ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳ ನಂತರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ತುಷಾರ್ ಮೆಹ್ತಾ ಸೂಚಿಸಿದ್ದಾರೆ. ಹಾಗೂ, ಈ ಚುನಾವಣೆಗಳ ಅನುಕ್ರಮವನ್ನು ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು
ಶ್ರೀನಗರ (ಆಗಸ್ಟ್ 31, 2023): ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಗುರುವಾರ (ಆಗಸ್ಟ್ 31) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅಲ್ಲದೆ, ಮತದಾರರ ಪಟ್ಟಿಯನ್ನು ನವೀಕರಿಸುವ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ ಎಂದು ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೃಢಪಡಿಸಿದರು.
ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳ ನಂತರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ತುಷಾರ್ ಮೆಹ್ತಾ ಸೂಚಿಸಿದ್ದಾರೆ. ಹಾಗೂ, ಈ ಚುನಾವಣೆಗಳ ಅನುಕ್ರಮವನ್ನು ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.
ಇದನ್ನು ಓದಿ: ಕಾಶ್ಮೀರಕ್ಕೆ ವಾಪಸಾಗುತ್ತಾ 370ನೇ ವಿಧಿ? ಜುಲೈ 11ರಿಂದ ಸುಪ್ರೀಂ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ
, "ಮೂರು ಚುನಾವಣೆಗಳು ಬಾಕಿ ಉಳಿದಿವೆ. ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಆರಂಭಿಕ ಚುನಾವಣೆಗಳು ಪಂಚಾಯತ್‌ಗಳ ಮೇಲೆ ಕೇಂದ್ರೀಕರಿಸುತ್ತವೆ, ಈಗಾಗಲೇ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಗಳನ್ನು ನಡೆಸಲಾಗಿದೆ." ಎಂದೂ ತುಷಾರ್ ಮೆಹ್ತಾ ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ, ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನ: ನೀಡುವ ಕ್ರಮಗಳನ್ನು ಈಗಾಗಲೇ ಹಂತಹಂತವಾಗಿ ಜಾರಿಗೊಳಿಸಲಾಗಿದ್ದರೂ, ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ನಿಖರವಾದ ಸಮಯವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ."ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವು J&Kಗೆ ತಾತ್ಕಾಲಿಕವಾಗಿದ್ದರೂ, ರಾಜ್ಯತ್ವವನ್ನು ಮರುಸ್ಥಾಪಿಸಲು ನಿಖರವಾದ ಕಾಲಾವಧಿಯು ಅನಿಶ್ಚಿತವಾಗಿದೆ." ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮುಗೆ ಹೋಗೋ ಬದ್ಲು ಪಾಕ್ ವಾಯು ಪ್ರದೇಶ ಪ್ರವೇಶಿಸಿದ ಇಂಡಿಗೋ ವಿಮಾನ: ಕಾರಣ ಹೀಗಿದೆ..
370 ನೇ ವಿಧಿಯ ರದ್ದತಿಯನ್ನು ಪ್ರಶ್ನಿಸುವ ಮನವಿಗಳಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಕೇಂದ್ರದ ವಾದವನ್ನು ಸೋಮವಾರ ಅಂಗೀಕರಿಸಿತು. ಜಮ್ಮು ಮತ್ತು ಕಾಶ್ಮೀರದ ಸಂವಿಧಾನವು ಭಾರತೀಯ ಸಂವಿಧಾನಕ್ಕೆ "ಅಧೀನ" ಎಂಬ ಕಲ್ಪನೆಯ ಕಡೆಗೆ ನ್ಯಾಯಾಲಯವು ವಾಲಿತು. ಅಂದರೆ, ಭಾರತೀಯ ಸಂವಿಧಾನಕ್ಕೆ ಉನ್ನತ ಸ್ಥಾನ ಎಂಬುದನ್ನು ಒಪ್ಪಿಕೊಂಡಿತ್ತು.
ಆದರೂ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು 1957 ರಲ್ಲಿ ವಿಸರ್ಜಿಸಲ್ಪಟ್ಟ ಹಿಂದಿನ ರಾಜ್ಯದ ಸಂವಿಧಾನ ಸಭೆಯನ್ನು ಶಾಸಕಾಂಗ ಸಭೆಗೆ ಸಮೀಕರಿಸಬಹುದು ಎಂಬ ಪ್ರತಿಪಾದನೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ತೋರಿದೆ.
ಇದನ್ನೂ ಓದಿ: ಕಾಶ್ಮೀರ ವಿಷಯಕ್ಕೆ ವಿಶ್ವಸಂಸ್ಥೆ ಸೂಕ್ತ ಪರಿಹಾರ: ಪಾಕ್ ನೆಲದಲ್ಲಿ ಚೀನಾ ಕ್ಯಾತೆ; ತಾಲಿಬಾನ್ ಜತೆಗೂ ಒಪ್ಪಂದ!