* 24 ಕೃಷಿ ಸಲಕರಣೆಗಳ ಸಂಶೋಧಕ ಅಬ್ದುಲ್‌ಖಾದರ ಇಮಾಮಸಾಬ ನಡಕಟ್ಟಿನ
* ಹೊಲ ಮನೆ ಅಡವಿಟ್ಟು ಸಂಶೋಧನೆ ಮಾಡಿದವರು
* ಕೈಗುಟುಕುವ ದರದಲ್ಲಿ ತಯಾರಿಕೆ ಮಾಡುವಲ್ಲಿ ನಡಕಟ್ಟಿನ ಸಿದ್ಧಹಸ್ತರು
ಮಯೂರ ಹೆಗಡೆ
ಹುಬ್ಬಳ್ಳಿ(ಜ.26): ಆತ ನಾಲ್ಕನೇ ತರಗತಿ ವಿದ್ಯಾರ್ಥಿ. ಎಷ್ಟೇ ಪ್ರಯತ್ನಪಟ್ಟರೂ ಬೆಳಗ್ಗೆ ನಿದ್ರೆಯಿಂದ ಎದ್ದು ಓದಿಕೊಳ್ಳಲು ಆಗುತ್ತಿರಲಿಲ್ಲ. ಹುಡುಗ ಯೋಚಿಸಿದ, ಅಲಾರಾಂ ಆದ ತಕ್ಷಣ ಮುಖದ ಮೇಲೆ ನೀರು ಬೀಳುವಂತೆ ಗಡಿಯಾರ ರೂಪಿಸಿಕೊಂಡ! ಇವತ್ತು ಇವರ ಸಂಶೋಧನೆಗೆ ‘ಪದ್ಮಶ್ರೀ ಪ್ರಶಸ್ತಿ’(Padma Shri) ಒಲಿದಿದೆ. ಅವರೇ ಧಾರವಾಡ(Dharwad) ಜಿಲ್ಲೆ ಅಣ್ಣಿಗೇರಿಯ ಅಬ್ದುಲ್‌ಖಾದರ್ ಇಮಾಮಸಾಬ ನಡಕಟ್ಟಿನ(Abdul Khadar Imamsab Nadakattina)
ಇವತ್ತು ರೈತರ ಬಲಗೈ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ 24 ಕೃಷಿ ಸಲಕರಣೆಗಳನ್ನು(Farm Equipments) ರೂಪಿಸಿ ನಡಕಟ್ಟಿನ ಸಾಹೇಬ್ರು ಎನ್ನಿಸಿಕೊಂಡಿದ್ದಾರೆ. ರೈತನ(Farmer) ಮಗ ಅಬ್ದುಲ್‌ಖಾದರ್ ಇಮಾಮಸಾಬ ನಡಕಟ್ಟಿನ ಉತ್ತರ ಕರ್ನಾಟಕದ(North Karnataka) ಕೃಷಿ ಚಟುವಟಿಕೆ ಯಂತ್ರೋಪಕರಣದ ಸಂಶೋಧನೆಯ ಕೇಂದ್ರ ಇದ್ದಂತೆ. ದುಬಾರಿ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿ ಹೆಚ್ಚಿನ ಬೆಳೆ ಆದಾಯ ತರುವಲ್ಲಿ ಕೃಷಿ ಉಪಕರಣ ಸಂಶೋಧಿಸಿ, ಕೃಷಿಕರಿಗೆ ಕೈಗುಟುಕುವ ದರದಲ್ಲಿ ತಯಾರಿಕೆ ಮಾಡುವಲ್ಲಿ ಇವರು ಸಿದ್ಧಹಸ್ತರು.
Padma Awards: ಪದ್ಮ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ!
ಸಾಧನೆಯದ್ದು ಮುಳ್ಳಿನ ಹಾದಿ
ಕಳೆದ 40 ವರ್ಷಗಳಿಂದ ಕೃಷಿ ಉಪಕರಣಗಳ ಸಂಶೋಧನೆಯಲ್ಲಿ ತೊಡಗಿರುವ ನಡಕಟ್ಟಿನ ಅವರು ಯಶಸ್ಸಿನ ಉತ್ತುಂಗಕ್ಕೆ ಏರಲು ಮುಳ್ಳಿನ ಹಾದಿ ಸವೆಸಿದ್ದಾರೆ. ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿದ್ದಾರೆ. ಹೊಲ ಮನೆ ಅಡವಿಟ್ಟು ಲಕ್ಷಾಂತರ ರು. ಸಾಲ ಮಾಡಿ ಕೃಷಿ ಸಂಶೋಧನೆ ಉಪಕರಣಗಳ ಖರ್ಚುವೆಚ್ಚಕ್ಕೆ ವಿನಯೋಗಿಸಿದ್ದಾರೆ. ಸಾಲದ ಹೊರೆಯಿಂದ ಬೀದಿಗೆ ಬರುವ ಪ್ರಸಂಗ ಎದುರಿಸಿದವರು. ಆತ್ಮಹತ್ಯೆಯ ಯೋಚನೆಯನ್ನೂ ಮಾಡಿದ್ದರು. ಅಂಥವರು ಇವತ್ತು ಕೋಟ್ಯಂತರ ರು. ವ್ಯವಹಾರ ಮಾಡುತ್ತಿದ್ದಾರೆ.
ಸಾಧನೆಯ ವಿವರ:
1985ರಿಂದ ಆರಂಭಗೊಂಡ ನಡಕಟ್ಟಿನ ಅವರ ಕೃಷಿ ಸಂಶೋಧನೆ(Agricultural Research) ಸಾಂಘವಾಗಿ ಮುಂದುವರಿದಿದೆ. ರೈತರಿಗೆ ಉಪಯುಕ್ತವಾಗುವ ಉಪಕರಣಗಳನ್ನು ತಯಾರಿಸಿದ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉಪಕರಣ ರೂಪಿಸಿ ಮಾರುಕಟ್ಟೆಗೆ ತರಲು ಸಹಾಯಕ ಆಗುವಂತೆ ಕೃವಿವಿ ಹಿಂದಿನ ಕುಲಪತಿ ಡಾ.ಎಸ್.ಎ. ಪಾಟೀಲ ಅವರು ಹೆಚ್ಚಿನ ಸಂಶೋಧನೆ ಮಾಡಲು ಹೇಳಿ ಕೃಷಿ ಇಲಾಖೆಯಿಂದ(Department of Agriculture) .15 ಲಕ್ಷ ಕೊಡಿಸಿದ್ದರು. ಕೃಷಿ ಉಪಕರಣಗಳ ಪ್ರಾಡಕ್ಟ ಮಾರ್ಕೆಟಿಂಗ್ ಮಾಡಲು ಸಹಾಯ ಮಾಡಿದ್ದರು.
Padma Awards 2022: 128 ಸಾಧಕರಿಗೆ ಪದ್ಮ ಗೌರವ: ಯೋಧರಿಗೆ ಶೌರ್ಯ ಪದಕ!
24 ಬಗೆಯ ಯಂತ್ರಗಳ ಆವಿಷ್ಕಾರ
ಅಣ್ಣಿಗೇರಿಯಲ್ಲಿ(Annegeri) ‘ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರ’ ಸ್ಥಾಪಿಸಿದ ನಡಕಟ್ಟಿನ ಅವರು ಇಲ್ಲಿವರೆಗೆ 24 ಬಗೆಯ ಕೃಷಿ ಪರಿಕರಗಳನ್ನು ಸಂಶೋಧನೆ ಮಾಡಿದ್ದಾರೆ. 10 ಇನ್1 ಕೂರಿಗೆ, ಹರಗುವ ಗಾಳಿ ಕುಂಟೆ, ದಿಂಡಿನ ಕುಂಟೆ, ಬಂಡೆ ಫಾರಂ, ಹಸಿ ಗಜ್ಜೆ ಶೇಂಗಾ ಕಿತ್ತುವ ಮತ್ತು ಒಕ್ಕುವ ತೂರಿ ಸಾಣಿಸುವ ಚೀಲ ತುಂಬವ ಯಂತ್ರ, ರೋಟವೇಟರ್, ಕುಡ ಹದನಗೊಳಿಸುವ ಯಂತ್ರ, ಕಬ್ಬು ನಾಟಿ ಮಾಡುವ ಯಂತ್ರ, ಹುಣಸೆಹಣ್ಣಿನಿಂದ ಬೀಜ ಬೇರ್ಪಡಿಸುವ ಯಂತ್ರ, ಗಾಲಿ ಕುಂಟೆ ಯಂತ್ರ, 5 ಇನ್ 1 ಕೂರಿಗೆ, ಕಬ್ಬಿಣದ ನೇಗಿಲು ಗಾಲಿಗಳು, ನೇಗಿಲು, ರೈತರ ಕೂರಿಗೆ ಪೂರೈಸುವ ಬಿಡಿಭಾಗ ತಯಾರಿಸುತ್ತಿದ್ದಾರೆ.
ತಮ್ಮ ಕೇಂದ್ರದಲ್ಲಿ 40ಕ್ಕೂ ಹೆಚ್ಚಿನವರಿಗೆ ಉದ್ಯೋಗ(Jobs) ನೀಡಿದ್ದಾರೆ. ಪ್ರಸ್ತುತ ಇವರ ಯಂತ್ರೋಪಕರಣಗಳು ರಾಜ್ಯ ಮಾತ್ರವಲ್ಲದೆ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಓರಿಸ್ಸಾ, ತಿರುಚನಾಪಲ್ಲಿ, ಆಂಧ್ರಪ್ರದೇಶ ಹೀಗೆ ಅನೇಕ ರಾಜ್ಯಗಳಿಗೆ ರಫ್ತು ಆಗುತ್ತಿವೆ.
ಸಾಧನೆ
2015ರಲ್ಲಿ ಇವರ ಸಾಧನೆಗೆ ವಿಶೇಷವಾಗಿ ನಡಕಟ್ಟಿನ ಕೂರಿಗೆ ಸಂಶೋಧನೆಗೆ ರಾಷ್ಟ್ರಪತಿಗಳು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ್ದರು. 2017 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಾಣಿಜ್ಯ ರತ್ನ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಂದ ನೂರಾರು ಪುರಸ್ಕಾರಗಳು ಬಂದಿವೆ. ಕೇಂದ್ರ ಸರ್ಕಾರ(Central Government), ರಾಜ್ಯ ಸರ್ಕಾರ(Government of Karnataka) ಪುರಸ್ಕಾರ ನೀಡಿದ ನಗದು ಹಣವನ್ನು ಶಿಕ್ಷಣ ಸಂಸ್ಥೆಗಳು, ಮಠಮಾನ್ಯಗಳಿಗೆ ದಾನ ಮಾಡಿದ್ದಾರೆ. ಸದ್ಯ ಸಮಾಜದ ಬಡ ಕುಟುಂಬಗಳ ರಕ್ಷಣೆಗೆ ಧನಸಹಾಯ ದಾನ ರೂಪದಲ್ಲಿ ನೀಡಲು ಟ್ರಸ್ಟ್ ರೂಪಿಸಿದ್ದಾರೆ.