ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿರುವ ಮಹಿಳಾ ಕೂಲಿ ಕಾರ್ಮಿಕರು ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಕೂಲಿ ಕೆಲಸದಿಂದ ವಂಚಿತರಾಗುವುದನ್ನು ತಪ್ಪಿಸುವ ಸಲುವಾಗಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಜ.02): ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿರುವ ಮಹಿಳಾ ಕೂಲಿ ಕಾರ್ಮಿಕರು ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಕೂಲಿ ಕೆಲಸದಿಂದ ವಂಚಿತರಾಗುವುದನ್ನು ತಪ್ಪಿಸುವ ಸಲುವಾಗಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯ್ದ ಗ್ರಾಪಂಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ವಿಶೇಷವಾಗಿ ಶಿಶುಪಾಲನಾ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಈ ಕೇಂದ್ರಗಳು ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ತೆರೆಯಲಿವೆ.
2022-23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 5 ತಾಲೂಕುಗಳಲ್ಲಿ ನರೇಗಾ ಯೋಜನೆಯ ಕೂಲಿಕಾರರ ಮಕ್ಕಳ ಪೌಷ್ಟಿಕತೆಯ ಸಂರಕ್ಷಣೆಗೆ ಶಿಶು ಸಂರಕ್ಷಣಾ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಎರಡು ಕಡೆ ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸಲು ಸ್ಥಳ ಗುರುತಿಸಲಾಗಿತ್ತು.
ಬೊಂಬೆ ಉದ್ಯಮದ ಬಗ್ಗೆ ಪ್ರಧಾನಿಗೆ ವಿಶೇಷ ಒಲವು: ಕೇಂದ್ರ ಸಚಿವ ಫಗ್ಗನ್ ಸಿಂಗ್
ಅದರಂತೆ ಕನಕಪುರ ತಾಲೂಕು ಚೀಲೂರು ಗ್ರಾಮ ಪಂಚಾಯಿತಿ ವತಿಯಿಂದ ಜಕ್ಕಸಂದ್ರ ಗ್ರಾಮದಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಲಾಗಿದ್ದರೆ, ಮತ್ತೊಂದು ಕೇಂದ್ರವನ್ನು ಮಾಗಡಿ ತಾಲೂಕಿನ ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಈ ಕೇಂದ್ರಕ್ಕೆ ಬರುವ ಮಕ್ಕಳಿಗೆ ಆಟ ಆಡಲು ಆಟಿಕೆಗಳು, ಆಟವಾಡುವ ಸಾಮಗ್ರಿ, ಪುಟಾಣಿ ಚೇರ್, ಗೋಡೆ ಬರಹಯೇ ಅಕ್ಷರಗಳು, ಪ್ರಾಣಿಗಳು, ನದಿಗಳ ಚಿತ್ರಗಳನ್ನು ಆಕರ್ಷಣಿಯವಾಗಿ ಬಿಡಿಸಲಾಗಿದೆ.
ಪ್ರತಿ ಶಿಶುಪಾಲನಾ ಕೇಂದ್ರದ ಪ್ರಾರಂಭ ಹಾಗೂ ನಿರ್ವಹಣೆಗಾಗಿ ಗರಿಷ್ಠ ಒಂದು ಲಕ್ಷ ರುಪಾಯಿವರೆಗೆ ವೆಚ್ಚವನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯ ಆಡಳಿತಾತ್ಮಕ ವೆಚ್ಚದಲ್ಲಿ ಭರಿಸಲು ಅನುಮತಿ ನೀಡಲಾಗಿದೆ. ಪ್ರತಿ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳ ಆರೈಕೆಗಾಗಿ 10 ಜನ ನರೇಗಾ ಯೋಜನೆ ಅಡಿ ನೋಂದಾಯಿತ ಮಹಿಳೆಯರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು. ಮಕ್ಕಳ ಆರೈಕೆಗಾಗಿ ಆಯ್ಕೆ ಮಾಡಲಾಗುವ ಮಹಿಳೆಯರಿಗೆ ಆರ್ಥಿಕ ವರ್ಷದಲ್ಲಿ 100 ದಿನಗಳಿಗೆ ಮೀರದಂತೆ ನರೇಗಾ ಯೋಜನೆಯಡಿ ನಿಗದಿಪಡಿಸಿದ ಕೂಲಿ ಪಾವತಿಸಲಾಗುತ್ತದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಶಿಶು ಪಾಲನಾ ಕೇಂದ್ರಗಳನ್ನು ಅಂಗನವಾಡಿ ಕೇಂದ್ರದ ಹತ್ತಿರ ಸ್ಥಳ ಗುರುತಿಸಿ ಪ್ರಾರಂಭಿಸಬೇಕು. ಈ ಕಟ್ಟಡದಲ್ಲಿ ಮಕ್ಕಳ ಸ್ನೇಹಿ ಶೌಚಾಲಯ, ಸೂಕ್ತವಾದ ಗಾಳಿ /ಬೆಳಕು ಬರುವಂತಹ ಸ್ಥಳ ಮತ್ತು ಮುಖ್ಯ ರಸ್ತೆಯ ಹತ್ತಿರ ಕಟ್ಟಡ ಇರದಂತೆ ಗುರುತಿಸಬೇಕು. ಮಧ್ಯಾಹ್ನದ ಪೂರಕ ಆಹಾರದ ಘಟಕ ವೆಚ್ಚ 8 ರು.ನಂತೆ ಮತ್ತು ತೀವ್ರ ಅಪೌಷ್ಟಿಕ ಮಕ್ಕಳಿಗೆ 12 ರು.ನಂತೆ ಹೆಚ್ಚುವರಿಯಾಗಿ ವೆಚ್ಚ ಭರಿಸಬೇಕಾಗಿದೆ. ಜೊತೆಗೆ ವೈದ್ಯರು ಪ್ರತಿ ತಿಂಗಳು 2 ಬಾರಿ ಶಿಶು ಪಾಲನಾ ಕೇಂದ್ರಗಳಿಗೆ ಭೇಟಿ ನೀಡುವಂತೆ ನಿಗಾ ವಹಿಸಬೇಕಿದೆ.
ನರೇಗಾ ಯೋಜನೆಯಲ್ಲಿರುವ ಮಹಿಳಾ ಕೂಲಿಕಾರರು ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಲು ಸಾಧ್ಯವಾಗದೆ ಕೂಲಿ ಕೆಲಸದಿಂದ ವಂಚಿತರಾಗುತ್ತಾರೆ. ಇಂತಹವರು ಕೂಡ ಕೆಲಸಕ್ಕೆ ಹೋಗಲು ಅನುಕೂಲವಾಗುವಂತೆ ಆಯ್ದ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಶಿಶು ಪಾಲನಾ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಇಷ್ಟೆಲ್ಲಾ ರಿಯಾಯಿತಿ ಹಾಗೂ ಅವಕಾಶಗಳನ್ನು ನರೇಗಾ ಯೋಜನೆಯಡಿ ನೀಡುತ್ತಿರುವ ಉದ್ದೇಶ ಮಹಿಳೆ ಸ್ವಾವಲಂಬಿಯಾಗಬೇಕು. ಸಮಾನ ಅವಕಾಶಗಳನ್ನು ಪಡೆದುಕೊಂಡು ಕುಟುಂಬಗಳನ್ನು ಸಬಲಗೊಳಿಸಲು ಶಕ್ತಳಾಗಬೇಕು ಎಂಬುದು ಇದರ ಉದ್ದೇಶ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.
ಶಿಶುಪಾಲನಾ ಕೇಂದ್ರದಲ್ಲಿ ಸಿಗುವ ಸವಲತ್ತುಗಳು
* 6 ತಿಂಗಳಿಂದ 3 ವರ್ಷದ ಮಕ್ಕಳಳಿಗೆ ಶಾಲಾ ಪೂರ್ವ ಶಿಕ್ಷಣ, ಆರೈಕೆ ಪೂರಕ ಪೌಷ್ಠಿಕ ಆಹಾರ, ಚುಚ್ಚು ಮದ್ದು ಲಸಿಕೆ ಹಾಗೂ ಆರೋಗ್ಯ ತಪಾಸಣೆ ಮಾಡುವುದರ ಮೂಲಕ ಮಕ್ಕಳ ಸಮಗ್ರ ಪೋಷಣೆ ಮಾಡಲಾಗುವುದು.
* ಉದ್ಯೋಗಸ್ತ ತಾಯಂದಿರ ಮಕ್ಕಳನ್ನು ದಿನಪೂರ್ತಿ ಸುರಕ್ಷಿತವಾಗಿ ನೋಡಿಕೊಂಡು ಅವರ ಪೌಷ್ಠಿಕ ಹಾಗೂ ಆರೋಗ್ಯ ಗುಣಮಟ್ಟವನ್ನು ಸುಧಾರಿಸಲಾಗುವುದು.
* ಪ್ರತಿ ತಿಂಗಲ 2 ಬಾರಿ ಶಿಶುಪಾಲನಾ ಕೇಂದ್ರಕ್ಕೆ ವೈದ್ಯರ ಭೇಟಿ
ಶಿಶುಪಾಲನಾ ಕೇಂದ್ರದ ಉದ್ದೇಶಗಳು
* ಮಗುವಿನ ಬೌದ್ಧಿಕ , ಮಾನಸಿಕ, ಶಾರೀರಕ ಬೆಳವಣಿಗೆಗೆ ಉತ್ತೇಜನ ನೀಡುವುದು
* ಮಗುವಿನ ಕಲಿಕಾ ಸಾಮಾರ್ಥ್ಯ ಹಾಗೂ ಮನೋಭಾವವನ್ನು ಉತ್ತೇಜಿಸುವುದು
* ಮಗು ಸಾಮಾಜಿಕ ಪರಿಸರಕ್ಕೆ ಒಗ್ಗಿಕೊಳ್ಳಲು ಪೂರಕ ವಾತಾವರಣ ಕಲ್ಪಿಸುವುದು
* ಮಕ್ಕಳ ದೈಹಿಕ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವುದು.
ಎಚ್‌ಡಿಕೆ ನಡವಳಿಕೆಗೆ ಬೇಸತ್ತು ಜೆಡಿಎಸ್ ಬಿಟ್ಟೆ: ಬಾಲಕೃಷ್ಣ
ಅಕುಶಲ ಕೂಲಿ ಕಾರ್ಮಿಕರ ಮಕ್ಕಳಿಗೆ ನರೇಗಾ ಯೋಜನೆಯಡಿ ಶಿಶು ಪಾಲನಾ ಕೇಂದ್ರ ನಿರ್ವಹಣೆ ಮಾಡಲಾಗುತ್ತಿದೆ. 6 ತಿಂಗಳಿಂದ 3 ವರ್ಷ ವಯಸ್ಸಿನ ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹ ಕಾರಿಯಾಗಲಿದೆ. ಉತ್ತಮ ಆರೋಗ್ಯಕ್ಕೆ ಪೂರಕವಾದ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಮಕ್ಕಳ ವಯೋಮಿತಿಗೆ ಅನುಗುಣವಾಗಿ ಪಠ್ಯ ಚಟುವಟಿಕೆ ರೂಪಿಸಲಾಗಿದೆ.
-ಬೈರಪ್ಪ, ಇಒ, ತಾಪಂ, ಕನಕಪುರ