ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಜೂ.28): ಕೊರೋನಾ ಮೊದಲ ಹಾಗೂ ಎರಡನೇ ಅಲೆ ಕಾಣಿಸಿಕೊಂಡ ನಂತರ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ.
ಕೊರೋನಾ ಸೋಂಕಿನ ಅಲೆ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಸಭೆ ಸಮಾರಂಭ, ಮದುವೆ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಸಂಪೂರ್ಣ ನಿಷೇಧಿಸಿರುವ ಮಧ್ಯೆಯೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಲವು ಬಾಲ್ಯ ವಿವಾಹಗಳು ಬೆಳಕಿಗೆ ಬಂದಿವೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಾಹಿತಿ ಪ್ರಕಾರ ಕಳೆದ ಐದು ವರ್ಷಗಳ ಬಾಲ್ಯ ವಿವಾಹ ಪ್ರಕರಣದ ಅಂಕಿ ಅಂಶಗಳನ್ನು ಅವಲೋಕಿಸಿದರೆ ಕೊರೋನಾ ಸೋಂಕು ಕಾಣಿಸಿಕೊಂಡು 2020 ಹಾಗೂ 2021ರ ಸಾಲಿನಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಗಮನಾರ್ಹವಾಗಿದೆ.
ಮೈಸೂರು: SSLC ವಿದ್ಯಾರ್ಥಿನಿಯ ಬಾಲ್ಯ ವಿವಾಹ ತಡೆದ ಸ್ನೇಹಿತೆ ..
114 ಬಾಲ್ಯ ವಿವಾಹ ತಡೆ:
2017ರಲ್ಲಿ 05 ಬಾಲ್ಯ ವಿವಾಹ ತಡೆದಿದ್ದರೆ 2018ರಲ್ಲಿ 08, 2019ರಲ್ಲಿ 24 ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲಾಗಿದೆ. ಕೊರೋನಾ ಮೊದಲ ಅಲೆ ಕಾಣಿಸಿಕೊಂಡ ತರುವಾಯ 2020ರ ಏಪ್ರಿಲ್‌ನಿಂದ 2021ರ ಮಾಚ್‌ರ್‍ವರೆಗೆ ಒಟ್ಟು 100 ಬಾಲ್ಯ ವಿವಾಹಗಳನ್ನು ತಡೆ ಹಿಡಿಯಲಾಗಿದ್ದು, 11 ಮದುವೆಗಳು ನೆರವೇರಿವೆ. 10 ಮಂದಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಇನ್ನು ಕೊರೋನಾ ಎರಡನೇ ಅಲೆ ವೇಳೆ ಜನತಾ ಕಫä್ಯರ್, ಲಾಕ್‌ಡೌನ್ ಜಾರಿ ಸಂದರ್ಭದಲ್ಲಿಯೇ 2021ರ ಏಪ್ರಿಲ್ - ಜೂನ್ ವರೆಗೆ 14 ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ತಡೆ ಹಿಡಿದು, 02 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ.
ಗ್ರಾಮೀಣ ಭಾಗದಲ್ಲೆ ಹೆಚ್ಚು:
ಕೊರೋನಾ ಹಿನ್ನೆಲೆಯಲ್ಲಿ ಒಂದೂವರೆ ವರ್ಷದಿಂದ ಶಾಲಾ - ಕಾಲೇಜುಗಳು ಬಂದ್ ಆಗಿರುವುದೇ ಬಾಲ್ಯ ವಿವಾಹ ಹೆಚ್ಚಳವಾಗಲು ಕಾರಣವಾಗಿದೆ. ಶಿಕ್ಷಣದಿಂದ ದೂರವಾದ ಹೆಣ್ಣು ಮಕ್ಕಳನ್ನು ಪೋಷಕರು ವಿವಾಹ ಬಂಧನಕ್ಕೊಳಪಡಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಂದಾಗುತ್ತಿದ್ದಾರೆ. ಒಂದರ್ಥದಲ್ಲಿ ಕೊರೋನಾ ಸೋಂಕು ಮಕ್ಕಳ ಭವಿಷ್ಯದ ಮೇಲೆ ಕರಾಳ ಛಾಯೆ ಮೂಡಿಸಿದೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದಿವೆ. ಬಾಲ್ಯ ವಿವಾಹ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಕೆಲವೆಡೆ ಮದುವೆಗಳು ನಡೆದಿದ್ದರೆ, ಇನ್ನೂ ಕೆಲವೆಡೆ ಅಧಿಕಾರಿಗಳು ವಿವಾಹ ತಡೆದು ಪಾಲಕ, ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.
ಬಾಲ್ಯವಿವಾಹ ತಡೆಗೆ ಆಹ್ವಾನ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ! ..
ಆಡುತ್ತ, ನಲಿಯುತ್ತ ತಮ್ಮ ಬಾಲ್ಯವನ್ನು ಅನುಭವಿಸಬೇಕಿದ್ದ ಪುಟಾಣಿಗಳ ಸಂತೋಷವನ್ನು ಕೊರೋನಾ ಕಸಿದುಕೊಂಡಿದೆ. ವಯಸ್ಸಿಗೆ ಬಾರದ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ಲಾಕ್ ಡೌನ್ ಹಾಗೂ ಕೊರೋನಾ ಸಂಕಷ್ಟದ ಸಮಯದಲ್ಲೇ ಹೆಚ್ಚು ಬಾಲ್ಯ ವಿವಾಹಗಳು ಕಂಡು ಬರುತ್ತಿವೆ.
ವಿವಾಹ ನಂತರ ಪ್ರಕರಣಗಳು
ಜಿಲ್ಲೆಯಲ್ಲಿನ ಕಳೆದ ಐದು ವರ್ಷಗಳ ಅಂಕಿ ಅಂಶವನ್ನು ಗಣನೆಗೆ ತೆಗೆದುಕೊಂಡರೇ, ಬಹುತೇಕ ವಿವಾಹ ನಂತರ ದೂರು ದಾಖಲಾಗಿವೆ. ಅದರಲ್ಲೂ ಮದುವೆಯ ನಂತರ ಗರ್ಭಧಾರಣೆ, ಮಗುವಿಗೆ ಜನ್ಮ ನೀಡಿರುವಂತಹದ್ದು, ಜತೆಗೆ, ಗರ್ಭಪಾತ ನಡೆದಿರುವ ಘಟನೆಗಳೇ ಹೆಚ್ಚಾಗಿವೆ. ಈ ಕುರಿತು 2017ರಲ್ಲಿ 12 ಮಂದಿ ವಿರುದ್ಧ ದೂರು ದಾಖಲಾಗಿದ್ದರೆ, 2018ರಲ್ಲಿ 18 ಮಂದಿ, ಇನ್ನು 2019ರಲ್ಲಿ 57 ಮಂದಿಯ ವಿರುದ್ಧ ದೂರು ದಾಖಲಾಗಿದ್ದರೆ, 2020ರಲ್ಲಿ 11 ಹಾಗೂ 2021ರಲ್ಲಿ 02 ಮಂದಿ ವಿರುದ್ಧ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಬಾಲ್ಯ ವಿವಾಹ ತಡೆ ಕಾಯ್ದೆ ಜತೆಗೆ, ಪೋಕ್ಸೊ ಕಾಯ್ದೆಯಡಿ 2018ರಿಂದ 2019ರವರೆಗೆ ಕ್ರಮವಾಗಿ 3, 5 ಹಾಗೂ 16 ಮಂದಿ ವಿರುದ್ಧ ದೂರು ದಾಖಲಾಗಿವೆ. ಲಾಕ್ ಡೌನ್ ಅವಧಿಯಲ್ಲಿ 2020ರಲ್ಲಿ 10 ಹಾಗೂ 2021ರಲ್ಲಿ 02 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ವರ್ಷ 2017 2018 2019 2020 2021 (ಏಪ್ರಿಲ್ -ಜೂನ್)
ಬಾಲ್ಯ ವಿವಾಹ ತಡೆ ಪ್ರಕರಣ 05 08 24 100 14
ಜನರ ಮೇಲಿನ ಪ್ರಕರಣ 12 18 57 11 02
ಬಾಲ್ಯ ವಿವಾಹ /ಪೋಕ್ಸೊ 03 05 16 10 02