ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ರಾಮನಗರ (ಅ.04): ಉತ್ತರ ಪ್ರದೇಶದ ಹಾಥ್ರಸ್ ನಲ್ಲಿ ನಡೆದಿರುವ ದಲಿತ ಯುವತಿ ಮೇಲಿನ ದೌರ್ಜನ್ಯ ಖಂಡಿಸಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಧರಣಿ ನಡೆಸಿದ ಕಾರ್ಯಕರ್ತರು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರ, ಪ್ರಧಾನಿ ಮೋದಿ , ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ ,ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಸ್ತಿತ್ವಕ್ಕ ಬಂದ ನಂತರ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.
ಪ್ರತಿಭಟನೆಗೆ ಮಣಿದ ಯೋಗಿ, ಹತ್ರಾಸ್ ಅತ್ಯಾಚಾರ ಕೇಸ್ ಸಿಬಿಐಗೆ! ...
ಕುಟುಂಬಕ್ಕೆ ತಿಳಿಸದೆ ಅಂತ್ಯಸಂಸ್ಕಾರ
ಉತ್ತರ ಪ್ರದೇಶದಲ್ಲಿ ದಲಿತ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕಣ ನಡೆದಿದೆ. ಅಲ್ಲಿನ ಬಿಜೆಪಿ ಸರ್ಕಾರ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಲು ವಿಫಲವಾಗಿವೆ. ಮೃತಪಟ್ಟಿರುವ ಸಂತ್ರಸ್ತ ಯುವತಿಯ ಶವವನ್ನು ಗೌರವಯುತವಾಗಿ ಸಂಸ್ಕಾರ ಮಾಡಲು ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರ್ಕಾರ ಅವಕಾಶ ಮಾಡಿಕೊಡಲಿಲ್ಲ. ಶವವನ್ನು ಕುಟುಂಬದವರಿಗೆ ತಿಳಿಯದಂತೆ ಸುಟ್ಟುಹಾಕಿ ಸಾಕ್ಷ್ಯನಾಶ ಪಡಿಸಿದ್ದಾರೆ. ಅಲ್ಲಿನ ಸರ್ಕರ ಪರೋಕ್ಷವಾಗಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಂಗ ತನಿಖೆಗೆ ಒಪ್ಪಿಸಿ
ಉತ್ತರ ಪ್ರದೇಶದಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಆ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ವಿಫಲವಾಗಿವೆ, ಹೀಗಾಗಿ ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ತಕ್ಷಣ ಯೋಗಿ ಆದಿತ್ಯನಾಥರ ಸರ್ಕಾರವನ್ನು ವಜಾ ಮಾಡಬೇಕು. ಸಾಕ್ಷನಾಶ ಮಾಡಿರುವ ಜಿಲ್ಲಾಡಳಿತ ಮತ್ತು ಪೊಲೀಸರನ್ನು ಹೊಣೆಯಾಗಿಸಿ ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾ ಮಾಡಿ, ಬಂಧಿಸಿಸಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಸಂತ್ರಸ್ಥೆಯ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ನೀಲಿರಮೇಶ್, ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹೀಂ (ಬಾಬು), ಜಿಲ್ಲಾ ಖಜಾಂಚಿ ಸುರೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಮುರುಗೇಶ್, ಬಾನಮದೂರು ಕುಮಾರ್,
ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟಾಚಲ, ರಾಮನಗರ ತಾಲೂಕು ಘಟಕದ ಅಧ್ಯಕ್ಷ ಸ್ವಾಮಿ, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಮಹದೇವ, ಮಾಗಡಿ ತಾಲೂಕು ಘಟಕದ ಅಧ್ಯಕ್ಷ ರಾಮಣ್ಣ ಮುಂತಾದವರು ಭಾಗವಹಿಸಿದ್ದರು.