
ವರದಿ; ಮಂಜುನಾಥ ಸಾಯೀಮನೆ
ಶಿರಸಿ (ಸೆ.18): ಈ ವರ್ಷದ ಮಳೆಯ ಅಬ್ಬರಕ್ಕೆ ಜಿಲ್ಲೆಯ ಅಡಕೆ ಬೆಳೆಗಾರರ ರೋದನ ಮುಗಿಲು ಮುಟ್ಟಿದ್ದು, 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಗೆ ಕೊಳೆ ರೋಗ ತಗುಲಿದೆ. ಭಾಗಶಃ ಬೆಳೆ ಈಗಾಗಲೇ ನೆಲಕಚ್ಚಿದೆ. ಅಡಕೆ ಬೆಳೆಯ ಕೊಳೆ ರೋಗ ಈ ಬಾರಿ ಯಾವೊಂದು ತಾಲೂಕಿಗೆ ಸೀಮಿತವಾಗಿ ಉಳಿದಿಲ್ಲ. ಸಂಪೂರ್ಣ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಜೂನ್ ತಿಂಗಳಲ್ಲಿ ಆರಂಭವಾದ ಮಳೆ ಈ ವರ್ಷ ತನ್ನ ತೀವ್ರತೆಯನ್ನು ಕಡಿಮೆಗೊಳಿಸಲೇ ಇಲ್ಲ. ಕಳೆದ ಒಂದು ತಿಂಗಳ ಹಿಂದೆ ಆರಂಭಗೊಂಡ ಕೊಳೆ ರೋಗ ಏಕಾಏಕಿ ವ್ಯಾಪಕವಾಗಿ ಹರಡಿದೆ. ಎರಡು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿದ್ದರೂ ಕೊಳೆ ರೋಗ ಕಾಣಿಸಿಕೊಂಡಿದೆ. ಕೆಲ ರೈತರು ಮೂರನೇ ಬಾರಿ ಸಹ ಬೋರ್ಡೋ ದ್ರಾವಣ ಸಿಂಪಡಣೆ ಮಾಡುತ್ತಿದ್ದಾರೆ. ಬೋರ್ಡೋ ದ್ರಾವಣ ತಯಾರಿಕೆಯ ಮುಖ್ಯ ವಸ್ತುವಾದ ಮೈಲು ತುತ್ತವೂ ಈ ಬಾರಿ ಕೈಗೆಟುಕದ ದರವಾಗಿದೆ. ಪ್ರತಿ ಕೆಜಿ ಮೈಲು ತುತ್ತ .350 ದಾಟಿದೆ. ಇನ್ನೊಂದೆಡೆ ಬೋರ್ಡೋ ಸಿಂಪಡಿಸುವ ಕುಶಲಕರ್ಮಿಗಳ ಪ್ರತಿದಿನದ ವೇತನ .2500ರಷ್ಟಿದ್ದು, ರೈತರನ್ನು ಕಂಗಾಲಾಗಿಸಿದೆ. ಇಷ್ಟೆಲ್ಲ ಮಾಡಿಯೂ ಕೊಳೆ ರೋಗ ಸ್ವಲ್ಪವೂ ನಿಯಂತ್ರಣವಾಗುತ್ತಿಲ್ಲ. ಜಿಲ್ಲೆಯಲ್ಲಿ 1007 ಹೆಕ್ಟೇರ್ ಪ್ರದೇಶದಲ್ಲಿ ಶೇ.33ಕ್ಕಿಂತ ಹೆಚ್ಚು ಅಡಿಕೆ ಬೆಳೆ ಹಾನಿಯಾಗಿದ್ದರೆ, 10,004 ಹೆಕ್ಟೇರ್ ಭೂಮಿಯಲ್ಲಿ ಶೇ.33ಕ್ಕಿಂತ ಕಡಿಮೆ ಬೆಳೆ ಹಾನಿ ಆಗಿದೆ. 19326 ಅಡಕೆ ಬೆಳೆಗಾರರ ತೋಟದಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ.
ಅಂಕೋಲಾ ತಾಲೂಕಿನ ಹಳವಳ್ಳಿ, ಡೋಂಗ್ರಿ, ಶೇವಕಾರ, ಹೆಗ್ಗಾರ, ಹಿಲ್ಲೂರು, ಅಚವೆ, ಕುಮಟಾ ತಾಲೂಕಿನ ಅಳಕೋಡ, ಕಲ್ಲಬ್ಬೆ, ಮೂರೂರು, ವಾಲಗಳ್ಳಿ, ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ, ಮಹಿಮೆ, ಚಂದಾವರ, ಭಟ್ಕಳ ತಾಲೂಕಿನ ಬೇಂಗ್ರೆ, ಶಿರಾಲಿ, ಬೈಲೂರು, ಸಿದ್ದಾಪುರ ತಾಲೂಕಿನ ಭಾಗಶಃ ಹಳ್ಳಿಗಳಲ್ಲಿ ಕೊಳೆ ಜೋರಾಗಿದೆ.
ಶಿರಸಿ ತಾಲೂಕಿನ ಮತ್ತಿಘಟ್ಟ, ಸಂಪಖಂಡ, ನೇರ್ಲವಳ್ಳಿ, ಕಡಬಾಳ, ಸಾಲ್ಕಣಿ ಸೇರಿದಂತೆ ಅನೇಕ ಹಳ್ಳಿಗಳು, ಯಲ್ಲಾಪುರ ತಾಲೂಕಿನ ಚಂದಗುಳಿ, ದೇಹಳ್ಳಿ, ಬಳಗಾರ, ಬಿಸಗೋಡ ಸೇರಿ ಭಾಗಶಃ ಹಳ್ಳಿಗಳು, ಜೋಯಿಡಾ ತಾಲೂಕಿನ ಛಾಪಖಂಡ, ನಂದಿಗದ್ದಾ, ಉಳವಿ. ಮುಂಡಗೋಡ ತಾಲೂಕಿನ ಪಾಳಾ, ಮಳಗಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಕೊಳೆ ತೀವ್ರವಾಗಿದೆ.
ಕಳೆದ 10 ದಿನಗಳ ಈಚೆಯ ಮಳೆಯ ವರ್ತನೆ ಕೊಳೆರೋಗಕ್ಕೆ ವೇಗ ವರ್ಧಕದಂತಾಗಿದೆ. ಪ್ರತಿ ದಿನವೂ ಪ್ರತಿ ಹಳ್ಳಿಯಿಂದಲೂ ಕೊಳೆ ರೋಗದ ಪರಿಹಾರದ ಕೂಗು ಕೇಳಿಬರತೊಡಗಿದೆ.
ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಸಿಗದ ಸಹಾಯಧನ
ಕಂದಾಯ ಇಲಾಖೆ ಈಗ ಅಡಕೆ ಕೊಳೆ ರೋಗದ ಸಮೀಕ್ಷೆಗೆ ಮುಂದಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಹಾನಿಯ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದಾರೆ.
Raita Ratna : ಅಡಕೆ ಮಾರಿ ಶಾಲೆ ಮಕ್ಕಳಿಗೆ ಬಸ್ ಖರೀದಿ!
ಶೇ.33ಕ್ಕಿಂತ ಜಾಸ್ತಿ ಹಾನಿಯಾದರೆ ಹೆಚ್ಚು ಗಮನ: ಅಡಕೆ ಬೆಳೆ ಹಾನಿ ಸಮೀಕ್ಷೆಯನ್ನು ಎರಡು ವಿಧದಲ್ಲಿ ನಡೆಸಲಾಗುತ್ತಿದೆ. ನೈಸರ್ಗಿಕ ವಿಕೋಪ ನಿರ್ವಹಣೆ ಅಡಿಯಲ್ಲಿ ಶೇ.33ಕ್ಕಿಂತ ಜಾಸ್ತಿ ಬೆಳೆ ಹಾನಿಯಾದರೆ ಪರಿಹಾರಕ್ಕೆ ಪರಿಗಣಿಸುವುದರಿಂದ ಈ ಪಟ್ಟಿಯನ್ನು ಪ್ರತ್ಯೇಕ ಸಿದ್ಧಪಡಿಸಲಾಗುತ್ತಿದೆ. ಶೇ.33ಕ್ಕಿಂತ ಕಡಿಮೆ ಬೆಳೆ ಹಾನಿ ಆದವರಿಗೆ ಪರಿಹಾರ ಮರೀಚಿಕೆ ಆಗುವ ಸಾಧ್ಯತೆಯೇ ಅಧಿಕ!
ಎಲ್ಲೆಲ್ಲಿ, ಎಷ್ಟೆಷ್ಟುಕೊಳೆ ರೋಗ?
ತಾಲೂಕು ಹೆಕ್ಟೇರ್
ಶಿರಸಿ 3940
ಯಲ್ಲಾಪುರ 1818
ಕುಮಟಾ 1300
ಅಂಕೋಲಾ 1040
ಹೊನ್ನಾವರ 840
ಸಿದ್ದಾಪುರ 750
ಮುಂಡಗೋಡ 710
ಭಟ್ಕಳ 410
ಜೊಯಿಡಾ 134
ದಾಂಡೇಲಿ 6