ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಮುಂದಾಗಿದ್ದಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸರ್ಕಾರದ ಯೋಜನೆಗಳಿಗೆ ಸಾಲ ನೀಡಲು ಮುಂದೆ ಬರುತ್ತಿಲ್ಲ ಎಂಬುದು ರೈತರ ಆರೋಪ
ಜಗದೀಶ ವಿರಕ್ತಮಠ
ಬೆಳಗಾವಿ(ಡಿ.08): ಆಧುನಿಕ ಕೃಷಿ ಮಾಡಲು ಮತ್ತು ಇಳುವರಿ ಉತ್ಪಾದನೆಯನ್ನು ದ್ವಿಗುಣಗೊಳಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತ ಸಮುದಾಯಕ್ಕೆ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿವೆ. ಆದರೆ, ಗ್ರಾಮೀಣ ಭಾಗದ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ನಿರಾಕರಿಸುತ್ತಿರುವುದರಿಂದ ಸರ್ಕಾರದ ಯೋಜನೆಗಳು ರೈತರಿಗೆ ತಲುಪುತ್ತಿಲ್ಲ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಅತಿವೃಷ್ಟಿ, ಕೊರೋನಾ ವೈರಸ್ ಹಾವಳಿಯಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದಾಗಿ ಬೆಳೆಗಳು ಕೈಗೆ ಬಾರದ ಹಿನ್ನೆಲೆಯಲ್ಲಿ ಸಾಲದ ಸುಳಿಯಲ್ಲಿ ಸಿಕ್ಕಿರುವ ರೈತರು, ಹೇಗಾದರೂ ಮಾಡಿ ಆರ್ಥಿಕವಾಗಿ ಸದೃಢರಾಗಬೇಕೆಂಬ ಆಶಾಭಾವನೆಯ ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಮುಂದಾಗಿದ್ದಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸರ್ಕಾರದ ಯೋಜನೆಗಳಿಗೆ ಸಾಲ ನೀಡಲು ಮುಂದೆ ಬರುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಇದರಿಂದಾಗಿ ಒಂದು ಕಡೆ ಸರ್ಕಾರದ ಯೋಜನೆಗಳು ರೈತರನ್ನು ತಲುಪುವುದು ಕೂಡ ಕಷ್ಟವಾಗಿದೆ. ಜತೆಗೆ ರತೈರು ಯೋಜನೆಗಳಿಂದ ಹಿಂದೆ ಸರಿಯುವಂತಹ ನಿರ್ಧಾರ ತಳೆಯುವ ಸಾಧ್ಯತೆಗಳೂ ಇವೆ. ಇದೆಲ್ಲಕ್ಕಿಂತ ಮುಖ್ಯವಾಗಿ ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯ ಸೂಕ್ತ ಸಮಯಕ್ಕೆ ಸಿಗದಿರುವುದು ಕೂಡ ಅವರನ್ನು ಮತ್ತಷ್ಟುಆತಂಕಕ್ಕೆ ತಳ್ಳಿದೆ.
ಮಾವು ಬೆಳೆಗಾರರಿಂದ ಶ್ರೀನಿವಾಸಪುರ ತಾಲೂಕಿನ ಪಟ್ಟಣ ಬಂದ್
ರೈತರು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ, ಅವರು ತೋಟಗಾರಿಕಾ ಇಲಾಖೆಯ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಪಾಲಿಹೌಸ್‌ನಲ್ಲಿ ಕ್ಯಾಪ್ಸಿಕಂ ಸಂರಕ್ಷಿತ ಕೃಷಿಯನ್ನು ಪ್ರಾರಂಭಿಸಲು ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರೈತರಿಗೆ ಶೇ.40 ರಿಂದ ಶೇ.50ರಷ್ಟುಸಹಾಯಧನ ಸಿಗುತ್ತದೆ. ಆದರೆ, ಬ್ಯಾಂಕ್ ಅಧಿಕಾರಿಗಳು ಬೆಳೆ ಸಾಲ ಹೊಂದಿರುವುದಾಗಿ ಹೇಳಿ ಸಾಲ ನೀಡಲು ನಿರಾಕರಿಸುತ್ತಿದ್ದಾರೆ ಎಂದು ರೈತರೇ ಆರೋಪಿಸುತ್ತಿದ್ದಾರೆ. ಇದು ರೈತರ ಜೀವನೋಪಾಯಕ್ಕೂ ಕತ್ತರಿ ಹಾಕುವಂತಾಗಿದೆ.
ಸರ್ಕಾರದ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಪಾಲಿಹೌಸ್‌ನಲ್ಲಿ ಸಂರಕ್ಷಿತ ತರಕಾರಿ ಮತ್ತು ಹೂವುಗಳನ್ನು ಬೆಳೆಸಲು ಯೋಜಿಸಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಯನ್ನು ಸಂಪರ್ಕಿಸಿರುವ ರೈತರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಯಾವುದೇ ಬಾಕಿ ಇಲ್ಲದಿದ್ದರೂ ಬ್ಯಾಂಕ್ ಸಾಲ ನೀಡಲು ನಿರಾಕರಿಸಿದೆ ಎಂದು ರೈತರೇ ದೂರುತ್ತಿದ್ದಾರೆ. ಆದರೆ, ಹಠ ಬಿಡದ ಅನ್ನದಾತರು ಈಗ ಖಾಸಗಿ ಲೇವಾದೇವಿದಾರರಿಂದ ಶೇ.5ರ ಬಡ್ಡಿ ದರದಲ್ಲಿ ಕೈ ಸಾಲ ಪಡೆದು ಬೆಳೆ ಸಾಲವನ್ನು ಮರುಪಾವತಿಸಲು ಮುಂದಾಗುತ್ತಿದ್ದಾರೆ.
ಟನ್ ಕಬ್ಬಿಗೆ ₹50 ಹೆಚ್ಚುವರಿ ದರ ಪಾವತಿಗೆ ಆದೇಶ
ಈ ಪರಿಸ್ಥಿತಿಯು ಯಾರಿಗಾದರೂ ಮಾತ್ರವಲ್ಲ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಬಳಸಿಕೊಂಡು ಆಧುನಿಕ ಕೃಷಿಯನ್ನು ಪ್ರಾರಂಭಿಸಲು ಬಯಸುವ ಅನೇಕ ರೈತರ ಆಶಯವಾಗಿದೆ. ರೈತರು ಬೆಳೆ ಸಾಲ ಹೊಂದಿದ್ದಾರೆ ಅಥವಾ ಬ್ಯಾಂಕಿನಲ್ಲಿ ಸಾಲಕ್ಕೆ ಯಾರಿಗಾದರೂ ಜಾಮೀನುದಾರರು ಎಂಬ ಕಾರಣ ನೀಡಿ ಸಬ್ಸಿಡಿ ಸಾಲವನ್ನು ನಿರಾಕರಿಸಲಾಗಿದೆ. ಬ್ಯಾಂಕುಗಳ ನಿರಾಶಾಯದಾಯಕ ಪ್ರತಿಕ್ರಿಯೆಯಿಂದ ಬೇಸರಗೊಂಡ ರೈತರು ಸರ್ಕಾರದ ಯೋಜನೆಯನ್ನು ನಿರ್ಲಕ್ಷಿಸಿ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗುವತ್ತ ಮುಖ ಮಾಡಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಮಾರ್ಗಸೂಚಿ ಪ್ರಕಾರ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಸಣ್ಣ ಮತ್ತು ಅತೀ ಸಣ್ಣ ಕಟಬಾಕಿ ರೈತರಿಗೆ ಗರಿಷ್ಠ .50 ಸಾವಿರವರೆಗೆ ಸಾಲ ನೀಡಲು ನಿರಾಕರಿಸುವಂತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದು ಮರುಪಾವತಿಸದೆ ಕಟಬಾಕಿ ಉಳಿಸಿಕೊಂಡ ರೈತರಿಗೆ ಸಾಲ ನೀಡುವುದು ಆಯಾ ಬ್ಯಾಂಕ್ ಪಾಲಿಸಿಗೆ ಬಿಟ್ಟಿದ್ದು ಅಂತ ಲೀಡ್ ಬ್ಯಾಂಕ್ ಮ್ಯಾನೇಜರ್ ಸುಧೀಂದ್ರ ಕುಲಕರ್ಣಿ ತಿಳಿಸಿದ್ದಾರೆ.