ಕೋವಿಡ್ ಸಂಕಷ್ಟದಿಂದ ಹೊರಬರಲು ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ . ಸಾಗರೋತ್ತರ ಕನ್ನಡಿಗರೊಂದಿಗೆ ಸಂವಾದದಲ್ಲಿ ಡಿಸಿಎಂ ಹೇಳಿಕೆ.
ಬೆಂಗಳೂರು, (ಮೇ.01): ಕೋವಿಡ್ ಸೇರಿದಂತೆ ಇತರ ಸಮಸ್ಯೆಗಳಿಂದ ನಿಂದ ಉಂಟಾಗಿರುವ ಉದ್ಯೋಗ ಮತ್ತು ಆರ್ಥಿಕ ನಷ್ಟವನ್ನು ಭರ್ತಿ ಮಾಡಲು ಇನ್ನು ಕೆಲ ವರ್ಷಗಳಲ್ಲಿ ಹಂತ ಹಂತವಾಗಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ & ಉದ್ಯಮಶೀಲತಾ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಸ್ವ ಉದ್ಯೋಗಕ್ಕೆ ಶಕ್ತಿ ನೀಡುವ ಹಿನ್ನೆಲೆಯಲ್ಲಿ ಶನಿವಾರ ಸಾಗರೋತ್ತರ ಕನ್ನಡಿಗರೊಂದಿಗೆ ʼಕರಕುಶಲ ಕಾಯಕ, ಕನ್ನಡ ಮತ್ತು ನಾವುʼ ಎಂಬ ವಿಷಯದ ಕುರಿತು ಸಂವಾದ ನಡೆಸಿದ ಅವರು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆಗಳ ಮೂಲಕ ಇಷ್ಟು ಪ್ರಮಾಣದ ಉದ್ಯೋಗಾವಕಾಶಗಳನ್ನು ನಗರ, ಗ್ರಾಮೀಣ ಪ್ರದೇಶದಲ್ಲಿ ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ನಿಟ್ಟಿನಲ್ಲಿ ಯುವಜನರಿಗೆ ಕೌಶಲ್ಯ ತರಬೇತಿ ಕೊಡುವುದರ ಜತೆಗೆ, ಈಗಾಗಲೇ ಈ ವಲಯದಲ್ಲಿ ತೊಡಗಿಸಿಕೊಂಡಿರುವವರ ಕೌಶಲತೆಯನ್ನು ಉತ್ತಮಪಡಿಸುವ ಕೆಲಸವನ್ನೂ ಸರಕಾರ ಕೈಗೆತ್ತಿಕೊಂಡಿದೆ. ಅಲ್ಲದೆ, ಕರಕುಶಲ ವಲಯವೂ ಸೇರಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ದಾರಿಯಲ್ಲಿ ಸಾಗುತ್ತಿರುವವರಿಗೆ ತಾಂತ್ರಿಕವಾಗಿ ಬಲ ತುಂಬುದು ಹಾಗೂ ಆರ್ಥಿಕ, ಮಾರುಕಟ್ಟೆ ವಿಸ್ತಾರಕ್ಕೆ ಸಾಥ್ ಕೊಡುವುದು ಮಾಡಲಾಗುತ್ತಿದೆ. ಕ್ರಮೇಣವಾಗಿ ಅವರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುವಂತೆ ಕ್ರಮ ವಹಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಮಾರುಕಟ್ಟೆ ಮುಖ್ಯವಾಹಿನಿಗೆ:
ರಾಜ್ಯದ ಉದ್ದಗಲಕ್ಕೂ ಕಾರ್ಯ ನಿರತವಾಗಿರುವ ಪ್ರತಿ ಸಣ್ಣ ವ್ಯಾಪಾರಿಯನ್ನೂ ಇ-ಕಾಮರ್ಸ್ ಮೂಲಕ ಮಾರುಕಟ್ಟೆಯ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರಕಾರ ಮಾಡುತ್ತಿದೆ. ಪ್ಲಿಪ್ಕಾರ್ಟ್, ಅಮೆಜಾನ್ನಂಥ ಇ-ಕಾಮರ್ಸ್ ಪೋರ್ಟಲ್ಗಳ ಮೂಲಕ ಅವರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ರೀತಿಯಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಈಗಾಗಲೇ ಇಂಥ ಅನೇಕ ದೈತ್ಯ ಕಂಪನಿಗಳ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ ಎಂದು ಅವರು ಹೇಳಿದರು.
ಕರಕುಶಲ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಯಾರಾಗುವ ಅಥವಾ ಬೆಳೆಯುವ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವುದಕ್ಕೆ ಪೂರಕವಾಗುವಂತೆ ಕೇಂದ್ರ ಸರಕಾರವು ʼಒಂದು ಜಿಲ್ಲೆ-ಒಂದು ಉತ್ಪನ್ನʼ ಎಂಬ ಯೋಜನೆಯನ್ನು ಪರಿಚಯಿಸಿದೆ. ಆ ಯೋಜನೆಯ ಮೂಲಕ ನಮ್ಮ ರಾಜ್ಯದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಲಾಗುತ್ತಿದೆ. ಇದರ ವ್ಯಾಪ್ತಿಗೆ ಚನ್ನಪಟ್ಟಣದ ಗೊಂಬೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ತಯಾರಾಗುತ್ತಿರುವ ಉತ್ಪನ್ನಗಳು ಸೇರಲಿವೆ. ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲು ಈ ಯೋಜನೆ ಸಹಕಾರಿಯಾಗುತ್ತದೆ ಎಂದು ಡಿಸಿಎಂ ನುಡಿದರು.
ಮುಖ್ಯಮಂತ್ರಿ ಜತೆ ಚರ್ಚೆ:
ಅನಿವಾಸಿ ಕರಕುಶಲ ವೇದಿಕೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಚರ್ಚೆ ನಡೆಸಲಾಗುವುದು. ಆದಷ್ಟು ಬೇಗ ಈ ನೇಮಕಾತಿಯನ್ನು ಮಾಡಲಾಗುವುದು. ಈ ಕ್ಷೇತ್ರಕ್ಕೆ ಅಗತ್ಯವಾದ ಎಲ್ಲ ಸಹಕಾರವನ್ನೂ ಕೊಡಲು ಸರಕಾರ ಸಿದ್ಧವಿದೆ ಎಂದು ಡಾ.ಅಶ್ವತ್ಥನಾರಾಯಣ ಭರವಸೆ ನೀಡಿದರು.
ವಿದೇಶಗಳಿಂದ ರಾಜ್ಯಕ್ಕೆ ವಾಪಸ್ಸಾಗಿ ಇಲ್ಲಿಯೇ ಕೌಶಲ್ಯ ಕ್ಷೇತ್ರದ ಉದ್ಯಮದಲ್ಲಿ ತೊಡಗಿಸಿಕೊಳ್ಳುವವರಿಗೆ ಎಲ್ಲ ಸಹಕಾರ ನೀಡಲಾಗುತ್ತಿದೆ. ಅದಕ್ಕೆ ಪ್ರತ್ಯೇಕವಾದ ಪೋರ್ಟಲ್ ಇದ್ದು, ಕಳೆದ ವರ್ಷ 10,000 ಜನ ನೋಂದಣಿ ಮಾಡಿಕೊಂಡಿದ್ದಾರೆ. ಇವರೆಲ್ಲರಿಗೂ ಸರಕಾರ ವಿವಿಧ ರೀತಿಯಲ್ಲಿ ನೆರವು ಕೊಡುತ್ತಿದೆಯಲ್ಲದೆ, ವಿವಿಧ ಕಂಪನಿಗಳ ಜತೆ ಸಂಪರ್ಕ ವ್ಯವಸ್ಥೆ ಮಾಡಿದೆ. ಮುಂದೆ ಕೂಡ ಯಾರಾದರೂ ಬಂದರೆ ನಮ್ಮ ನೆರವು ಇದ್ದೇ ಇರುತ್ತದೆ ಎಂದು ಅವರು ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕೆ ಕ್ರಮ:
ರಾಜ್ಯದ ಕೋವಿಡ್ ಪರಿಸ್ಥಿತಿಯ ಬಗ್ಗೆ ಕಳವಳ ಬೇಡ. ಈಗಾಗಲೇ ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ 55,000 ಬೆಡ್ಗಳಿವೆ. 30,000 ಆಕ್ಸಿಜನ್ ಬೆಡ್ಗಳಿವೆ. ರಾಜ್ಯದಲ್ಲಿ ಶೇ.92ಕ್ಕೂ ಹೆಚ್ಚು ಸೋಂಕಿತರು ಮನೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ. ಉಳಿದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲ ದಿನಗಳಲ್ಲೇ 10,000 ಆಕ್ಸಿಜನ್ ಬೆಡ್ಗಳನ್ನು ಹೊಸದಾಗಿ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.
ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಬೇಲೂರು ರಾಘವೇಂದ್ರ ಶೆಟ್ಟಿ, ಅನಿವಾಸಿ ಕನ್ನಡಿಗರಾದ ಚಂದ್ರಶೇಖರ ಲಿಂಗದಳ್ಳಿ (ಅಮೆರಿಕ), ಗೋಪಾಲ್ ಕುಲಕರ್ಣಿ (ಇಂಗ್ಲೆಂಡ್), ಹೇಮಗೌಡ ಮಧು (ಇಟಲಿ), ರವಿ ಮಹಾದೇವ (ಸೌದಿ ಅರೆಬಿಯಾ), ಬಸವ ಪಾಟೀಲ್ (ಇಂಗ್ಲೆಂಡ್) ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.