Shivamogga: ಜಿಲ್ಲೆ​ಯಲ್ಲಿ ಚರ್ಮಗಂಟು ರೋಗಕ್ಕೆ 1057 ಜಾನು​ವಾರು ಬಲಿ!

By Kannadaprabha News  |  First Published Jan 13, 2023, 6:19 AM IST

 ರೈತ ಈ ದೇಶಕ್ಕೆ ಬೆನ್ನೆಲುಬಾದರೆ, ರೈತನಿಗೆ ಜಾನುವಾರುಗಳೇ ಬೆನ್ನೆಲುಬು. ಆದರೆ, ಜಾನುವಾರುಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ರೋಗ ಕೇವಲ ಜಾನುವಾರುಗಳನ್ನಷ್ಟೇ ಅಲ್ಲ, ರೈತರ ಬದುಕಿನ ಮೇಲೂ ಗದಾಪ್ರಹಾರ ಮಾಡಿದೆ. ರೋಗಕ್ಕೆ ತುತ್ತಾಗಿ ಸಾವಿಗೀಡಾಗುತ್ತಿರುವ ಜಾನುವಾರುಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 1057 ಜಾನುವಾರುಗಳು ಬಲಿಯಾಗಿವೆ.


ಗಣೇಶ್‌ ತಮ್ಮಡಿಹಳ್ಳಿ

ಶಿವಮೊಗ್ಗ (ಜ.13) : ರೈತ ಈ ದೇಶಕ್ಕೆ ಬೆನ್ನೆಲುಬಾದರೆ, ರೈತನಿಗೆ ಜಾನುವಾರುಗಳೇ ಬೆನ್ನೆಲುಬು. ಆದರೆ, ಜಾನುವಾರುಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ರೋಗ ಕೇವಲ ಜಾನುವಾರುಗಳನ್ನಷ್ಟೇ ಅಲ್ಲ, ರೈತರ ಬದುಕಿನ ಮೇಲೂ ಗದಾಪ್ರಹಾರ ಮಾಡಿದೆ. ರೋಗಕ್ಕೆ ತುತ್ತಾಗಿ ಸಾವಿಗೀಡಾಗುತ್ತಿರುವ ಜಾನುವಾರುಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 1057 ಜಾನುವಾರುಗಳು ಬಲಿಯಾಗಿವೆ.

Tap to resize

Latest Videos

ಜಿಲ್ಲೆಯಲ್ಲಿ ಇದುವರೆಗೆ 20,774 ಜಾನುವಾರು ರೋಗ(Lumpy skin disease)ಕ್ಕೆ ತುತ್ತಾಗಿದ್ದು, ಇದರಲ್ಲಿ 12,777 ಜಾನುವಾರುಗಳು ಗುಣಮುಖವಾಗಿವೆ. 6,940 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ತಿಂಗಳ ಹಿಂದೆಯಷ್ಟೇ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಶಿಕಾರಿಪುರ ತಾಲೂಕಿಗೆ ಪ್ರವೇಶಿಸಿದ ಈ ಕಾಯಿಲೆ, ನಂತರ ಜಿಲ್ಲೆಯ ಎಲ್ಲ ತಾಲೂಕು ಭಾಗಗಳಿಗೂ ವ್ಯಾಪಿಸಿದೆ. ಇತ್ತೀಚೆಗೆ ಸಾಗರ ಹಾಗೂ ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಹೆಚ್ಚಾಗಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಪಟ್ಟು 1,130 ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಅಂಕಿಯೇ ರೋಗ ಹರಡುವಿಕೆಯ ತೀವ್ರತೆಯನ್ನು ತೋರಿಸುತ್ತದೆ.

ಚರ್ಮಗಂಟಿಗೆ ಒಂದೇ ತಿಂಗಳಲ್ಲಿ 10,305 ರಾಸುಗಳ ಸಾವು: ಸಿದ್ದು

ರೋಗ ತಗುಲಿದ ಪ್ರಾಣಿಯಿಂದ ರಕ್ತ ಹೀರುವ ಸೊಳ್ಳೆ, ಉಣ್ಣೆ, ನೊಣಗಳು ಆರೋಗ್ಯವಂತ ಜಾನುವಾರುಗಳಿಗೆ ಕಚ್ಚಿದಾಗ ಸೋಂಕು ಹರಡುತ್ತದೆ. ತಲೆ, ಕುತ್ತಿಗೆ, ಕಾಲುಗಳು, ಕೆಚ್ಚಲು, ಜನನಾಂಗ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ನಂತರ ನಿಧಾನವಾಗಿ ಗಂಟುಗಳು ದೊಡ್ಡದಾಗಿ, ಒಡೆಯುತ್ತವೆ. ರಕ್ತಸ್ರಾವವಾಗುವುದಲ್ಲದೇ, ಚರ್ಮ-ಮಾಂಸ ಕಿತ್ತು ಆಳವಾದ ಗಾಯಗಳು ಉಂಟಾಗುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸ್ರಾವವಾದರೆ ಜಾನುವಾರುಗಳು ಬದುಕುಳಿಯಲಾರವು.

ಮಕ್ಕಳಂತೆ ಸಾಕಿದ ಜಾನುವಾರುಗಳು ತಮ್ಮ ಕಣ್ಮುಂದೆ ಸಾವಿಗೀಡಾಗುತ್ತಿರುವುದನ್ನು ಕಂಡು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಕೃಷಿ ಹಾಗೂ ಕುಟುಂಬದ ನೊಗ ಹೊರುವ ಜಾನುವಾರುಗಳಿಗೆ ಬಂದಿರುವ ಈ ಪರಿಸ್ಥಿತಿ ಕಂಡು ರೈತರು ಮರುಗುತ್ತಿದ್ದಾರೆ. ಆರ್ಥಿಕ ಆಧಾರ ಸ್ತಂಭವಾಗಿರುವ ಜಾನುವಾರುಗಳು ಕುಸಿದುಬಿದ್ದಾಗ ಕುಟುಂಬವನ್ನು ಮುನ್ನೆಡೆಸುವುದಾದರೂ ಹೇಗೆ ಎನ್ನುವ ಚಿಂತೆಯಲ್ಲಿ ರೈತರಿದ್ದಾರೆ. ಭಾವನಾತ್ಮಕವಾಗಿಯೂ ಜರ್ಝರಿತರಾಗಿದ್ದಾರೆ.

ಜಾನುವಾರು ಸಂತೆ, ಜಾತ್ರೆ ನಿಷೇಧ: ರೋಗ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಮುಖ್ಯವಾಗಿ ಜಾನುವಾರುಗಳನ್ನು ಒಂದೇ ಕಡೆ ಒಟ್ಟಾಗಿ ಸೇರಿಸುವುದರ ಮೇಲೆ ನಿಷೇಧ ಹೇರಿದೆ. ಜಾನುವಾರು ಸಂತೆ, ಜಾತ್ರೆಗಳನ್ನು ನಿಷೇಧಿಸಿದೆ. ರಾಸುಗಳ ಸಾಗಾಣಿಕೆಗೆ ನಿರ್ಬಂಧ ವಿಧಿಸಿದೆ. ರೋಗ ಕಾಣಿಸಿಕೊಂಡ 5 ಕಿ.ಮೀ. ವ್ಯಾಪ್ತಿಯಲ್ಲಿನ ಎಲ್ಲ ರಾಸುಗಳ ಪರೀಕ್ಷೆ ಮಾಡಲು ಸೂಚಿಸಿದೆ. ಆದರೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ. ಹಲವು ರೈತರು ಈಗಾಗಲೇ ಜಾನುವಾರು ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಕೆಲವರು ಆತಂಕದಿಂದ ತಮ್ಮ ಜಾನುವಾರುಗಳನ್ನು ಪಶು ಆಸ್ಪತ್ರೆಗಳಿಗೆ ಕರೆತಂದು ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ರೋಗ ನಿಯಂತ್ರಣಕ್ಕೆ ಕಟ್ಟೆಚ್ಚರ:

ಆರಂಭದಲ್ಲಿ ಶಿಕಾರಿಪುರದಲ್ಲಿ ಹೆಚ್ಚು ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಕೊಂಡಿತು. ಬಳಿಕ ಶಿವಮೊಗ್ಗ (Shivamogga)ತಾಲೂಕು, ಭದ್ರಾವತಿ ಸೊರಬ, ಹೊಸನನಗರ ಭಾಗದಲ್ಲಿ ಹೆಚ್ಚಾಗಿ ಕಾಣಿಕೊಂಡಿತು. ಅಲ್ಲೆಲ್ಲ ಲಸಿಕೆ ಹಾಕಿದ ಮೇಲೆ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಈಗ ತೀರ್ಥಹಳ್ಳಿ, ಸಾಗರ ಭಾಗದಲ್ಲಿ ಹೆಚ್ಚಾಗಿ ಈ ರೋಗ ಕಾಣಿಕೊಳ್ಳುತ್ತಿದೆ. ಆದ್ದರಿಂದ ನಿಯಂತ್ರಣಕ್ಕೆ ಪಶು ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪಶು ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ತಿಳಿಸಿದರು.

ಶಿಕಾರಿಪುರದಲ್ಲೇ ಹೆಚ್ಚು ಸಾವು

ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಸಾವನ್ನಪ್ಪಿರುವ ಜಾನುವಾರುಗಳ ಪೈಕಿ ಶಿಕಾರಿಪುರ ತಾಲೂಕು ಒಂದರಲ್ಲೇ (256 ಜಾನುವಾರುಗಳು) ಹೆಚ್ಚು ಜಾನುವಾರುಗಳು ಸಾವಿಗೆ ತುತ್ತಾಗಿರುವುದು ಕಂಡುಬಂದಿದೆ. ಉಳಿದಂತೆ ಶಿವಮೊಗ್ಗದಲ್ಲಿ 103, ಭದ್ರಾವತಿ 108, ಸೊರಬ 175, ಸಾಗರ 118, ಹೊಸನಗರ 141, ತೀರ್ಥಹಳ್ಳಿಯಲ್ಲಿ 156 ಜಾನುವಾರುಗಳು ರೋಗಕ್ಕೆ ಬಲಿಯಾಗಿವೆ.

ವಿಜಯಪುರದಲ್ಲಿ ಹೆಮ್ಮಾರಿ ಗಂಟುರೋಗದ ಆರ್ಭಟ, 151ಜಾನುವಾರುಗಳು ಬಲಿ!

ಶೇ.79ರಷ್ಟುಲಸಿಕೆ ಪೂರ್ಣ

ಜಿಲ್ಲೆಯಲ್ಲಿ ಪಟ್ಟು 6,39,216 ದನ ಮತ್ತು ಎಮ್ಮೆಗಳಿವೆ. ಇದರಲ್ಲಿ 20,774 ಜಾನುವಾರುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿದ್ದು, ಇದರಲ್ಲಿ 12,777 ಜಾನುವಾರುಗಳು ಗುಣಮುಖವಾಗಿವೆ. 6,940 ಜಾನುವಾರುಗಳು ಚಿಕಿತ್ಸೆ ಪಡೆಯುತ್ತಿವೆ. 1,057 ಜಾನುವಾರುಗಳು ಸಾವನ್ನಪ್ಪಿವೆ. ಜಿಲ್ಲೆಯಲ್ಲಿ ಈಗಾಗಲೇ ಶೇ.79 ರಷ್ಟುಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, 32,600 ಡೋಸ್‌ ಲಸಿಕೆ ದಾಸ್ತಾನು ಇದೆ. ಇನ್ನು 10ರಿಂದ 15 ದಿನದಲ್ಲಿ ಶೇ. 100ರಷ್ಟುಲಸಿಕೆಯನ್ನು ಪೂರ್ಣಗೊಳಿಸಲಾಗುವುದು. ಇನ್ನು ಚರ್ಮಗಂಟು ರೋಗದಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿರುವ ಜಾನುವಾರುಗಳ ಪೈಕಿ ಈಗಾಗಲೇ 334 ಜಾನುವಾರುಗಳಿಗೆ .63.95 ಲಕ್ಷ ರು. ಪರಿಹಾರವನ್ನು ಈಗಾಗಲೇ ನೀಡಲಾಗಿದೆ. ಉಳಿದ ಜಾನುವಾರಿಗಳ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಎಲ್ಲ ಜಾನವಾರುಗಳಿಗೂ ಪರಿಹಾರ ನೀಡಲಾಗುವುದು ಎಂದು ಪಶು ಇಲಾಖೆ ಉಪನಿರ್ದೇಶಕ ಶಿವಯೋಗಿ ಯಲಿ ಮಾಹಿತಿ ನೀಡಿದರು.

click me!