ಈ ಹಿಂದಿನ ಕಾನೂನಿನಲ್ಲಿ ಹಿಟ್ ಆ್ಯಂಡ್ ರನ್‌ಗೆ 2 ವರ್ಷ ಜೈಲು ಶಿಕ್ಷೆ ಇತ್ತು. ಅದನ್ನು ಈಗ 10 ವರ್ಷಕ್ಕೆ ಹೆಚ್ಚಿಸಲಾಗಿದೆ, ಇದನ್ನು ಖಂಡಿಸಿ 8 ರಾಜ್ಯಗಳಲ್ಲಿ 2 ದಿನದಿಂದ ಲಾರಿ ಚಾಲಕರು ಬೀದಿಗಿಳಿದಿದ್ದರು.
ನವದೆಹಲಿ (ಜನವರಿ 3, 2024): ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ‘ಭಾರತೀಯ ನ್ಯಾಯ ಸಂಹಿತೆ’ಯಲ್ಲಿ ಹಿಟ್ ಅಂಡ್ ರನ್ ಅಪಘಾತ ಪ್ರಕರಣಗಳಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ ದಂಡ ವಿಧಿಸುವ ಅಂಶದ ವಿರುದ್ಧ ಟ್ರಕ್ ಚಾಲಕರು ಸಿಡಿದೆದ್ದಿದ್ದಾರೆ. ಈ ಸಂಬಂಧ ಕಳೆದ 2 ದಿನಗಳಿಂದ ಅವರು ನಡೆಸಿದ ಮುಷ್ಕರ, ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಪೆಟ್ರೋಲ್ ಹಾಗೂ ಅಡುಗೆ ಅನಿಲದ ಹಾಹಾಕಾರಕ್ಕೆ ಕಾರಣವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರ ಸಂಧಾನ ಸಭೆ ನಡೆಸಿದೆ. ಸಂಧಾನ ಯಶಸ್ವಿಯಾಗಿದ್ದು, ಲಾರಿ ಮಾಲೀಕರು ಮುಷ್ಕರ ಹಿಂಪಡೆದಿದ್ದಾರೆ.
ಈ ಹಿಂದಿನ ಕಾನೂನಿನಲ್ಲಿ ಹಿಟ್ ಆ್ಯಂಡ್ ರನ್‌ಗೆ 2 ವರ್ಷ ಜೈಲು ಶಿಕ್ಷೆ ಇತ್ತು. ಅದನ್ನು ಈಗ 10 ವರ್ಷಕ್ಕೆ ಹೆಚ್ಚಿಸಲಾಗಿದೆ, ಇದನ್ನು ಖಂಡಿಸಿ 8 ರಾಜ್ಯಗಳಲ್ಲಿ 2 ದಿನದಿಂದ ಲಾರಿ ಚಾಲಕರು ಬೀದಿಗಿಳಿದಿದ್ದರು.
ಹಿಟ್ ಅಂಡ್ ರನ್ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ಕೈಬಿಟ್ಟ ಟ್ರಕ್ ಚಾಲಕರ ಸಂಘ!
ಹೀಗಾಗಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ಮಂಗಳವಾರ ಅಖಿಲ ಭಾರತ ಮೋಟರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಜತೆ ಸಭೆ ನಡೆಸಿದರು. ಈ ವೇಳೆ ಅವರು, ‘ಹೊಸ ನಿಯಮ ಸಂಸತ್‌ನಲ್ಲಿ ಅಂಗೀಕಾರವಾದರೂ, ಇನ್ನೂ ಜಾರಿಗೆ ಬಂದಿಲ್ಲ. ಚಾಲಕರ ತಕರಾರು ಇರುವುದು 10 ವರ್ಷ ಜೈಲಿಗೆ ಕಾರಣವಾಗುವ ನ್ಯಾಯ ಸಂಹಿತೆಯ ‘106/2’ ನಿಯಮದ ಬಗ್ಗೆ. ಹೀಗಾಗಿ ಇದನ್ನು ಜಾರಿಗೊಳಿಸುವ ಮೊದಲು, ನಿಮ್ಮ ಜತೆ (ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ನಂತರವೇ ನಿರ್ಧಾರ ತೆಗೆದುಕೊಳ್ಳುತ್ತೇವೆ) ಎಂದು ಭರವಸೆ ನೀಡಿದರು.
ಇದಕ್ಕೆ ಸಮ್ಮತಿಸಿದ, ಮೋಟರ್ ಟ್ರಾನ್ಸ್‌ಪೋರ್ಟ್ ಪದಾಧಿಕಾರಿಗಳು ಸಭೆಯಿಂದ ಹೊರಬಂದು, ‘ಸರ್ಕಾರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಹೀಗಾಗಿ ಎಲ್ಲ ಚಾಲಕರೂ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಮರಳಬೇಕು ಎಂದು ಕೇಳಿಕೊಳ್ಳುತ್ತೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಟ್ರಕ್ ಮಾಲೀಕರ ಮುಷ್ಕರ: ತೈಲ ಸಂಗ್ರಹ ಖಾಲಿಯಾಗುವ ಭೀತಿ: ನಗರದ ಪೆಟ್ರೋಲ್ ಬಂಕ್‌ಗಳಲ್ಲಿ ಫುಲ್ ರಶ್
8 ರಾಜ್ಯಗಳಲ್ಲಿ ಹಾಹಾಕಾರ:
ಇದಕ್ಕೂ ಮುನ್ನ 8 ರಾಜ್ಯಗಳಲ್ಲಿ ಆರಂಭವಾಗಿರುವ ಲಕ್ಷಾಂತರ ಲಾರಿಗಳ 3 ದಿನಗಳ ಮುಷ್ಕರ ಸೋಮವಾರ 2ನೇ ದಿನ ಪೂರೈಸಿತ್ತು. ಹೀಗಾಗಿ ಉತ್ತರ, ಪಶ್ಚಿಮ ಭಾರತದ 8 ರಾಜ್ಯಗಳಲ್ಲಿ ಪೆಟ್ರೋಲ್ ಪೂರೈಕೆ ಬಂದ್ ಆಗಿದ್ದು 2000 ಬಂಕ್ ಖಾಲಿ ಆಗಿದ್ದವು ಹಾಗೂ ಎಲ್‌ಪಿಜಿ ಸಿಲಿಂಡರ್ ಪೂರೈಕೆಯೂ ನಿಂತು ಹಾಹಾಕಾರಕ್ಕೆ ಕಾರಣವಾಗಿತ್ತು.
ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಛತ್ತೀಸ್‌ಗಢ, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಾಲಕರು ಪ್ರತಿಭಟನೆ ನಡೆಸಿದ್ದರು. ಲಾರಿ ಸಂಚಾರ ಸ್ಥಗಿತಗೊಳಿಸಿ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಇದರಿಂದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಹಣ್ಣು, ತರಕಾರಿ ಸೇರಿದಂತೆ ಕೆಲ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿತ್ತು.
ಹೀಗಾಗಿಯೇ ಹಲವು ರಾಜ್ಯಗಳಲ್ಲಿ ಜನತೆಯು, ಮುಷ್ಕರ ತೀವ್ರವಾದರೆ ಪೆಟ್ರೋಲ್ ಸಿಗದೇ ಹೋಗಬಹುದು ಎಂದು ಆತಂಕಕ್ಕೆ ಒಳಗಾಗಿ ತೈಲ ಖರೀದಿಗೆ ಮುಗಿ ಬಿದ್ದಿದ್ದರು. ಹೀಗಾಗಿ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬಂಕ್‌ಗಳ ಬಳಿ ವಾಹನಗಳ ಉದ್ದ ಸರದಿ ಕಂಡುಬಂದಿತ್ತು.
ಈ ನಡುವೆ, ಹರ್ಯಾಣದಲ್ಲಿ ಪೆಟ್ರೋಲ್-ಡೀಸೆಲ್ ತತ್ವಾರ ತಪ್ಪಿಸಲು ‘ತೈಲ ಪಡಿತರ’ ವ್ಯವಸ್ಥೆ ಮಾಡಲಾಗಿದೆ. ಈ ಪ್ರಕಾರ ಒಂದು ಬೈಕ್‌ಗೆ ಗರಿಷ್ಠ 200 ರೂ. ಮೌಲ್ಯದ ಅಥವಾ 2 ಲೀ. ಪೆಟ್ರೋಲ್ ಹಾಗೂ ಕಾರಿಗೆ ಗರಿಷ್ಠ 500 ರೂ. ಮೌಲ್ಯದ ಅಥವಾ 5 ಲೀ. ಪೆಟ್ರೋಲ್ ಮಿತಿ ಹೇರಲಾಗಿತ್ತು.
ಅನೇಕ ಕಡೆ ಘರ್ಷಣೆ:
ಲಾರಿ ಚಾಲಕರು ಸಂಚಾರ ನಿಲ್ಲಿಸಿ ಪ್ರತಿಭಟನೆ ನಡೆಸುವ ವೇಳೆ ಮಹಾರಾಷ್ಟ್ರದ ಮುಂಬೈ ಮತ್ತು ಥಾಣೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಮತ್ತು ಹಲ್ಲೆಯ ಘಟನೆಗಳು ನಡೆದಿದ್ದವು. ರಾಜಸ್ಥಾನದ ಕೇಕ್ರಿಯಲ್ಲಿ ಹಿಂಸಾಚಾರ ಸಂಭವಿಸಿ 3 ಪೊಲೀಸರಿಗೆ ಗಾಯಗಳಾಗಿದ್ದವು.
ಉಳಿದಂತೆ ಮಹಾರಾಷ್ಟ್ರದ ಇತರ ಭಾಗ, ಪಂಜಾಬ್, ಹರ್ಯಾಣ, ಬಿಹಾರ, ಮಧ್ಯಪ್ರದೇಶ, ಛತ್ತಿಸ್‌ಗಢದಲ್ಲಿ ಚಾಲಕರು ರಸ್ತೆಗಿಳಿದು ಟೈರ್‌ಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ಪ್ರತಿಭಟನೆ ನಡೆಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಹೀಗಾಗಿ ಹಲವು ಕಡೆ ನಗರದೊಳಗೆ, ಹೆದ್ದಾರಿಗಳಲ್ಲಿ ವಾಹನ ಸಂಚಾರ ವ್ಯತ್ಯಯವಾಗಿದ್ದವು.
ಅನೇಕ ರಾಜ್ಯಗಳಲ್ಲಿ ಲಾರಿ ಚಾಲಕರ ಮುಷ್ಕರಕ್ಕೆ ಖಾಸಗಿ ಬಸ್, ಆಟೋ ಹಾಗೂ ಕ್ಯಾಬ್ ಚಾಲಕರೂ ಬೆಂಬಲ ನೀಡಿದ್ದರಿಂದ ಈ ಸೇವೆಗಳೂ ಸ್ಥಗಿತವಾಗಿ ಜನರು ಪರದಾಡಿದ್ದರು.
ಪ್ರತಿಭಟನೆ ಏಕೆ?
ಅಪಘಾತವೆಸಗಿ ಪರಾರಿಯಾಗುವ (ಹಿಟ್ ಅಂಡ್ ರನ್) ಆರೋಪ ಸಾಬೀತಾದರೆ ಅಪರಾಧಿಗಳಿಗೆ ಗರಿಷ್ಠ 2 ವರ್ಷ ಜೈಲು 1000 ರು. ದಂಡವನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ ವಿಧಿಸಲಾಗುತ್ತಿದೆ. ಈ ಐಪಿಸಿ ಬದಲಿಗೆ ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆ ತರಲು ಉದ್ದೇಶಿಸಿದೆ. ಅದರಡಿ, ಅಪಘಾತ ಮಾಡಿ ಪೊಲೀಸರಿಗೆ ಶರಣಾಗದೆ ಅಥವಾ ಯಾರಿಗೂ ಮಾಹಿತಿ ನೀಡದೇ ಪರಾರಿಯಾಗುವ ಚಾಲಕನಿಗೆ 10 ವರ್ಷ ಜೈಲು ಮತ್ತು 7 ಲಕ್ಷ ರು. ದಂಡ ವಿಧಿಸುವ ಅಂಶವಿದೆ. ಈ ಬದಲಾವಣೆ ಬೇಡ ಎಂದು ಚಾಲಕರು ಪ್ರತಿಭಟನೆಗೆ ಇಳಿದಿದ್ದರು.
ಹೊಸ ಕಾಯ್ದೆ ಏಕೆ?
ದೇಶದಲ್ಲಿ ಸಂಭವಿಸುವ ಒಟ್ಟು ರಸ್ತೆ ಅಪಘಾತಗಳ ಪೈಕಿ ಶೇ.30ರಷ್ಟು ಹಿಟ್ ಅಂಡ್ ರನ್ ಕೇಸ್‌ಗಳಾಗಿವೆ. ಶಿಕ್ಷೆಯಾಗುವ ಪ್ರಮಾಣ ಕೇವಲ ಶೇ.10 ರಷ್ಟಿದೆ. ಹೀಗಾಗಿ ಕೇಂದ್ರ ಸರ್ಕಾರ ಹಿಟ್ ಅಂಡ್ ರನ್ ಅಪರಾಧಕ್ಕೆ ಹೆಚ್ಚಿನ ಶಿಕ್ಷೆ ವಿಧಿಸಲು ಮುಂದಾಗಿದೆ.
ಸರ್ಕಾರದ ಭರವಸೆ ಏನು?
ಹೊಸ ಕಾಯ್ದೆಗಳು ಸಂಸತ್ತಲ್ಲಿ ಪಾಸಾಗಿದ್ದರೂ ಇನ್ನೂ ಜಾರಿಯಾಗಿಲ್ಲ. ಜಾರಿಗೂ ಮುನ್ನ ಲಾರಿ ಮಾಲೀಕರ ಜತೆ ಸಭೆ ನಡೆಸಿ ಹಿಟ್ ಆ್ಯಂಡ್ ರನ್‌ಗೆ ಇರುವ 10 ವರ್ಷ ಜೈಲು ಶಿಕ್ಷೆಯ ಬಗ್ಗೆ ಇನ್ನೊಮ್ಮೆ ಮರುಪರಿಶೀಲನೆ ನಡೆಸುತ್ತೇವೆ.
ಎಲ್ಲೆಲ್ಲಿ ಸಮಸ್ಯೆ ಆಗಿತ್ತು?
ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಛತ್ತೀಸ್‌ಗಢ, ಹರ್ಯಾಣ, ಹಿಮಾಚಲಪ್ರದೇಶ, ಜಮ್ಮು-ಕಾಶ್ಮೀರ, ರಾಜಸ್ಥಾನ