ಮಂಗಳೂರು: ಸೋಲಾರ್‌ ರೆಡಿಯೋದಿಂದ ರೈತರಿಗೆ ಕೃಷಿ ಮಾಹಿತಿ

By Kannadaprabha News  |  First Published Jun 5, 2022, 11:54 AM IST

*  ಸೋಲಾರ್‌ ರೆಡಿಯೋ ಮೂಲಕ ಹಳ್ಳಿಗಳಲ್ಲಿ ದೇಶ ವಿದೇಶದ ಮಾಹಿತಿ
*  ಗ್ರಾಮ ಭಾರತದಲ್ಲಿ ಸೆಲ್ಕೋದಿಂದ ತಂತ್ರಜ್ಞಾನ, ಮಾಹಿತಿ, ಮನರಂಜನೆ
*  ಗ್ರಾಮೀಣ ಬಡವರ ಸ್ವಾವಲಂಬನೆ ಹೆಜ್ಜೆಗೆ ಸೆಲ್ಕೋ ಸಾತ್‌


ರಾಘವೇಂದ್ರ ಅಗ್ನಿಹೋತ್ರಿ

ಮಂಗಳೂರು(ಜೂ.05):  ಅದೊಂದು ವಿಶಾಲವಾದ ವೃಕ್ಷ, ಆ ವೃಕ್ಷದ ಕೆಳಗೊಂದು ಪಟ್ಟಾಂಗದ ಕಟ್ಟೆ, ಈ ಕಟ್ಟೆಯಲ್ಲಿ ಕುಳಿತು ರೈತರು ನಿತ್ಯವೂ ದೇಶ ವಿದೇಶದ ಸುದ್ದಿ, ಕೃಷಿ ಹಾಗೂ ಹವಾಮಾನ ಮಾಹಿತಿ ಪಡೆಯುತ್ತಾರೆ. ಇದು ಸಾಧ್ಯವಾಗಿದ್ದು ಸೌರ ಶಕ್ತಿಯಿಂದ!

Tap to resize

Latest Videos

ಹಾಸನ ಜಿಲ್ಲೆ ಅರಸಿಕೆರೆ ತಾಲೂಕು ಸಿಂಗಟಗೇರೆಯೆಂಬ ಹಳ್ಳಿಯಲ್ಲಿ ಕಂಡು ಬಂದ ದೃಶ್ಯವಿದು. ನಬಾರ್ಡ್‌ ಮತ್ತು ಸೆಲ್ಕೋ ಸಂಸ್ಥೆ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್‌)ಯಡಿ ಸ್ಥಾಪಿಸಲಾದ ಈ ಸಮುದಾಯ ರೇಡಿಯೋ ಇಲ್ಲಿನ ಜನರಿಗೆ ಮಾಹಿತಿ ಹಾಗೂ ಮನರಂಜನೆಯನ್ನು ಉಚಿತವಾಗಿ ನೀಡುವಲ್ಲಿ ಯಶಸ್ವಿಯಾಗಿದೆ. ಒಂದು ಕಂಬದಲ್ಲಿ ಸೋಲಾರ್‌ ಲೈಟ್‌ ಹಾಗೂ ರಿಮೋಟ್‌ ಮೂಲಕ ಕಾರ್ಯನಿರ್ವಹಿಸುವ ರೆಡಿಯೋ ಬಾಕ್ಸ್‌ ಇಷ್ಟಿದ್ದರೆ ಬಾನುಲಿ ಮೂಲಕ ದೇಶ ವಿದೇಶದ ಮಾಹಿತಿ ಹಳ್ಳಿ ಹಳ್ಳಿಗೂ ತಲುಪಲು ಸಾಧ್ಯವಾಗಿದೆ. 35 ಸಾವಿರ ರು. ವೆಚ್ಚದಲ್ಲಿ ನಿರ್ಮಿಸಿರುವ ಇಂತಹ 17 ಸಮುದಾಯ ಆಕಾಶವಾಣಿ ಕೇಂದ್ರಗಳು ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿವೆ. ಹಾಸನ ಜಿಲ್ಲೆಯಲ್ಲೇ 15 ಕೇಂದ್ರಗಳಿವೆ.

Love Jihad ಆರೋಪ, ಸೌತಡ್ಕ ದೇವಾಲಯಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ

ಸಮುದಾಯ ರೆಡಿಯೋದಿಂದ ನಮಗೆ ನಿತ್ಯವೂ ಸಂಜೆ 5 ರಿಂದ 8 ರವರೆಗೆ ನಮಗೆ ಕೃಷಿರಂಗ ಹಾಗೂ ಇತರ ಮಾಹಿತಿಗಳು ಸಿಗುವುದರಿಂದ ಅನುಕೂಲವಾಗುತ್ತಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಪರ್ಯಾಯ ಇಂಧನ ಅನಿವಾರ್ಯವಾಗಿರುವ ಇಂದಿನ ದಿನಗಳಲ್ಲಿ ತನ್ನ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸೆಲ್ಕೋ ಸಂಸ್ಥೆ ತಂತ್ರಜ್ಞಾನವನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸುವ ಮೂಲಕ ಪರ್ಯಾಯ ಪರಿಹಾರವಾಗಿ ಬೆಳೆದು ನಿಂತಿದೆ. ಬೆಳಕಿಲ್ಲದವರಿಗೆ ಬೆಳಕಾಗಿ, ಉದ್ಯೋಗವಿಲ್ಲದವರಿಗೆ ಉದ್ಯೋಗ ನೀಡಿ, ಶಿಕ್ಷಣ ವಂಚಿತರಿಗೆ ಶಿಕ್ಷಣಕ್ಕೆ ನೆರವಾಗುವ ಮೂಲಕ ತನ್ನ ಸಾಮಾಜಿಕ ಬದ್ಧತೆಯನ್ನ ಸಂಸ್ಥೆ ನಿರೂಪಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ: 

ಒಂದೆಡೆ ಖಾಸಗಿ ಶಾಲೆಗಳು ನೀಡುವ ಪೈಪೋಟಿ ಎದುರಿಸಲಾಗದೇ ಸೌಲಭ್ಯಗಳಿಲ್ಲದೇ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಅಂತಹ ಸರ್ಕಾರಿ ಶಾಲೆಗಳನ್ನು ಸ್ಮಾರ್ಚ್‌ ಕ್ಲಾಸ್‌ಗಳಾಗಿ ಪರಿವರ್ತಿಸಿ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಹೆಜ್ಜೆಯಿಡುವಂತೇ ಮಾಡಿರುವುದು ಸೆಲ್ಕೋದ ‘ಇ ಶಾಲಾ’ ಯೋಜನೆ. ರಾಜ್ಯದಲ್ಲಿ ಸೆಲ್ಕೋ ವತಿಯಿಂದ ಒಟ್ಟು 3100 ಸರ್ಕಾರಿ ಶಾಲೆಗಳನ್ನು ಸ್ಮಾರ್ಚ್‌ ಕ್ಲಾಸ್‌ ಆಗಿ ಪರಿವರ್ತಿಸಲಾಗಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯೆಡೆಗೆ ಆಕರ್ಷಿತರಾಗುವಂತೆ ಮಾಡಿದೆ. ಮಕ್ಕಳ ಸಂಖ್ಯೆ ಶಾಲೆಗಳಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿವೆ.

ಏನಿದು ಯೋಜನೆ?

ಸರ್ಕಾರಿ ಶಾಲೆಯ ಒಂದರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಮಾರ್ಚ್‌ ಕ್ಲಾಸ್‌ ಮೂಲಕ ಗುಣಮಟ್ಟದ ಶಿಕ್ಷಣ ಒದಗಿಸುವ ಯೋಜನೆ ಇದಾಗಿದೆ. ನುರಿತ ಶಿಕ್ಷರಿಂದ ಸಿಲಬಸ್‌ನ ಕಲಿಕಾ ವಸ್ತು (ಕಂಟೆಂಟ್‌) ಸಿದ್ಧಪಡಿಸಿ ದಾನಿಗಳ ನೆರವಿನಿಂದ ಸೋಲಾರ್‌ ಚಾಲಿತ ಟಿವಿ ನೀಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು 3100 ಸ್ಮಾರ್ಚ್‌ ಕ್ಲಾಸ್‌ ಪ್ರಾರಂಭಿಸಲಾಗಿದ್ದು, ಹಾಸನ ಜಿಲ್ಲೆಯಲ್ಲಿ 298 ಶಾಲೆಗಳಲ್ಲಿ ಅಳವಡಿಸಲಾಗಿದೆ.

ಆರಂಭದಲ್ಲಿ ಐದನೇ ತರಗತಿಯಿಂದ ಏಳನೇ ತರಗತಿ ವರೆಗಿನ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ಕಲಿಸಲಾಗುತ್ತಿತ್ತು. ಈಗ ಒಂದನೇ ತರಗತಿಯಿಂದ 12 ನೇ ತರಗತಿ ವರೆಗಿನ ಎಲ್ಲ ಕ್ಲಾಸ್‌ಗಳ ಎಲ್ಲ ವಿಷಯಗಳ ಕಂಟೆಂಟ್‌ ಸಿದ್ಧಪಡಿಸಿ ಅಳವಡಿಸಲಾಗುತ್ತಿದೆ. ಇದಕ್ಕೆ ಪ್ರತಿ ಶಾಲೆಗೆ 1.80 ಲಕ್ಷ ರುಪಾಯಿ ವೆಚ್ಚ ತಗಲುತ್ತಿದ್ದು, ಸ್ಥಳೀಯ ದಾನಿಗಳು ದೊರೆತರೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಸೋಲಾರ್‌ ಆಧರಿತ ಸ್ಮಾರ್ಚ್‌ ಕ್ಲಾಸ್‌ ಅಳವಡಿಸಲಾಗುವುದು ಎಂದು ಸೆಲ್ಕೋ ಡಿಜಿಎಂ ಗುರುಪ್ರಕಾಶ್‌ ಶೆಟ್ಟಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಸೆಲ್ಕೋ ತಂತ್ರಜ್ಞಾನದಿಂದಾಗಿ ಗ್ರಾಮಗಳಿಂದ ನಗರಕ್ಕೆ ವಲಸೆ ಹೋದವರು ಕುಲಸಕಸುಬಿಗೆ ಮರಳುತ್ತಿದ್ದಾರೆ. ಸುಲಭದಲ್ಲಿ ಕಮ್ಮಾರಿಕೆ ಮಾಡಲು ಸೌರ ಚಾಲಿತ ಉಲುಮೆ ಯಂತ್ರ, ಕುಂಬಾರಿಕೆ ಮಾಡಲು ತಿಗರಿಗಳನ್ನು ಅಳವಡಿಸಲಾಗಿದ್ದು ಪಾರಂಪರಿಕ ಉದ್ಯೋಗದೆಡೆಗೆ ಮರಳುವಂತೆ ಮಾಡಿದೆ. ಕುಂಬಾರಿಕೆಯಲ್ಲಿ ರಾಜ್ಯದಲ್ಲಿ 280 ಸೌರಚಾಲಿತ ತಿಗರಿಗಳನ್ನು ಅಳವಡಿಸಲಾಗಿದೆ. ಕಮ್ಮಾರಿಕೆಯಲ್ಲಿ ರಾಜ್ಯದಲ್ಲಿ 657 ಸೌರಚಾಲಿತ ಉಲುಮೆ ಅಳವಡಿಸಲಾಗಿದೆ.

ಹಾಲು ಕರೆಯುವ ಯಂತ್ರ: 

ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಅನುಕೂಲವಾಗುವಂತೆ ಹೈನುಗಾರಿಕೆಯಲ್ಲಿ ಸೌರಚಾಲಿತ ಹಾಲುಕರೆಯುವ ಯಂತ್ರ ಆವಿಷ್ಕರಿಸಲಾಗಿದೆ. ಇದುವರೆಗೆ ರಾಜ್ಯದಲ್ಲಿ 1192 ಹಾಲುಕರೆಯುವ ಯಂತ್ರ ಅಳವಡಿಸಲಾಗಿದೆ.

ಅಡಕೆ ಕಳ್ಳಸಾಗಣೆ: ಪ್ರಧಾನಿ ಮೋದಿಗೆ ಪತ್ರ ಬರೆದು ವೀರೇಂದ್ರ ಹೆಗ್ಗಡೆ ಕಳವಳ

ಸಮುದಾಯದ ಆರೋಗ್ಯ ಕೇಂದ್ರ: ಗ್ರಾಮಾಂತರ ಭಾಗದ ಸಮುದಾಯ ಆರೋಗ್ಯ ಕೇಂದ್ರಗಳು ಎದುರಿಸುತ್ತಿರುವ ವಿದ್ಯುತ್‌ ಸಮಸ್ಯೆಯನ್ನು ಮನಗಂಡು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸೆಲ್ಕೋ ವತಿಯಿಂದ ನಿರಂತರ ವಿದ್ಯುತ್‌ ಪೂರೈಕೆಗಾಗಿ ಸೌರ ವಿದ್ಯುತ್‌ಗಳನ್ನು ಅಳವಡಿಸಲಾಗಿದೆ. ರಾಜ್ಯದಲ್ಲಿ 460 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೌರ ವಿದ್ಯುತ್‌ ಅಳವಡಿಸಲಾಗಿದೆ.

ಮಹಿಳೆಯರಿಗೆ ಆಶಾಕಿರಣ: 

ಸ್ವಂತ ದುಡಿಮೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಸೋಲಾರ್‌ ಆಶಾಕಿರಣಗಳಾಗಿವೆ. ಸಣ್ಣ ಸಣ್ಣ ಗೂಡಂಗಂಡಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳಿಗೆ ವಿದ್ಯುತ್‌ ಸಂಪರ್ಕ ನೀಡುವುದಿಲ್ಲ. ಅಂತಹ ಚಿಕ್ಕ ಘಟಕಗಳಿಗೆ ಸೋಲಾರ್‌ ಘಟಕಗಳನ್ನು ಅಳವಡಿಸಿ ವ್ಯಾಪಾರ ವ್ಯವಹಾರವನ್ನು ದ್ವಿಗುಣ ಮಾಡಿಕೊಂಡ ಸಾಕಷ್ಟುಉದಾಹರಣೆಗಳಿವೆ. ರಾಜ್ಯದಲ್ಲಿ ಒಟ್ಟು 1240 ಸೌರ ಚಾಲಿತ ಹೊಲಿಗೆ ಯಂತ್ರ ಅಳವಡಿಸಲಾಗಿದ್ದು, ಹಾಸನ ಜಿಲ್ಲೆಯಲ್ಲಿ 67 ಹೊಲಿಗೆ ಯಂತ್ರ ಅಳವಡಿಸಿಕೊಂಡು ಮಹಿಳೆಯರು ಸ್ವಾವಲಂಬನೆಯ ಹಾದಿ ತುಳಿದಿದ್ದಾರೆ.
 

click me!