ಪಾಲ್ಘರ್ ಸಾಧುಗಳ ಹತ್ಯೆ: ಕೇಂದ್ರ ಮಧ್ಯಪ್ರವೇಶ| ಉದ್ಧವ್‌ಗೆ ಅಮಿತ್ ಶಾ ಫೋನ್| ಪ್ರಕರಣದ ವಿವರ ಪಡೆದ ಕೇಂದ್ರ ಗೃಹ ಸಚಿವ| ಉನ್ನತ ತನಿಖೆಗೆ ಆದೇಶ| ಇಬ್ಬರು ಪೊಲೀಸರ ಅಮಾನತು| 101 ಮಂದಿ ವಶಕ್ಕೆ
ಪಾಲ್ಘರ್(ಏ.21): ಅಂತ್ಯಕ್ರಿಯೆಗೆಂದು ಮುಂಬೈನಿಂದ ಗುಜರಾತಿನ ಸೂರತ್‌ಗೆ ತೆರಳುತ್ತಿದ್ದ ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಬಡಿದು ಕೊಂದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ದೂರವಾಣಿ ಕರೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಕರಣದ ಕುರಿತು ಸಂಪೂರ್ಣ ವಿವರ ಪಡೆದಿದ್ದಾರೆ.
ಇದರ ಬೆನ್ನಲ್ಲೇ, ಪ್ರಕರಣದ ಕುರಿತು ಮಹಾರಾಷ್ಟ್ರ ಸರ್ಕಾರ ಉನ್ನತ ತನಿಖೆಗೆ ಆದೇಶಿಸಿದೆ. ನೂರಾರು ಮಂದಿ ಮೂವರ ಮೇಲೆ ಎರಗಿದ್ದರೂ ಪೊಲೀಸರು ರಕ್ಷಣೆ ನೀಡುವ ಬದಲಿಗೆ ಸುಮ್ಮನಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಘಟನಾ ಸ್ಥಳ ವ್ಯಾಪ್ತಿಯ ಸಹಾಯಕ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.
ಕಳ್ಳರೆಂಬ ವದಂತಿ: ಇಬ್ಬರು ಸಾಧು ಸೇರಿ ಮೂವರು ಗುಂಪು ಥಳಿತಕ್ಕೆ ಬಲಿ!
ಇದೇ ವೇಳೆ, ಬಡಿದು ಕೊಂದ ಘಟನೆ ಸಂಬಂಧ 101 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 9 ಮಂದಿ ಬಾಲಾರೋಪಿಗಳನ್ನು ಬಾಲಾಪರಾಧಿಗಳ ಗೃಹಕ್ಕೆ ರವಾನಿಸಲಾಗಿದೆ.
ಈ ಪ್ರಕರಣ ಬಳಸಿಕೊಂಡು ಕೋಮು ಭಾವನೆ ಕೆರಳಿಸುವ ಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಪ್ರತಿಕ್ರಿಯಿಸಿದ್ದು, ಮೃತಪಟ್ಟವರು ಹಾಗೂ ಹಲ್ಲೆಕೋರರು ಬೇರೆ ಬೇರೆ ಸಮುದಾಯದವರಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೋಮುದಳ್ಳುರಿ ಹಚ್ಚಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಆಗಿದ್ದೇನು?:
ಮುಂಬೈನ ಕಂಡೀವಲಿಯಲ್ಲಿ ಆಶ್ರಮ ಹೊಂದಿರುವ ಸಾಧುಗಳಾದ ಚಿಕ್ನೆ ಮಹಾರಾಜ ಕಲ್ಪವೃಕ್ಷಗಿರಿ (70), ಸುಶೀಲ್‌ಗಿರಿ ಮಹಾರಾಜ (35) ಅವರು ಸೂರತ್‌ನಲ್ಲಿ ಅಂತ್ಯಕ್ರಿಯೆಗೆ ತೆರಳಬೇಕಿತ್ತು. ಇದಕ್ಕಾಗಿ ಅವರು ನೀಲೇಶ್ ಯೇಲ್ಗಡೆ (30) ಎಂಬಾತನ ಕಾರನ್ನು ಏ.16ರಂದು ಬಾಡಿಗೆ ಪಡೆದಿದ್ದರು. ಹೆದ್ದಾರಿಯಲ್ಲಿ ಹೋದರೆ ಲಾಕ್‌ಡೌನ್ ಕಾರಣ ಪೊಲೀಸರು ತಡೆಯುತ್ತಾರೆ ಎಂದು ಹಳ್ಳಿಗಾಡಿನ ರಸ್ತೆಗಳಲ್ಲಿ ಹಾದುಹೋಗುತ್ತಿದ್ದರು.
ಕೇರಳದಲ್ಲಿ ಮಗನ ಅಂತ್ಯಕ್ರಿಯೆ; ದುಬೈನಲ್ಲಿ ಪೋಷಕರ ಕಣ್ಣೀರು!
ಮುಂಬೈನಿಂದ 140 ಕಿ.ಮೀ. ದೂರದ ಗಡ್‌ಚಿಂಚಲೆ ಎಂಬ ಹಳ್ಳಿಗಾಡಿನಲ್ಲಿ ಪೊಲೀಸ್ ಸೆಂಟ್ರಿಯೊಬ್ಬರು ಇವರ ಕಾರನ್ನು ತಡೆದು ಪ್ರಶ್ನಿಸುತ್ತಿದ್ದಾಗ ಏಕಾಏಕಿ ನೂರಾರು ಮಂದಿ ಬಂದು ದಾಂಧಲೆ ನಡೆಸಿ ಥಳಿಸಿದ್ದರು. ಆ ಭಾಗದಲ್ಲಿ ಮಕ್ಕಳು ಕಳ್ಳರು ಬಂದಿದ್ದಾರೆ, ಅಂಗಾಂಗ ಕಳ್ಳತನ ಜಾಲವಿದೆ ಎಂಬ ಸುಳ್ಳು ಸುದ್ದಿ ಕೆಲ ದಿನಗಳಿಂದ ವ್ಯಾಪಕವಾಗಿ ಹಬ್ಬಿತ್ತು. ಹಳ್ಳಿಗರು ತಂಡ ಮಾಡಿಕೊಂಡು ಪಹರೆ ಕಾಯುತ್ತಿದ್ದರು. ಆ ಸಂದರ್ಭದಲ್ಲೇ ಈ ಮೂವರು ಸಿಲುಕಿಕೊಂಡಿದ್ದರು. ಜನ ಹೆಚ್ಚು ಜಮಾವಣೆಗೊಂಡಿದ್ದರಿಂದ ಪೊಲೀಸರೂ ರಕ್ಷಣೆ ಮಾಡಿರಲಿಲ್ಲ.