ಮೊದಲೇ ಎಚ್ಚರಿಸಿದ್ದರೂ ನಿರ್ಲಕ್ಷಿಸಿದ್ದ ಸರ್ಕಾರ?

By Kannadaprabha NewsFirst Published Apr 26, 2021, 12:49 PM IST
Highlights

ಸಂಸದೀಯ ಸಮಿತಿಯೊಂದು ಆಮ್ಲಜನಕದ ಉತ್ಪಾದನೆ, ದಾಸ್ತಾನು ಹಾಗೂ ಪೂರೈಕೆಯ ಕುರಿತು ಮಹತ್ವದ ಸೂಚನೆಗಳನ್ನು ಸರ್ಕಾರಕ್ಕೆ ನೀಡಿತ್ತು. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.

ನವದೆಹಲಿ (ಏ.26): ದೇಶದಲ್ಲಿ ಕೊರೋನಾ ರೋಗಿಗಳಿಗೆ ಆಕ್ಸಿಜನ್‌ ಸಿಗದೆ ಹಾಹಾಕಾರ ಉಂಟಾಗುತ್ತಿದೆ. ಆದರೆ, ಕಳೆದ ವರ್ಷದ ನವೆಂಬರ್‌ನಲ್ಲೇ ಕೊರೋನಾ ಸಂಬಂಧಿ ಸಂಸದೀಯ ಸಮಿತಿಯೊಂದು ಆಮ್ಲಜನಕದ ಉತ್ಪಾದನೆ, ದಾಸ್ತಾನು ಹಾಗೂ ಪೂರೈಕೆಯ ಕುರಿತು ಮಹತ್ವದ ಸೂಚನೆಗಳನ್ನು ಸರ್ಕಾರಕ್ಕೆ ನೀಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ವರದಿ ನೀಡಲು ರಾಜ್ಯಸಭೆಯ ಸಂಸದ ಪ್ರೊ.ರಾಮಗೋಪಾಲ್‌ ಯಾದವ್‌ ನೇತೃತ್ವದಲ್ಲಿ ಎ.ಕೆ.ಆ್ಯಂಟನಿ, ಸುರೇಶ್‌ ಪ್ರಭು, ಸುಬ್ರಮಣಿಯನ್‌ ಸ್ವಾಮಿ ಮುಂತಾದವರಿರುವ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತ್ತು.

ಸೂಪರ್ ಪವರ್ ದೇಶದಲ್ಲಿ ಆಕ್ಸಿಜನ್, ವೆಂಟಿಲೇಟರ್ ಇಲ್ಲ; ಮೋದಿ ವಿರುದ್ಧ ಸೆಲೆಬ್ರೆಟಿಗಳ ಆಕ್ರೋಶ! ...

ಆ ಸಮಿತಿ ಆಮ್ಲಜನಕ, ಔಷಧ ಪೂರೈಕೆ, ಔಷಧ ದರ, ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ, ಲಸಿಕೆಗೆ ಸಿದ್ಧತೆ ಮುಂತಾದ ವಿಷಯಗಳ ಕುರಿತು ನವೆಂಬರ್‌ನಲ್ಲಿ ವರದಿ ನೀಡಿತ್ತು. ಆ ವರದಿಯಲ್ಲಿ ತುರ್ತು ಸಂದರ್ಭಕ್ಕಾಗಿ ಆಮ್ಲಜನಕದ ತಯಾರಿಕೆ ಹೆಚ್ಚಿಸಬೇಕು, ಹೆಚ್ಚು ಸಿಲಿಂಡರ್‌ಗಳನ್ನು ದಾಸ್ತಾನಿಡಬೇಕು ಮತ್ತು ಪೂರೈಕೆ ವ್ಯವಸ್ಥೆಯನ್ನು ಸುಧಾರಿಸಬೇಕು. ಇದಕ್ಕೆ ಸರ್ಕಾರದಲ್ಲಿರುವ ರೆಡ್‌-ಟೇಪಿಸಂ ಅಡ್ಡಿಯಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ಸಂಗತಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದ ಕಾರಣ ಈಗ ಆಮ್ಲಜನಕದ ಕೊರತೆ ಎದುರಾಗಿದೆ ಎಂದು ಹೇಳಲಾಗಿದೆ.

ವರದಿಯಲ್ಲಿ ಏನು ಎಚ್ಚರಿಸಲಾಗಿತ್ತು?

‘ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ಮತ್ತು ಅದರ ನಿರ್ವಹಣೆ’ ಹೆಸರಿನ ಈ ವರದಿಯಲ್ಲಿ ದೇಶದಲ್ಲಿ ನಿತ್ಯ 6900 ಟನ್‌ ಆಮ್ಲಜನಕ ಉತ್ಪಾದನೆಯಾಗುತ್ತದೆ. ಅದರಲ್ಲಿ ಸೆಪ್ಟೆಂಬರ್‌ನಲ್ಲಿ ವೈದ್ಯಕೀಯ ಆಮ್ಲಜನಕದ ಬಳಕೆ ಗರಿಷ್ಠಕ್ಕೆ ಹೋದಾಗ ಒಂದು ದಿನಕ್ಕೆ 3000 ಟನ್‌ ಬಳಕೆಯಾಗಿತ್ತು. ಸಾಮಾನ್ಯ ದಿನಗಳಲ್ಲಿ ನಿತ್ಯ ವೈದ್ಯಕೀಯ ಕ್ಷೇತ್ರಕ್ಕೆ 1000 ಟನ್‌ ಆಮ್ಲಜನಕ ಸಾಕು. ಇನ್ನುಳಿದ 5900 ಟನ್‌ಗಳನ್ನು ಉದ್ದಿಮೆಗಳು ಬಳಸುತ್ತವೆ. ಆದರೆ, ವೈದ್ಯಕೀಯ ತುರ್ತು ಬಳಕೆಗೆ ಆಮ್ಲಜನಕದ ಅಗತ್ಯಬಿದ್ದಾಗ ಅದನ್ನು ಕ್ಷಿಪ್ರವಾಗಿ ತಯಾರಿಸಿ, ಪೂರೈಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಅವುಗಳ ದರಕ್ಕೆ ಕಡಿವಾಣ ಹಾಕುವ ವ್ಯವಸ್ಥೆಯೂ ಇಲ್ಲ. ಇವೆರಡೂ ಜಾರಿಗೆ ಬರಬೇಕು ಎಂದು ಸಮಿತಿ ಹೇಳಿತ್ತು.

click me!