ಕೊಪ್ಪಳ: 128 ರೈತರು ಆತ್ಮಹತ್ಯೆ ಹತ್ಯೆ, ತಲಾ 5 ಲಕ್ಷ ಪರಿಹಾರ ವಿತರಣೆ

By Web DeskFirst Published Nov 21, 2019, 9:45 AM IST
Highlights

2015-16 ರಿಂದ 2019-20 ನೇ ಸಾಲಿನವರೆಗೆ 128 ರೈತರು ಆತ್ಮಹತ್ಯೆ| 94 ಪ್ರಕರಣಗಳು ಅಂಗೀಕೃತ| 33 ಪ್ರಕರಣಗಳು ತಿರಸ್ಕೃತ| 94 ಪ್ರಕರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಕೃಷಿ ಇಲಾಖೆ ವತಿಯಿಂದ ತಲಾ 5 ಲಕ್ಷ ರು. ಪರಿಹಾರ|  ಒಟ್ಟು 94 ರೈತರಿಗೆ 470 ಲಕ್ಷಗಳ ಪರಿಹಾರ|

ಕೊಪ್ಪಳ(ನ.21): ಜಿಲ್ಲೆಯಲ್ಲಿ 2015-16 ರಿಂದ 2019-20 ನೇ ಸಾಲಿನವರೆಗೆ ಒಟ್ಟು 128 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ 94 ಪ್ರಕರಣಗಳು ಅಂಗೀಕೃತವಾಗಿ, 33 ಪ್ರಕರಣಗಳು ತಿರಸ್ಕೃತವಾಗಿದ್ದು, ಎಫ್.ಎಸ್.ಎಲ್ ವರದಿ ಬಂದಿಲ್ಲದ ಕಾರಣ ಒಂದು ಪ್ರಕರಣ ಬಾಕಿ ಇದೆ. 

ಉಳಿದ 94 ಪ್ರಕರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಕೃಷಿ ಇಲಾಖೆ ವತಿಯಿಂದ ತಲಾ 5 ಲಕ್ಷ ದಂತೆ ಒಟ್ಟು 94 ರೈತರಿಗೆ 470 ಲಕ್ಷಗಳ ಪರಿಹಾರ ನೀಡಲಾಗಿದೆ ಎಂದು ಉಪ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಕುಟುಂಬಕ್ಕೆ ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ವಿಧವಾ ವೇತನವನ್ನು ಒಟ್ಟು 94 ಪ್ರಕರಣಗಳ ಪೈಕಿ 80 ಪ್ರಕರಣಗಳಿಗೆ ವಿಧವಾ ವೇತನ ಸೌಲಭ್ಯ ನೀಡಲಾಗುತ್ತಿದೆ. 5 ಪ್ರಕರಣಗಳು ಅವಿವಾಹಿತ ರೈತರ ಪ್ರಕರಣಗಳಾಗಿದ್ದು, ಇನ್ನುಳಿದಂತೆ 2019-20ನೇ ಸಾಲಿನ 9 ಪ್ರಕರಣಗಳು ಕಂದಾಯ ಇಲಾಖೆಯಲ್ಲಿದ್ದು, ವರದಿಯ ನಿರೀಕ್ಷಣೆಯಲ್ಲಿರುತ್ತದೆ. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕರ್ನಾಟಕ ಕಾರ್ಡಿನ ಬಗ್ಗೆ ಮಾಹಿತಿ ನೀಡಿ 2015-16 ರಿಂದ 2019-20 ನೇ ಸಾಲಿನ ಪ್ರಕರಣಗಳಿಗೆ ಹೊಸದಾಗಿ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಮಾಡುವುದಾಗಿ ಆರೋಗ್ಯ ಇಲಾಖೆಯ ಮುಖ್ಯಸ್ಥರು ನ.6ರ ಸಭೆಯಲ್ಲಿ ತಿಳಿಸಿದ್ದಾರೆ. 

ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಯ 94 ರೈತರ ಪೈಕಿ 15 ಮೃತ ರೈತರ ಕುಟುಂಬದ ಮಕ್ಕಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿ ವೇತನ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದ 79 ಕುಟುಂಬಗಳ ಮಕ್ಕಳು 6 ವರ್ಷದ ಒಳಗಿರುವ ಕಾರಣ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ. 

ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ 94 ಪ್ರಕರಣಗಳಲ್ಲಿ 14 ರೈತರ ಕುಟುಂಬಗಳು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೌಲಭ್ಯಕ್ಕೆ ಅರ್ಹರಿರುತ್ತಾರೆ.ಉಳಿದ ಕುಟುಂಬಗಳ ಮಕ್ಕಳು 6 ವರ್ಷದ ಒಳಗಿರುವ ಕಾರಣ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ ಮತ್ತು ಒಟ್ಟು 16 ಮಕ್ಕಳ ಶುಲ್ಕ ಮರುಪಾವತಿ ಮಾಡಲಾಗಿರುತ್ತದೆ.

ಉಳಿದ ಮಕ್ಕಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2 ಕುಟುಂಬಗಳ ಮಕ್ಕಳು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸತಿ ನಿಲಯ ಸೌಲಭ್ಯ ಪಡೆದಿರುತ್ತಾರೆ. 2 ಮಕ್ಕಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಿಂದ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
 

click me!