ಪ್ರಧಾನಿಯ ಹತ್ಯೆ ಮಾಡಿದವರನ್ನೇ ಬಿಟ್ಟಿದ್ದೀರಿ, ನನ್ನ ಕೂಡ ರಿಲೀಸ್ ಮಾಡಿ: ಸುಪ್ರೀಂಗೆ ಸ್ವಾಮಿ ಶ್ರದ್ಧಾನಂದ ಅರ್ಜಿ!

By Santosh Naik  |  First Published Nov 17, 2022, 11:59 AM IST

ಪ್ರಧಾನಿ ರಾಜೀವ್‌ ಗಾಂಧಿಯನ್ನು ಹತ್ಯೆ ಮಾಡಿದವರನ್ನೇ ಬಿಡುಗಡೆ ಮಾಡಿದ್ದೀರಿ, ನನ್ನನ್ನೂ ಕೂಡ ಬಿಡುಗಡೆ ಮಾಡಿ ಎಂದು ಪತ್ನಿಯನ್ನು ಕೊಂದು ಕಳೆದ 29 ವರ್ಷಗಳಿಂದ ಜೈಲಿನಲ್ಲಿರುವ ಸ್ವಾಮಿ ಶ್ರದ್ಧಾನಂದ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.


ನವದೆಹಲಿ (ನ.17): ಹಣಕ್ಕಾಗಿ ಪತ್ನಿಯನ್ನು ಕೊಂದು ಕಳೆದ 29 ವರ್ಷಗಳಿಂದ ಜೈಲಿನಲ್ಲಿರುವ 80 ವರ್ಷದ ಸ್ವಾಮಿ ಶ್ರದ್ಧಾನಂದ ತನ್ನನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದಾರೆ. ಪ್ರಧಾನಿ ರಾಜೀವ್‌ ಗಾಂಧಿಯವರನ್ನು ಹತ್ಯೆ ಮಾಡಿದ್ದ ವ್ಯಕ್ತಿಗಳೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹಾಗಾಗಿ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಅವರು ಕೋರ್ಟ್‌ಗೆ ಸರ್ಜಿ ಸಲ್ಲಿಸಿದ್ದಾರೆ. ತಮ್ಮ ವಕೀಲರ ಮೂಲಕ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌, ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠಕ್ಕೆ ಶ್ರದ್ಧಾನಂದ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪತ್ನಿ ಶಕಿರಾ ಅವರ ಕೊಲೆ ಪ್ರಕರಣದಲ್ಲಿ 1994ರ ಮಾರ್ಚ್‌ನಿಂದಲೂ ಸ್ವಾಮಿ ಶ್ರದ್ಧಾನಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನು ಶಕಿರಾ, ಮೈಸೂರಿನ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳು. ಆಸ್ಟ್ರೇಲಿಯಾ ಹಾಗೂ ಇರಾನ್‌ಗೆ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದ ಅಕ್ಬರ್‌ ಖಲೀಲಿ ಅವರೊಂದಿಗೆ ಶಕಿರಾ ಮೊದಲ ವಿವಾಹವಾಗಿದ್ದರು. 1985ರಲ್ಲಿ ಅಕ್ಬರ್‌ ಖಲೀಲಿ ಹಾಗೂ ಶಕಿರಾ ಅವರ ದಾಂಪತ್ಯ ಮುರಿದುಬಿದ್ದಿತ್ತು. ಅದರ ಮರು ವರ್ಷವೇ ಶಕಿರಾ, ಶ್ರದ್ಧಾನಂದರನ್ನು ಮದುವೆ ಆಗಿದ್ದರು. 

ಶ್ರದ್ಧಾನಂದ್ ಪರ ವಕೀಲ ವರುಣ್ ಠಾಕೂರ್ ಅವರು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಜೆಬಿ ಪರ್ದಿವಾಲಾ ಅವರ ಪೀಠದ ಮುಂದೆ ವಾದ ಮಂಡಿಸಿ, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅವರು ಮಾಡಿರುವ ಕೊಲೆಗೆ ಪರೋಲ್‌ ಕೂಡ ಇಲ್ಲ. ಈಗಾಗಲೇ ಅವರು 29 ವರ್ಷ ಜೈಲಿನಲ್ಲಿ ಯಾರನ್ನೂ ಭೇಟಿಯಾಗದೇ ಶಿಕ್ಷೆ ಕಳೆದಿದ್ದಾರೆ ಎಂದು ವಾದ ಮಂಡಿಸಿದ್ದರು.

ತಂದೆಯ ಸಾವಿನ ಬಗ್ಗೆ ವೆಲ್ಲೂರು ಜೈಲಲ್ಲಿ ಪ್ರಿಯಾಂಕಾ ನನ್ನ ಪ್ರಶ್ನೆ ಮಾಡಿದ್ದರು: ನಳಿನಿ ಶ್ರೀಹರನ್‌!

ಶಕಿರಾ ಅವರ ಹೆಸರಿನಲ್ಲಿದ್ದ ಅಂದಾಜು 600 ಕೋಟಿ ರೂಪಾಯಿ ಆಸ್ತಿಯನ್ನು ದೋಚುವ ಸಲುವಾಗಿ, 1991ರಲ್ಲಿ ಬೆಂಗಳೂರಿನ ರಿಚ್ಮಂಡ್‌ ರಸ್ತೆಯಲ್ಲಿರುವ ಬಂಗಲೆಯಲ್ಲಿ ಸ್ವಾಮಿ ಶ್ರದ್ಧಾನಂದ ಆಕೆಗೆ ಮಾದಕ ದ್ರವ್ಯ ನೀಡಿದ್ದ. ಆಕೆ ಅಮಲಿನಲ್ಲಿದ್ದಾಗಲೇ ಜೀವಂತವಾಗಿ ಆಕೆಯನ್ನು ಹೂತುಹಾಕಿದ್ದ. ಆ ಬಳಿಕ ಕೋರ್ಟ್‌ ಆದೇಶದ ಮೇಲೆ ಪೊಲೀಸರು ನೆಲವನ್ನು ಅಗೆದು ಶಕೀರಾ ಅವರ ದೇಹವನ್ನು ಹೊರತೆಗೆದಿದ್ದರು. 1994ರ ಏಪ್ರಿಲ್‌ 30 ರಂದು ಪ್ರಕರಣದಲ್ಲಿ ಶ್ರದ್ಧಾನಂದನನ್ನು ಬಂಧಿಸಲಾಗಿತ್ತು. 2000ರಲ್ಲಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು.2005ರಲ್ಲಿ ಕರ್ನಾಟಕ ಹೈಕೋರ್ಟ್ ಕೂಡ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.ಆದರೆ, 2008 ರಲ್ಲಿ ಶ್ರದ್ಧಾನಂದರ ಮೇಲ್ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಯಾವುದೇ ಪರಿಹಾರಗಳು ಇಲ್ಲದೆ ಅವರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಜೈಲಿನಲ್ಲಿ ಯಾವುದೇ ವ್ಯಕ್ತಿಯನ್ನು ಭೇಟಿಯಾಗುವಂತಿಲ್ಲ ಹಾಗೂ ಪೆರೋಲ್‌ ಅರ್ಜಿ ಸಲ್ಲಿಸುವಂತಿಲ್ಲ ಎಂದು ಕೋರ್ಟ್‌ ಹೇಳಿತ್ತು.

Tap to resize

Latest Videos

ರಾಜೀವ್‌ ಗಾಂಧಿ ಹತ್ಯೆ ಪ್ರಮುಖ ಆರೋಪಿ ನಳಿನಿ ಸೇರಿ 6 ಜನರ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

ಶ್ರದ್ಧಾನಂದ ಪರವಾಗಿ ವಾದ ಮಾಡಿರುವ ವಕೀಲ ವರುಣ್‌ ಠಾಕೂರ್‌, ಅವರು ಮಾಡಿದ ಕೊಲೆಗಾಗಿ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ 29 ವರ್ಷಗಳ ಕಾಲ ಅವರು ಜೈಲಿನಲ್ಲಿ ದಿನ ಕಳೆದಿದ್ದಾರೆ. ಈ ಅವಧಿಯಲ್ಲಿ ಒಂದು ದಿನವೂ ಅವರಿಗೆ ಪೆರೋಲ್‌ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳನ್ನು 30 ವರ್ಷಗಳ ಜೈಲುವಾಸದ ನಂತರ ಬಿಡುಗಡೆ ಮಾಡಲಾಗಿದೆ. ಇದು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ವಕೀಲರ ಈ ವಾದವನ್ನು ಕೇಳಿದ ಬಳಿಕ ಕೋರ್ಟ್‌ ಶ್ರದ್ಧಾನಂದನ ಅರ್ಜಿಯನ್ನು ವಿಚಾರಣೆ ಮಾಡುವುದಾಗಿ ಹೇಳಿದೆ. ಶ್ರದ್ಧಾನಂದಗೆ ಈಗ 80ಕ್ಕಿಂತ ಹೆಚ್ಚಿನ ವಯಸ್ಸಾಗಿದೆ. ಮಾರ್ಚ್ 1994 ರಿಂದ ಜೈಲಿನಲ್ಲಿದ್ದಾರೆ ಎಂದು ಠಾಕೂರ್ ವಿಚಾರಣೆ ವೇಳೆ ಹೇಳಿದ್ದಾರೆ. ಮರಣದಂಡನೆ ಶಿಕ್ಷೆಯ ಹೊರತಾಗಿಯೂ, ಅವರನ್ನು ಮೂರು ವರ್ಷಗಳ ಕಾಲ ಬೆಳಗಾವಿ ಜೈಲಿನಲ್ಲಿ ಏಕಾಂತ ಸೆರೆಮನೆಯಲ್ಲಿ ಇರಿಸಲಾಗಿತ್ತು. ಅಲ್ಲದೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವಾದಿಸಿದ್ದಾರೆ.

click me!