ದಾವಣಗೆರೆಯಲ್ಲಿ ಮತ್ತೆ 14 ಪಾಸಿಟಿವ್‌ ಕೇಸ್‌, 257 ವರದಿ ಬಾಕಿ: ಜಿಲ್ಲಾಧಿಕಾರಿ

By Kannadaprabha News  |  First Published May 9, 2020, 8:18 AM IST

ದಾವಣಗೆರೆಯಲ್ಲಿ ಕೊರೋನಾ ವೈರಸ್ ತನ್ನ ಕಬಂದಬಾಹುಗಳನ್ನು ಚಾಚುತ್ತಲೇ ಇದೆ. ಶುಕ್ರವಾರ ಹೊಸದಾಗಿ 14 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ 1500 ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಿದ್ದು, 1243 ವರದಿ ನೆಗೆಟಿವ್‌ ಬಂದಿವೆ. 61 ಪಾಸಿಟಿವ್‌ ಬಂದಿದ್ದು, ಈ ಪೈಕಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಾಲ್ವರು ಸಾವನ್ನಪ್ಪಿದ್ದಾರೆ. ಸದ್ಯ 55 ಸಕ್ರಿಯ ಪ್ರಕರಣಗಳಲ್ಲಿ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ದಾವಣಗೆರೆ(ಮೇ.09): ಜಿಲ್ಲೆಯಲ್ಲಿ ಹೊಸದಾಗಿ 14 ಪಾಸಿಟಿವ್‌ ಕೇಸ್‌ ವರದಿಯಾಗಿದ್ದು, ಈ ಎಲ್ಲ ಕೇಸ್‌ಗಳು ರೋಗಿ ಸಂಖ್ಯೆ- 533 ಮತ್ತು 556ರ ದ್ವಿತೀಯ ಸಂಪರ್ಕದಲ್ಲಿದ್ದವರು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪಾಸಿಟಿವ್‌ ಬಂದ ಎಲ್ಲ 14 ಜನರನ್ನೂ ಪ್ರತ್ಯೇಕವಾಗಿ ಕ್ವಾರಂಟೈನ್‌ ಮಾಡಿದ್ದು, 3 ದಿನಗಳ ಹಿಂದೆ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಿದ್ದು, ಇಂದು ಒಟ್ಟು 141 ವರದಿ ನೆಗೆಟಿವ್‌, 14 ಪಾಸಿಟಿವ್‌ ಬಂದಿವೆ ಎಂದರು.

Tap to resize

Latest Videos

undefined

ಈವರೆಗೆ 1500 ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಿದ್ದು, 1243 ವರದಿ ನೆಗೆಟಿವ್‌ ಬಂದಿವೆ. 61 ಪಾಸಿಟಿವ್‌ ಬಂದಿದ್ದು, ಈ ಪೈಕಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಾಲ್ವರು ಸಾವನ್ನಪ್ಪಿದ್ದಾರೆ. ಸದ್ಯ 55 ಸಕ್ರಿಯ ಪ್ರಕರಣಗಳಲ್ಲಿ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 150 ಮಾದರಿಗಳನ್ನು ಇಂದು ಪರೀಕ್ಷೆಗೆ ಕಳಿಸಿದ್ದು, ಇನ್ನೂ 257 ವರದಿ ಬರುವುದು ಬಾಕಿ ಇದೆ. ಇಂದು ಪಾಸಿಟಿವ್‌ ಬಂದ 14ರಲ್ಲಿ ನಾಲ್ವರು ಸೋಂಕಿತರು ಪಿ-533ರ ದ್ವಿತೀಯ ಸಂಪರ್ಕದಲ್ಲಿದ್ದವರು. ಉಳಿದ 10 ಜನ ಪಿ-556ರ ದ್ವಿತೀಯ ಸಂಪರ್ಕದಲ್ಲಿ ಇದ್ದವರಾಗಿದ್ದಾರೆ ಎಂದು ತಿಳಿಸಿದರು.

ಜಾಲಿ ನಗರ, ಬಾಷಾ ನಗರ, ಇಮಾಂ ನಗರ, ಬೇತೂರು ರಸ್ತೆ, ಕೆಟಿಜೆ ನಗರ ಹಾಗೂ ಎಸ್‌ಪಿಎಸ್‌ ನಗರ ಈ ಆರೂ ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ನಿತ್ಯವೂ ಪ್ರತಿ ಮನೆಗಳಿಗೆ ಆರೋಗ್ಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರ ತಂಡವು ತೆರಳಿ, ಸಕ್ರಿಯ ಸರ್ವೇಕ್ಷಣಾ ಚಟುವಟಿಕೆ ಕೈಗೊಳ್ಳುತ್ತಿದೆ. ರೋಗ ಉಲ್ಬಣಗೊಂಡ ನಂತರ ಕಡೇ ಹಂತದಲ್ಲಿ ಆಸ್ಪತ್ರೆಗೆ ಬಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆ ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಸರ್ವೇಗೆ ಬಂದಾಗ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯ ಮುಚ್ಚಿಡದೇ ಸ್ಪಷ್ಟಮಾಹಿತಿ ನೀಡಬೇಕು. ರೋಗ ಲಕ್ಷಣ ಕಂಡುಬಂದರೆ ಅಂತಹವರನ್ನು ಕಾಪಾಡುವ ಹೊಣೆ ನಮ್ಮದು ಎಂದು ಸ್ಪಷ್ಟಪಡಿಸಿದರು.

ಮಾಸ್ಕ್‌ ಧರಿಸುವಂತೆ ತಿಳಿ ಹೇಳಿದ ಪಿಡಿಓಗೆ ಹೊಡೆದು ಯುವಕ ಪರಾರಿ

ನಮ್ಮಲ್ಲಿ ಸಮರ್ಥ ವೈದ್ಯರಿದ್ದು, ರೋಗ ಕೊನೆಯ ಹಂತಕ್ಕೆ ಬಂದಾಗ ಆಸ್ಪತ್ರೆಗೆ ಎಡತಾಕುವುದನ್ನು ಬಿಟ್ಟು, ಆರಂಭಿಕ ಲಕ್ಷಣಗಳು ಕಂಡುಬಂದಾಗಲೇ ಆಸ್ಪತ್ರೆಗೆ ತಪಾಸಣೆಗೆ ಬಂದು, ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ನಗರ, ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತಿದ್ದೇನೆ. ನಿಮ್ಮಲ್ಲಿ ಏನಾದರೂ ಆರೋಗ್ಯ ಸಮಸ್ಯೆ, ಲಕ್ಷಣ ಕಂಡು ಬಂದರೆ ಸರ್ವೇಗೆ ಬಂದ ಸಿಬ್ಬಂದಿಗೆ ಗಮನಕ್ಕೆ ತನ್ನಿ ಎಂದು ಕರೆ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ 15 ತೀವ್ರ ಉಸಿರಾಟ ತೊಂದರೆಯುಳ್ಳ ರೋಗಿಗಳಿದ್ದಾರೆ. ಈ ಎಲ್ಲರನ್ನೂ ತಪಾಸಣೆ ನಡೆಸಲು ಆಸ್ಪತ್ರೆ ವೈದ್ಯರನ್ನು ಹೊರತುಪಡಿಸಿ, ನಾಲ್ವರು ತಜ್ಞ ವೈದ್ಯರ ತಂಡ ರಚಿಸಲಾಗಿದೆ. ಈ ವೈದ್ಯರು ದಿನದಲ್ಲಿ 3 ಸಲ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಮಕ್ಕಳನ್ನು ಮಕ್ಕಳ ತಜ್ಞ ವೈದ್ಯರು ಲಕ್ಷಣ ಅನುಸಾರವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚುವರಿಯಾಗಿ ಬಾಪೂಜಿ ಮತ್ತು ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆ ಸೇವೆ ಬಳಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆ ಕೋವಿಡ್‌-19 ಆಸ್ಪತ್ರೆಯಾಗಿ ಪರಿವರ್ತಿಸಿರುವ ಹಿನ್ನೆಲೆ ಅನಿವಾರ್ಯವಾಗಿ ಕೆಲ ಸೇವೆಗಳನ್ನು ನಿಲ್ಲಿಸಿದೆ. ಆಯುಷ್ಮಾನ್‌ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಡಿ ಇತರೆ ಆಸ್ಪತ್ರೆಗಳು ಈ ಸೇವೆ ನೀಡಲು ಸೂಚಿಸಲಾಗಿದೆ. ಜಿಲ್ಲೆಯನ್ನು ಮೊದಲಿದ್ದ ಸ್ಥಿತಿಗೆ ತರಲು ನಮ್ಮ ಎಲ್ಲ ತಂಡಗಳೂ ಸರ್ವ ಸನ್ನದ್ಧವಾಗಿವೆ. ಸಾರ್ವಜನಿಕರೂ ಈ ಕಾರ್ಯಕ್ಕೆ ಸ್ಪಂದಿಸಿ, ಸಹಕರಿಸಬೇಕು ಎಂದು ಡಿಸಿ ಮಹಾಂತೇಶ ಬೀಳಗಿ ಮನವಿ ಮಾಡಿದರು.
 

click me!