ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಕಸವನ್ನು ವಿಲೇವಾರಿ ಘಟಕದಲ್ಲಿ ಹಾಕಿ ನಿರ್ವಹಣೆ ಮಾಡದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಮಾಡಿರುವ ಮಲ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಇತರೆ ಎಲ್ಲಾ ತ್ಯಾಜ್ಯವನ್ನು ಸುರಿದು ಸ್ವತಃ ಪಂಚಾಯಿತಿಯೇ ಒಂದು ಪ್ರದೇಶವನ್ನು ಗಬ್ಬೆದ್ದು ನಾರುವಂತೆ ಮಾಡುತ್ತಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.22): ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಕಸವನ್ನು ವಿಲೇವಾರಿ ಘಟಕದಲ್ಲಿ ಹಾಕಿ ನಿರ್ವಹಣೆ ಮಾಡದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಮಾಡಿರುವ ಮಲ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಇತರೆ ಎಲ್ಲಾ ತ್ಯಾಜ್ಯವನ್ನು ಸುರಿದು ಸ್ವತಃ ಪಂಚಾಯಿತಿಯೇ ಒಂದು ಪ್ರದೇಶವನ್ನು ಗಬ್ಬೆದ್ದು ನಾರುವಂತೆ ಮಾಡುತ್ತಿದೆ. ಇಂತಹ ಅವೈಜ್ಞಾನಿಕ ಕೆಲಸ ನಡೆಯುತ್ತಿರುವುದು ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆ, ಸ್ವಚ್ಛತೆಯ ಜಿಲ್ಲೆ ಎಂದೆಲ್ಲಾ ಅಂದುಕೊಂಡಿರುವ ಕೊಡಗು ಜಿಲ್ಲೆಯಲ್ಲಿ. ಕೊಡಗು ಎಂದರೆ ಪ್ರಾಕೃತಿಕವಾಗಿ ಸೌಂದರ್ಯವಾಗಿರುವ ಜಿಲ್ಲೆ, ಶುದ್ಧಗಾಳಿ, ಪರಿಸರ ಇರುವ ಜಿಲ್ಲೆ ಎಂದು ಹೊರ ಜಿಲ್ಲೆಯ ಜನರು ಎಂದುಕೊಂಡಿದ್ದರೆ, ಕೆಲವೊಮ್ಮೆ ಅದು ಸುಳ್ಳು ಎಂದು ಸಾಬೀತು ಮಾಡುತ್ತಿದೆ ಸುಂಟಿಕೊಪ್ಪ ಪಂಚಾಯಿತಿ.
undefined
ಹೌದು ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಂತಹ ಅಶುಚಿತ್ವವನ್ನು ಉಂಟು ಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿ 275 ಹಾದು ಹೋಗಿರುವ ಪಂಚಾಯಿತಿ ಇದಾಗಿದ್ದು ಮೇಲ್ನೋಟಕ್ಕೆ ಸ್ವಚ್ಛವಾಗಿರುವ ಹೋಬಳಿ ಕೇಂದ್ರ ಎನಿಸುತ್ತದೆ. ಆದರೆ ಪಂಚಾಯಿತಿ ಕಸ ವಿಲೇವಾರಿ ಮಾಡುತ್ತಿರುವ ಪರಿಯನ್ನು ನೋಡಿದರೆ ಎಂತಹವರಿಗಾದರೂ ಪಂಚಾಯಿತಿಯದ್ದು ಎಂತಹ ಅವೈಜ್ಞಾನಿಕ ಕೆಲಸ ಎನಿಸದೆ ಇರದು. 80 ಲಕ್ಷ ರೂಪಾಯಿ ವೆಚ್ಚದಲ್ಲಿ ಮಲ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣಾ ಘಟಕವನ್ನು ಮಾಡಲಾಗಿದೆ. ಇದನ್ನು ಅದ್ಯಾವ ಪುರುಷಾರ್ಥಕ್ಕೆ ಮಾಡಲಾಗಿದೆಯೋ ಗೊತ್ತಿಲ್ಲ.
ದಲಿತರ ಸ್ಮಶಾನ, ನಿವೇಶನ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಶಾಸಕ ಸಿ.ಪಿ.ಯೋಗೇಶ್ವರ್
ಮಲ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಮಾಡಬೇಕಾದ ಘಟಕದ ಮುಂಭಾಗದಲ್ಲಿಯೇ ಸಂಪೂರ್ಣ ಎಲ್ಲಾ ಕಸವನ್ನು ಸುರಿಯುತ್ತಿರುವುದರಿಂದ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಿರುವ ಈ ಘಟಕ ಸಂಪೂರ್ಣ ಅಪ್ರಯೋಜಕವಾಗಿ ಬಿದ್ದಿದೆ. ಈ ಘಟಕವನ್ನು 2024 ರ ಜನವರಿ ತಿಂಗಳಲ್ಲೆ ಸಿಎಂ ಸಿದ್ದರಾಮಯ್ಯನವರು ಉದ್ಘಾಟಿಸಿದ್ದಾರೆ. ಉದ್ಘಾಟನೆ ಭಾಗ್ಯ ಕಂಡು ವರ್ಷವಾದರೂ ಈ ಘಟಕ ಮಾತ್ರ ನಿಷ್ಪ್ರಯೋಜಕವಾಗಿ ಬಿದ್ದಿದೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಒಣ ಮತ್ತು ಹಸಿ ಎರಡು ರೀತಿಯ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಪ್ರತ್ಯೇಕವಾಗಿ ನಿರ್ವಹಣಾ ಘಟಕಗಳಿವೆ.
ಇವುಗಳು ಕೂಡ ನಿರುಪಯುಕ್ತ ಕಟ್ಟಡಗಳಾಗಿ ಬಿದ್ದಿವೆ. ಇಲ್ಲಿಗೆ ತ್ಯಾಜ್ಯವನ್ನು ಹಾಕಿ ವಿಂಗಡಣೆ ಮಾಡಿ ಸರಿಯಾಗಿ ನಿರ್ವಹಣೆ ಮಾಡಬೇಕಾದ ಪಂಚಾಯಿತಿ ಇಡೀ ಕಸವನ್ನು ಬೆಟ್ಟಗೇರಿ ಕಾಫಿ ಎಸ್ಟೇಟ್ ಮಧ್ಯದಲ್ಲಿ ಇರುವ ಪಂಚಾಯಿತಿ ಜಾಗಕ್ಕೆ ಸುರಿದು ಸುಮ್ಮನಾಗುತ್ತಿದೆ. ಇದರಿಂದಾಗಿ ಹತ್ತಾರು ನಾಯಿಗಳು ಇಲ್ಲಿ ವಾಸ ಮಾಡಲು ಆರಂಭಿಸಿವೆ. ಇಲ್ಲಿ ಸುರಿಯುವ ಯಾವುದೆಲ್ಲಾ ತ್ಯಾಜ್ಯವನ್ನು ಕಾಫಿ ತೋಟದೊಳಕ್ಕೆಲ್ಲಾ ಎಳೆದುಕೊಂಡು ಹೋಗುತ್ತಿವೆ. ಕಾಫಿ ತೋಟಕ್ಕೆ ಯಾರೂ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವಂತಿಲ್ಲ. ಒಂದು ವೇಳೆ ಕೆಲಸಕ್ಕೆ ಹೋದರೆ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿವೆ.
ಗಣಿಬಾಧಿತ ಪ್ರದೇಶದಲ್ಲಿ ತಾಲೂಕಿಗೊಂದು ವೃಕ್ಷೋದ್ಯಾನ: ಸಚಿವ ಈಶ್ವರ್ ಖಂಡ್ರೆ
ಈ ಭಾಗದಿಂದ ಸುಂಟಿಕೊಪ್ಪಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಾಕಷ್ಟು ವಿದ್ಯಾರ್ಥಿಗಳು ಇಲ್ಲಿಯೇ ನಡೆದುಕೊಂಡು ಹೋಗಬೇಕು. ನಡೆದುಕೊಂಡು ಹೋಗುವಾಗ ಹಲವು ವಿದ್ಯಾರ್ಥಿಗಳ ಮೇಲೆ ನಾಯಿಗಳು ದಾಳಿ ಮಾಡಿವೆ. ಇದನ್ನು ಪಂಚಾಯಿತಿಯ ಗಮನಕ್ಕೆ ತಂದಿದ್ದರೂ ಯಾವುದೋ ಪ್ರಯೋಜನವಾಗಿಲ್ಲ. ಒಂದು ಜಾಗದಲ್ಲಿ ಕಸವನ್ನು ತಂದು ಸುರಿದು ಹೋಗುತ್ತಿರುವುದರಿಂದ ಸುತ್ತಮುತ್ತ ಕಾಫಿ ತೋಟದ ಲೈನ್ ಮನೆಗಳಿದ್ದು, ಅಲ್ಲಿ ವಾಸ ಮಾಡುತ್ತಿರುವ ಹಲವು ಕುಟುಂಬಗಳು ನಾಯಿಯ ದಾಳಿಗೆ ತುತ್ತಾಗುತ್ತಿದ್ದಾರೆ. ಹಲವು ರೋಗ ರುಜಿನಗಳಿಂದ ಬಳಲುವಂತೆ ಆಗಿದೆ ಎಂದು ಸ್ಥಳೀಯರಾದ ಮಂಜುನಾಥ್ ಹಾಗೂ ಕಾರ್ಮಿಕರು ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಪಂಚಾಯಿತಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಾ ಎಂದು ಕಾದು ನೋಡಬೇಕಾಗಿದೆ.