ಸೈನ್ಯದ ಪ್ರಾಥಮಿಕ ತರಬೇತಿ ಕೂಡಾ ಇರದ ನೇತಾಜಿ ಸಿಂಗಾಪುರದಲ್ಲಿ ಸೇನೆ ಸಜ್ಜುಗೊಳಿಸಿ, ಭಾರತದಲ್ಲಿ ಹಂಗಾಮಿ ಸರ್ಕಾರ ರಚಿಸಿದ್ದರು. ನಂತರ 50,000 ಜಪಾನ್ ಹಾಗೂ 25,000 ಆಜಾದ್ ಹಿಂದ್ ಸೈನಿಕರ ಜೊತೆಗೂಡಿ ಬ್ರಿಟಿಷರ ವಿರುದ್ಧ ಯುದ್ಧ ಸಾರಿದ್ದರು. ಬ್ರಹ್ಮದೇಶ, ಥೈಲ್ಯಾಂಡ್ ಮುಖಾಂತರ ಘಟ್ಟಪ್ರದೇಶಗಳನ್ನು ಸುತ್ತಿ ಈಶಾನ್ಯ ಭಾರತದ ಬಿಶನಪುರ, ಕೊಹಿಮಾಗಳನ್ನು ಸುತ್ತುವರೆದು ಬ್ರಿಟಿಷರಿಂದ ಅವುಗಳನ್ನು ವಶಪಡಿಸಿಕೊಂಡಿದ್ದರು.
ಡಾ.ಆನಂದ ಕೆರಿಯವರ, ರೋಣ
ಜಗತ್ತಿನ ಮಹಾಪುರುಷರನ್ನು ದೈವ ಹಾಗೂ ನಿಸರ್ಗ ಹಲವಾರು ಬಾರಿ ಸತ್ವ ಪರೀಕ್ಷೆಗೊಳಪಡಿಸಿದೆ. ಇಂತಹ ಅನೇಕ ಸತ್ವ ಪರೀಕ್ಷೆಗಳಿಗೆ ಮೈಯೊಡ್ಡಿ ಬಲಿಷ್ಠ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲಾಗಿ ನಿಂತವರಲ್ಲಿ ಸುಭಾಷ್ ಚಂದ್ರ ಬೋಸ್ ಅಗ್ರಜರು. ನೀವು ನನಗೆ ಒಂದು ಹನಿ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂಬ ಘೋಷವಾಕ್ಯದೊಂದಿಗೆ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಚಂಡ ಬಿರುಗಾಳಿಯನ್ನೆ ಎಬ್ಬಿಸಿದ ಧೀರ ನಾಯಕ ನೇತಾಜಿ.
ತಮ್ಮ ಶೌರ್ಯ, ಪ್ರಚಂಡ ವೇಗ ಹಾಗೂ ಹಲವಾರು ನಾಟಕೀಯ ಪ್ರಸಂಗಗಳಿಂದ 20ನೇ ಶತಮಾನದಲ್ಲಿ ನೇತಾಜಿಯಂತೆ ಛಾಪು ಮೂಡಿಸಿದ ನಾಯಕರು ಅಪರೂಪವೆಂದೇ ಹೇಳಬೇಕು. ಸ್ವಾತಂತ್ರ್ಯಕ್ಕಾಗಿ ಅವರು ಅರ್ಧ ಜಗತ್ತನ್ನೇ ಸುತ್ತಿದರು. ಆ ಕಾಲದ ಶ್ರೇಷ್ಠ ಐಸಿಎಸ್ ಪರೀಕ್ಷೆಯಲ್ಲಿ 4ನೇ ಕ್ರಮಾಂಕ ಗಳಿಸಿಯೂ ಬ್ರಿಟಿಷ್ ಆಡಳಿತ ಸೇವೆಗೆ ಸೇರದೆ ಸ್ವಹಿತಾಸಕ್ತಿ ಬದಿಗೊತ್ತಿ ರಾಷ್ಟ್ರೀಯ ಚಳವಳಿಯಲ್ಲಿ ಧುಮುಕಿದರು. ಗಾಂಧೀಜಿಯ ವಿರೋಧ ಬದಿಗೊತ್ತಿ ಜನರಿಂದ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಗೊಂಡ ಏಕೈಕ ರಾಷ್ಟ್ರೀಯ ನಾಯಕ ಅವರು. ಪರದೇಶಕ್ಕೆ ಹೋಗಿ ಅಲ್ಲಿ ಆಂಗ್ಲರ ಪರವಾಗಿ ಹೋರಾಡಿ ಬಂಧಿತರಾಗಿದ್ದ ಭಾರತೀಯ ಸೈನಿಕರೆನ್ನಲ್ಲ ಒಗ್ಗೂಡಿಸಿ ಅವರಲ್ಲಿ ಸುಪ್ತವಾಗಿ ಅಡಗಿದ್ದ ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸಿ ಬ್ರಿಟಿಷರ ವಿರುದ್ಧವೇ ಸಶಸ್ತ್ರ ಹೋರಾಟ ನಡೆಸಲು ಪ್ರೇರೇಪಿಸಿದ ಇಂದ್ರಜಾಲಕ ಶಕ್ತಿ ಹೊಂದಿದ್ದ ಏಕೈಕ ರಾಷ್ಟ್ರೀಯ ನಾಯಕ ಸುಭಾಷ್‌ಜೀ.
ಸ್ವಾವಲಂಬಿ ದೇಶಕ್ಕೆ ಬುನಾದಿ ಹಾಕಿದ ವಾಜಪೇಯಿ: ಸಚಿವ ನಾಗೇಶ್
ಜನನ, ಬಾಲ್ಯ ಹಾಗೂ ಶಿಕ್ಷಣ: ಗುರುದೇವ ರವೀಂದ್ರರ ಉಕ್ತಿಯಂತೆ ದೇಶಕ್ಕೆ ಸಂಕಟಗಳು ಬಂದೆರಗಿದಾಗ, ರಾಷ್ಟ್ರದ ಚೈತನ್ಯಶೀಲ ಶಕ್ತಿಯ ಮೇಲೆ ಪ್ರಹಾರವಾದಾಗ, ರಾಷ್ಟ್ರೀಯತೆಯ ಆಕ್ರಂದನ ಕೇಳಿ ಅದರ ಗರ್ಭದಿಂದ ಒಬ್ಬ ಮುಕ್ತಿದಾತ ಹುಟ್ಟಿಕೊಳ್ಳುತ್ತಾನೆ. ಇಂತಹ ಒಬ್ಬ ಮುಕ್ತಿದಾತನ ಜನನ 1897 ಜನವರಿ 23ರಂದು ಕಟಕ್ ನಗರದ ಪ್ರಸಿದ್ಧ ವಕೀಲರಾದ ಜಾನಕಿದಾಸ ಬೋಸ್ ಹಾಗೂ ಪ್ರಭಾವತಿಯವರ ಪುಣ್ಯ ಗರ್ಭದಿಂದ ಉಂಟಾಗುತ್ತದೆ. ಮಾಧ್ಯಮಿಕ ಶಾಲೆಯವರೆಗಿನ ಶಿಕ್ಷಣವನ್ನು ಕಟಕ್‌ನಲ್ಲಿ ಪೂರೈಸಿದ ಸುಭಾಷರು ಅಲ್ಲಿನ ಇತಿಹಾಸ ಶಿಕ್ಷಕ ವೇಣಿಮಾಧವರಿಂದ ಸ್ವಾಮಿ ವಿವೇಕಾನಂದರ ಆಧ್ಯಾತ್ಮ ಹಾಗೂ ರಾಷ್ಟ್ರಭಕ್ತಿಯ ತತ್ವಗಳನ್ನು ತಿಳಿದುಕೊಂಡು ಅಳವಡಿಸಿಕೊಳ್ಳುತ್ತಾರೆ. ಪದವಿ ಶಿಕ್ಷಣಕ್ಕಾಗಿ ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿಗೆ ಸೇರ್ಪಡೆಯಾದ ನಂತರ ಒಮ್ಮೆ ಯೋಗ್ಯ ಆಧ್ಯಾತ್ಮ ಗುರುವಿನ ಅನ್ವೇಷಣೆ ಮಾಡುತ್ತಾ ತಮ್ಮ ಸ್ನೇಹಿತರೊಂದಿಗೆ ಹಿಮಾಲಯ ಪರ್ವತಗಳಲ್ಲಿ ಸಂಚರಿಸಿ ಮನೆಯಿಂದ 2 ತಿಂಗಳು ಕಣ್ಮರೆಯಾಗುತ್ತಾರೆ. ಪ್ರೆಸಿಡೆನ್ಸಿ ಕಾಲೇಜಿನ ಓಟನ್ ಎಂಬ ಪ್ರಾಧ್ಯಾಪಕರು ಭಾರತೀಯ ಕಾಂಗ್ರೆಸ್ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಹಿಂಪಡೆಯಲು ಸುಭಾಷ್‌ರಾದಿಯಾಗಿ ಭಾರತೀಯ ವಿದ್ಯಾರ್ಥಿಗಳು ಓಟನ್‌ರನ್ನು ಒತ್ತಾಯಿಸುತ್ತಾರೆ. ಅದಕ್ಕೆ ಓಟನ್ ಒಪ್ಪದೇ ಇದ್ದಾಗ ವಿದ್ಯಾರ್ಥಿಗಳು ಅವರಿಗೆ ಹೊಡೆಯುತ್ತಾರೆ. ಕಾರಣ ಸುಭಾಷ್ ಸೇರಿದಂತೆ ಆ ವಿದ್ಯಾರ್ಥಿಗಳನ್ನೆಲ್ಲ ಕಲ್ಕತ್ತಾ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳಿಂದ ಬಹಿಷ್ಕರಿಸಲಾಗುತ್ತದೆ. ಎರಡು ವರ್ಷಗಳ ತರುವಾಯ ಸ್ಕಾಟಿಷ್ ವಿದ್ಯಾಲಯದಲ್ಲಿ ಪ್ರವೇಶ ಪಡೆದು ಇಡೀ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರಾರಯಂಕ್ ಪಡೆದು ತೇರ್ಗಡೆ ಹೊಂದುತ್ತಾರೆ.
ಐಸಿಎಸ್ ತಿರಸ್ಕರಿಸಿ ಸ್ವಾತಂತ್ರ್ಯ ಹೋರಾಟಕ್ಕೆ: ಆ ಕಾಲದಲ್ಲಿ ವಿದೇಶಕ್ಕೆ ಹೋಗಿ ಬ್ಯಾರಿಸ್ಟರ್ ಪದವಿ ಗಳಿಸಿಕೊಂಡು ಬಂದವರು ಹಲವಾರು ಜನ. ಆದರೆ ಐ.ಸಿ.ಎಸ್ ಪಾಸಾಗಿ ಉನ್ನತ ಹುದ್ದೆ ಅಲಂಕರಿಸಿದ ಭಾರತೀಯರು ಮಾತ್ರ ವಿರಳ. ನೇತಾಜಿಯವರ ಬುದ್ಧಿ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದ ತಂದೆ ಜಾನಕಿದಾಸರಿಗೆ ಸುಭಾಷ್ ಐ.ಸಿ.ಎಸ್ ಓದಿಸಬೇಕೆಂಬ ಮಹದಾಸೆ. ಆದರೆ ರಾಷ್ಟ್ರಪ್ರೇಮ ಹಾಗೂ ಸ್ವಾಭಿಮಾನಗಳನ್ನು ಮೈಗೂಡಿಸಿಗೊಂಡ ಯುವಕನಿಗೆ ಗುಲಾಮಗಿರಿಯ ಚಾಕರಿ ಒಗ್ಗೀತೇ? ಆದರೂ ತಂದೆಯ ಆಸೆ ಪೂರೈಸುವ ಸಲುವಾಗಿ ಇಂಗ್ಲೆಂಡಿಗೆ ಹೋಗಿ ಮೊದಲ ಪ್ರಯತ್ನದಲ್ಲಿಯೇ ಐ.ಸಿ.ಎಸ್ ಪರೀಕ್ಷೆಯನ್ನು ನಾಲ್ಕನೇ ರಾರಯಂಕ್‌ನೊಂದಿಗೆ ಪಾಸಾಗುತ್ತಾರೆ. ನಂತರ ಅದನ್ನು ತಿರಸ್ಕರಿಸಿ ರಾಷ್ಟ್ರಸೇವೆಗೆ ಧುಮುಕುತ್ತಾರೆ.
ಬ್ರಿಟಿಷ್ ಸರ್ಕಾರಕ್ಕೆ ಸಿಂಹಸ್ವಪ್ನ: ಐಸಿಎಸ್ ಬಿಟ್ಟು ಭಾರತಕ್ಕೆ ಬಂದ ಸುಭಾಷ್ ಬಾಬು ಗಾಂಧೀಜಿಯವರನ್ನು ಭೇಟಿಯಾದಾಗ ಅವರು ಚಿತ್ತರಂಜನದಾಸ್ ಬಳಿಗೆ ಕಳುಹಿಸುತ್ತಾರೆ. ಚಿತ್ತರಂಜನದಾಸ್‌ರ ಜೊತೆ ಸೇರಿ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡು ಮೊದಲ ಬಾರಿ ಜೈಲಿಗೆ ಹೋಗುತ್ತಾರೆ. ಚಿತ್ತರಂಜನದಾಸ್ ಕಲ್ಕತ್ತಾದ ಮೇಯರ್ ಆಗಿ ಆಯ್ಕೆಯಾದಾಗ ಸುಭಾಷ್‌ರನ್ನು ಪಾಲಿಕೆಯ ಮುಖ್ಯ ಕಾರ್ಯಕಾರಿ ಅಧಿಕಾರಿಯನ್ನಾಗಿ ನೇಮಿಸುತ್ತಾರೆ. ತಮ್ಮ ಅಧಿಕಾರಾವಧಿಯಲ್ಲಿ ಅಭೂತಪೂರ್ವ ಯೋಜನೆಗಳ ಮುಖಾಂತರ ಕಲ್ಕತ್ತಾ ನಗರದ ಅಭಿವೃದ್ಧಿಯನ್ನು ಸಾಧಿಸಿ ತೋರಿಸಿದ್ದಲ್ಲದೆ ಆಯಕಟ್ಟಿನ ಸ್ಥಳಗಳಲ್ಲಿ ಅನೇಕ ಭಾರತೀಯರನ್ನೇ ಕೆಲಸಕ್ಕೆ ನೇಮಿಸಿಕೊಂಡು ಬ್ರಿಟಿಷ್ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಾರೆ. ಹೀಗೆ ಕ್ಷಿಪ್ರಗತಿಯಲ್ಲಿ ಮುಂದೆ ಸಾಗುತ್ತಿದ್ದ ಸುಭಾಷ್ ಮೇಲೆ ನಿಯಂತ್ರಣ ಸಾಧಿಸಲೆಂದೇ ಬ್ರಿಟಿಷ್ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರೆಗ್ಯುಲೇಷನ್ ಆಕ್ಟ್ ಅಡಿ ಅವರನ್ನು ಅನಿರ್ದಿಷ್ಟಕಾಲಾವಧಿಗೆ ಬಂಧಿಸಿ ಶಿವಣಿಯ ಕಾರಾಗೃಹಕ್ಕೆ ಕಳುಹಿಸುತ್ತದೆ. ಅಲ್ಲಿನ ಆಹಾರ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಇವರಿಗೆ ಕ್ಷಯ ಹಾಗೂ ಪಿತ್ತಕೋಶದ ರೋಗ ಅಂಟಿಕೊಳ್ಳುತ್ತದೆ. ಅತ್ತಿಗೆ ವಿಭಾ ಅವರ ವಿಶೇಷ ಪ್ರಯತ್ನದಿಂದ ಚಿಕಿತ್ಸೆಗಾಗಿ ಯುರೋಪಿಗೆ ಹೋಗುತ್ತಾರೆ. ಅಲ್ಲಿ ಬ್ರಿಟಿಷ್ ವಿರೋಧಿ ನಾಯಕರನ್ನು ಭೇಟಿ ಮಾಡಿ ರಾಜತಾಂತ್ರಿಕ ಮಜಲುಗಳನ್ನು ಕಲಿಯುತ್ತಾರೆ. ಇದೇ ವೇಳೆ ಎಮಿಲಿ ಸೆಂಕ್ರಿನ್ ಎಂಬ ಆಸ್ಟ್ರಿಯನ್ ಕನ್ಯೆಯ ಜೊತೆ ಪ್ರೇಮಾಂಕುರವಾಗುತ್ತದೆ.
ಪ್ರಥಮ ಯೋಜನಾ ಸಮಿತಿ ರಚನೆ: ಯುರೋಪಿನಿಂದ ಮರಳಿದ ನೇತಾಜಿ 1937ರಲ್ಲಿ 51ನೇ ಕಾಂಗ್ರೆಸ್ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ತಮ್ಮ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ನ ಎಲ್ಲ ವರ್ಕಿಂಗ್ ಕಮಿಟಿಗಳ ಕಾರ್ಯಗಳನ್ನು ಚುರುಕುಗೊಳಿಸಿ, ಮೇಘನಾಥ ಸಹಾ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರಂತಹ ಮೇಧಾವಿಗಳ ಸಲಹೆಗಳಂತೆ ಭಾರತದ ಪ್ರಥಮ ರಾಷ್ಟ್ರೀಯ ಯೋಜನಾ ಸಮಿತಿ ರಚಿಸಿ ತಂತ್ರಜ್ಞಾನ ಹಾಗೂ ಔದ್ಯೋಗೀಕರಣಕ್ಕೆ ಉತ್ತೇಜನ ನೀಡುವ ಹಲವು ಯೋಜನೆಗಳಿಗೆ ಚಾಲನೆ ನೀಡುತ್ತಾರೆ. ಇದು ಗಾಂಧೀಜಿ ಹಾಗೂ ಅವರ ನಿಷ್ಠರಿಗೆ ಕಹಿ ಅನುಭವ ನೀಡುತ್ತದೆ. ಅಲ್ಲಿಂದ ಗಾಂಧೀಜಿ ಹಾಗೂ ನೇತಾಜಿ ನಡುವೆ ಭಿನ್ನಮತ ಆರಂಭವಾಗುತ್ತದೆ. ನಂತರ ಕಾಂಗ್ರೆಸ್ಸಿನಿಂದಲೇ ಉಚ್ಚಾಟಿತರಾಗುತ್ತಾರೆ.
ವಿದೇಶಕ್ಕೆ ಹೋಗಿ ಸೈನ್ಯ ಕಟ್ಟಿದರು: ಆದರೆ ನೇತಾಜಿ ವಿಭಿನ್ನ ಹಾಗೂ ದೂರದೃಷ್ಟಿಯ ಚತುರ ನಾಯಕ. 1938ರಲ್ಲಿ ಆದ ಮ್ಯೂನಿಕ್ ಒಪ್ಪಂದದಂತೆ ಜಕೊಸ್ಲೋವೇಕಿಯಾದ ಒಂದು ಭೂಪ್ರದೇಶವನ್ನು ಜರ್ಮನಿ ವಶಪಡಿಸಿಕೊಳ್ಳಬೇಕಾಗಿತ್ತು. ಈ ಒಪ್ಪಂದಕ್ಕೆ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ಹಾಗೂ ಇಟಲಿ ದೇಶಗಳು ಸಹಿ ಹಾಕಿರುತ್ತವೆ. ಅಂತಾರಾಷ್ಟ್ರೀಯ ರಾಜಕೀಯ ವ್ಯವಹಾರಗಳ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದ ನೇತಾಜಿ ಜರ್ಮನಿ ಹಾಗೂ ಬ್ರಿಟನ್ ಮಧ್ಯದ ಯುದ್ಧೋನ್ಮಾದದ ಸುಳಿವು ಪಡೆದು ಈ ಯುದ್ಧದ ಸಂದರ್ಭದಲ್ಲಿಯೇ ಬ್ರಿಟಿಷರ ಯುದ್ಧ ಕಾರ್ಯಗಳಿಗೆ ದೇಶದಲ್ಲೆಲ್ಲ ಅಸಹಕಾರ ವ್ಯಕ್ತಪಡಿಸಿ ಹೊರಗಿನಿಂದಲೂ ಬ್ರಿಟಿಷರ ಶತ್ರುಗಳ ಸಹಾಯ ಪಡೆದು ಅವರ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಗಾಂಧೀಜಿಯವರ ಒಪ್ಪಿಗೆ ಸಿಗದೆ ಇದ್ದಾಗ ಜ.16, 1941ರಂದು ರಹಸ್ಯ ಸ್ಥಳಕ್ಕೆ ಹೋಗಿಬಿಡುತ್ತಾರೆ. ನಂತರ ನಾನಾ ವೇಷ ಧರಿಸಿ ಕಾಬೂಲ್ ತಲುಪುತ್ತಾರೆ. ಅಲ್ಲಿಂದ ರಷ್ಯಾ, ಜರ್ಮನ್ ಹಾಗೂ ಜಪಾನ್ ದೂತಾವಾಸ ಕಚೇರಿ ಅಧಿಕಾರಿಗಳ ಸಹಾಯದಿಂದ ಕಾರಿನಲ್ಲಿ ರಷ್ಯಾ ತಲುಪುತ್ತಾರೆ. ರಷ್ಯಾದಿಂದಲೂ ವೇಷ ಮರೆಸಿಕೊಂಡು ಜರ್ಮನಿಗೆ ತೆರಳುತ್ತಾರೆ.
ಜರ್ಮನಿಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಚಾರಕ್ಕಾಗಿ ಆಕಾಶವಾಣಿ ಕೇಂದ್ರ ಸ್ಥಾಪಿಸುತ್ತಾರೆ. ಅಲ್ಲಿನ ಭಾರತೀಯ ವಿದ್ಯಾರ್ಥಿಗಳ ಸಹಾಯದಿಂದ ಬರ್ಲಿನ್ ರೇಡಿಯೋ ಮುಖಾಂತರ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿಸುತ್ತಾರೆ. ಅಲ್ಲಿ ಬಂಧಿತರಾಗಿದ್ದ 3000ಕ್ಕೂ ಅಧಿಕ ಭಾರತೀಯ ಕೈದಿಗಳ ಮನವೊಲಿಸಿ ಆಜಾದ್ ಹಿಂದ್ ಸೈನ್ಯ ಸ್ಥಾಪಿಸುತ್ತಾರೆ. ನಂತರ ಹಿಟ್ಲರ್‌ನನ್ನು ಭೇಟಿಯಾಗುತ್ತಾರೆ. ಅವನು ಇವರ ರಾಷ್ಟ್ರಭಕ್ತಿಗೆ ಬೆರಗಾಗಿ, ಆ ದಿನಗಳಲ್ಲಿ ಜಪಾನ್‌ಗೆ ಭಾರತಕ್ಕೆ ಸಹಾಯ ಮಾಡಲು ಹೆಚ್ಚು ಅನುಕೂಲ ಇರುವ ಕಾರಣ ಇವರನ್ನು ಜಲಾಂತರ್ಗಾಮಿಯಲ್ಲಿ ಜಪಾನ್‌ಗೆ ಕಳುಹಿಸಿಕೊಡುತ್ತಾನೆ. ಈ ಮಧ್ಯೆ ನೇತಾಜಿ ಅವರ ಪತ್ನಿ ಎಮಿಲಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ನೇತಾಜಿ ತಮ್ಮ ಮಗಳನ್ನು ಜೀವಿತಾವಧಿಯಲ್ಲಿ ಕೇವಲ ಒಂದೇ ಬಾರಿ ಅವಳು 15 ದಿನದ ಹಸುಗೂಸು ಇದ್ದಾಗ ಮಾತ್ರ ನೋಡಿರುತ್ತಾರೆ! ಅಂತಹ ಭೀಕರ ಯುದ್ಧ ಕಾಲದಲ್ಲಿಯೇ ಮಗು ಹಾಗೂ ಮಡದಿಯನ್ನು ಆಸ್ಟ್ರಿಯಾದಲ್ಲಿ ಬಿಟ್ಟು ಜಪಾನ್‌ಗೆ ಹೋಗುತ್ತಾರೆ.
ಭಾರತದ ಪ್ರಥಮ ಹಂಗಾಮಿ ಪ್ರಧಾನಿ: ಜಪಾನ್‌ಗೆ ಹೋಗಿ, ಪ್ರಧಾನಿ ತೋಜೋ ಅವರನ್ನು ಭೇಟಿಯಾಗಿ, ಆಜಾದ್ ಹಿಂದ್ ಸೈನ್ಯದ ಮೂಲಕ ಭಾರತದಲ್ಲಿ ಹಂಗಾಮಿ ಸರ್ಕಾರ ರಚನೆಗೆ ಬೆಂಬಲ ಕೇಳುತ್ತಾರೆ. ಅದಕ್ಕೆ ಜಪಾನ್ ಒಪ್ಪಿ ಭಾರತಕ್ಕೆ ಸ್ವತಂತ್ರ ರಾಷ್ಟ್ರದ ಮಾನ್ಯತೆ ನೀಡುತ್ತದೆ. ತನ್ಮೂಲಕ ಅ.21, 1943ರಂದು ಆಜಾದ್ ಹಿಂದ್ ಎಂಬ ಭಾರತದ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಅದರ ಪ್ರಧಾನಿಯಾಗಿ ಸುಭಾಷ್ ಚಂದ್ರ ಬೋಸ್ ಸಿಂಗಾಪುರದ ಕೆಥೆ ಚಿತ್ರಮಂದಿರದಲ್ಲಿ ಪ್ರಮಾಣವಚನ ಸ್ವೀಕರಿಸಿ, ಸಚಿವ ಸಂಪುಟವನ್ನೂ ರಚಿಸುತ್ತಾರೆ. ಈ ಸರ್ಕಾರಕ್ಕೆ ತನ್ನದೇ ಧ್ವಜ, ನಾಣ್ಯ ಹಾಗೂ ಬ್ಯಾಂಕ್ ಕೂಡಾ ಇರುತ್ತದೆ. ಅಲ್ಲದೇ ಜರ್ಮನಿ, ಜಪಾನ್, ಇಟಲಿ, ಬ್ರಹ್ಮದೇಶ ಮುಂತಾದ 9 ರಾಷ್ಟ್ರಗಳ ಮಾನ್ಯತೆಯೂ ಸಿಗುತ್ತದೆ. ನಂತರ ನೇತಾಜಿ ಅವರು ಝಾಂಸಿ ರಾಣಿ ರೆಜಿಮೆಂಟ್ ಎಂಬ ಮಹಿಳಾ ಸೈನ್ಯ ವಿಭಾಗವನ್ನು ತೆರೆದು ಭಾರತೀಯ ಮಹಿಳಾ ಸೈನಿಕರ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸುತ್ತಾರೆ.
ಕ್ಷೇತ್ರ ಹುಡುಕಾಟ ಸಿದ್ದುಗೆ ಅನಿವಾರ್ಯವೇ?: ಮಾಜಿ ಎಂಎಲ್ಸಿ ರಮೇಶ್ ಬಾಬು
ರಣಾಂಗಣದಲ್ಲಿ ಸೆಣಸಿದ ಯೋಧ: ಸೈನ್ಯದ ಪ್ರಾಥಮಿಕ ತರಬೇತಿ ಕೂಡಾ ಇರದ ನೇತಾಜಿ ಸಿಂಗಾಪುರದಿಂದಲೇ ತನ್ನ ಸೇನೆಯನ್ನು ಭಾರತದ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಡಲು ಸಜ್ಜುಗೊಳಿಸುತ್ತಾರೆ. 50,000 ಜಪಾನ್ ಹಾಗೂ 25,000 ಆಜಾದ್ ಹಿಂದ್ ಸೈನಿಕರ ಜಂಟಿ ಯುದ್ಧ ಕಾರ್ಯಾಚರಣೆ ಸಿಂಗಾಪುರದಿಂದ ಆರಂಭಗೊಂಡು ಬ್ರಹ್ಮದೇಶ ಹಾಗೂ ಥೈಲ್ಯಾಂಡ್ ಮುಖಾಂತರ ಅನೇಕ ಘಟ್ಟಪ್ರದೇಶಗಳನ್ನು ಸುತ್ತಿ ಈಶಾನ್ಯ ಭಾರತದ ಭೂ ಪ್ರದೇಶಗಳಾದ ಬಿಶನಪುರ, ಕೊಹಿಮಾಗಳನ್ನು ಸುತ್ತುವರೆದು ಬ್ರಿಟಿಷರಿಂದ ಅವುಗಳನ್ನು ವಶಪಡಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗುತ್ತದೆ. ಇನ್ನೇನು ಇಂಫಾಲನ್ನು ಕೈವಶ ಮಾಡಿಕೊಂಡೇಬಿಟ್ಟರು ಎನ್ನುವ ವೇಳೆಯಲ್ಲಿಯೇ ಕೆಲವು ದೇಶದ್ರೋಹಿಗಳ ಪಿತೂರಿ, ಜಪಾನ್‌ನ ಕೆಲ ತಪ್ಪು ನಿರ್ಣಯ, ಆಹಾರ ಹಾಗೂ ಶಸ್ತ್ರಾಸ್ತ್ರ ಕೊರತೆ, ಕೊನೆಗೆ ನಿಸರ್ಗದ ವೈಪರೀತ್ಯಗಳಿಂದಾಗಿ ಹಿನ್ನಡೆಯಾಗುತ್ತದೆ. 1945ರಲ್ಲಿ ಅಮೆರಿಕವು ಜಪಾನ್‌ನ ಹಿರೋಶಿಮಾ ಹಾಗೂ ನಾಗಾಸಾಕಿಯ ಮೇಲೆ ಮಾಡಿದ ಪರಮಾಣು ದಾಳಿಯಿಂದ ಕಂಗೆಟ್ಟು ಜಪಾನ್ ಅನಿವಾರ್ಯವಾಗಿ ಯುದ್ಧ ಭೂಮಿಯಿಂದ ಹಿಂದೆ ಸರಿಯುತ್ತದೆ.
ನೇತಾಜಿಯವರೇ ಹೇಳಿದಂತೆ ವ್ಯಕ್ತಿಗೆ ಸಾವು ದಿಟ, ಆದರೆ ಅವನ ಉನ್ನತ ಧ್ಯೇಯ ಹಾಗೂ ಕನಸುಗಳು ಮಾತ್ರ ಅಮರವಾಗಿರುತ್ತವೆ. ಇಂದು ನೇತಾಜಿ ನಮ್ಮೊಂದಿಗೆ ಇಲ್ಲ. ಆದರೆ ಅವರ ಇಂದ್ರಜಾಲಕ ಕರ್ತೃತ್ವ ಶಕ್ತಿ ಹಾಗೂ ಪರಾಕ್ರಮಗಳನ್ನು ಕಂಡಿರುವ ಭಾರತೀಯರು ಅವರನ್ನು ಎಂದಿಗೂ ಮರೆಯುವುದಿಲ್ಲ.