್ತಿರುವು​ದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಧಾರ್ಮಿಕ ಕಾರ್ಯಗಳು

ಪ್ರತಿ ವರ್ಷ ಶ್ರಾವಣ ಮಾಸ, ಶಿವರಾತ್ರಿ ಮತ್ತು ಯುಗಾದಿ ಹಬ್ಬಗಳ ಸಂದರ್ಭದಲ್ಲಿ ಅಮೃತೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೇ ಶ್ರಾವಣ ಮಾಸದ ಸಂದರ್ಭದಲ್ಲಿ ತುಂಗಭದ್ರೆಯಲ್ಲಿ ಭಕ್ತರು ಸ್ನಾನ ಮಾಡಿ ಈ ದೇವಸ್ಥಾನದಿಂದ ಗಂಗೆ ಸ್ಥಳಕ್ಕೆ ಹೋಗಿ ನಗರಕ್ಕೆ ಬರುವುದು ವಿಶೇಷವಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಬರುವ ಪ್ರಮುಖ ಬೆಳೆಗಳಾದ ಬತ್ತ ಮತ್ತು ಬಾಳೆಯ ಫಸಲನ್ನು ಈ ದೇವಾಲಯದಲ್ಲಿ ಇಟ್ಟು ಪೂಜೆ ಸಲ್ಲಿಸಿದ ನಂತರ ಕೊಯ್ಲು ಪ್ರಾರಂಭಿಸುತ್ತಾರೆ.

ಕಾಯಕಲ್ಪ:

ಸರ್ಕಾರ ಹಂಪಿಗೆ ಮಾತ್ರ ಸಾಕಷ್ಟುಅನುದಾನ ನೀಡಿದೆ. ಆದರೆ, ಈ ವಿಜಯನಗರದ ಕಾಲದಲ್ಲಿರುವ ಗುಡಿಗಳನ್ನು ನಿಲ​ರ್‍ಕ್ಷಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗ ಮೇಲ್ಮಟ್ಟದ ಕಾಲುವೆ ಮತ್ತು ವಿಜಯನಗರ ಕಾಲುವೆ ದುರಸ್ತಿಗಾಗಿ ಸರ್ಕಾರ ಕೋಟ್ಯಂತರ ರುಪಾಯಿ ಅನುದಾನ ನೀಡಿದೆ. ಇದರ ಗುತ್ತಿಗೆ ಪಡೆದಿರುವವರು ಈ ದೇವಸ್ಥಾನದ ಜೀ​ಣೋ​ರ್‍ದ್ಧಾರಕ್ಕೆ ಮುಂದಾಗಬೇಕಾಗಿದೆ ಎಂಬ ಒತ್ತಾಯ ಕೇಳಿ ಬರುತ್ತಿದೆ. ರಸ್ತೆಯಿಂದ ದೇವಸ್ಥಾನಕ್ಕೆ ಹೋಗಲು ಕಾಲುವೆ ಮೇಲೆ ಸೇತುವೆ ನಿರ್ಮಾಣ ಅವಶ್ಯವಾಗಿದೆ.

ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಇಂತಹ ಹಳೆಯ ದೇಗುಲುಗಳ ಜೀರ್ಣೋದ್ಧಾರಕ್ಕೆ ಮುಂದಾದರೆ ವಿಜಯನಗರ ಕಾಲದ ದೇಗುಲಗಳಿಗೆ ಪುನಃಶ್ಚೇತನ ಸಿಕ್ಕಂತಾಗುತ್ತದೆ ಎಂಬ ಅಭಿಪ್ರಾಯ ಬರುತ್ತಿದೆ.ದೇವಘಾಟ್‌ ಬಳಿ ಇರುವ ವಿಜಯನಗರ ಕಾಲದ ಅಮೃತೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದು, ಕಾಯಕಲ್ಪ ಬೇಕಾಗಿದೆ. ಸರ್ಕಾರ ಇಂತಹ ಹಳೆಯ ದೇವಸ್ಥಾನದ ಅಭಿವೃದ್ಧಿ ಕಡೆಗೆ ಗಮನಹರಿಸಬೇಕಾಗಿದೆ ಎಂದು ಶ್ರೀ ಅಮೃತೇಶ್ವರ ಸೇವಾ ಟ್ರಸ್ಟ್‌ ದೇವಘಾಟ್‌ (ವಿಪ್ರ) ವೀರೇಶಪ್ಪ ಕೊಳ್ಳಿ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios