ಪೌರತ್ವ ತಿದ್ದುಪಡಿ ಕಾಯ್ದೆಯು ಸಂಪೂರ್ಣ ಕಾನೂನಾತ್ಮಕ ಮತ್ತು ಸಂವಿಧಾನ ಬದ್ಧವಾಗಿದೆ. ಸಂವಿಧಾನದ 246ನೇ ವಿಧಿಯು 7ನೇ ಪರಿಚ್ಛೇದದಲ್ಲಿ ಪಟ್ಟಿಮಾಡಿರುವ ವಿಷಯಗಳ ಮೇಲೆ ಕಾನೂನು ರೂಪಿಸುವ ವಿಶೇಷ ಅಧಿಕಾರ ಸಂಸತ್ತಿಗಿದೆ ಎಂದು ಹೇಳುತ್ತದೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ಬಗ್ಗೆ ಇನ್ನೂ ಪರ-ವಿರೋಧ ಚರ್ಚೆಯಾಗುತ್ತಲೇ ಇದೆ. ಈ ನಡುವೆ ಕೇಂದ್ರ ಕಾನೂನು ಸಚಿವರು ಸಿಎಎ ಮತ್ತು ಎನ್‌ಆರ್‌ಸಿಗೆ ಜನರು ನೀಡಬೇಕಾದ ದಾಖಲೆಗಳೇನು, ಈ ಬಗ್ಗೆ ಕಾನೂನು ಇಲಾಖೆ ಏನು ಹೇಳುತ್ತದೆ ಎಂಬ ಬಗ್ಗೆ ದ ಹಿಂದೂ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಏನು? ಅದರಲ್ಲೂ ಮುಸ್ಲಿಮೇತರರಿಗೆ ಪೌರತ್ವ ನೀಡುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?
ಪೌರತ್ವ ತಿದ್ದುಪಡಿ ಕಾಯ್ದೆಯು ಸಂಪೂರ್ಣ ಕಾನೂನಾತ್ಮಕ ಮತ್ತು ಸಂವಿಧಾನ ಬದ್ಧವಾಗಿದೆ. ಸಂವಿಧಾನದ 246ನೇ ವಿಧಿಯು 7ನೇ ಪರಿಚ್ಛೇದದಲ್ಲಿ ಪಟ್ಟಿಮಾಡಿರುವ ವಿಷಯಗಳ ಮೇಲೆ ಕಾನೂನು ರೂಪಿಸುವ ವಿಶೇಷ ಅಧಿಕಾರ ಸಂಸತ್ತಿಗಿದೆ ಎಂದು ಹೇಳುತ್ತದೆ. ಈ ಪಟ್ಟಿಯಲ್ಲಿ ಪೌರತ್ವ ಹಾಗೂ ವಿದೇಶೀಯರ ದೇಶೀಕರಣದ ಬಗ್ಗೆ ಹೇಳಲಾಗಿದೆ. ಅಂದರೆ ಈ ಕುರಿತಂತೆ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗಿದೆ.
ಪೌರತ್ವ ಕಾಯ್ದೆಗೆ ವಿದೇಶಗಳಲ್ಲೂ ಬೆಂಬಲ ಕ್ರೋಡೀಕರಣ
14 ನೇ ವಿಧಿ ಸೇರಿದಂತೆ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುವಂತಿಲ್ಲ ಎಂದೂ ಸಂವಿಧಾನದಲ್ಲಿ ಇದೆ ಅಲ್ಲವೇ?
ಅಷ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧರ್ಮದ ಮೇಲಿನ ನಂಬಿಕೆಯ ಕಾರಣದಿಂದ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪೌರತ್ವ ನೀಡಲಾಗುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯರಿಗೆ ಸಂಬಂಧಿಸಿದ್ದಲ್ಲ. ಈ ಕಾಯ್ದೆಯಡಿ ಭಾರತದಲ್ಲಿ ಯಾರಿಗೂ ಪೌರತ್ವ ನೀಡುವುದೂ ಇಲ್ಲ, ಕಸಿದುಕೊಳ್ಳುವುದೂ ಇಲ್ಲ. ಇದರಲ್ಲಿ 14ನೇ ವಿಧಿಯ ಉಲ್ಲಂಘನೆ ಪ್ರಶ್ನೆಯೇ ಇಲ್ಲ.
ಇನ್ನು ಆದ್ಯತೆಯ ಬಗ್ಗೆ ಹೇಳುವುದಾದರೆ ಇಂದಿರಾ ಗಾಂಧಿ ಉಗಾಂಡಾದಿಂದ ಗಡೀಪಾರಾದ ಹಿಂದುಗಳಿಗೆ ಪೌರತ್ವ ನೀಡಿದ್ದರು. ಪೂರ್ವ ಪಾಕಿಸ್ತಾನದಲ್ಲಿ ಕಿರುಕುಳ ಅನುಭವಿಸಿದ ಜನರಿಗೂ ಪೌರತ್ವ ನೀಡಿದ್ದರು. ರಾಜೀವ್ ಗಾಂಧಿ ಶ್ರೀಲಂಕಾದ ತಮಿಳರಿಗೆ ಪೌರತ್ವ ನೀಡಿದ್ದರು.
ಆದರೆ ಅವರು ಧರ್ಮವನ್ನು ಎಲ್ಲೂ ಉಲ್ಲೇಖಿಸಿರಲಿಲ್ಲ.
ಆದರೆ ಅವರು ಈ ಗುಂಪಿನಲ್ಲಿ ಮುಸ್ಲಿಮರೂ ಸೇರಿರುತ್ತಾರೆ ಎಂದು ಹೇಳಿದ್ದರೇ? 2003ರಲ್ಲಿ ಮನಮೋಹನ ಸಿಂಗ್ ರಾಜ್ಯಸಭೆಯಲ್ಲಿ, ನೆರೆ ರಾಜ್ಯದ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ವಿವರಿಸಿದ್ದರು. ಅಶೋಕ್ ಗೆಹ್ಲೋಟ್ ಮತ್ತು ತರುಣ್ ಗೊಗೋಯ್ ಕಾಲಕಾಲಕ್ಕೆ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದರು. ಆದರೆ ಕಾಂಗ್ರೆಸ್ ಈ ಕಾರ‍್ಯಕ್ಕೆ ಮುಂದಾಗಿರಲಿಲ್ಲ. ಆದರೆ ಬಿಜೆಪಿ ಈಗ ಈ ‘ಕೆಟ್ಟ’ ಕೆಲಸಕ್ಕೆ ಮುಂದಾಗಿದೆ.
ಪೌರತ್ವ ನೀಡುವಿಕೆ ಅಥವಾ ರದ್ದುಪಡಿಸುವಿಕೆಯಲ್ಲಿ ನಾವು ಯಾವುದೇ ಧರ್ಮವನ್ನು ಉಲ್ಲೇಖಿಸಿರಲಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?
2003ರಲ್ಲಿ ಡಾ.ಮನಮೋಹನ ಸಿಂಗ್ ಅಡ್ವಾಣಿ ಬಳಿ ಏನು ಹೇಳಿದ್ದರು? ಕಿರುಕುಳಕ್ಕೆ ಒಳಪಟ್ಟಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದು ಕಾನೂನುಬದ್ಧ ಎಂದು ಅವರೇ ಹೇಳಿದ್ದ ಬಗ್ಗೆ ವಿಡಿಯೋ ಇದೆ. ಈಗ ಸಿಎಎ ಏಕೆ ಬೇಕು ಎಂಬ ನಿಮ್ಮ ಪ್ರಶ್ನೆಗೆ ಬರೋಣ. 2000ಕ್ಕೂ ಹೆಚ್ಚು ಪಾಕಿಸ್ತಾನಿಗಳಿಗೆ ಭಾರತದ ಪೌರತ್ವ ನೀಡಲಾಗಿದೆ. ಆದರೆ ಧರ್ಮದ ಆಧಾರದಲ್ಲಿ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದಿರುವ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆಯ ಅಗತ್ಯ ಇದೆ.
ಇನ್‌ಫ್ಯಾಕ್ಟ್ ಅಷ್ಘಾನಿಸ್ತಾನದಲ್ಲಿ ಇದ್ದ 6-7 ಲಕ್ಷ ಅಲ್ಪಸಂಖ್ಯಾತರ ಪೈಕಿ ಈಗ ಕೇವಲ 500 ಜನರು ಉಳಿದಿದ್ದಾರೆ. ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ಅತ್ಯಾಚಾರ, ಕೊಲೆ ನಡೆಸಿ ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗುತ್ತಿದೆ ಎಂಬುದಂತೂ ಎಲ್ಲರಿಗೂ ಗೊತ್ತಿದೆ. ಜೋಧ್‌ಪುರ, ಇಂದೋರ್, ದೆಹಲಿಗೆ ಹೋಗಿ ಈ ಅಲ್ಪಸಂಖ್ಯಾತರ ಸ್ಥಿತಿ ನೋಡಿ, ನಿಮಗೇ ಅರ್ಥವಾಗುತ್ತದೆ.
ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್ ಪೌರತ್ವ?
ದೇಶಾದ್ಯಂತ ಎನ್‌ಆರ್‌ಸಿಯನ್ನು ಹೇಗೆ ಜಾರಿ ಮಾಡಲಾಗುತ್ತದೆ?
ಪೌರತ್ವ ಕಾಯ್ದೆಯ 4ನೇ (ನಾಗರಿಕ ನೋಂದಣಿ ಮತ್ತು ರಾಷ್ಟ್ರೀಯ ಗುರುತು ಪತ್ರ ನೀಡುವಿಕೆ) ನಿಯಮ-2003ರಲ್ಲಿ ಎಣಿಕೆ, ಪ್ರಮಾಣೀಕರಣ, ಪರಿಶೀಲನೆ, ಆಕ್ಷೇಪಣೆ, ಮೇಲ್ಮನವಿ ಮುಂತಾದ ಪ್ರಕ್ರಿಯೆ ಬಗ್ಗೆ ಹೇಳಲಾಗಿದೆ. ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯಲ್ಲೂ ಇವೇ ಪ್ರಕ್ರಿಯೆ ಇರುತ್ತವೆ. ಆದರೆ ಇನ್ನೂ ಯಾವುದೇ ನಿರ್ಣಯ ಆಗಿಲ್ಲ. ಎನ್‌ಆರ್‌ಸಿಗೆ ಇನ್ನೂ ಚಾಲನೆ ನೀಡಿಲ್ಲ.
ಪ್ರೆಸ್ ಇನ್‌ಫಾರ್ಮೇಶನ್ ಬ್ಯೂರೋ ಈಗಾಗಲೇ ಎನ್‌ಆರ್‌ಸಿಗೆ ಬೇಕಾಗುವ ಸಂಭಾವ್ಯ ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆಯಲ್ಲಾ?
ಈ ಪ್ರಶ್ನೆಯೇ ಅಕಾಡೆಮಿಕ್ ಆಗಿದೆ. 2003ರ ಪೌರತ್ವ ಕಾಯ್ದೆಯ 3 ಮತ್ತು 4ನೇ ನಿಯಮದಂತೆ ಎಲ್ಲಾ ಪ್ರಕ್ರಿಯೆ ನಡೆಯುತ್ತದೆ. ಎನ್‌ಆರ್‌ಸಿ ಪ್ರಕ್ರಿಯೆ ಪ್ರಾರಂಭವಾದ ಬಳಿಕ ಅದನ್ನು ಸಾರ್ವಜನಿಕವಾಗಿ ಘೋಷಿಸಲಾಗುತ್ತದೆ.
ಯಾವಾಗ ಎನ್‌ಆರ್‌ಸಿ ಜಾರಿಯಾಗಬಹುದು?
ಎನ್‌ಆರ್‌ಸಿಗೆ ಇನ್ನುಮುಂದಷ್ಟೇ ಚಾಲನೆ ನೀಡಬೇಕಿದೆ. ಅದಕ್ಕೊಂದು ಕಾನೂನಾತ್ಮಕ ಪ್ರಕ್ರಿಯೆ ಇದೆ. ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಗಳ ಬೆಂಬಲ ಪಡೆದು, ಸಲಹೆ ಪಡೆದು ಆರಂಭಿಸಬೇಕಿದೆ. ಅದೊಂದು ಸುದೀರ್ಘ ಪ್ರಕ್ರಿಯೆ. ಏನೇ ಮಾಡಿದರೂ ಅದನ್ನು ಸಾರ್ವಜನಿಕವಾಗಿಯೇ ಮಾಡುತ್ತೇವೆ. ಎನ್‌ಆರ್‌ಸಿಯಲ್ಲಿ ಮುಚ್ಚಿಡುವಂಥದ್ದೇನೂ ಇಲ್ಲ. ಅಸ್ಸಾಂನಲ್ಲಿ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆದಂತೆಯೇ ದೇಶಾದ್ಯಂತವೂ ನಡೆಯಲಿದೆ.
ಎನ್‌ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ)ಯಲ್ಲಿ ಹೊಸ ಅಂಶವನ್ನು ಸೇರಿಸಲಾಗಿದೆ. ಅಂದರೆ ಪೋಷಕರ ಹೆಸರು ಮತ್ತು ಅವರು ಹುಟ್ಟಿದ ದಿನಾಂಕವನ್ನು ಕಡ್ಡಾಯ ಮಾಡಲಾಗಿದೆ. ಇದು ಎನ್‌ಆರ್‌ಸಿ ಪ್ರಕ್ರಿಯೆಯ ಮೊದಲ ಹಂತ ಎಂದು ಹೇಳಲಾಗುತ್ತಿದೆ. ಇದಕ್ಕೆ ನಿಮ್ಮ ಉತ್ತರ ಏನು?
ಒಂದು ಅಂಶವನ್ನು ನಾನು ಸ್ಪಷ್ಟಪಡಿಸಲೇಬೇಕು. ದರ್ಮದ ಆಧಾರದ ಮೇಲೆ ಅಥವಾ ನಂಬಿಕೆಯ ಆಧಾರದ ಮೇಲೆ ನಾವು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ನಮಗೆ ದೇಶದ ಅಭಿವೃದ್ಧಿ ಮುಖ್ಯ ಅಷ್ಟೆ. ಜನಗಣತಿಯು ಸಂವಿಧಾನಾತ್ಮಕ ಪಾವಿತ್ರ್ಯತೆಯನ್ನು ಹೊಂದಿದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತು ಚೀಟಿ ನೀಡುವಿಕೆ) ನಿಯಮ 2003ರಲ್ಲಿ ಎನ್‌ಪಿಆರ್ ಬಗ್ಗೆಯೂ ಹೇಳಲಾಗಿದೆ. ಎನ್‌ಪಿಆರ್ ಬಗ್ಗೆ ಆತಂಕದ ಅಗತ್ಯವಿಲ್ಲ.
ಏಕೆಂದರೆ ಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಬಹಿರಂಗಗೊಳಿಸುವುದಿಲ್ಲ. ಅಥವಾ ಯಾವುದೇ ಇಲಾಖೆಗೂ ಕೊಡುವುದಿಲ್ಲ. ಆದರೆ ಕಲ್ಯಾಣ ಕಾರ‍್ಯಕ್ರಮಗಳ ಅನುಷ್ಠಾನಕ್ಕೆ ಎನ್‌ಪಿಆರ್ ಮಾಹಿತಿಯ ಅಗತ್ಯವಿದೆ. 2011ರ ಜನಗಣತಿ ಬಗ್ಗೆ ಚರ್ಚಿಸುತ್ತಾ ಚಿದಂಬರಂ ಅವರು, ‘ ಎನ್‌ಪಿಆರ್, ಎನ್‌ಆರ್‌ಸಿಯ ಒಂದು ಅಂಗ’ ಎಂದಿದ್ದರು. ಕಾಂಗ್ರೆಸ್ ಕೂಡ ಎನ್‌ಪಿಆರ್, ಎನ್‌ಆರ್‌ಸಿಯ ಒಂದು ಅಂಗ ಎಂದೇ ಪರಿಗಣಿಸಿತ್ತು. ಇಲ್ಲದಿದ್ದರೆ 2004ರಲ್ಲಿ ಯುಪಿಎ ಎನ್‌ಆರ್‌ಸಿಯನ್ನು ತಿರಸ್ಕರಿಸುತ್ತಿತ್ತು. ಆಗ ಒಪ್ಪಿಕೊಂಡು ಈಗ ವಿರೋಧಿಸುತ್ತಿರುವುದು ಕಾಂಗ್ರೆಸ್‌ನ ಆಷಾಢಭೂತಿತನ ಮತ್ತು ದ್ವಂದ್ವನೀತಿ.
ಅಂದರೆ ಎನ್‌ಪಿಆರ್‌ನ ದತ್ತಾಂಶಗಳನ್ನು ಎನ್‌ಆರ್‌ಸಿಯಲ್ಲಿ ಬಳಸುವುದಿಲ್ಲವೇ?
ಕಾನೂನಾತ್ಮಕವಾದ ಎಲ್ಲಾ ಪ್ರಕ್ರಿಯೆಗಳನ್ನೂ ಪಾಲಿಸಲಾಗುತ್ತದೆ. ಕೆಲವೊಂದನ್ನು ಬಳಸಬಹುದು, ಕೆಲವೊಂದನ್ನು ಬಳಸದಿರಲೂಬಹುದು. ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕಿದೆ. ಆದರೆ, ಅದಕ್ಕಾಗಿ ಅವರ ಹೆಸರು ಮತದಾರರ ಪಟ್ಟಿಯಲ್ಲಿರಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ನೀವು ದೇಶದ ನಾಗರಿಕರಾಗಿದ್ದೂ ಮತ ಚಲಾಯಿಸಲು ಸಾಧ್ಯವಿಲ್ಲ. ಈ ಮತದಾರರ ಪಟ್ಟಿಗೆ ಹೆಸರು ಸೇರಿಸುವಾಗಲೂ ಪೋಷಕರ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಅದೇ ರೀತಿ ಪಾಸ್‌ಪೋರ್ಟ್ ಅಥವಾ ಪ್ಯಾನ್ ಕಾರ್ಡ್ ಮಾಡಿಸುವಾಗಲೂ ಈ ಮಾಹಿತಿಗಳನ್ನು ಕೇಳಲಾಗುತ್ತದೆ.
ಎನ್‌ಆರ್‌ಸಿ ಮತ್ತು ಸಿಎಎ ಬಗ್ಗೆ ಎರಡೆರಡು ರೀತಿಯ ಸಂದೇಶ ರವಾನೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಒಂದು ರೀತಿ ಹೇಳಿದರೆ, ಗೃಹ ಮಂತ್ರಿ ಅಮಿತ್ ಶಾ ಇನ್ನೊಂದು ರೀತಿ ಹೇಳುತ್ತಿದ್ದಾರಲ್ಲಾ?
ಅಮಿತ್ ಶಾ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ; ಎನ್‌ಆರ್‌ಸಿ ಮತ್ತು ಸಿಎಎ ಎರಡೂ ಪ್ರತ್ಯೇಕ ಎಂದು.
ಸಿಎಎ ಬಗ್ಗೆ ಮುಸ್ಲಿಮರೇಕೆ ಚಿಂತಿಸುತ್ತಿದ್ದಾರೆ? ಎನ್‌ಆರ್‌ಸಿಯಲ್ಲಿ ಹಿಂದುಗಳು ಹೊರಗುಳಿದರೆ ಅವನು /ಅವಳು ಪೌರತ್ವ ತಿದ್ದುಪಡಿ ಕಾಯ್ದೆ ಮೂಲದ ಪೌರತ್ವ ಪಡೆಯಬಹುದು ಎಂದು ಮುಸ್ಲಿಮರು ಭಾವಿಸಿದ್ದಾರೆ.
ಮೊದಲೇ ಹೇಳಿದಂತೆ ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯರಿಗೆ ಅನ್ವಯಿಸುವುದಿಲ್ಲ. ಈ ಕಾಯ್ದೆ ಅಡಿಯಲ್ಲಿ ಯಾವುದೇ ಭಾರತೀಯನಿಗೆ ಪೌರತ್ವ ನೀಡುವುದೂ ಇಲ್ಲ, ನಿರಾಕರಿಸುವುದೂ ಇಲ್ಲ.
ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಸಂವಿಧಾನದ ಪ್ರತಿ ಹಿಡಿದು ಮತ್ತು ಅದರ ಪ್ರಸ್ತಾವನೆ ಓದುತ್ತಾ ಪ್ರತಿಭಟಿಸುತ್ತಿದ್ದಾರೆ. ಆದರೂ ಬಂಧಿಸುವುದು ಏಕೆ?
ದೇಶದ ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ಆದರೆ ಯಾರಾದರೂ ಶಾಂತಿ ಭಂಗ ಮಾಡಿ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಬೆಂಕಿ ಇಟ್ಟರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.
ಉತ್ತರ ಪ್ರದೇಶದಲ್ಲಿ ಸರಣಿ ಬಂಧನ ನಡೆಯಿತು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿ ಹಾಳು ಮಾಡಿದವರಿಗೆ ದಂಡ ಕಟ್ಟಬೇಕೆಂದು ನೋಟಿಸ್ ಕಳುಹಿಸಲಾಗಿದೆ. ಇದು ಕಾನೂನಾತ್ಮಕವಾಗಿ ಸಮರ್ಥನೀಯವೇ?
ಯಾಕೆ ಅಲ್ಲ. ತೆರಿಗೆದಾರರ ಹಣವೇ ಅಲ್ಲವೇ ಪೋಲಾಗುತ್ತಿರುವುದು. ಹಾಗೆಯ ಉತ್ತರ ಪ್ರದೇಶ ಸರ್ಕಾರವು ಮುಗ್ಧರಿಗೆ ತೊಂದರೆಯಾಗದು ಎಂದು ಸ್ಪಷ್ಟಪಡಿಸಿದೆ.
- ರವಿಶಂಕರ್ ಪ್ರಸಾದ್ , ಕೇಂದ್ರ ಕಾನೂನು ಸಚಿವ