ಅತ್ಯಾಚಾರ: 3 ವರ್ಷದ ಕಂದಮ್ಮನಿಗೆ ನಿತ್ಯ ನರಕ ಯಾತನೆ

By Kannadaprabha NewsFirst Published Jan 11, 2020, 7:57 AM IST
Highlights

ಅತ್ಯಾಚಾರಕ್ಕೊಳಗಾದ ಮೂರು ವರ್ಷದ ಮಗು 5 ತಿಂಗಳಿಂದ ನರಕ ಯಾತನೆ ಅನುಭವಿಸುತ್ತಿದೆ. ಮಗುವಿನ ಆರೋಗ್ಯ ಸುಧಾರಣೆಗೆ ಈಗಾಗಲೇ ಲಕ್ಷಾಂತರ ರು. ಖರ್ಚು ಮಾಡಿರುವ ಪೋಷಕರು ಮಗುವಿನ ಪ್ರಾಣ ಉಳಿಸಿಕೊಳ್ಳಲು ಪುನಃ ಆಸ್ಪತ್ರೆಗೆ ದಾಖಲಿಸಿ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿರುವ ಪರಿಸ್ಥಿತಿ ಎದುರಾಗಿದೆ.

ಮಂಡ್ಯ(ಜ.11): ಪೋಷಕರು ಮತ್ತು ಇತರೆ ಮಕ್ಕಳೊಂದಿಗೆ ಆಟವಾಡಿಕೊಂಡಿರಬೇಕಿದ್ದ ಮೂರೂವರೆ ವರ್ಷದ ಮಗು ಕಾಮಪಿಶಾಚಿಯೊಬ್ಬನಿಂದ ಅತ್ಯಾಚಾರಕ್ಕೊಳಗಾಗಿ ಐದು ತಿಂಗಳು ಕಳೆದರೂ, ಗುಪ್ತಾಂಗದಲ್ಲಿ ಆಗಿದ್ದ ಗಾಯ ಉಲ್ಬಣಗೊಂಡು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದೆ.

ಮಗುವಿನ ಆರೋಗ್ಯ ಸುಧಾರಣೆಗೆ ಈಗಾಗಲೇ ಲಕ್ಷಾಂತರ ರು. ಖರ್ಚು ಮಾಡಿರುವ ಪೋಷಕರು ಮಗುವಿನ ಪ್ರಾಣ ಉಳಿಸಿಕೊಳ್ಳಲು ಪುನಃ ಆಸ್ಪತ್ರೆಗೆ ದಾಖಲಿಸಿ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿರುವ ಪರಿಸ್ಥಿತಿ ಎದುರಾಗಿದೆ.

ಮಡಿಕೇರಿಯಲ್ಲಿ ಮಗುಚಿ ಬಿದ್ದ ಬೆಂಗಳೂರು-ಎರ್ನಾಕುಲಂ ಐರಾವತ ಬಸ್..!

ಘಟನೆ ಸಂಭವಿಸಿದ್ದ ಹಲವು ದಿನಗಳ ನಂತರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಹೋರಾಟ ನಡೆಸಿದ ಹಿನ್ನಲೆಯಲ್ಲಿ ನೊಂದ ಮಗುವಿನ ಪೋಷಕರಿಗೆ 10 ಸಾವಿರ ರು. ಪರಿಹಾರದ ಚೆಕ್‌ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನಮ್ಮ ಜವಾಬ್ದಾರಿ ಮುಗಿಯಿತೆಂದು ಕೈತೊಳೆದುಕೊಂಡರೆ, ನೊಂದ ಬಾಲಕಿಗೆ ಸೂಕ್ತ ನ್ಯಾಯ ಸಿಗುವ ಮುನ್ನವೇ ಪೋಸ್ಕೋ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ. ಕಿತ್ತು ತಿನ್ನುವ ಬಡತನದ ಜೊತೆಗೆ ಅತ್ಯಾಚಾರಕ್ಕೊಳಗಾಗಿರುವ ಮಗುವಿನ ಪೋಷಕರ ನೆರವಿಗೆ ಜಿಲ್ಲಾಡಳಿತ ಧಾವಿಸದಿರುವುದು ಮಾತ್ರ ದುರದೃಷ್ಟವೇ ಸರಿ.

ಘಟನೆ ವಿವರ:

ಚನ್ನರಾಯಪಟ್ಟಣ ತಾಲೂಕಿನ ಬಾಳಗಂಚಿ ಗ್ರಾಮದ ಮೂರುವರೆ ವರ್ಷದ ಬಾಲಕಿಯನ್ನು ಬೆಳ್ಳೂರು ಹೋಬಳಿಯ ವರಾಹಸಂದ್ರ ಗ್ರಾಮಕ್ಕೆ ಕರೆತಂದು ಬಾಲಕಿಯ ಸೋದರತ್ತೆ ಸಾಕಿಕೊಂಡಿದ್ದರು. ಪ್ರತಿನಿತ್ಯದಂತೆ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಗೆ ತಿನ್ನಲು ಕಡಲೆಕಾಯಿಕೊಟ್ಟು ಆಟವಾಡಿಸುವ ನೆಪದಲ್ಲಿ ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋದ ಇದೇ ಗ್ರಾಮದ ಮುನಿಪ್ರಸಾದ್‌ ಅ.ಮುನೇಶ ಎಂಬ 16 ವರ್ಷದ ಅಪ್ರಾಪ್ತ ಬಾಲಕ 2019ರ ಆ. 17ರಂದು ಅತ್ಯಾಚಾರವೆಸಗಿ ಪರಾರಿಯಾಗಿದ್ದನು.

ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಮನೆಯ ಪೋಷಕರು ವಿಚಾರಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಆರೋಪಿ ಮುನೇಶನ ವಿರುದ್ಧ ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ಐಪಿಸಿ 376 ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು.

ವಾಸಿಯಾಗದ ಗಾಯ:

ಅತ್ಯಾಚಾರಕ್ಕೀಡಾದ ಪುಟ್ಟಬಾಲಕಿಯನ್ನು 20 ದಿನಗಳ ಕಾಲ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಿ ಪೋಷಕರು ಚಿಕಿತ್ಸೆ ಕೊಡಿಸಿದ್ದರಾದರೂ ಗುಪ್ತಾಂಗದಲ್ಲಿನ ಗಾಯ ವಾಸಿಯಾಗದೆ ಪ್ರತಿನಿತ್ಯ ನೋವಿನಿಂದ ನರಳುತ್ತಿದ್ದ ಬಾಲಕಿಗೆ ಮೂತ್ರದಲ್ಲಿ ಸೋಂಕಾಗಿ ಮಗುವಿನ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಭವಿಸಿ ಐದು ತಿಂಗಳು ಕಳೆದರೂ ಸಹ ಪುಟ್ಟಮಗು ಸಹಜ ಸ್ಥಿತಿಗೆ ಬಂದಿಲ್ಲ. ಬಿಟ್ಟು ಬಿಟ್ಟು ಜ್ವರ ಕಾಣಿಸಿಕೊಳ್ಳುವ ಜೊತೆಗೆ, ರಾತ್ರಿ ವೇಳೆ ನಿದ್ರೆಯಲ್ಲಿದ್ದಾಗಲೂ ಸಹ ಚೀರಾಟದೊಂದಿಗೆ ತನ್ನ ಮೇಲೆ ಅತ್ಯಾಚಾರವೆಸಗಿದ ರಕ್ಕಸದ ಹೆಸರನ್ನು ಕನವರಿಸುತ್ತಿದೆ ಎನ್ನುತ್ತಾರೆ ಮಗುವಿನ ಪೋಷಕರು.

ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ:

ಅತ್ಯಾಚಾರಕ್ಕೀಡಾದ ಪುಟ್ಟಬಾಲಕಿಯ ಗುಪ್ತಾಂಗದಲ್ಲಾಗಿರುವ ಗಾಯ ಐದು ತಿಂಗಳು ಕಳೆದರೂ ವಾಸಿಯಾಗದ ಹಿನ್ನೆಲೆಯಲ್ಲಿ ಜ.7ರ ರಾತ್ರಿ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಕೂಲಿನಾಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಮಗುವಿನ ಪೋಷಕರು ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ ಇನ್ನೆಷ್ಟುಸಾಲ ಮಾಡಬೇಕೋ ಎಂಬ ಆತಂಕದಲ್ಲಿದ್ದಾರೆ. ಸಂತ್ರಸ್ತ ಮಗುವಿನ ನೆರವಿಗೆ ಜಿಲ್ಲಾಡಳಿತ ಧಾವಿಸಿ ಸಂಪೂರ್ಣ ಚಿಕಿತ್ಸಾ ವೆಚ್ಚಭರಿಸುವ ಜೊತೆಗೆ ಪುನರ್ವಸತಿ ಕಲ್ಪಿಸಬೇಕಿದೆ.

ವಿವಾಹಿತೆ ಗುಪ್ತಾಂಗಕ್ಕೆ ‘ಲವರ್‌’ ಆ್ಯಸಿಡ್‌ ದಾಳಿ!

ಘಟನೆ ಸಂಭವಿಸಿ ಐದು ತಿಂಗಳಾದರೂ ಕೂಡ ಯಾವೊಬ್ಬ ಅಧಿಕಾರಿಯೂ ಸಹ ಸೌಜನ್ಯಕ್ಕಾದರೂ ಭೇಟಿ ಕೊಟ್ಟು ಮಗುವಿನ ಆರೋಗ್ಯ ವಿಚಾರಿಸಿರಲಿಲ್ಲ. ಆದರೆ ಜ.6 ರಂದು ದೂರವಾಣಿ ಕರೆ ಮಾಡಿದ ಸಿಡಿಪಿಒ ಅಧಿಕಾರಿಗಳು ಸಂತ್ರಸ್ತ ಮಗುವನ್ನು ಜಿಲ್ಲಾಧಿಕಾರಿಗಳು ನೋಡಬೇಕೆಂದಿದ್ದಾರೆ, ಹಾಗಾಗಿ ಈ ಕೂಡಲೇ ಮಂಡ್ಯಕ್ಕೆ ಮಗುವನ್ನು ಕರೆತನ್ನಿ ಎಂದು ಹೇಳಿದ ಹಿನ್ನಲೆಯಲ್ಲಿ ಮಗುವನ್ನು ಕರೆದುಕೊಂಡು ಹೋಗಿದ್ದೆವು. ಅಲ್ಲಿಗೆ ಹೋಗುತ್ತಿದ್ದಂತೆ ಮಗುವನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಎಂದಿದ್ದರು, ಆದರೆ ಹಿಂದೆ ನಡುನೀರಿನಲ್ಲಿ ಕೈಬಿಟ್ಟಂತೆ ಅಧಿಕಾರಿಗಳು ಮತ್ತೆ ನಿರ್ಲಕ್ಷ್ಯ ಮಾಡಬಹುದೆಂದು ಮಗುವನ್ನು ವಾಪಸ್‌ ಕರೆದುಕೊಂಡು ಬಂದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಮಗುವಿನ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದುಸಂತ್ರಸ್ತ ಮಗುವಿನ ತಂದೆ ಹೇಳಿದ್ದಾರೆ.

ತಾಲೂಕಿನ ವರಾಹ ಸಂದ್ರ ಗ್ರಾಮದ ಮೂರುವರೆ ವರ್ಷದ ಮಗುವೊಂದರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮೊದಲ ಹಂತವಾಗಿ 10 ಸಾವಿರ ರು.ಗಳ ಪರಿಹಾರ ನೀಡಲಾಗಿದೆ. ಹೆಚ್ಚಿನ ಪರಿಹಾರ ನೀಡಲು ಕಡತ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮಗುವನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸುವಂತೆ ಮಗುವಿನ ಪೋಷಕರಿಗೆ ತಿಳಿಸಿದರೂ ಸಹ, ಮಂಡ್ಯಕ್ಕೆ ಮಗುವನ್ನು ಕರೆತಂದ ಪೋಷಕರು ಆಸ್ಪತ್ರೆಗೆ ದಾಖಲಿಸದೆ ಮಗುವನ್ನು ವಾಪಸ್‌ ಕರೆದುಕೊಂಡು ಹೋಗಿದ್ದಾರೆ. ಬಿ.ಜಿ.ನಗರದ ಆಸ್ಪತ್ರೆಗೆ ಭೇಟಿ ಕೊಟ್ಟು ಮಗುವಿನ ಆರೋಗ್ಯ ವಿಚಾರಿಸುವ ಜೊತೆಗೆ, ವೈದ್ಯರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಾಗಮಂಗಲ ಮಹಿಳಾ ಮತ್ತು ಮಕ್ಕಳ ಯೋಜನಾಧಿಕಾರಿ ಎಚ್‌.ಕೆ.ರಾಜನ್‌ ಹೇಳಿದ್ದಾರೆ.

-ಕರಡಹಳ್ಳಿ ಸೀತಾರಾಮು

click me!