ಪಶ್ಚಿಮ ಬಂಗಾಳದಲ್ಲಿ ಹಾಡ ಹಗಲೇ ನಡೆದ ಬಿಜೆಪಿ ಮುಖಂಡನ ಹತ್ಯೆ ಬಳಿಕ ಪ್ರತಿಭಟನೆ ಹೆಚ್ಚಾಗುತ್ತಿದೆ. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಪ.ಬಂಗಾಳ ಬಿಜೆಪಿ ಅಧ್ಯಕ್ಷ, ಮಮತಾ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ತ್ರಿಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ.
ಕೋಲ್ಕತಾ(ಅ.06): ಈ ಹಿಂದೆ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿದ್ದಂತೆ ಪಶ್ಚಿಮ ಬಂಗಾಳ ಕೂಡ ಗೂಂಡಾಗಳ ಆಳ್ವಿಕೆಯ ರಾಜ್ಯವಾಗುತ್ತಿದೆ ಎಂದು ಪ.ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಶ್ಚಿಮ ಬಂಗಾಳದ ಮುಗ್ದ ಜನರ ಮೇಲೆ ಸವಾರಿ ಮಾಡಲಾಗುತ್ತಿದೆ ಎಂದು ಘೋಷ್ ಹೇಳಿದ್ದಾರೆ.
ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ, ಕಾರಣ ನಿಗೂಢ!..
24 ಪರಗಣ ಜಿಲ್ಲೆಯ ತಿತಾಗರ್ಗ್ ಪೊಲೀಸ್ ಠಾಣೆ ಎದುರೇ ಬಿಜಿಪಿ ಮುಖಂಡ ಮನೀಶ್ ಶುಕ್ಲಾ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಸರ್ಕಾರದ ವಿರುದ್ಧ, ಆಡಳಿತದ ವಿರುದ್ಧ ದ್ವನಿ ಎತ್ತುವ ಬಿಜೆಪಿ ನಾಯಕರನ್ನು ಮಮತಾ ಬ್ಯಾನರ್ಜಿ ಸರ್ಕಾರ ಟಾರ್ಗೆಟ್ ಮಾಡಲಾಗುತ್ತಿದೆ. ಬಳಿಕ ಈ ರೀತಿ ಹತ್ಯೆ ಮಾಡಲಾಗುತ್ತಿದೆ ಎಂದು ಘೋಷ್ ಹೇಳಿದ್ದಾರೆ.
ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದೆಗೆಡುತ್ತಿದೆ. ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ. ಅವರಿಗೆ ಸ್ವಾತಂತ್ರ್ಯವಿಲ್ಲ. ಮಮತಾ ಬ್ಯಾನರ್ಜಿ ಸರ್ಕಾರದ ದುರಾಡಳಿತ, ಗೂಂಡಾ ವರ್ತನೆಗೆ ಪೊಲೀಸರು ಕೈಕಟ್ಟಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಪಶ್ಚಿಮ ಬಂಗಾಳದಲ್ಲಿ ಉಸಿರುಗಟ್ಟುವ ಹಾಗೂ ಭಯದ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಲ್ಲಿ ಬಿಜೆಪಿಯ 120 ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಇದು ಮಮತಾ ಬ್ಯಾನರ್ಜಿ ಸರ್ಕಾರ ಆಡಳಿತ ವೈಖರಿ ಎಂದು ಘೋಷ್ ಗುಡುಗಿದ್ದಾರೆ. ಇತ್ತ ಬಿಜೆಪಿ ಆಳ್ವಿಕೆಯ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಗೂಂಡಾ ಅಳ್ವಿಕೆ ಇದೆ ಎಂದು ಬಿಜೆಪಿ ಒಪ್ಪಿಕೊಂಡಿದೆ ಎಂದು ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ.