World No Tobacco Day: ತಂಬಾಕು ವ್ಯಸನಿಗಳಿಗೆ ಬಹುಕಾಲ ಕಾಡಲಿರುವ ಚಿತ್ರ ರಚಿಸಿದ ಸುದರ್ಶನ್ ಪಟ್ನಾಯಕ್!

By Santosh NaikFirst Published May 31, 2022, 7:12 PM IST
Highlights

ಒಡಿಶಾದ ಕಡಲತೀರದಲ್ಲಿ ಸುಂದರ್ ಪಟ್ನಾಯಕ್ ಅವರು ನಿರ್ಮಿಸಿದ ಮರಳುಶಿಲ್ಪ ತಂಬಾಕು ವ್ಯಸನಿಗಳಿಗೆ ಬಹುಕಾಲ ಕಾಡುವುದಂತೂ ನಿಜ. ಸಿಗರೇಟ್ ತುಂಡುಗಳ ಚಿತೆಯ ಮೇಲೆ ದೊಡ್ಡ ಅಸ್ಥಿಪಂಜರವಿರುವ ರೀತಿಯಲ್ಲಿ ಸುದರ್ಶನ್ ಪಟ್ನಾಯಕ್ ಮರಳು ಶಿಲ್ಪ ರಚನೆ ಮಾಡಿದ್ದಾರೆ.

ಪುರಿ (ಮೇ. 31): ತಂಬಾಕು ಉತ್ಪನ್ನಗಳ ಸೇವನೆಯ ಹಾನಿಕಾರಕ ಮತ್ತು ಮಾರಕ ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು (World No-Tobacco Day) ಆಚರಿಸಲಾಗುತ್ತದೆ. ಪದ್ಮಶ್ರೀ ಪ್ರಶಸ್ತಿ(Padmashri Award)  ಪುರಸ್ಕೃತರಾಗಿರುವ ಭಾರತದ ಅತ್ಯಂತ ಪ್ರಸಿದ್ಧ ಮರಳು ಕಲಾವಿದ ತಂಬಾಕಿನ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರನ್ನು ಎಚ್ಚರಿಸಲು ಅತ್ಯಂತ ಸಕೀರ್ಣವಾದ, ನಮ್ಮನ್ನು ಚಿಂತನೆಗೆ ತಳ್ಳುವಂಥ ಮರಳು ಶಿಲ್ಪವನ್ನು ರಚನೆ ಮಾಡಿದ್ದಾರೆ.

ಒಡಿಶಾದ ಕಡಲತೀರದಲ್ಲಿ (Odisha Beach) ಸುದರ್ಶನ್ ಪಟ್ನಾಯಕ್ (Sudarshan Pattnaik) ಅವರು ದೊಡ್ಡ ಅಸ್ಥಿಪಂಜರವನ್ನು ರಚಿಸಿದ್ದಾರೆ, ಅದು ಅನೇಕ ದೊಡ್ಡ ಸಿಗರೇಟ್ ತುಂಡುಗಳ ಚಿತೆಯ ಮೇಲೆ ಇರುವ ರೀತಿ ಚಿತ್ರಿಸಲಾಗಿದೆ. ಅವರು ಈ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, “#WorldNoTobaccoDay ಸಂದರ್ಭದಲ್ಲಿ. ಭಾರತದ ಒಡಿಶಾದ ಪುರಿ ಬೀಚ್‌ನಲ್ಲಿ ನನ್ನ ಸ್ಯಾಂಡ್‌ಆರ್ಟ್ #ತಂಬಾಕುಬೇಡ ಎಂದು ಹೇಳಿ." ಎಂದು ಬರೆದುಕೊಂಡಿದ್ದಾರೆ.

ಅಂದಾಜು 50 ಸಾವಿರಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ಐದೂವರೆ ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗುವುದರೊಂದಿಗೆ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಗಮನವನ್ನು ಪಡೆದುಕೊಂಡಿದೆ. ಇದರ ಬೆನ್ನಲ್ಲಿಯೇ ಸುದರ್ಶನ್ ಪಟ್ನಾಯಕ್ ಸಂಪೂರ್ಣ ಶಿಲ್ಪದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅಲ್ಲಿ ವಿನ್ಯಾಸವು ಎಷ್ಟು ದೊಡ್ಡದಾಗಿದೆ ಮತ್ತು ಸಂಕೀರ್ಣವಾಗಿದೆ ಎಂಬುದನ್ನು ನೀವು ಅದರಲ್ಲಿ ನೋಡಬಹುದಾಗಿದೆ.

!
Tobacco is killing us & our 🌎.
My awareness SandArt at Puri beach in India. . pic.twitter.com/2Y4ab6K4Ec

— Sudarsan Pattnaik (@sudarsansand)


ವಿಶ್ವ ತಂಬಾಕು ರಹಿತ ದಿನದ 2022 ರ ಥೀಮ್ "ಪರಿಸರವನ್ನು ರಕ್ಷಿಸಿ". ಪರಿಸರದ ಮೇಲೆ ತಂಬಾಕಿನ ಹಾನಿಕಾರಕ ಪರಿಣಾಮಗಳ ಕಡೆಗೆ ಜನರಿಂದ ಹೆಚ್ಚಿನ ಗಮನವನ್ನು ಸೆಳೆಯುವುದು ಮುಖ್ಯ ಉದ್ದೇಶವಾಗಿದೆ.

ಕೀಟನಾಶಕಗಳು, ರಸಗೊಬ್ಬರಗಳು ಮತ್ತು ಬಹಳಷ್ಟು ನೀರು ತಂಬಾಕು ಕೃಷಿ ಪ್ರಕ್ರಿಯೆಗೆ ಹೋಗುತ್ತದೆ. ಇದಲ್ಲದೆ, ಅದರ ಹೊಗೆಯು ವಿವಿಧ ಅಪಾಯಕಾರಿ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತದೆ, ಇದು ಜಾಗತಿಕ ತಾಪಮಾನ ಏರಿಕೆಗೆ ಕೊಡುಗೆ ನೀಡುತ್ತದೆ. ತಂಬಾಕು ಕೃಷಿಯು ಅರಣ್ಯನಾಶಕ್ಕೆ ಕಾರಣವಾಗಿದೆ, ಇದು ಆರೋಗ್ಯಕರ ಲಕ್ಷಣವಲ್ಲ.

ತಂಬಾಕು ಸೇವನೆಯು ಜನರ ಆರೋಗ್ಯಕ್ಕೆ ಮಾತ್ರವಲ್ಲದೆ ಪರಿಸರಕ್ಕೂ ವಿವಿಧ ರೀತಿಯಲ್ಲಿ ಹಾನಿಕಾರಕವಾಗಿದೆ. ಯಾವುದೇ ರೂಪದಲ್ಲಿ ತಂಬಾಕಿನ ಬಳಕೆಯನ್ನು ತಡೆಗಟ್ಟುವುದು ಪರಿಸರವನ್ನು ರಕ್ಷಿಸುವುದರೊಂದಿಗೆ ಅದರ ಹಾನಿಕಾರಕ ಆರೋಗ್ಯ ಪರಿಣಾಮಗಳನ್ನು ತಪ್ಪಿಸಲು ನಮಗೆ ಸಹಾಯ ಮಾಡುತ್ತದೆ.

ಪುರಿ ಸಮುದ್ರ ತಟದಲ್ಲಿ ವಿರಾಜಮಾನ ವಿಶ್ವದ ಮೊದಲ 'ಚಿಪ್ಪಿನ ಗಣೇಶ'!

ಮಾದಕ ವಸ್ತುಗಳ ದುರುಪಯೋಗದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ತಂಬಾಕು ವ್ಯಸನವನ್ನು ಎದುರಿಸಲು ಸರ್ಕಾರವು ಹಲವಾರು ಪ್ರಯತ್ನಗಳನ್ನು ಪ್ರಾರಂಭಿಸಿದೆ ಮತ್ತು ಅಭಿವೃದ್ಧಿಪಡಿಸುತ್ತಿದೆ. ಈ ಬಾರಿ ಕಲಾವಿದರೂ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಈ ಕಲಾಕೃತಿಯನ್ನು ವೀಕ್ಷಿಸಲು ಅನೇಕ ಜನರು ಪುರಿಯ ಕಡಲತೀರಕ್ಕೆ ಬಂದಿದ್ದಾರೆ.

ಭರವಸೆಯ ಆಶಾಕಿರಣ, ಲಸಿಕೆ ಅಭಿಯಾನ ಆರಂಭದ ಬೆನ್ನಲ್ಲೇ ಮರಳು ಶಿಲ್ಪಿಯ ಸಂದೇಶ!

ವಿಶ್ವ ಆರೋಗ್ಯ ಸಂಸ್ಥೆಯ ( World Health Organization) ಪ್ರಕಾರ, ತಂಬಾಕು ಸೇವನೆಯು ಪ್ರತಿ ವರ್ಷ 6 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತದೆ. ತಂಬಾಕು ಸೇವನೆಯ ಪರಿಣಾಮವಾಗಿ ಭಾರತದಲ್ಲಿ ಪ್ರತಿ ವರ್ಷ 13.5 ಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತಂಬಾಕು ಹೊಗೆ ಪ್ರತಿ ವರ್ಷ ಸುಮಾರು 41,000 ಯುವಕರು ಮತ್ತು 400 ಮಕ್ಕಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಕೊಲ್ಲುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪರಿಸರದ ಮೇಲೆ ತಂಬಾಕು ಉದ್ಯಮದ ಹಾನಿಕಾರಕ ಪರಿಣಾಮಗಳು ವ್ಯಾಪಕವಾಗಿವೆ ಮತ್ತು ಹೆಚ್ಚುತ್ತಿವೆ. ಈ ನಕಾರಾತ್ಮಕ ಪರಿಣಾಮವು ಈಗಾಗಲೇ ಸೂಕ್ಷ್ಮ ಪರಿಸರ ವಿಜ್ಞಾನದ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತಿದೆ.

click me!