ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂದು ನಮನ

By Suvarna NewsFirst Published Feb 21, 2023, 3:20 PM IST
Highlights

ಕೊಡವರಲ್ಲಿ ಯೋಧ ಸಂಸ್ಕೃತಿಯಿದ್ದು, ಕೊಡವ ಗಂಡಸರು ಸಾಂಪ್ರದಾಯಿಕ ಆಯುಧಗಳಾದ ಒಡಿ ಕತ್ತಿ (ಸಾಂಪ್ರದಾಯಿಕ ಕೊಡವ ಖಡ್ಗ) ಇತ್ಯಾದಿಗಳನ್ನು ಬಳಸುವುದರಲ್ಲಿ ತರಬೇತಿ ಪಡೆದಿರುತ್ತಾರೆ. ಕೊಡವರಿಗೆ ಸೇನಾ ಸೇವೆ ಸಲ್ಲಿಸಿರುವ ಶ್ರೀಮಂತ ಇತಿಹಾಸವಿದೆ.

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ದಕ್ಷಿಣ ಭಾರತದ, ಕೊಡಗು ಜಿಲ್ಲೆಯ ಸಣ್ಣ ಯೋಧ ಸಮುದಾಯವಾದ ಕೊಡವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಸುದೀರ್ಘ ಪರಂಪರೆಯನ್ನು ಹೊಂದಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಕೊಡವರ ಯೋಧ ಸಂಸ್ಕೃತಿ, ರಾಷ್ಟ್ರದ ಕುರಿತು ಅವರಿಗಿರುವ ಕರ್ತವ್ಯ ಪ್ರಜ್ಞೆ ಮತ್ತು ನಿಷ್ಠೆ, ಸೇನೆಯಲ್ಲಿ ಸೇವೆ ಸಲ್ಲಿಸುವ ಕುರಿತು ಕೊಡವ ಸಮುದಾಯದಲ್ಲಿರುವ ಗೌರವ ಮತ್ತು ಹೆಮ್ಮೆಗಳೂ ಸೇರಿವೆ.

ಯೋಧ ಸಂಸ್ಕೃತಿಯ ಮೂಲಗಳು

ತಮ್ಮದೇ ಆದ ವಿಶಿಷ್ಟ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ಜನಾಂಗೀಯ ಗುಂಪು ಕೊಡವರು. ಅವರು ಶತಮಾನಗಳ ಕಾಲ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಾ ಬಂದಿದ್ದಾರೆ. ಈ ಇತಿಹಾಸ ಕ್ರಿಸ್ತಶಕ 1100ರ ಹಿಂದಿನಿಂದಲೂ ಸಾಗಿ ಬಂದಿದೆ. ಕೊಡವರಲ್ಲಿ ಯೋಧ ಸಂಸ್ಕೃತಿಯಿದ್ದು, ಕೊಡವ ಗಂಡಸರು ಸಾಂಪ್ರದಾಯಿಕ ಆಯುಧಗಳಾದ ಒಡಿ ಕತ್ತಿ (ಸಾಂಪ್ರದಾಯಿಕ ಕೊಡವ ಖಡ್ಗ) ಇತ್ಯಾದಿಗಳನ್ನು ಬಳಸುವುದರಲ್ಲಿ ತರಬೇತಿ ಪಡೆದಿರುತ್ತಾರೆ. ಕೊಡವರಿಗೆ ಸೇನಾ ಸೇವೆ ಸಲ್ಲಿಸಿರುವ ಶ್ರೀಮಂತ ಇತಿಹಾಸವಿದೆ. ಹಲವು ಕೊಡವ ಯೋಧರು ವಿವಿಧ ಯುದ್ಧಗಳಲ್ಲಿ, ಶಾಂತಿ ಸ್ಥಾಪನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ. ಕೇವಲ 1.5 ಲಕ್ಷಕ್ಕೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ಕೊಡಗು ಜಿಲ್ಲೆ ಭಾರತೀಯ ಸೇನೆಯ ಎಲ್ಲಾ ರ್ಯಾಂಕ್‌ಗಳ ಯೋಧರನ್ನು ಪೂರೈಸಿದ ಭಾರತದ ಏಕೈಕ ಜಿಲ್ಲೆ ಎಂಬ ಕೀರ್ತಿ ಸಂಪಾದಿಸಿದೆ. ಕೊಡಗು ಒಂದು ಕಾಲದಲ್ಲಿ ರಾಜ್ಯವಾಗಿದ್ದು, ತನ್ನದೇ ಮುಖ್ಯಮಂತ್ರಿಯನ್ನೂ ಹೊಂದಿತ್ತು. ನಾಲ್ವರು ಮೈಸೂರು ಮಹಾರಾಜರಿಗೆ ದಿವಾನರಾಗಿ ಕಾರ್ಯ ಸಲ್ಲಿಸಿದ್ದರು. ಮೈಸೂರು ಮಹಾರಾಜರ ಆಡಳಿತ ಅವಧಿಯಲ್ಲಿ ಹಲವು ಸೇನಾ ಮುಖ್ಯಸ್ಥರನ್ನೂ ಸಮುದಾಯ ಒದಗಿಸಿತ್ತು.

ಇದನ್ನು ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ಕರ್ತವ್ಯ ನಿಷ್ಠೆ: ಭಾರತೀಯ ಸೇನೆಯಲ್ಲಿ ಕೊಡವರು

ಕೊಡವರಿಗೆ ಭಾರತೀಯ ಸೇನಾಪಡೆಗಳಲ್ಲಿ ಸೇವೆ ಸಲ್ಲಿಸುವ ಬಹು ದೀರ್ಘ ಇತಿಹಾಸವಿದೆ. ಅವರಿಗೆ ಅವರ ಯೋಧ ಸಂಸ್ಕೃತಿ, ಕರ್ತವ್ಯ ಪ್ರಜ್ಞೆ, ಹಾಗೂ ದೇಶವನ್ನು ರಕ್ಷಿಸುವ ಬಯಕೆ ಬೆಂಬಲವಾಗಿದೆ. ಹಲವು ಕೊಡವರು ಮಿಲಿಟರಿ ಸೇವೆಯ ಇತಿಹಾಸ ಹೊಂದಿರುವ ಕುಟುಂಬಗಳಿಂದ ಬಂದಿದ್ದಾರೆ. ಕೊಡವ ಕುಟುಂಬಗಳಲ್ಲಿ ಹಲವಾರು ತಲೆಮಾರುಗಳು ಸೇನೆಯಲ್ಲಿ ಸೇವೆ ಸಲ್ಲಿಸಿರುವುದೂ ಸಾಮಾನ್ಯವಾಗಿ ಕಂಡು ಬರುತ್ತದೆ. ಕೊಡವರು ಅವರ ದೈಹಿಕ ಸ್ಥಿರತೆ ಮತ್ತು ಶಿಸ್ತಿಗೂ ಹೆಸರಾಗಿದ್ದು, ಇದು ಅವರನ್ನು ಸೇನೆಗೆ ಹೆಚ್ಚು ಸೂಕ್ತವಾಗುವಂತೆ ಮಾಡುತ್ತದೆ.

ಅದರೊಡನೆ, ಸೇನಾಪಡೆಗಳಲ್ಲಿ ಸೇವೆ ಸಲ್ಲಿಸುವುದು ಕೊಡವರಿಗೆ ರಾಷ್ಟ್ರ ರಕ್ಷಣೆಯ ಒಂದು ದಾರಿ ಎಂಬ ಪರಿಕಲ್ಪನೆಯಿದ್ದು, ಇದನ್ನು ಅವರು ಅಪಾರ ಹೆಮ್ಮೆ ಮತ್ತು ಗೌರವದಿಂದ ಕಾಣುತ್ತಾರೆ. ಇದರ ಪರಿಣಾಮವಾಗಿ ಹಲವು ಕೊಡವರು ತಮ್ಮ ಕುಟುಂಬ, ಸಮುದಾಯದಿಂದ ದೂರವಿದ್ದು ದೇಶ ಸೇವೆ ಸಲ್ಲಿಸುವ, ಎಂತಹ ತ್ಯಾಗಕ್ಕೂ ಸಿದ್ಧರಾಗುವ ಗುಣ ಹೊಂದಿದ್ದಾರೆ.

ಇದನ್ನೂ ಓದಿ:  ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

ಅಪಾಯದ ಮುಂದೆ ಧೈರ್ಯ: ಸೇನಾ ಕಾರ್ಯಾಚರಣೆಗಳಲ್ಲಿ ಕೊಡವರು

ಕೊಡವರು ಸೇನಾ ಸೇವೆಯ ಅತಿದೊಡ್ಡ, ಶ್ರೀಮಂತ ಇತಿಹಾಸ ಹೊಂದಿದ್ದು, ಹಲವು ಯುದ್ಧಗಳು ಹಾಗೂ ಶಾಂತಿ ಸ್ಥಾಪನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ, ರಾಷ್ಟ್ರ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅಪಾಯದ ಅಂಚಿನಲ್ಲೂ ತಮ್ಮ ಶೌರ್ಯ ಮತ್ತು ಸಮರ್ಪಣಾ ಭಾವದಿಂದ ಕೊಡವರು ಹೆಸರುವಾಸಿಯಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಪ್ರಮುಖ ಕೊಡವರಲ್ಲಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪನವರು ಅತ್ಯಂತ ಪ್ರಸಿದ್ಧರು. ಅವರು ಭಾರತೀಯ ಸೇನೆಯ ಪ್ರಥಮ ಮಹಾದಂಡನಾಯಕರಾಗಿ ಸೇವೆ ಸಲ್ಲಿಸಿದ್ದರು. ಭಾರತ ಸ್ವತಂತ್ರಗೊಂಡ ಬಳಿಕ, ಭಾರತೀಯ ರಾಜರ ಆಡಳಿತದಲ್ಲಿದ್ದ ರಾಜ್ಯಗಳು ಭಾರತದಲ್ಲಿ ವಿಲೀನಗೊಳ್ಳಲು ಕಾರ್ಯಪ್ಪನವರೂ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ ಹಾಗೂ ಲೀಜನ್ ಆಫ್ ಮೆರಿಟ್ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. 

ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!

ಇನ್ನೋರ್ವ ಗಮನಾರ್ಹ ಕೊಡವ ವೀರ ಯೋಧರೆಂದರೆ ಜನರಲ್ ಕೆ ಎಸ್ ತಿಮ್ಮಯ್ಯ. 1957ರಿಂದ 1961ರ ತನಕ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿ ಸೇವೆ ಸಲ್ಲಿಸಿದ ತಿಮ್ಮಯ್ಯನವರ ಸೇವೆಯನ್ನು ಗುರುತಿಸಿ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಭಾರತೀಯ ಸೇನಾಪಡೆಗಳಲ್ಲಿ ಸೇವೆ ಸಲ್ಲಿಸಿದ ಇತರ ಗಮನಾರ್ಹ ಕೊಡಗಿನ ಯೋಧರಲ್ಲಿ 1947ರ ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ ಬ್ರಿಗೇಡಿಯರ್ ಬಿ ಕೆ ಪೊನ್ನಣ್ಣ, ಏರ್ ಮಾರ್ಷಲ್ ಕೆ ಸಿ ಕಾರ್ಯಪ್ಪ, ಇಂಡಿಯನ್ ಮಿಲಿಟರಿ ಅಕಾಡೆಮಿಯ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ಬಿ.ಕೆ. ಕೃಷ್ಣನ್, ಲೆಫ್ಟಿನೆಂಟ್ ಜನರಲ್ ಪಿ.ಕೆ. ದಿವಾನ್, ಭಾರತೀಯ ಸೇನೆಯ ದಕ್ಷಿಣ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸಿದ ಕೆ.ಎಸ್. ಚಂದ್ರಶೇಖರ್ ಸಹ ಪ್ರಮುಖರು.

ಕೊಡವ ಸಮುದಾಯ ಅತ್ಯಂತ ವಿಶಿಷ್ಟವಾದ ಸಂಸ್ಕೃತಿ, ಇತಿಹಾಸ ಹೊಂದಿದ್ದು, ಭಾರತೀಯ ಸೇನಾಪಡೆಗಳಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಸೇನಾಪಡೆಗೆ ಅವರ ಸಮರ್ಪಣಾ ಭಾವ ಅವರ ದೇಶ ಪ್ರೇಮ ಮತ್ತು ನಿಷ್ಠೆಯಿಂದ ನಿರ್ದೇಶಿಸಲ್ಪಟ್ಟಿದೆ. ಸೇನಾ ಸೇವೆ ಸಲ್ಲಿಸುವಲ್ಲಿ ಕೊಡವರು ಸುದೀರ್ಘ ಇತಿಹಾಸ ಹೊಂದಿದ್ದು, ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೊಡಗು ಜಿಲ್ಲೆಯ ಕೊಡವ ಸಮುದಾಯ ಧೈರ್ಯ, ಸಾಹಸ ಹಾಗೂ ತ್ಯಾಗಕ್ಕೆ ಮಹೋನ್ನತ ಉದಾಹರಣೆಯಾಗಿದ್ದು, ಅವರ ದೇಶ ಸೇವೆ ನೆನಪಿಟ್ಟುಕೊಂಡು, ಸಂಭ್ರಮಿಸಬೇಕಾಗಿದೆ.

click me!