ಪ್ರವಾಹದಿಂದ ವೀಳ್ಯದೆಲೆ ಉತ್ಪಾದನೆ ಕುಂಠಿತ: ಕಂಗಾಲಾದ ರೈತರು

By Web Desk  |  First Published Sep 23, 2019, 3:11 PM IST

ಪ್ರವಾಹದಿಂದ ವೀಳ್ಯದೆಲೆ ಉತ್ಪಾದನೆ ಕುಸಿತ| ಹಾವೇರಿಯಲ್ಲಿ 500 ಹೆಕ್ಟೇರ್‌ ವೀಳ್ಯದೆಲೆ ಕೃಷಿ ನಾಶ| ಸಂಕಷ್ಟದಲ್ಲಿ ಸಾವಿರಾರು ರೈತರು| ಎಂಟತ್ತು ದಿನಗಳ ಕಾಲ ತೋಟದಲ್ಲಿ ನೀರು ನಿಂತಿದ್ದರಿಂದ ಕೊಳೆತ ಎಲೆ ಬಳ್ಳಿ| ನಮ್ಮ ಜೀವನಕ್ಕೆ ಆಧಾರವಾಗಿದ್ದ ಎಲೆ ವ್ಯಾಪಾರವೇ ಬಂದ್‌ ಆಗಿದೆ ಎಂದ ಎಲೆ ಬೆಳೆಗಾರ| 


ಹಾವೇರಿ: (ಸೆ.23) ಪ್ರವಾಹದಿಂದ ಹಾವೇರಿ ಜಿಲ್ಲೆಯ ಬಂಗಾರದ ಬೆಳೆ ಎಂದೇ ಗುರುತಿಸಿಕೊಂಡಿದ್ದ ವೀಳ್ಯದೆಲೆ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. 500ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿನ ಎಲೆ ತೋಟ ಸಂಪೂರ್ಣ ನಾಶವಾಗಿದ್ದು, ಇದನ್ನೇ ಜೀವನಾಧಾರವಾಗಿಸಿಕೊಂಡಿದ್ದ ಸಾವಿರಾರು ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Tap to resize

Latest Videos

ಪ್ರವಾಹದಿಂದ ನದಿ ತೀರದ ಪ್ರದೇಶದ ಜನರ ಬದುಕೇ ನಾಶವಾಗಿದೆ. ಬೇಸಿಗೆಯ ಬರಗಾಲದಲ್ಲೂ ಟ್ಯಾಂಕರ್‌ ಮೂಲಕ ನೀರು ಹಾಕಿ ಎಲೆ ಬಳ್ಳಿಯನ್ನು ಬದುಕಿಸಿಕೊಂಡಿದ್ದ ಬೆಳೆಗಾರರಿಗೆ ಪ್ರವಾಹದ ವಿರುದ್ಧ ಹೋರಾಡಲು ಸಾಧ್ಯವಾಗಿಲ್ಲ. ಎಂಟತ್ತು ದಿನಗಳ ಕಾಲ ತೋಟದಲ್ಲಿ ನೀರು ನಿಂತು ಎಲೆ ಬಳ್ಳಿ ಕೊಳೆತು ಹೋಗಿವೆ. ಪ್ರವಾಹ ಇಳಿದ ಬಳಿಕ ಒಂದೊಂದೇ ಬಳ್ಳಿ ಕೆಂಪಗಾಗುತ್ತ ಈಗ ಸಂಪೂರ್ಣ ಒಣಗಿದೆ. ಇದು ಬೆಳೆಗಾರರನ್ನೂ ಆರ್ಥಿಕವಾಗಿ ಒಣಗಿಸಿದ್ದು, ಮುಂದೇನು ಮಾಡಬೇಕು ಎಂಬ ಚಿಂತೆ ಬೆಳೆಗಾರರನ್ನು ಕಾಡುತ್ತಿದೆ.

ಎಲ್ಲೆಲ್ಲಿ ಎಷ್ಟುನಾಶ:

ಸವಣೂರು ತಾಲೂಕಿನಲ್ಲಿ 115 ಹೆಕ್ಟೇರ್‌, ಹಿರೇಕೆರೂರು ತಾಲೂಕಿನಲ್ಲಿ 200 ಹೆಕ್ಟೇರ್‌, ಶಿಗ್ಗಾಂವಿ ತಾಲೂಕಿನಲ್ಲಿ 90 ಹೆಕ್ಟೇರ್‌, ರಾಣಿಬೆನ್ನೂರು ತಾಲೂಕಿನಲ್ಲಿ 55 ಹೆಕ್ಟೇರ್‌, ಹಾವೇರಿ ತಾಲೂಕಿನಲ್ಲಿ 15 ಹೆಕ್ಟೇರ್‌, ಹಾನಗಲ್ಲ ತಾಲೂಕಿನಲ್ಲಿ 11 ಹೆಕ್ಟೇರ್‌ ಸೇರಿದಂತೆ ಒಟ್ಟು 487 ಹೆಕ್ಟೇರ್‌ ಪ್ರದೇಶದಲ್ಲಿನ ವೀಳ್ಯದೆಲೆ ತೋಟ ನಾಶವಾಗಿದೆ.

ನವಾಬರ ಕಾಲದಿಂದ ವೀಳ್ಯದೆಲೆ ಕೃಷಿ:

ನವಾಬರ ಕಾಲದಿಂದಲೂ ಹಾವೇರಿ ಜಿಲ್ಲೆಯ ಸವಣೂರು, ಶಿಗ್ಗಾಂವಿ, ಹಿರೇಕೆರೂರು, ರಾಣಿಬೆನ್ನೂರು ಭಾಗದಲ್ಲಿ ವ್ಯಾಪಕವಾಗಿ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಅದರಲ್ಲೂ ಸವಣೂರು ಎಲೆಗೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿದೆ. ರಾಣಿಬೆನ್ನೂರಿನಲ್ಲೂ ವೀಳ್ಯದೆಲೆ ಮಾರುಕಟ್ಟೆಯಿದ್ದು, ಸುತ್ತಮುತ್ತಲಿನಿಂದ ರೈತರು ಇಲ್ಲಿಗೆ ತಂದು ಎಲೆ ಮಾರಾಟ ಮಾಡುತ್ತಾರೆ.

ರೇಟ್‌ ಇದೆ, ಎಲೆಯಿಲ್ಲ

ಮಾರುಕಟ್ಟೆಯಲ್ಲಿ ಬಿಳಿ ಅಂಬಾಡಿ ಎಲೆ ಹಾಗೂ ಕರಿ ಎಲೆಗೆ ಈಗ ಉತ್ತಮ ಧಾರಣೆಯಿದೆ. 6 ಸಾವಿರ ಎಲೆ ಇರುವ ಪೆಂಡಿಗೆ .3 ಸಾವಿರಕ್ಕಿಂತ ಹೆಚ್ಚು ದರವಿದೆ. ನೂರು ಎಲೆಗೆ ಮೊದಲು .50 ಇದ್ದದ್ದು ಈಗ .70 ರಿಂದ 80 ಆಗಿದೆ. ಆದರೆ, ಎಲೆಯೇ ಇಲ್ಲವಾಗಿದೆ.

ಈ ಬಗ್ಗೆ ಮಾತನಾಡಿದ ಸವಣೂರು ತಾಲೂಕಿನ ಎಲೆ ಬೆಳೆಗಾರ ಅಲ್ಲಾಬಕ್ಷ ಕಡಕೋಳ ಅವರು, ತಂದೆಯವರ ಕಾಲದಿಂದಲೂ ನಾವು ತೋಟದಲ್ಲಿ ಎಲೆ ಬಳ್ಳಿ ಬೆಳೆದು ಅದರಿಂದ ಜೀವನ ನಡೆಸುತ್ತಿದ್ದೆವು. ಬೇಸಿಗೆಯಲ್ಲೂ ವೀಳ್ಯದೆಲೆ ಬಳ್ಳಿ ಒಣಗದಂತೆ ನೋಡಿಕೊಂಡಿದ್ದೆವು. ಆದರೆ, ಪ್ರವಾಹವು ಎಲ್ಲವನ್ನೂ ನಾಶ ಮಾಡಿದೆ. ಇದರಿಂದ ನಮ್ಮ ಜೀವನಕ್ಕೆ ಆಧಾರವಾಗಿದ್ದ ಎಲೆ ವ್ಯಾಪಾರವೇ ಬಂದ್‌ ಆಗಿದೆ ಎಂದು ಹೇಳಿದರು. 


ಈ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಭೋಗಿ ಅವರು, ನೆರೆ ಹಾವಳಿಯಿಂದ ಕಾವೇರಿ ಜಿಲ್ಲೆಯಲ್ಲಿ ಸುಮಾರು 500 ಹೆಕ್ಟೇರ್‌ ವೀಳ್ಯದೆಲೆ ತೋಟ ಹಾಳಾಗಿದೆ. ಜಂಟಿ ಸಮೀಕ್ಷೆ ಕೈಗೊಂಡಿದ್ದು, ಹಾನಿ ವಿವರವನ್ನು ಸಲ್ಲಿಸಲಾಗಿದೆ. ಅವರಿಗೆ ಸೂಕ್ತ ಪರಿಹಾರ ನೀಡಲು ಕೋರಲಾಗಿದ್ದು, ವೀಳ್ಯದೆಲೆ ಬೆಳೆಗಾರರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. 
 

click me!