ಉದ್ಯೋಗ ಕಳೆದುಕೊಳ್ಳುವ ಭಯವೇ? ಈಗಿಂದಲೇ ತಯಾರಿ ಮಾಡಿಕೊಳ್ಳಿ

By Suvarna News  |  First Published May 12, 2020, 3:50 PM IST

ಕೊರೋನಾದಿಂದ ಬುಡಮೇಲಾಗಿದೆ ಜನಜೀವನ. ಇದೀಗ ಕೆಲಸ ಹೋದರೆ ಮುಂದೇನು ಎಂಬ ಪ್ರಶ್ನೆ ಎಡೆಬಿಡದೆ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ಕೆಟ್ಟ ಸನ್ನಿವೇಶ ಎದುರಾದರೆ ಹೇಗೆ ಎದುರಿಸಬೇಕು ಎಂಬುದಕ್ಕೆ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಂಡರೆ ಬಹಳಷ್ಟು ನಿರಾಳವಾಗಿರಬಹುದು.


ನಮ್ಮೆಲ್ಲ ಸುರಕ್ಷಿತ ಭಾವಕ್ಕೆ ಕೊರೋನಾ ದಾಳಿ ಕೊಳ್ಳಿ ಇಟ್ಟಿದೆ. ಊಹಿಸದೆ ಬಡಿದ ಈ ಬರಸಿಡಿಸಿಗೆ ಜನಜೀವನ ಹಲವು ರೀತಿಯಲ್ಲಿ ಬದಲಾಗುತ್ತಿದೆ. ಉದ್ಯೋಗಿಗಳ ಸೆಟಲ್ ಆದ ಸಮಾಧಾನವೀಗ ಉದ್ಯೋಗ ಕಳೆದುಕೊಳ್ಳುವ ಭಯವಾಗಿ ಬದಲಾಗಿದೆ. ಜಗತ್ತಿನಾದ್ಯಂತ ಹಲವಾರು ಉದ್ಯೋಗಿಗಳಿಗೆ ಕೆಲಸ ಹೋಗುವ ಭೀತಿ ಎದುರಾಗಿದೆ. 

ಈಗಾಗಲೇ ಸಂಬಳ ನಂಬಿಕೊಂಡು ಖರೀದಿಸಿರುವ ಮನೆ, ವಾಹನಗಳ ಇಎಂಐ ಹೆದರಿಸುತ್ತಿವೆ, ಹಿಂದಿನಂತೆ ಬೇಕಾಬಿಟ್ಟಿ ಖರ್ಚು ಮಾಡಲು ಧೈರ್ಯ ಸಾಲುತ್ತಿಲ್ಲ. ಕೆಲಸ ಹೋದರೆ ಮುಂದೇನು ಎಂಬ ಪ್ರಶ್ನೆ ಎಡೆಬಿಡದೆ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ಕೆಟ್ಟ ಸನ್ನಿವೇಶ ಎದುರಾದರೆ ಹೇಗೆ ಎದುರಿಸಬೇಕು ಎಂಬುದಕ್ಕೆ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಂಡರೆ ಬಹಳಷ್ಟು ನಿರಾಳವಾಗಿರಬಹುದು. ಈ ಸಿದ್ಧತೆಗಳು ಇಂದನ್ನು ಹೆಚ್ಚು ನೆಮ್ಮದಿಯಿಂದ ಕಳೆಯಲು ಅವಕಾಶ ಮಾಡಿಕೊಡುತ್ತವೆ. 

ಹೊಸ ಪ್ರಯೋಗಶೀಲ, ಸೃಜನಶೀಲ ಮನಸ್ಸು ಹುಟ್ಟು ಹಾಕಿದ ಲಾಕ್‌ಡೌನ್

Tap to resize

Latest Videos

undefined

ಕಾರಣ ಬಿಟ್ಟುಕೊಡಬೇಡಿ

ನಿಮ್ಮ ಕಂಪನಿಗೆ ನಿಮ್ಮನ್ನು ತೆಗೆದು ಹಾಕಲು ಯಾವುದೇ ಕಾರಣಗಳನ್ನು ಬಿಟ್ಟುಕೊಡಬೇಡಿ. ಡೆಡ್‌ಲೈನ್‌ಗಳು ಮಿಸ್ಸಾಗಲು ಬಿಡಬೇಡಿ. ಏನಾದರೂ ಗೊಂದಲಗಳಿದ್ದರೆ ಸೀನಿಯರ್‌ಗೆ ಕೇಳಿ ಪರಿಹರಿಸಿಕೊಳ್ಳಿ. ನಿಮ್ಮ ಬಾಸ್ ಅಥವಾ ಮ್ಯಾನೇಜರ್‌ಗೆ ನಿಮ್ಮ ಮೇಲೆ ನೆಗೆಟಿವ್ ಅಭಿಪ್ರಾಯಗಳಿದ್ದು ಅವರು ನಿಮ್ಮನ್ನು ತಪ್ಪಿತಸ್ಥರಾಗಿಸಿದರೆ, ಆ ವಿಮರ್ಶೆಗಳನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ. ನಿಮ್ಮಿಂದಾದ ತಪ್ಪುಗಳೇನು, ಅವನ್ನು ಸರಿ ಪಡಿಸುವುದು ಹೇಗೆ ಎಂಬ ಬಗ್ಗೆ ಕ್ರಿಯಾಶೀಲರಾಗಿ. ಇದು ಇಲ್ಲಷ್ಟೇ ಅಲ್ಲ, ಬೇರೆ ಉದ್ಯೋಗಕ್ಕೆ ಸೇರಿದಾಗ ಕೂಡಾ ನಿಮ್ಮ ಸಹಾಯಕ್ಕೆ ಬರುತ್ತದೆ. ಸಾಧ್ಯವಾದಷ್ಟು ಕಡಿಮೆ ದೂರಿ, ಹೆಚ್ಚು ಫಲಿತಾಂಶ ತೋರಿಸಿ. 

ಸಾಲ ಕಡಿಮೆ ಮಾಡಿಕೊಳ್ಳಿ

ಸಾಮಾನ್ಯವಾಗಿ ಹಣಕಾಸಿನ ಸಮಸ್ಯೆಗಳಿದ್ದಷ್ಟೂ ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚಿನ ಆತಂಕ ಹುಟ್ಟುಹಾಕುತ್ತದೆ. ಈ ಹಣಕಾಸಿನ ಸಮಸ್ಯೆಯಲ್ಲಿ ಮೊದಲನೆಯದು ಎಲ್ಲೆಡೆ ಮಾಡಿಕೊಂಡ ಸಾಲ. ಹೀಗೆ ಸಾಲವಿದ್ದಾಗ ಕೆಲಸ ಹೋದರೆ ಕುಟುಂಬದ ಪೋಷಣೆ ಹೇಗೆ, ಮತ್ತೊಂದು ಉದ್ಯೋಗ ಸಿಗಲು ಎಷ್ಟು ಸಮಯವಾಗುತ್ತದೆಯೋ, ಸಿಗದೆ ಹೋದರೆ ಏನು ಮಾಡುವುದು ಇಂಥ ಪ್ರಶ್ನೆಗಳು ಮನಸ್ಸಿನಲ್ಲಿ ಬಿರುಗಾಳಿ ಎಬ್ಬಿಸುತ್ತವೆ. ಎಲ್ಲಕ್ಕಿಂತ ಮೊದಲು ನಿಮ್ಮ ಸಾಲಗಳನ್ನೆಲ್ಲ ತೀರಿಸಿಕೊಳ್ಳುವತ್ತ ಗಮನ ಹರಿಸಿ. ಸಾಲವಿಲ್ಲ ಎಂದರೆ ಬಹಳಷ್ಟು ಒತ್ತಡ ಕಡಿಮೆಯಾಗುತ್ತದೆ. ನಿಮ್ಮ ಸಾಲದ ಇತಿಹಾಸ ಕೂಡಾ ಭವಿಷ್ಯದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಬಲ್ಲದು. ಸಧ್ಯ ಕೈಲಿರುವ ಕೆಲಸದಿಂದ ಎಷ್ಟು ಸಾಧ್ಯವೋ ಅಷ್ಟು ಸಾಲ ತೀರಿಸಿ. ಸಾಲ ತೀರಿದ್ದರೆ ಸೇವಿಂಗ್ಸ್‌ನತ್ತ ಗಮನ ಹರಿಸಿ. ಅನಗತ್ಯ ಖರ್ಚುಗಳಷ್ಟನ್ನೂ ತಗ್ಗಿಸಿ. 

ಹೊಸ ಉದ್ಯೋಗ ಹುಡುಕಾಟಕ್ಕೆ ಸಿದ್ಧತೆ

ಉದ್ಯೋಗ ಹೋಗಿಯೇ ಬಿಡುತ್ತದೆ ಎಂದಲ್ಲ, ಆದರೂ ಆಗಾಗ ನಿಮ್ಮ ರೆಸ್ಯೂಮೆಯನ್ನು ಅಪ್‌ಡೇಟ್ ಮಾಡುವುದು ಉತ್ತಮ ಅಭ್ಯಾಸ. ಲಿಂಕ್ಡ್‌ಇನ್ ಪ್ರೊಫೈಲ್ ಅಪ್‌ಡೇಟ್ ಮಾಡಿ. ಆನ್‌ಲೈನ್‌ನ ಹಲವಾರು ಉದ್ಯೋಗ ಹುಡುಕುವ ವೆಬ್‌ಸೈಟ್‌ಗಳಲ್ಲಿ ನಿಮ್ಮ ರೆಸ್ಯೂಮೆಯನ್ನು ಹರಿಬಿಡಿ. ಇದೆಲ್ಲದರೊಂದಿಗೆ ನಿಮ್ಮ ಹಿಂದಿನ, ಇಂದಿನ ಎಲ್ಲ ಸಹೋದ್ಯೋಗಿ ಸ್ನೇಹಿತರೊಂದಿಗೆ ಸತತ ಸಂಪರ್ಕದಲ್ಲಿರಿ. ಸುಮ್ಮನೆ ಅವರ ಯೋಗಕ್ಷೇಮ ವಿಚಾರಿಸಲು ಆಗಾಗ ಕರೆ ಮಾಡುತ್ತಿರಿ. 

ಕಲಿಕೆ ಮುಂದುವರಿಸಿ

ಉದ್ಯೋಗಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಿಕೊಳ್ಳುವತ್ತ ಗಮನ ಹರಿಸಿ. ಇದರೊಂದಿಗೆ ನಿಮ್ಮ ಕಮ್ಯುನಿಕೇಶನ್ ಸ್ಕಿಲ್ಸ್ ಉತ್ತಮ ಪಡಿಸಿಕೊಳ್ಳಲು ನಿರಂತರ ಪ್ರಯತ್ನ ಹಾಕುತ್ತಲೇ ಇರಿ. ನಿಮ್ಮ ಉದ್ಯೋಗ ಕ್ಷೇತ್ರದ ಹೊರಗೆ ನಿಮ್ಮ ಆಸಕ್ತಿ ಇನ್ಯಾವುದರಲ್ಲೆಲ್ಲ ಇದೆ ಎಂಬುದನ್ನು ಕಂಡುಕೊಳ್ಳಿ. ಹಾಗೊಂದು ವೇಳೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಸಕ್ತಿ ಇದ್ದರೆ ಆ ಕ್ಷೇತ್ರಗಳ ಬಗ್ಗೆಯೂ ಸಾಧ್ಯವಾದಷ್ಟು ಓದಿ ಮಾಡಿ ತಿಳಿದುಕೊಳ್ಳುತ್ತಿರಿ. ಇದು ನಿಮಗೆ ಮತ್ತೆ ಉದ್ಯೋಗ ಹುಡುಕಬೇಕೆಂದಾಗ ಆಯ್ಕೆ ಹೆಚ್ಚಿಸುತ್ತದೆ. ಇಲ್ಲವೇ ಫ್ರೀಲ್ಯಾನ್ಸಿಂಗ್ ತರ ನೋಡಿಕೊಂಡರೆ ಆದಾಯ ಹೆಚ್ಚಿಸುತ್ತದೆ. ಬರವಣಿಗೆ, ಸಂಗೀತ, ಕ್ರಾಫ್ಟ್, ಯೋಗ ತರಗತಿಗಳು, ಅಡುಗೆ, ವಾಯ್ಸ್ ಓವರ್ ಇತ್ಯಾದಿ ಯಾವುದೇ ಕ್ಷೇತ್ರದಲ್ಲಿ ಆಸಕ್ತಿಯಿದ್ದರೂ ಅದನ್ನು ಹಣದ ಮೂಲವಾಗಿಸಿಕೊಳ್ಳಲು ಈಗ ಅವಕಾಶಗಳು ಹೇರಳವಾಗಿವೆ ಎಂಬುದನ್ನು ನೆನಪಿಟ್ಟುಕೊಳ್ಳಿ. 

ಇದು ಮಾರ್ಕೆಟಿಂಗ್ ದುನಿಯಾ; ಸೆಲ್ಫ್ ಪ್ರಮೋಷನ್ ಇದ್ರೇನೆ ಬೆಲೆ!

ಮನೆಯ ಇತರ ಸದಸ್ಯರೂ ದುಡಿಯಲಿ

ಮನೆಯಲ್ಲಿ ಪತ್ನಿ, ಸೋದರಿ ಇಲ್ಲವೇ ಬೇರೆ ಯಾರೇ ಇರಬಹುದು. ಇದುವರೆಗೂ ಅವರು ದುಡಿಯುವ ಅಗತ್ಯ ಇರಲಿಲ್ಲವೆಂದು ನೀವು ಅವರಿಗೆ ಉದ್ಯೋಗ ಮಾಡುವುದು ಬೇಡವೆಂದು ತಡೆದಿರಬಹುದು. ಆದರೆ, ಈಗ ಅವರಿಗೆ ಇಷ್ಟವಿರುವ ಕ್ಷೇತ್ರದಲ್ಲಿ ದುಡಿಮೆಗೆ ಪ್ರಯತ್ನಿಸುವಂತೆ ಪ್ರೋತ್ಸಾಹಿಸಿ. ಇದರಲ್ಲಿ ಒತ್ತಾಯಕ್ಕಿಂತ ಪ್ರೋತ್ಸಾಹವಿರುವುದು ಅಗತ್ಯ. ಹೊರಹೋಗಲು ಸಾಧ್ಯವಿಲ್ಲವೆಂದರೂ ಮನೆಯಲ್ಲೇ ಪ್ಲೇ ಹೋಂ ಮಾಡಬಹುದು, ಕ್ಲೌಡ್ ಕಿಚನ್, ಟ್ಯೂಶನ್, ಆಹಾರ ತಯಾರಿಕೆ ಸೇರಿದಂತೆ ದುಡಿಯುವ ಮನಸ್ಸಿದ್ದರೆ ಒಂದಿಲ್ಲೊಂದು ರೀತಿಯಲ್ಲಿ ದುಡಿಮೆ ಆರಂಭಿಸಬಹುದು. ಹೀಗೆ ಮನೆಯ ಇತರ ಸದಸ್ಯರಿಗೂ ಉದ್ಯೋಗವಿದ್ದಾಗ, ಒಬ್ಬರಿಗೆ ಕೆಲಸ ಹೋದರೂ ತಲೆ ಕೆಡಿಸಿಕೊಳ್ಳುವಷ್ಟು ಚಿಂತಿಸುವ ಅಗತ್ಯ ಬೀಳುವುದಿಲ್ಲ. 

click me!