ಹುಬ್ಬಳ್ಳಿ: ಕಿಮ್ಸ್‌ನಲ್ಲಿ 342 ಕೊರೋನಾ ಸೋಂಕಿತೆಯರಿಗೆ ಹೆರಿಗೆ..!

By Kannadaprabha NewsFirst Published Jun 10, 2021, 7:12 AM IST
Highlights

* 150 ಸಹಜ ಹೆರಿಗೆ, 192 ಸಿಜೇರಿಯನ್‌/ ಎಲ್ಲರೂ ಗುಣಮುಖ
* ಸೋಂಕಿತ ಗರ್ಭಿಣಿಯರಿಗೆ ಸಿಜೇರಿಯನ್‌ ಮಾಡುವುದು ಅಪಾಯಕಾರಿ 
* ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಇಂಥ ಸಂಕಷ್ಟ ಎಂದೂ ಬಂದಿರಲಿಲ್ಲ

ಹುಬ್ಬಳ್ಳಿ(ಜೂ.10):  ಈ ಕೊರೋನಾ ಸಂಕಷ್ಟದಲ್ಲೂ ಕಿಮ್ಸ್‌ ವೈದ್ಯರು 342 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಮೂಲಕ ತಮ್ಮ ವೃತ್ತಿಧರ್ಮ ಮತ್ತು ಮಾನವೀಯತೆ ಮೆರೆದಿದ್ದಾರೆ. ಈ 342 ಹೆರಿಗೆಯಲ್ಲಿ 150 ಸಹಜ ಹೆರಿಗೆಯಾಗಿದ್ದರೆ, 192 ಸಿಜೇರಿಯನ್‌. ಈ ಅಷ್ಟೂಜನ ತಾಯಂದಿರು ಕೊರೋನಾ ಗೆದ್ದಿದ್ದು, ಹಸುಗೂಸುಗಳು ಕೂಡ ಆರೋಗ್ಯದಿಂದ ಇವೆಯಂತೆ.

ಕಿಮ್ಸ್‌ನಲ್ಲಿ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ, ಆಕ್ಸಿಜನ್‌ ಅಳವಡಿಸುವುದಿಲ್ಲ, ವೆಂಟಿಲೇಟರ್‌ ಬೆಡ್‌ ಪ್ರಭಾವಿಗಳಿಗೆ ಮಾತ್ರ ನೀಡುತ್ತಾರೆ.  ಇತ್ಯಾದಿ ಆರೋಪಗಳ ಮಧ್ಯಯೂ ಅದಾವುದಕ್ಕೂ ತಲೆ ಕೆಡಿಸಿಕೊಳ್ಳದ ಪ್ರಸೂತಿ ವಿಭಾಗದ ಸುಮಾರ 20 ವೈದ್ಯರು, ನೂರಾರು ವೈದ್ಯಕೀಯ ಸಿಬ್ಬಂದಿ ಸದ್ದಿಲ್ಲದೇ ಈ ಮಾನವೀಯ ಸೇವೆ ಮಾಡಿ ಹೊಸಜೀವಗಳಿಗೆ ಆಸರೆಯಾಗಿದ್ದಾರೆ.

ಹೀಗೆ ಕೊರೋನಾ ಸೋಂಕಿಗೆ ತುತ್ತಾಗಿಯೂ ಮಾಡಿಸಿಕೊಂಡವರಲ್ಲಿ ಬಹುತೇಕರು ಬಡವರು ಮತ್ತು ಗ್ರಾಮೀಣ ಪ್ರದೇಶದವರು ಎನ್ನುವುದು ಗಮನೀಯ. ಯಾವುದೇ ಪ್ರಭಾವ, ವಶೀಲಿ ಇಲ್ಲದೇ ಹೆರಿಗೆಗೆಂದು ಕಿಮ್ಸ್‌ಗೆ ದಾಖಲಾದವರೇ ಹೆಚ್ಚು. ಅಲ್ಲಿ ಪರೀಕ್ಷೆ ವೇಳೆ ಅವರಿಗೆ ಸೋಂಕು ತಗುಲಿದ್ದು ಗೊತ್ತಾಗಿದೆ.

ಮೈಮರೆತ್ರಾ ಧಾರವಾಡ ಮಂದಿ? ಮಾರುಕಟ್ಟೆಯಲ್ಲಿ ಜನವೋ ಜನ..!

ಸೋಂಕಿತರಿಗೆ ಪ್ರತ್ಯೇಕ ಓಟಿ:

ಮೊದಲೆಲ್ಲ ಹೀಗೆ ಸೋಂಕಿತ ಗರ್ಭಿಣಿಯರನ್ನು ಕೋವಿಡ್‌ ವಾರ್ಡ್‌ನ ಆಪರೇಷನ್‌ ಥೇಟರ್‌ನಲ್ಲಿ ಸಿಜೇರಿಯನ್‌ ಮಾಡಲಾಗುತ್ತಿತ್ತು. ಇದರಿಂದ ಬೇರೆಯವರಿಗೆ ಸೋಂಕು ತಗಲುವ ಅಪಾಯ ಹೆಚ್ಚಿದಾಗ ಇವರಿಗಾಗಿಯೇ ಕಿಮ್ಸ್‌ ಆಡಳಿತ ಮಂಡಳಿ ಪ್ರತ್ಯೇಕ ಆಪರೇಷನ್‌ ಥೇಟರ್‌ ವ್ಯವಸ್ಥೆ ಮಾಡಿದೆ. ಇಲ್ಲಿ ನಿತ್ಯ ನಾಲ್ಕಾದರೂ ಸಿಜೇರಿಯನ್‌ ಆಗುತ್ತಿವೆ. ಅದರಂತೆ ಸಹಜ ಹೆರಿಗೆಯೂ ನಿತ್ಯ ನಾಲ್ಕೈದು ಆಗುತ್ತಿವೆ.

ಸೋಂಕು ರಹಿತರಿಗೆ ಅಬ್ಬಬ್ಬಾ ಎಂದರೆ ಒಂದೇ ಗಂಟೆಯಲ್ಲಿ ಸಿಜೇರಿಯನ್‌ ಮುಗಿದು ಹೋಗುತ್ತದೆ. ಅದೇ ಸೋಂಕಿತರಿಗೆ ಸಿಜೇರಿಯನ್‌ ಮಾಡುವುದು ದೊಡ್ಡ ಸವಾಲಿನ ಕೆಲಸ. ಪಿಪಿಇ ಕಿಟ್‌ ಧರಿಸಿ ಆಪರೇಷನ್‌ ಮಾಡುವುದು ಅಷ್ಟುಸುಲಭವಲ್ಲ. ಒಬ್ಬರಿಗೆ ಸಿಜೇರಿಯನ್‌ ಮಾಡಲು ಕನಿಷ್ಠ 3 ಗಂಟೆ ಸಮಯ ಬೇಕಂತೆ. ಅನಸ್ತೇಶಿಯಾ, ಸರ್ಜನ್‌, ಪ್ರಸೂತಿ ತಜ್ಞರು, ಸಹಾಯಕರು.. ಇತ್ಯಾದಿ ಎಲ್ಲರೂ ಪಿಪಿಇ ಕಿಟ್‌ ಧರಿಸಿ ಅತ್ಯಂತ ಸುರಕ್ಷತಾ ಕ್ರಮಗಳನ್ನು ಕೈಕೊಂಡು ಆ ಸಿಜೇರಿಯನ್‌ ಪೂರೈಸಬೇಕಂತೆ. ಇಂಥ ಪರಿಸ್ಥಿತಿಯಲ್ಲಿ 192 ಗರ್ಭಿಣಿಯರಿಗೆ ಸಿಜೇರಿಯನ್‌ ಮಾಡಿ ತಾಯಿ- ಮಗುವಿನ ಆರೈಕೆ ಮಾಡಿದ ಕಿಮ್ಸ್‌ ವೈದ್ಯರ ಕೆಲಸ ನಿಜಕ್ಕೂ ದೇವರ ಕೆಲಸವೇ.

3 ದಿನಕ್ಕೆ ಕೋವಿಡ್‌:

ಸೋಂಕಿತ ಗರ್ಭಿಣಿಯರಿಗೆ ಸಿಜೇರಿಯನ್‌ ಮಾಡುವುದು ಅದೆಷ್ಟು ಅಪಾಯಕಾರಿ ಎಂದರೆ, ಊಹೆಗೂ ನಿಲುಕುವುದಿಲ್ಲ. ಇಲ್ಲಿ ಸೇವೆ ಸಲ್ಲಿಸುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗಲುವುದು ಸಾಮಾನ್ಯ ಎನ್ನುವಂತಾಗಿದೆ.
ಕಿಮ್ಸ್‌ ಪ್ರಸೂತಿ ವಿಭಾಗದ ತಜ್ಞವೈದ್ಯ ಡಾ. ನವೀನ ಪ್ರಸನ್ನ ಅವರು ಕೋವಿಡ್‌ ಮೊದಲ ಅಲೆಯಲ್ಲಿ ಓರ್ವ ಸಂಕಷ್ಟಸ್ಥಿತಿಯಲ್ಲಿದ್ದ ಸೋಂಕಿತ ಗರ್ಭಿಣಿಯ ಸಿಜೇರಿಯನ್‌ ಮಾಡಿ ತಾಯಿ- ಮಗುವನ್ನು ಬದುಕಿಸಿದರು. ಆದರೆ, ಮೂರೇ ದಿನಗಳಲ್ಲಿ ಅವರಿಗೇ ಕೆಮ್ಮು, ನೆಗಡಿ, ಜ್ವರ ಶುರುವಾಗಿವೆ. ಪರೀಕ್ಷೆ ಮಾಡಿಸಿದಾಗ ‘ಕೋವಿಡ್‌ ಪಾಸಿಟಿವ್‌’ ಎನ್ನುವ ವರದಿ ಬಂದಿದೆ. ಸುಮಾರು ದಿನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಬಳಿಕ ಮತ್ತೆ ಅದೇ ಸೋಂಕಿತೆಯರ ಹೆರಿಗೆ ಮತ್ತು ಸಿಜೇರಿಯನ್‌ ಕಾಯಕದಲ್ಲಿ ತೊಡಗಿದ್ದಾರೆ ಈ ವೈದ್ಯರು.

ಇವರಂತೆ ಎಷ್ಟೋ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೋಂಕಿಗೆ ತುತ್ತಾಗಿ ಪಡಬಾರದ ನೋವು ಉಂಡಿದ್ದಾರೆ. ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರಂತೆ.

2006ರಿಂದ ಕಿಮ್ಸ್‌ ಪ್ರಸೂತಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಹೆರಿಗೆಗೆ ಬಂದವರಿಗಷ್ಟೇ ಅಲ್ಲ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಇಂಥ ಸಂಕಷ್ಟ ಎಂದೂ ಬಂದಿರಲಿಲ್ಲ. ಪಿಪಿಇ ಕಿಟ್‌ ಧರಿಸಿ ಸಿಜೇರಿಯನ್‌ ಮಾಡುವುದು ನಮ್ಮ ಪ್ರಾಣವನ್ನು ಪಣಕ್ಕಿಟ್ಟಂತೆಯೇ ಸರಿ. ಇದು ನಮ್ಮ ವೃತ್ತಿಧರ್ಮ, ದೇವರ ಮೇಲೆ ಭಾರ ಹಾಕಿ ಮಾಡುತ್ತಿದ್ದೇವೆ ಎಂದು ಕಿಮ್ಸ್‌ ಪ್ರಸೂತಿ ಮತ್ತು ಉದರದರ್ಶಕ ಶಸ್ತ್ರ ಚಿಕಿತ್ಸಕ ಡಾ. ನವೀನ ಪ್ರಸನ್ನ ತಿಳಿಸಿದ್ದಾರೆ. 
 

click me!