* ಶಸ್ತ್ರಚಿಕಿತ್ಸೆ ಮೂಲಕ ಕಣ್ಣಿನ ಗುಡ್ಡೆ ಹೊರತೆಗೆದ ವೈದ್ಯರು
* ಕಿಮ್ಸ್‌ನಲ್ಲಿ 46 ಜನರಿಗೆ ದೃಷ್ಟಿದೋಷ ಕಂಡು ಬಂದಿತ್ತು
* ಬ್ಲ್ಯಾಕ್ ಫಂಗಸ್ ಕಂಡು ಬಂದ 8 ಜನರ ಒಂದು ಕಣ್ಣು ಸಂಪೂರ್ಣ ದೃಷ್ಟಿಹೀನ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜೂ.20): ಕೊರೋನಾ 2ನೇ ಅಲೆ ಸಾಕಷ್ಟು ಜನರನ್ನು ಬಲಿತೆಗೆದುಕೊಂಡು ಕುಟುಂಬದ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ನಡುವೆಯೇ, ಇದೀಗ ಬ್ಲ್ಯಾಕ್ ಫಂಗಸ್ 8 ಜನರ ದೃಷ್ಟಿಯನ್ನು ಕಿತ್ತುಕೊಂಡಿದೆ! ಕೊರೋನಾದಿಂದ ಗುಣಮುಖರಾದ ಕೆಲವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಕೆಲವರಲ್ಲಿ ಮೂಗಿನ ಮೂಲಕವೂ ಬ್ಲ್ಯಾಕ್ ಹಬ್ಬುತ್ತಿದೆ. ಇದು ಕಣ್ಣಿನ ನರಗಳಿಗೆ ತೊಂದರೆ ಮಾಡುತ್ತಿದೆ. ಹೀಗೆ ಕಣ್ಣಿಗೆ ತೊಂದರೆಯಾದವರ ಕಣ್ಣಿನ ಗುಡ್ಡೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತಿದೆ.
10 ಜನರ ಕಣ್ಣು ಹೋಯಿತು:
ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಹೆಸರು ಪಡೆದಿರುವ ಕಿಮ್ಸ್‌ಗೆ ಅಕ್ಕಪಕ್ಕದ ಜಿಲ್ಲೆಗಳಾದ ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರದ ಬ್ಲ್ಯಾಕ್ ಫಂಗಸ್ ರೋಗಿಗಳು ದಾಖಲಾಗಿದ್ದಾರೆ. ಕಿಮ್ಸ್‌ನಲ್ಲಿ ಈ ವರೆಗೆ 170 ಬ್ಲ್ಯಾಕ್ ಫಂಗಸ್ ರೋಗಿಗಳು ದಾಖಲಾಗಿದ್ದರು. ಇದರಲ್ಲಿ ಈ ವರೆಗೆ ಬ್ಲ್ಯಾಕ್ ಫಂಗಸ್‌ನಿಂದ 8 ಜನ ಮೃತಪಟ್ಟಿದ್ದಾರೆ. 27 ಜನ ಗುಣಮುಖರಾಗಿ ಮನೆಗಳಿಗೆ ತೆರಳಿದ್ದರೆ, 135 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 116 ಜನರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ನೈಋುತ್ಯ ರೈಲ್ವೆಯ 4 ಸಾವಿರ ನೌಕರರಿಗೆ ಕೋವಿಡ್ ಪಾಸಿಟಿವ್
ಕಿಮ್ಸ್‌ಗೆ ದಾಖಲಾದ 170 ಜನರಲ್ಲಿ 46 ಜನರಿಗೆ ದೃಷ್ಟಿದೋಷ ಕಂಡು ಬಂದಿತ್ತು. ಕಣ್ಣು ಮತ್ತು ರಪ್ಪೆ ಊತ ಕಂಡು ಬಂದು ಕಣ್ಣಿನ ಚಲನೆಯಲ್ಲಿ ತೊಂದರೆ ಉಂಟಾಗಿತ್ತು. 46 ಜನರ ಪೈಕಿ 10 ಜನರದ್ದು ಫಂಗಸ್ ಮೆದುಳಿಗೆ ಹಬ್ಬುವ ಸ್ಥಿತಿ ತಲುಪಿತ್ತು. ಹೀಗಾಗಿ 10 ಜನರ ಕಣ್ಣಿನ ಗುಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಹೀಗೆ ಶಸ್ತ್ರಚಿಕಿತ್ಸೆಗೊಳಪಟ್ಟ10 ಜನರಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನುಳಿದ 8 ಜನರ ಒಂದು ಕಣ್ಣಿನ ದೃಷ್ಟಿಸಂಪೂರ್ಣ ಹೋಗಿದೆ. ಈ 8 ಜನರು ಭವಿಷ್ಯದಲ್ಲಿ ಒಂದೇ ಕಣ್ಣಿನಿಂದಲೇ ಜಗತ್ತನ್ನು ನೋಡಬೇಕಿದೆ. ಇವರನ್ನು ಹೊರತುಪಡಿಸಿ ಬ್ಲ್ಯಾಕ್ ಫಂಗಸ್‌ನಿಂದ ನೇತ್ರ ಸಮಸ್ಯೆ ಎದುರಿಸುತ್ತಿರುವ ಉಳಿದವರಿಗೆ ಇಂಜೆಕ್ಷನ್ ಮೂಲಕವೇ ಚಿಕಿತ್ಸೆ ಮುಂದುವರಿಸಲಾಗಿದೆ. ಒಂದು ವೇಳೆ ಪರಿಸ್ಥಿತಿ ಗಂಭೀರವಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ಕಿಮ್ಸ್ ನೇತ್ರ ವಿಭಾಗದ ಡಾ. ಸವಿತಾ ಕನಕಪುರ ತಿಳಿಸುತ್ತಾರೆ.
ಒಟ್ಟಾರೆ ಬ್ಲ್ಯಾಕ್ ಫಂಗಸ್ ಕಂಡು ಬಂದ 8 ಜನರ ಒಂದು ಕಣ್ಣು ಸಂಪೂರ್ಣ ವಾಗಿರುವುದು ಉಳಿದ ಬ್ಲ್ಯಾಕ್ ಫಂಗಸ್ ರೋಗಿಗಳಲ್ಲಿ ಆತಂಕವನ್ನುಂಟು ಮಾಡಿರುವುದಂತೂ ಸತ್ಯ.
10 ಜನರಿಗೆ ಶಸ್ತ್ರಚಿಕಿತ್ಸೆ ಮೂಲಕ ಕಣ್ಣಿನ ಗುಡ್ಡೆಯನ್ನು ಹೊರತೆಗೆಯಲಾಗಿದೆ. ಇಬ್ಬರು ಮೃತಪಟ್ಟರೆ, ಇನ್ನುಳಿದ 8 ಜನರ ಒಂದು ದೃಷ್ಟಿಹೋಗಿದೆ. ಉಳಿದ ರೋಗಿಗಳಿಗೆ ಇಂಜೆಕ್ಷನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್ ನೇತ್ರ ವಿಭಾಗದ ತಜ್ಞೆ ಡಾ. ಸವಿತಾ ಕನಕಪುರ ತಿಳಿಸಿದ್ದಾರೆ.
ಮೂಗಿನ ಮೂಲಕ ಕಣ್ಣಿಗೆ ಬ್ಲ್ಯಾಕ್ ಫಂಗಸ್ ಹಬ್ಬಿ ಮೆದುಳಿಗೆ ಹೋಗುವ ಹಂತ ತಲುಪಿತ್ತು. ಅಂಥ ರೋಗಿಗಳ ಕಣ್ಣಿನ ಗುಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಅವರ ಪ್ರಾಣ ಉಳಿಸಲು ಇದು ಅನಿವಾರ್ಯವಾಗಿತ್ತು ಎಂದು ಕಿಮ್ಸ್ ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ ಹೇಳಿದ್ದಾರೆ.