ಗೆಹ್ಲೋಟ್‌ ಖೆಡ್ಡಾಕ್ಕೆ ಬಿದ್ದ ಪೈಲಟ್‌; ಇಬ್ಬರ ಮಧ್ಯೆ ಆಗಿದ್ದೇನು?

Kannadaprabha News   | Asianet News
Published : Jul 17, 2020, 01:22 PM ISTUpdated : Jul 17, 2020, 05:49 PM IST
ಗೆಹ್ಲೋಟ್‌ ಖೆಡ್ಡಾಕ್ಕೆ ಬಿದ್ದ ಪೈಲಟ್‌; ಇಬ್ಬರ ಮಧ್ಯೆ ಆಗಿದ್ದೇನು?

ಸಾರಾಂಶ

ಕಳೆದ 18 ತಿಂಗಳಿನಿಂದ 70 ವರ್ಷದ ಗೆಹ್ಲೋಟ್‌ ಮತ್ತು 42 ವರ್ಷದ ಸಚಿನ್‌ ಪೈಲಟ್‌ ನಡುವೆ ಜಗಳ ದಿನವೂ ನಡೆದೇ ಇತ್ತು. ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಇದು ತಾರಕಕ್ಕೆ ಏರಿತ್ತು. ಒಂದೇ ಸಲಕ್ಕೆ ತಮ್ಮ ವರ್ತಮಾನದ ಮತ್ತು ಪುತ್ರ ವೈಭವನ ಭವಿಷ್ಯದ ಬಗ್ಗೆ ಚಿಂತಿತರಾದ ಗೆಹ್ಲೋಟ್‌, ಸಚಿನ್‌ ಪೈಲಟ್‌ಗೆ ಮಣ್ಣು ಮುಕ್ಕಿಸುವ ನಿರ್ಧಾರ ಮಾಡಿ ಸ್ವತಃ ಉಪಮುಖ್ಯಮಂತ್ರಿಗೆ ಪೊಲೀಸರಿಂದ ವಿಚಾರಣೆಯ ನೋಟಿಸ್‌ ಕಳುಹಿಸಿದರು. 

ಬೆಂಗಳೂರು (ಜು. 17):  ಕಳೆದ 18 ತಿಂಗಳಿನಿಂದ 70 ವರ್ಷದ ಗೆಹ್ಲೋಟ್‌ ಮತ್ತು 42 ವರ್ಷದ ಸಚಿನ್‌ ಪೈಲಟ್‌ ನಡುವೆ ಜಗಳ ದಿನವೂ ನಡೆದೇ ಇತ್ತು. ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಇದು ತಾರಕಕ್ಕೆ ಏರಿತ್ತು. ಒಂದೇ ಸಲಕ್ಕೆ ತಮ್ಮ ವರ್ತಮಾನದ ಮತ್ತು ಪುತ್ರ ವೈಭವನ ಭವಿಷ್ಯದ ಬಗ್ಗೆ ಚಿಂತಿತರಾದ ಗೆಹ್ಲೋಟ್‌, ಸಚಿನ್‌ ಪೈಲಟ್‌ಗೆ ಮಣ್ಣು ಮುಕ್ಕಿಸುವ ನಿರ್ಧಾರ ಮಾಡಿ ಸ್ವತಃ ಉಪಮುಖ್ಯಮಂತ್ರಿಗೆ ಪೊಲೀಸರಿಂದ ವಿಚಾರಣೆಯ ನೋಟಿಸ್‌ ಕಳುಹಿಸಿದರು.

ಆಗ ಕೆರಳಿದ ಸಚಿನ್‌ ದಿಲ್ಲಿ ನಾಯಕರನ್ನು ಭೇಟಿ ಮಾಡಿದರು; ಆದರೆ ಏನೂ ಉಪಯೋಗವಾಗಲಿಲ್ಲ. ಹೀಗಾಗಿ ತರಾತುರಿಯಲ್ಲಿ ಜ್ಯೋತಿರಾದಿತ್ಯರನ್ನು ಭೇಟಿಯಾಗಿ ಸರ್ಕಾರ ಬೀಳಿಸಲು ಹೋದರು. ಆದರೆ ಸಚಿನ್‌ ಹೀಗೆ ಮಾಡಿಯೇ ಮಾಡುತ್ತಾರೆ ಎಂದು ಲೆಕ್ಕ ಹಾಕಿದ್ದ 40 ವರ್ಷದಿಂದ ಕಾಂಗ್ರೆಸ್‌ನಲ್ಲಿ ರಾಜಕೀಯ ಮಾಡುತ್ತಿರುವ ಅಶೋಕ್‌ ಗೆಹ್ಲೋಟ್‌ ಬಹುಮತಕ್ಕೆ ಬೇಕಾಗುವಷ್ಟುಶಾಸಕರನ್ನು ಸಾಮ, ಧಾಮ, ದಂಡ, ಭೇದ ಉಪಯೋಗಿಸಿ ಮೊದಲೇ ಹಿಡಿದಿಟ್ಟು ಕೊಂಡಿದ್ದರು.

ಗಡಿಬಿಡಿಯಲ್ಲಿ ಕೇವಲ 18 ಶಾಸಕರನ್ನು ಮಾತ್ರವೇ ಕರೆದುತರಲು ಸಾಧ್ಯವಾದ ಸಚಿನ್‌ಗೆ ಕಾಂಗ್ರೆಸ್‌ ಒಡೆಯಲು ಬೇಕಾಗಿದ್ದು 30. ಆದರೆ ಅಷ್ಟರೊಳಗೆ ಅಶೋಕ್‌ ಗೆಹ್ಲೋಟ್‌ ಎಲ್ಲರನ್ನೂ ಜೈಪುರದ ಹೋಟೆಲ್‌ಗೆ ಸಾಗಿಸಿ ಆಗಿತ್ತು. ಹೀಗಾಗಿ ಸಚಿನ್‌ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಇದ್ದ ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೂಡ ಹೊರದಬ್ಬಲ್ಪಟ್ಟಿದ್ದಾರೆ. ರಾಜಕಾರಣ ಹೀಗೆಯೇ; ಇಲ್ಲಿ ಚಿವುಟಿ ನೋಯಿಸುವವರ ಕೈ ಕಾಣೋದಿಲ್ಲ. ಆದರೆ ನೋವಿನಿಂದ ಕಿರುಚುವವರ ಮುಖ ಕಾಣುತ್ತದೆ. ಹೀಗಾಗಿ ಚಿವುಟಿದರೂ ಕಿರುಚದೆ ನೋವು ನುಂಗುವವರಿಗೆ ಇಲ್ಲಿ ಆಯುಷ್ಯ ಜಾಸ್ತಿ. ತಾಳಿದವನು ಬಾಳಿಯಾನು ಎಂದು ಹೇಳಿದ್ದು ಇದಕ್ಕೇ ಅಲ್ಲವೇ?

ರಾಹುಲ್ ವಿಮಾನದಿಂದ ಪೈಲಟ್ ಹೊರಗೆ

ಗೆಹ್ಲೋಟ್‌-ಪೈಲಟ್‌ ಮಧ್ಯೆ ಆಗಿದ್ದೇನು?

2018ರ ರಾಜಸ್ಥಾನ ಚುನಾವಣೆಗೆ ಮೊದಲೇ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವೆ ಟಿಕೆಟ್‌ ಹಂಚಿಕೆಗಾಗಿ ಗಲಾಟೆ ಆರಂಭವಾಗಿತ್ತು. ಆದರೆ ಸೋನಿಯಾ ಕರೆದು ಮಾತನಾಡಿದ್ದರಿಂದ ಜಗಳ ಮುಗಿದು ಕಾಂಗ್ರೆಸ್‌ ಗೆಲುವು ಸಾಧಿ​ಸಿತು. ಆದರೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಪ್ರಶ್ನೆ ಬಂದಾಗ ಕೊನೆಗೆ ಅಹ್ಮದ್‌ ಪಟೇಲ್‌, ಗುಲಾಂ ನಬಿ, ದಿಗ್ವಿಜಯ ಸಿಂಗ್‌ ಒತ್ತಡಕ್ಕೆ ಮಣಿದು ಸೋನಿಯಾ ಅಶೋಕ್‌ ಗೆಹ್ಲೋಟ್‌ ಅವರನ್ನು ಮುಖ್ಯಮಂತ್ರಿ ಮಾಡಿ ಸಚಿನ್‌ಗೆ ಡೆಪ್ಯೂಟಿ ಪಟ್ಟಕೊಡಿಸಿದರು.

ಆದರೆ ಅನುಭವಿ ಗೆಹ್ಲೋಟ್‌ ಸಚಿನ್‌ರ ಒಂದೊಂದೇ ರೆಕ್ಕೆ ಕಡಿಯುತ್ತಲೇ ಬಂದರು. ಉಪ ಮುಖ್ಯಮಂತ್ರಿ ಸ್ವತಃ ಹೇಳಿದರೂ ಅವರದೇ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಒಂದು ವರ್ಗಾವಣೆ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ, 3 ತಿಂಗಳ ಹಿಂದೆ ಕೊರೋನಾಗಾಗಿ ಕರೆದ ಜಿಲ್ಲಾ​ಧಿಕಾರಿ ಮತ್ತು ಪೊಲೀಸ್‌ ಅಧಿ​ಕಾರಿಗಳ ವಿಡಿಯೋ ಕಾನ್ಫರೆನ್ಸ್‌ ಸಭೆಗೆ ಉಪ ಮುಖ್ಯಮಂತ್ರಿಯನ್ನು ಕರೆಯಲೂ ಇಲ್ಲ. ಕೊನೆಗೆ ‘ಸರ್ಕಾರದ ಮುಖ್ಯ ಕಾರ್ಯದರ್ಶಿ ಸಚಿನ್‌ ಅವರನ್ನು ಸಭೆಗೆ ಕರೆಯೋಣವೇ’ ಎಂದು ಕೇಳಿದಾಗ ಅಶೋಕ್‌ ಗೆಹ್ಲೋಟ್‌ ಎಲ್ಲಾ ಅ​ಧಿಕಾರಿಗಳ ಎದುರೇ ‘ಹೋಗ್ಲಿ ಬಿಡಿ ಬೇಡ’ ಎಂದು ಸುಮ್ಮನಾಗಿಸಿದರು.

ಆ ಕಡೆ ಸಚಿನ್‌ ಎಷ್ಟುಬಾರಿ ಗಮನಕ್ಕೆ ತಂದರೂ ರಾಹುಲ್‌ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಪೊಲೀಸರ ಸಮನ್ಸ್‌ ಅನ್ನೇ ಕಾರಣ ಮಾಡಿ, ತರಾತುರಿಯಲ್ಲಿ ಹೂಡಲು ಹೋದ ಬಾಣ ವಾಪಸ್‌ ಸಚಿನ್‌ ಪೈಲಟ್‌ಗೇ ತಿವಿದಿದೆ. ಈಗ 18 ಇರುವ ಶಾಸಕರ ಸಂಖ್ಯೆ 30 ಆಗದೇ ಬಿಜೆಪಿ ಹತ್ತಿರ ಸೇರಿಸಿಕೊಳ್ಳೋದಿಲ್ಲ. ಇತ್ತ ಒಮ್ಮೆ ಹೊರಗೆ ಹಾಕಿಸಿಕೊಂಡು, ಮರಳಿ ಕಾಂಗ್ರೆಸ್‌ಗೆ ಹೋದರೆ ಅಲ್ಲಿ ಏನೂ ಕಿಮ್ಮತ್ತು ಇರುವುದಿಲ್ಲ.

ಅಬ್ದುಲ್ಲಾ ಕುಟುಂಬದ ಅಳಿಯ

ಸಚಿನ್‌ ಪೈಲಟ್‌ ಗಾಂಧಿ​ ಕುಟುಂಬಕ್ಕೆ ತೀರಾ ಆತ್ಮೀಯ ರಾಜೇಶ್‌ ಪೈಲಟ್‌ರ ಪುತ್ರ. ಅಮೆರಿಕದ ಯುನಿವರ್ಸಿಟಿಯಲ್ಲಿ ಓದುತ್ತಿದ್ದಾಗ ಕಾಶ್ಮೀರದ ಫಾರೂಕ್‌ ಅಬ್ದುಲ್ಲಾ ಮಗಳು ಸಾರಾ ಜೊತೆ ಪ್ರೀತಿ ಶುರುವಾಗಿತ್ತು. 2004ರಲ್ಲಿ ಮದುವೆಗೆ ಅನುಮತಿ ಕೇಳಿದಾಗ ಪೈಲಟ್‌ ಕುಟುಂಬ ಒಪ್ಪಿದರೆ, ಫಾರೂಕ್‌ ಅಬ್ದುಲ್ಲಾ ಮತ್ತು ಅಣ್ಣ ಉಮರ್‌ ಅಬ್ದುಲ್ಲಾ ತಂಗಿಯನ್ನು ಹಿಂದೂ ಹುಡುಗನ ಜೊತೆ ಮದುವೆ ಮಾಡಿಕೊಡಲು ಒಪ್ಪಲಿಲ್ಲ. ಸ್ವತಃ ಹಿಂದೂ ಪಂಜಾಬಿ ಹುಡುಗಿ ಪಾಯಲ್‌ನಾಥರನ್ನು ಮದುವೆ ಆಗಿದ್ದ ಉಮರ್‌, ಕಾಶ್ಮೀರಿ ಮುಸ್ಲಿಮರು ಹುಡುಗಿಯರು ಕಾಫಿರ್‌ ಹುಡುಗನನ್ನು ಮದುವೆಯಾಗೋದನ್ನು ಒಪೊ್ಪೕದಿಲ್ಲ ಎಂದು ಮದುವೆಗೆ ಬರಲಿಲ್ಲ. ಅಷ್ಟೇ ಅಲ್ಲ ಎಷ್ಟೋ ದಿನಗಳವರೆಗೆ ಪೈಲಟ್‌ ಕುಟುಂಬ ಮತ್ತು ಅಬ್ದುಲ್ಲಾಗಳ ನಡುವೆ ಮಾತುಕತೆಯೂ ಇರಲಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌
ಎರಡು ಹಂತಗಳಲ್ಲಿ ನಡೆಯಲಿದೆ ಜನಗಣತಿ, 11,718 ಕೋಟಿ ಮೀಸಲಿಟ್ಟ ಸರ್ಕಾರ; ಇದೇ ಮೊದಲ ಬಾರಿಗೆ ಡಿಜಿಟಲ್‌ ಮೂಲಕ ಗಣತಿ!