' ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ಕಾನೂನುಗಳ ಮಿಶ್ರಸಾರ ಕರ್ನಾಟಕದಲ್ಲಿ ಜಾರಿಗೊಳಿಸಲಿ'

By Kannadaprabha News  |  First Published May 12, 2020, 6:04 PM IST

ರಾಷ್ಟ್ರಪತಿಗಳ ಸುಗ್ರೀವಾಜ್ಞೆಯಲ್ಲಿ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಆರೋಗ್ಯ ಸಿಬ್ಬಂದಿ ಮೇಲಿನ ಹಲ್ಲೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಸಂದರ್ಭದಲ್ಲಿ ಯಾವುದೇ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವುದನ್ನು ತಡೆಯುವ ಬಗ್ಗೆ ಉಲ್ಲೇಖಿಸಲಾಗಿದೆ. 


ಕಳೆದ ತಿಂಗಳು ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಹೋಗಿದ್ದ ಕೊರೋನಾ ವಾರಿಯರ್‌ಗಳ ಮೇಲೆ ಹಲ್ಲೆ ನಡೆದಿತ್ತು. ಆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಲವಾದ ಕಾನೂನೊಂದು ಬೇಕು ಎಂಬ ಬೇಡಿಕೆ ಜೋರಾಗಿ ಕೇಳಿಬಂತು. ಅದರಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಜೀವದ ಹಂಗು ತೊರೆದು ಹೋರಾಡುವ ಕೊರೋನಾ ವಾರಿಯರ್‌ಗಳ ರಕ್ಷಣೆಗಾಗಿ ಏ.22ರಂದು ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ ಜಾರಿಗೊಳಿಸಿತು.

ಅದೇ ದಿನ ಕೇಂದ್ರ ಸರ್ಕಾರ ಕೂಡ 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ತಂದು, ಈಗಿನ ಸಂದರ್ಭಕ್ಕೆ ಅನುಕೂಲವಾಗುವಂತೆ ಸುಗ್ರೀವಾಜ್ಞೆ ಹೊರಡಿಸಿತು. ಕರ್ನಾಟಕದ ಸುಗ್ರೀವಾಜ್ಞೆಯು, ರಾಜ್ಯವು ತನ್ನದೇ ಆದ ಕಾನೂನು ಹೊಂದುವ ನಿಟ್ಟಿನಲ್ಲಿ ಹೊರಡಿಸಿದ ಸುಗ್ರೀವಾಜ್ಞೆ. ಅದನ್ನು ‘ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ’ ಎಂದು ಕರೆಯಲಾಗಿದೆ. ಆದರೆ, ಸಮವರ್ತಿ ಪಟ್ಟಿಯಲ್ಲಿ ಬರುವ ವಿಷಯ ಇದಾಗಿರುವುದರಿಂದ (ಸಂವಿಧಾನದ ಏಳನೇ ಪರಿಚ್ಛೇದದ ಅಡಿಯಲ್ಲಿ), ಅಂದಿನಿಂದ ಜಾರಿಯಲ್ಲಿರುವ ಕೇಂದ್ರದ ಕಾನೂನೇ ರಾಜ್ಯದ ಸುಗ್ರೀವಾಜ್ಞೆಯನ್ನು ಬದಿಗೆ ಸರಿಸಿ ಕರ್ನಾಟಕಕ್ಕೂ ಅನ್ವಯವಾಗುತ್ತದೆ.

Tap to resize

Latest Videos

undefined

5 ರಾಜ್ಯಗಳಿಂದಷ್ಟೇ ಲಾಕ್‌ಡೌನ್ ವಿಸ್ತರಣೆಗೆ ಬೆಂಬಲ..!

ಇದೆಲ್ಲ ಸರಿ. ಆದರೆ, ನಿಜವಾದ ಗೇಮ್‌ ಚೇಂಜರ್‌ ಅಂದರೆ ಮೇ 6ರಂದು ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸುಗ್ರೀವಾಜ್ಞೆ. ರಾಷ್ಟ್ರಪತಿಗಳ ಸುಗ್ರೀವಾಜ್ಞೆಯು ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆಯ ವಿರುದ್ಧ ಮಾತ್ರ ಕಠಿಣ ಕ್ರಮ ಕೈಗೊಳ್ಳಲು ಮತ್ತು ಭಾರಿ ದಂಡ ವಿಧಿಸಲು ಅವಕಾಶ ನೀಡುತ್ತದೆ. ಆದರೆ ಉತ್ತರ ಪ್ರದೇಶದ ಸುಗ್ರೀವಾಜ್ಞೆಯು ‘ಸಾರ್ವಜನಿಕ ಆರೋಗ್ಯ’ದ ವ್ಯಾಪ್ತಿಯನ್ನು ಆಧರಿಸಿ, ಯಾವುದೇ ಸಾಂಕ್ರಾಮಿಕ ಅಥವಾ ಇತರೆ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿರುವ ಎಲ್ಲರ ಮೇಲಿನ ಹಲ್ಲೆ ಹಾಗೂ ಆಕ್ರಮಣಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಕೇಂದ್ರದ ಸುಗ್ರೀವಾಜ್ಞೆಯಲ್ಲಿ ಏನಿದೆ?

ರಾಷ್ಟ್ರಪತಿಗಳ ಸುಗ್ರೀವಾಜ್ಞೆಯಲ್ಲಿ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಆರೋಗ್ಯ ಸಿಬ್ಬಂದಿ ಮೇಲಿನ ಹಲ್ಲೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಸಂದರ್ಭದಲ್ಲಿ ಯಾವುದೇ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವುದನ್ನು ತಡೆಯುವ ಬಗ್ಗೆ ಉಲ್ಲೇಖಿಸಲಾಗಿದೆ. ಆರೋಗ್ಯ ಸಿಬ್ಬಂದಿ ಮೇಲಿನ ದೈಹಿಕ ಹಲ್ಲೆ ಮಾತ್ರವಲ್ಲದೆ ಆರೋಗ್ಯ ಸಿಬ್ಬಂದಿಗೆ ಕಿರುಕುಳ ನೀಡುವುದು, ಅಂತಹ ಸಿಬ್ಬಂದಿಯನ್ನು ತಡೆಯುವುದು ಅಥವಾ ಅವರ ಆಸ್ತಿ ಅಥವಾ ದಾಖಲೆಗಳಿಗೆ ಹಾನಿ ಮಾಡಿ ನಷ್ಟವುಂಟುಮಾಡುವುದೂ ಅಪರಾಧ ಎಂದು ಪರಿಗಣಿಸಲಾಗಿದೆ.

ಈ ಎಲ್ಲಾ ಸಂಕೀರ್ಣತೆಗಳ ಹೊರತಾಗಿಯೂ ಕೇಂದ್ರದ ಸುಗ್ರೀವಾಜ್ಞೆಯು ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸುವ ಮೂಲಕ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುತ್ತದೆ. ಕನಿಷ್ಠ 6 ತಿಂಗಳಿಂದ ಗರಿಷ್ಠ 7 ವರ್ಷ ಸಜೆ ಮತ್ತು ಕನಿಷ್ಠ 50,000 ರು.ದಿಂದ ಗರಿಷ್ಠ 5,00,000 ರು.ವರೆಗೆ ದಂಡ ವಿಧಿಸಲು ಅವಕಾಶ ನೀಡುತ್ತದೆ. ಅಲ್ಲದೆ, ಈ ಕಾಯ್ದೆಯಡಿ ಕೇಸು ದಾಖಲಿಸಿದರೆ ಆರೋಪಿಗೆ ಜಾಮೀನು ಕೂಡ ಸುಲಭವಾಗಿ ಸಿಗುವುದಿಲ್ಲ.

ಆರೋಗ್ಯ ಸಿಬ್ಬಂದಿ ಮೇಲೆ ತಾನು ಹಲ್ಲೆ ನಡೆಸಿಲ್ಲ ಎಂದು ಆರೋಪಿ ಸಾಬೀತುಪಡಿಸಲು ವಿಫಲನಾದರೆ ಆತ ಹಲ್ಲೆ ನಡೆಸಿದ್ದಾನೆ ಎಂದೇ ಭಾವಿಸಲಾಗುತ್ತದೆ. ತಪ್ಪಿತಸ್ಥರಿಗೆ ವಿಧಿಸುವ ದಂಡದ ಜೊತೆಗೆ ಅದರ ದುಪ್ಪಟ್ಟು ಹಣವನ್ನು ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಆತನಿಂದ ಕೊಡಿಸಬಹುದು. ದೊಡ್ಡ ಮೊತ್ತದ ದಂಡ, ಕಠಿಣ ಶಿಕ್ಷೆ ಹಾಗೂ ತಾನು ಅಪರಾಧ ಎಸಗಿಲ್ಲ ಎಂದು ಸಾಬೀತುಪಡಿಸುವ ಹೊಣೆಗಾರಿಕೆ ಆರೋಪಿಯ ಮೇಲೇ ಬೀಳುವುದು ಈ ಸುಗ್ರೀವಾಜ್ಞೆಯ ವಿಶೇಷಾಂಶ.

ಕರ್ನಾಟಕದ ಸುಗ್ರೀವಾಜ್ಞೆಯಲ್ಲೇನಿದೆ?

ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದ ಸುಗ್ರೀವಾಜ್ಞೆಯಲ್ಲಿ ಅಪರಾಧವನ್ನು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗಿದೆ. ಮತ್ತು ಅದಕ್ಕೆ ವಿಧಿಸಲಾದ ದಂಡ ಮತ್ತು ಶಿಕ್ಷೆಯ ಪ್ರಮಾಣವೂ ಮೃದುವಾಗಿದೆ. ಇದರಲ್ಲಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 50,000 ರು.ವರೆಗೆ ದಂಡ ವಿಧಿಸಬಹುದಾಗಿದೆ. ಕನಿಷ್ಠ ಸೆರೆವಾಸದ ಅವಧಿ ಮತ್ತು ಕನಿಷ್ಠ ದಂಡವನ್ನು ಇಲ್ಲಿ ಸೂಚಿಸಲಾಗಿಲ್ಲ. ಕರ್ನಾಟಕದ ಸುಗ್ರೀವಾಜ್ಞೆಯು ಕೇಂದ್ರದ ಸುಗ್ರೀವಾಜ್ಞೆಯ ಎರಡು ಅಂಶಗಳನ್ನು ಒಳಗೊಂಡಿದೆ.

ದೀಪ ಹಚ್ಚಿ, ಚಪ್ಪಾಳೆ ಹೊಡೆದ್ರೆ ಜನರ ಸಮಸ್ಯೆ ಬಗೆಹರಿಯುತ್ತಾ? ಮೋದಿಗೆ ಸಿದ್ದು ಗುದ್ದು

ಅವುಗಳೆಂದರೆ, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ನಷ್ಟಅಥವಾ ಹಾನಿಯುಂಟುಮಾಡುವವರಿಗೆ ಕನಿಷ್ಠ ಜೈಲು ಶಿಕ್ಷೆ ವಿಧಿಸುವುದು ಮತ್ತು ಹಾನಿ ಅಥವಾ ನಷ್ಟದ ಎರಡು ಪಟ್ಟು ಪರಿಹಾರವನ್ನು ತಪ್ಪಿತಸ್ಥರಿಂದ ವಸೂಲಿ ಮಾಡುವುದು. ಆದರೆ, ಕೇಂದ್ರದ ಸುಗ್ರೀವಾಜ್ಞೆಯಲ್ಲಿ ವಿವರಿಸಲಾದ ಇತರ ವಿಷಯಗಳಿಗೂ ಕರ್ನಾಟಕದ ಸುಗ್ರೀವಾಜ್ಞೆಗೂ ಹೊಂದಾಣಿಕೆಯಾಗುವುದಿಲ್ಲ. ಅತ್ಯಂತ ಗಮನಾರ್ಹ ಅಂಶವೆಂದರೆ ಕರ್ನಾಟಕದ ಸುಗ್ರೀವಾಜ್ಞೆಯು ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುವ ಅಂಶವನ್ನು ಹೊಂದಿದೆ.

ಉತ್ತರ ಪ್ರದೇಶದ ಸುಗ್ರೀವಾಜ್ಞೆಯಲ್ಲೇನಿದೆ?

ಉತ್ತರ ಪ್ರದೇಶ ಹೊರಡಿಸಿರುವ ಸುಗ್ರೀವಾಜ್ಞೆಯು ರಾಜ್ಯಪಟ್ಟಿಯಲ್ಲಿರುವ ‘ಸಾರ್ವಜನಿಕ ಆರೋಗ್ಯ’ದ ವಿಷಯದ ಮೇಲೆ ರಾಜ್ಯ ಶಾಸಕಾಂಗದ ಅಧಿಕಾರವನ್ನು ಬಳಸಿಕೊಂಡು ಜಾರಿಯಾಗಿದೆ. ಈ ಸುಗ್ರೀವಾಜ್ಞೆಗೂ ಕೇಂದ್ರದ ಸುಗ್ರೀವಾಜ್ಞೆಗೂ ಯಾವುದೇ ಘರ್ಷಣೆ ಏರ್ಪಡುವುದಿಲ್ಲ. ಅಷ್ಟೇ ಅಲ್ಲದೆ, ಸೋಂಕುಪೀಡಿತ ವ್ಯಕ್ತಿಗಳ ಪತ್ತೆ, ಬೇರ್ಪಡಿಸುವಿಕೆ ಹಾಗೂ ಚಿಕಿತ್ಸೆಗೂ ಇದು ಅನುಕೂಲಕರವಾಗಿದೆ. ಹಾಗೆಯೇ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಅಡ್ಡಿಪಡಿಸುವವರಿಗೆ ದಂಡ ಹಾಗೂ ಶಿಕ್ಷೆ ಎರಡನ್ನೂ ವಿಧಿಸುತ್ತದೆ.

ವದಂತಿ ಹಬ್ಬಿಸುವ, ಸುಳ್ಳುಸುದ್ದಿ ಹರಡುವ, ಭೀತಿ ಉಂಟುಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯಕ್ಕೆ ನೀಡುತ್ತದೆ. ಅಲ್ಲದೆ, ರೋಗ ಇರುವುದನ್ನು ಮರೆಮಾಚುವುದು, ಸೋಂಕು ಹೊಂದಿರುವಾಗ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು, ಐಸೋಲೇಶನ್‌ ಆದೇಶದ ಉಲ್ಲಂಘನೆ, ಚಿಕಿತ್ಸೆಯಲ್ಲಿರುವಾಗ ಆಸ್ಪತ್ರೆಯಿಂದ ಓಡಿ ಹೋಗುವುದು, ಆಸ್ಪತ್ರೆಗಳಲ್ಲಿ ಅಶ್ಲೀಲ ವರ್ತನೆಯನ್ನೂ ಅಪರಾಧ ಎಂದು ಇದರಲ್ಲಿ ಪರಿಗಣಿಸಲಾಗಿದೆ. ಈ ಯಾವುದೇ ನಿಯಮ ಉಲ್ಲಂಘನೆ ಮತ್ತು ದುರುದ್ದೇಶಪೂರಿತ ಪ್ರಚಾರಕ್ಕೆ ಕನಿಷ್ಠ ಒಂದು ವರ್ಷದಿಂದ ಗರಿಷ್ಠ 3 ವರ್ಷ ಜೈಲುಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ನೀಡಲಾಗಿದೆ.

ಉತ್ತರ ಪ್ರದೇಶದ ಸುಗ್ರೀವಾಜ್ಞೆಯಲ್ಲಿ ಅಧಿಕಾರಿಗಳ ಮೇಲಿನ ಹಲ್ಲೆಗೆ ಜೈಲು ಶಿಕ್ಷೆ ಮತ್ತು ದಂಡ (ಕನಿಷ್ಠ 6 ತಿಂಗಳಿಂದ ಗರಿಷ್ಠ 7 ವರ್ಷದವರೆಗೆ ಜೈಲು ಮತ್ತು ಕನಿಷ್ಠ 1 ಲಕ್ಷದಿಂದ ಗರಿಷ್ಠ 5 ಲಕ್ಷ ರು. ದಂಡ) ಎರಡನ್ನೂ ವಿಧಿಸಲಾಗಿದೆ. ಆರೋಗ್ಯ ಸಿಬ್ಬಂದಿ ಮಾತ್ರವಲ್ಲದೆ ಪೊಲೀಸ್‌ ಹಾಗೂ ಇತರ ಎಲ್ಲಾ ಕಾರ್ಯಕರ್ತರ ಮೇಲಿನ ಹಲ್ಲೆಗೂ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ.

ಸಾಂಕ್ರಾಮಿಕ ರೋಗ ಹರಡುವ ಉದ್ದೇಶದಿಂದ ಉಗುಳುವುದು, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮುಂತಾದ ಕೃತ್ಯಗಳಿಗೆ ಕನಿಷ್ಠ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಮತ್ತು ದಂಡ ವಿಧಿಸಲಾಗುತ್ತದೆ. ಉದ್ದೇಶಪೂರ್ವಕವಾಗಿ ತೊಂದರೆ ನೀಡುವುದಕ್ಕೂ ಇದೇ ಶಿಕ್ಷೆ ವಿಧಿಸಲಾಗಿದೆ. ಸಾಮೂಹಿಕ ಸೋಂಕು ಹರಡುವುದಕ್ಕೆ (5 ಅಥವಾ ಅದಕ್ಕಿಂತ ಹೆಚ್ಚಿನ ಜನರಿಗೆ ಸೋಂಕು ಹರಡಿಸುವುದು) ಕನಿಷ್ಠ 7 ವರ್ಷದಿಂದ 14 ವರ್ಷ ಕಠಿಣ ಸಜೆ ವಿಧಿಸಲಾಗಿದೆ.

ಉದ್ದೇಶಪೂರ್ವಕವಾಗಿ ಸೋಂಕು ಹರಡಿ ಸಾವಿಗೆ ಕಾರಣರಾದರೆ ಗರಿಷ್ಠ ಜೀವಾವಧಿ ಶಿಕ್ಷೆ ಅಥವಾ ಕನಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಮತ್ತು ಈ ಎಲ್ಲಾ ಅಪರಾಧಗಳೂ ಜಾಮೀನುರಹಿತ ಅಪರಾಧಗಳಾಗಿವೆ. ಅಗತ್ಯ ಬದಲಾವಣೆಗಳೊಂದಿಗೆ ಈ ಸುಗ್ರೀವಾಜ್ಞೆಯನ್ನು ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಅಥವಾ ಪ್ರಾಣಿ, ಸಸ್ಯ, ಬೆಳೆ, ಜಲಚರ ಮುಂತಾದವುಗಳಿಗೆ ಸಂಬಂಧಿಸಿದ ರೋಗಗಳ ವಿಷಯದಲ್ಲೂ ಅನ್ವಯಿಸಲು ಸುಗ್ರೀವಾಜ್ಞೆಯಲ್ಲೇ ಅವಕಾಶ ಮಾಡಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಸಂಭವಿಸಿದ ಘಟನೆಗಳನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲೂ ಪರಿಪೂರ್ಣವಾದ ಒಂದು ಕಠಿಣ ಕಾಯ್ದೆಯ ತುರ್ತು ಅಗತ್ಯವಿದೆ. ಅದೃಷ್ಟವಶಾತ್‌ ಸಂವಿಧಾನವು ರಾಜ್ಯದಲ್ಲಿ ಕೇಂದ್ರದ ಕಾನೂನನ್ನು ಅನ್ವಯಿಸಲು ಅವಕಾಶ ನೀಡುತ್ತದೆ. ಇನ್ನುಳಿದಿರುವುದು ಉತ್ತರ ಪ್ರದೇಶದ ಕಠಿಣ ಕಾನೂನಿನಲ್ಲಿರುವ ಅಂಶಗಳನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳುವುದಷ್ಟೆ.

-  ರಾಘವೇಂದ್ರ ಎಸ್‌. ಶ್ರೀವತ್ಸ

ಸುಪ್ರೀಂಕೋರ್ಟ್‌ ನ್ಯಾಯವಾದಿ

click me!