ಪ್ರತಿಭಟನೆಗೆ ಮಣಿದ ಯೋಗಿ, ಹತ್ರಾಸ್ ಅತ್ಯಾಚಾರ ಕೇಸ್ ಸಿಬಿಐಗೆ!
ಹಾಥ್ರಸ್ ಅತ್ಯಾಚಾರ ಕೇಸ್ ಸಿಬಿಐ ತನಿಖೆ| ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ಪ್ರಕರಣ| ಪ್ರತಿಭಟನೆಗಳಿಗೆ ಮಣಿದ ಯೋಗಿ ಸರ್ಕಾರ
ಲಖನೌ(ಅ,.04): ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯ ದಲಿತ ಯುವತಿಯೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಸಾವಿನ ಪ್ರಕರಣವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಶನಿವಾರ ಸಿಬಿಐ ತನಿಖೆಗೆ ವಹಿಸಿದೆ.
ಸೆ.14ರಂದು ಅತ್ಯಾಚಾರ ಹಾಗೂ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದ ಸಂತ್ರಸ್ತೆಯ ಮೃತದೇಹವನ್ನು ಪೊಲೀಸರು ರಾತ್ರೋರಾತ್ರಿ ಅಂತ್ಯಕ್ರಿಯೆ ನೆರವೇರಿಸಿದ್ದು ಹಾಗೂ ಆಕೆಯ ಮೇಲೆ ಅತ್ಯಾಚಾರ ನಡೆದೇ ಇರಲಿಲ್ಲ ಎಂದು ಹೇಳಿದ್ದು ದೇಶದೆಲ್ಲೆಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ದೇಶದೆಲ್ಲೆಡೆ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ.
"
ಏನಿದು ಪ್ರಕರಣ?:
ಯುವತಿ ಸೆ.14ರಂದು ದನಕ್ಕೆ ಮೇವು ತರಲೆಂದು ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಮೇಲ್ಜಾತಿಯ ನಾಲ್ಕು ಮಂದಿ ದುಪ್ಪಟ್ಟವನ್ನು ಕುತ್ತಿಗೆಗೆ ಸುತ್ತಿ ಎಳೆದೊಯ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಯುವತಿಯ ಬೆನ್ನುಮೂಳೆಗೆ ಬಲವಾದ ಪೆಟ್ಟುಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಮಗಳ ಚೀರಾಟವನ್ನು ಕೇಳಿಸಿಕೊಂಡ ತಾಯಿ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಳು. ಈ ವೇಳೆ ಪೊಲೀಸರು ಅತ್ಯಾಚಾರ ದೂರು ಸ್ವೀಕರಿಸದೇ ಅಮಾನವೀಯವಾಗಿ ನಡೆದುಕೊಂಡಿದ್ದರು. ಬಳಿಕ ಸೆ.22ರಂದು ಕಾಟಾಚಾರಕ್ಕೆ ಯುವತಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದರು ಎಂದು ದೂರಲಾಗಿದೆ.
ತೀವ್ರ ಹಲ್ಲೆಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿಗೆ ಆರಂಭದಲ್ಲಿ ಅಲಿಗಢ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸೆ.29ರಂದು ಯುವತಿ ಸಾವಿಗೀಡಾಗಿದ್ದಳು. ಆ ಬಳಿಕ ಯುವತಿಯ ಮೃತದೇಹವನ್ನುಕುಟುಂಬಕ್ಕೂ ನೀಡದೇ ಹಾಥ್ರಸ್‌ಗೆ ತಂದು ಪೊಲೀಸರು ರಾತ್ರೋರಾತ್ರಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ಘಟನೆಯ ಬಳಿಕ ಅತ್ಯಾಚಾರ ಸಂತ್ರಸ್ತ ಯುವತಿಯ ಸಾವಿನ ಪ್ರಕರಣ ದೇಶದ ಗಮನ ಸೆಳೆದಿತ್ತು.