ಈ ಬಾರಿಯೂ ಬಳ್ಳಾರಿಗೆ ಸಿಗದ ಸಾಹಿತ್ಯ ಸಮ್ಮೇಳನದ ಆತಿಥ್ಯ: ಕನ್ನಡಪ್ರಿಯರ ಅಸಮಾಧಾನ

By Kannadaprabha NewsFirst Published Feb 8, 2020, 12:09 PM IST
Highlights

ಬಳ್ಳಾರಿಗೆ ಸಿಗದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅವಕಾಶ| ಸಮ್ಮೇಳನದ ನಿರೀಕ್ಷೆ ಹುಸಿ -ಸಾಹಿತ್ಯ ಪ್ರಿಯರಲ್ಲಿ ತೀವ್ರ ಬೇಸರ| ಗಡಿಭಾಗಕ್ಕೆ ಸಿಗಬೇಕಿತ್ತು ಆದ್ಯತೆ -ಮತ್ತೆ ಮುಂದುವರಿದ ನಿರೀಕ್ಷೆ|

ಕೆ.ಎಂ. ಮಂಜುನಾಥ್‌ 

ಬಳ್ಳಾರಿ[ಫೆ.08]: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಮುಂದಿನ ವರ್ಷ ಬಿಸಿಲೂರು ಬಳ್ಳಾರಿಗೆ ಸಿಗಲಿದೆ ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ.
ಕಳೆದ ಸಮ್ಮೇಳನದಲ್ಲೂ ಭಾರೀ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಸಾಹಿತ್ಯಾಸಕ್ತರು ಕಲಬುರಗಿಗೆ ಅವಕಾಶ ಸಿಕ್ಕಿದ್ದರಿಂದ ನಿರಾಸೆಗೊಂಡಿದ್ದರು. 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅವಕಾಶ ಸಿಗಲಿದೆ ಎಂಬ ವಿಶ್ವಾಸಗಳು ಬಲವಾಗಿದ್ದವು. ಆದರೆ, ಕಲಬುರಗಿಯಲ್ಲಿ ಜರುಗಿದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಹಾವೇರಿ ಜಿಲ್ಲೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ನೀಡಲಾಗಿದೆ. ಇದು ಬಳ್ಳಾರಿ ಜಿಲ್ಲೆಯ ಸಾಹಿತ್ಯ ಹಾಗೂ ಕನ್ನಡಪ್ರಿಯರ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಆರು ದಶಕಗಳಾದರೂ ಸಿಗಲಿಲ್ಲ ಅವಕಾಶ!

ಸ್ವಾತಂತ್ರ್ಯ ಪೂರ್ವ 1926ರಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿತ್ತು. ಫ.ಗು. ಹಳಕಟ್ಟಿ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅದಾದ ಬಳಿಕ 1938ರಲ್ಲಿ ರಂಗನಾಥ ದಿವಾಕರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಿತು. ಸ್ವಾತಂತ್ರ್ಯ ನಂತರದ 1958ರಲ್ಲಿ ವಿ.ಕೃ. ಗೋಕಾಕ್‌ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದಿದೆ. ಬಳಿಕದ ಆರು ದಶಕಗಳಲ್ಲಿ ಸಮ್ಮೇಳನ ನಡೆಸುವ ಅವಕಾಶ ಬಳ್ಳಾರಿ ಜಿಲ್ಲೆಗೆ ಸಿಗಲಿಲ್ಲ ಎಂದು ಈ ಭಾಗದ ಕನ್ನಡಿಗರಲ್ಲಿ ಬೇಸರ ಮಡುಗಟ್ಟಿದೆ. ಕಲ್ಯಾಣ ಕರ್ನಾಟಕದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಸಾಹಿತ್ಯ ಸಮ್ಮೇಳವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಶಕ್ತಿ ಹಾಗೂ ಸಂಪನ್ಮೂಲಗಳು ಬಳ್ಳಾರಿ ಜಿಲ್ಲೆಯಲ್ಲಿವೆ. ಚುನಾಯಿತ ಪ್ರತಿನಿಧಿಗಳು ಹಾಗೂ ರಾಜಕೀಯ ವಲಯದ ಮಂದಿಗೆ ಸಾಹಿತ್ಯದ ಗಂಧ ಗೊತ್ತಿಲ್ಲ ಎಂಬ ಕೊರಗು ಬಿಟ್ಟರೆ ಸಮ್ಮೇಳನ ಯಶಸ್ವಿಗೊಳಿಸುವ ಸಂಬಂಧ ಯಾವ ಸಮಸ್ಯೆಯೂ ಇಲ್ಲಿಲ್ಲ ಎಂಬುದು ಸತ್ಯ. ಹೀಗಿದ್ದಾಗ್ಯೂ ಸಮ್ಮೇಳನ ನಡೆಸುವ ಅವಕಾಶಗಳು ಜಿಲ್ಲೆಗೆ ಸಿಗುತ್ತಿಲ್ಲವೇಕೆ ? ಎಂಬ ಪ್ರಶ್ನೆ ಸಾಹಿತ್ಯಾಸಕ್ತರನ್ನು ಕಾಡುತ್ತಿದೆ.

ಗಡಿಭಾಗದಲ್ಲಿ ನಡೆಸಲು ಅವಕಾಶ:

ಆಂಧ್ರಪ್ರದೇಶದ ಗಡಿ ಜಿಲ್ಲೆಯಾದ ಬಳ್ಳಾರಿಯಲ್ಲಿ ಸಮ್ಮೇಳನ ನಡೆಸಲು ಅವಕಾಶವನ್ನು ಸಾಹಿತ್ಯ ಪರಿಷತ್ತು ನೀಡಬೇಕಿತ್ತು. ಎಲ್ಲ ಜಿಲ್ಲೆಗಳಿಗಿಂತ ಗಡಿಭಾಗದಲ್ಲಿ ಸಮ್ಮೇಳನದ ಅಗತ್ಯ ಹೆಚ್ಚಾಗಿದೆ ಎನ್ನುತ್ತಾರೆ ಜಿಲ್ಲೆಯ ಸಾಹಿತ್ಯ ಪ್ರೇಮಿಗಳು. ಇದಕ್ಕೆ ಕಾರಣವೂ ಇದೆ. ತೆಲುಗು ಭಾಷಿಕರು ಹೆಚ್ಚುತ್ತಿರುವ ಬಳ್ಳಾರಿಯಲ್ಲಿ ಕನ್ನಡದ ಅಸ್ಮಿತೆಗೆ ಧಕ್ಕೆ ಬರುವ ಆತಂಕಗಳು ಹೆಚ್ಚುತ್ತಿವೆ. ಗಡಿಭಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳು ಸಂಪೂರ್ಣ ಮುಚ್ಚುವ ಸ್ಥಿತಿ ತಲುಪಿವೆ. ಇವುಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಗಡಿಭಾಗದಲ್ಲಿ ಕನ್ನಡ ಜಾಗೃತಿಯ ಕೆಲಸ ಹೆಚ್ಚಾಗಿ ನಡೆಯಬೇಕಾಗಿದೆ. ಸಮ್ಮೇಳನ ನಡೆಯುವುದರಿಂದ ಕನ್ನಡ ಕಟ್ಟುವ ಕೆಲಸಕ್ಕೆ ಮತ್ತಷ್ಟೂಶಕ್ತಿ ಬರಲಿದೆ. ಈ ಎಲ್ಲ ಆಲೋಚನೆಗಳಿಂದ ದೂರ ಉಳಿದ ಸಾಹಿತ್ಯ ಪರಿಷತ್‌ ಪ್ರತಿ ಬಾರಿಯೂ ಬಳ್ಳಾರಿ ಜಿಲ್ಲೆಗೆ ಸಮ್ಮೇಳನ ನಡೆಸುವ ಅವಕಾಶದಿಂದ ದೂರ ಇಡುತ್ತಲೇ ಬಂದಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಉತ್ತರ ಕರ್ನಾಟಕಕ್ಕೆ ಸಿಕ್ಕಿದೆ ಎಂಬ ಖುಷಿ ಇದೆ

ಬಳ್ಳಾರಿ ಜಿಲ್ಲೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಸಿಗಲಿಲ್ಲ ಎಂಬ ಬೇಸರ ಖಂಡಿತ ಇದೆ. ಬಳ್ಳಾರಿ ಜಿಲ್ಲೆಗೆ ಅವಕಾಶ ಸಿಗಲಿಲ್ಲ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ತುಂಬಾ ಬೇಸರವಾಯಿತು ಎನ್ನುತ್ತಾರೆ ಲೇಖಕಿ ಮಧುಮತಿ ರಮೇಶ್‌ ಪಾಟೀಲ್‌. 85ನೇ ಸಮ್ಮೇಳನ ಕಲ್ಯಾಣಕರ್ನಾಟಕದ ಕಲಬುರಗಿಗೆ ದಕ್ಕಿತು. 86ನೇ ಸಮ್ಮೇಳನ ಹಾವೇರಿ ಜಿಲ್ಲೆಗೆ ಸಿಕ್ಕಿದೆ. 87ನೇ ಸಮ್ಮೇಳನ ಬಳ್ಳಾರಿ ಜಿಲ್ಲೆಗೆ ಸಿಕ್ಕರೆ ಈ ಭಾಗದ ಕನ್ನಡ ಭಾಷಾ ಜಾಗೃತಿಗೆ ಮತ್ತಷ್ಟು ಅನುಕೂಲವಾಗಲಿದ್ದು ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಗೆ ಸಿಕ್ಕ ನೆಮ್ಮದಿಯಿದೆ. ಆದರೆ, ಹಾವೇರಿ ನಂತರದ ಅವಕಾಶ ಬಳ್ಳಾರಿಗೆ ಸಿಗಲೇಬೇಕು ಎನ್ನುತ್ತಾರೆ ಮಧುಮತಿ ರಮೇಶ್‌ ಪಾಟೀಲ್‌.

ಹಾವೇರಿಗೆ ಸಮ್ಮೇಳನ ಸಿಕ್ಕಿದ್ಹೇಗೆ ?

ಕಳೆದ ಐದು ವರ್ಷದ ಹಿಂದೆ ಹಾವೇರಿ ಜಿಲ್ಲೆಗೆ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿತ್ತು. ರಾಣಿಬೆನ್ನೂರು ಹಾಗೂ ಹಾವೇರಿಯವರ ನಡುವಿನ ಕಿತ್ತಾಟದಿಂದ ಸಮ್ಮೇಳನ ಹಾವೇರಿಯಿಂದ ಬೇರೆಡೆಗೆ ಶಿಫ್ಟ್‌ ಆಯಿತು. ಕಲಬುರಗಿಯಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಾವೇರಿ ಜಿಲ್ಲೆಗೆ ನೀಡಬೇಕು. ಹಾವೇರಿ ನಗರದಲ್ಲಿಯೇ ಸಮ್ಮೇಳನ ನಡೆಸುವ ಕುರಿತು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ.

ಬಳ್ಳಾರಿ ಜಿಲ್ಲೆಗೆ ಅಖಿಲ ಭಾರತ ಸಮ್ಮೇಳನ ನಡೆಸುವ ಅವಕಾಶ ಸಿಗಲಿದೆ ಎಂಬ ವಿಶ್ವಾಸವಿತ್ತು. ಹಾವೇರಿ ಜಿಲ್ಲೆ ಈ ಹಿಂದೆ ಕೊಟ್ಟು, ಕೈ ತಪ್ಪಿದ್ದರಿಂದ ಅವರಿಗೆ ಆದ್ಯತೆ ನೀಡಲಾಗಿದೆ. ಮುಂದಿನ ಬಾರಿ ಖಂಡಿತ ಬಳ್ಳಾರಿಗೆ ಸಿಗಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಸಿದ್ಧರಾಮ ಕಲ್ಮಠ ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳ್ಳಾರಿಗೆ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಸಿಗದಿರುವುದು ಬಹಳ ಬೇಸರ ತಂದಿದೆ. ಮುಂದಿನ ಬಾರಿಯಾದರೂ ಸಿಗಲಿ ಎಂಬ ಒತ್ತಾಸೆ ನಮ್ಮದು ಎಂದು ಬಳ್ಳಾರಿ ರಾಜ್ಯ ನವಕರ್ನಾಟಕ ಯುವಶಕ್ತಿ ಸಂಘಟನೆಯ ಉಪಾಧ್ಯಕ್ಷ  ಸಿದ್ಮಲ್‌ ಮಂಜುನಾಥ ಅವರು ಹೇಳಿದ್ದಾರೆ. 

ಕಲಬುರಗಿಯಲ್ಲಿ ಅರ್ಥಪೂರ್ಣವಾಗಿ ಸಮ್ಮೇಳನ ನಡೆಯಿತು. ಬಳ್ಳಾರಿಯಲ್ಲಿಯೂ ಹೀಗೆ ಆಗಬೇಕು ಎಂಬುದು ನಮ್ಮಾಸೆ. ಆದರೆ, ಮುಂದಿನ ವರ್ಷ ಹಾವೇರಿ ಜಿಲ್ಲೆಗೆ ಅವಕಾಶ ಸಿಕ್ಕಿರುವುದು ಬೇಸರವಾಗಿದೆ. ಬಳ್ಳಾರಿಗೆ ಸಿಕ್ಕಿದ್ದರೆ ಸಂತೋಷವಾಗುತ್ತಿತ್ತು ಎಂದು ಬಳ್ಳಾರಿ ಸನ್ಮಾರ್ಗ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್‌ ಕಪ್ಪಗಲ್‌ ಅವರು ಹೇಳಿದ್ದಾರೆ.

click me!