Ayodhya Temple: ಪುರಾತತ್ವ ಇಲಾಖೆಯ ಉತ್ಖನನದಲ್ಲಿ ಸಿಕ್ಕ ರಾಮ ಮೂರ್ತಿಗಳ ಪ್ರದರ್ಶನಕ್ಕೆ ಬೃಹತ್‌ ಮ್ಯೂಸಿಯಂ!

By Santosh Naik  |  First Published Sep 13, 2023, 1:28 PM IST

ಅಯೋಧ್ಯೆಯಲ್ಲಿ ಇದ್ದಿದ್ದು ರಾಮಮಂದಿರ ಎನ್ನುವುದಕ್ಕೆ ಕೋರ್ಟ್‌ನಲ್ಲಿ ಸಾಕ್ಷಿಯಾಗಿ ನಿಂತಿದ್ದು, ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಉತ್ಖನನ. ಈ ವೇಳೆ ಸಾಕಷ್ಟು ಶ್ರೀರಾಮನ ಮೂರ್ತಿಗಳು ಸಿಕ್ಕಿದ್ದವು. ಈ ಮೂರ್ತಿಗಳು ಹೊಸ ದೇವಸ್ಥಾನದಲ್ಲಿ ಇರಲಿದೆಯೇ? ಎನ್ನುವ ಪ್ರಶ್ನೆಗೆ ನೃಪೇಂದ್ರ ಮಿಶ್ರಾ ಉತ್ತರ ನೀಡಿದ್ದಾರೆ.



ಅಯೋಧ್ಯೆ (ಸೆ.12): ಒಂದಲ್ಲ, ಎರಡಲ್ಲ.. ಅಯೋಧ್ಯೆಯ ನೆಲ ಶ್ರೀರಾಮನಿಗೆ ಸೇರಿದ್ದು ಅನ್ನೋದಕ್ಕೆ ಸಿಕ್ಕಿದ್ದು ಸಾವಿರಾರು ಸಾಕ್ಷ್ಯಗಳು. ಅಯೋಧ್ಯೆಯ ಪ್ರತಿ ಕಲ್ಲು ಕೂಡ ಶ್ರೀರಾಮನಿಗೆ ಸೇರಿದ್ದು ಅನ್ನೋದಕ್ಕೆ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಉತ್ಖನನಗಳೇ ಸಾಕ್ಷಿಯಾಗಿದ್ದವು. ಅಲ್ಲಿ ಸಿಕ್ಕ ರಾಮನ ಮೂರ್ತಿಗಳನ್ನು ಏನು ಮಾಡಲಾಗುತ್ತದೆ. ಹೊಸ ದೇವಸ್ಥಾನದಲ್ಲಿ ಆ ಮೂರ್ತಿಗಳನ್ನು ಇಡಲಾಗುತ್ತದೆಯೇ ಎನ್ನುವ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲಗಳಿವೆ. ಈ ಎಲ್ಲಾ ಕುತೂಹಲಗಳಿಗೆ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ನಿರ್ಮಾಣ ಸಮಿತಿಯ ಮುಖ್ಯಸ್ಥರಾಗಿರುವ ನೃಪೇಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ. ಏಷ್ಯಾನೆಟ್‌ ಗ್ರೂಪ್‌ವ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಕಾಲ್ರಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಇದರ ವಿವರಗಳನ್ನು ನೀಡಿದರು. ಅಯೋಧ್ಯೆಗೆ ಬರುವ ಪ್ರತಿ ಭಕ್ತಾದಿಗಳು ಕೂಡ ಹಳೆಯ ರಾಮನ ಮೂರ್ತಿಗಳನ್ನು ವೀಕ್ಷಣೆ ಮಾಡಬಹುದು. ಅದಕ್ಕಾಗಿ ಬೃಹತ್‌ ಮ್ಯೂಸಿಯಂ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಇನ್ನೊಂದು ನನ್ನನ್ನು ಬಹುವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ, ಇಲ್ಲಿಯೇ ರಾಮಮಂದಿರ ಇತ್ತು ಎನ್ನಬಹುದಾದ ಅನೇಕ ಕಲಾಕೃತಿಗಳು ಇಲ್ಲಿ ದೊರೆತಿದ್ದವು. ಅವುಗಳು ಈ ಕಟ್ಟಡದ ನಿರ್ಮಾಣದಲ್ಲಿ ಪ್ರೇರಣೆಯಾಗಿ ಇರುತ್ತವೆಯೇ? ಎಂದು ರಾಜೇಶ್‌ ಕಾಲ್ರಾ ಅವರು ಕೇಳಿದ ಪ್ರಶ್ನೆಗೆ,  ನಿಜ ಹೇಳಬೇಕೆಂದರೆ ಆ ಕಲಾಕೃತಿಗಳು ಈ ದೇವಸ್ಥಾನದ ಶೈಲಿಗೆ ಹೊಂದುವುದಿಲ್ಲ. ಆ ಕಲಾಕೃತಿಗಳು ಇಲ್ಲಿ ದೇವಾಲಯ ಇತ್ತು, ಅದು ಪುರಾತನ ದೇಗುಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದವು. ಅವುಗಳ ಹಿಂದೆ ಒಂದು ಇತಿಹಾಸವಿತ್ತು. ಇತಿಹಾಸದ ಕಾಲಮಾನ ನಿರ್ಧರಿಸಲು ಅವು ಸಹಾಯಕವಾದವು. ಅವುಗಳನ್ನು ಮುಂದೆ ನಿರ್ಮಿಸಲಾಗುವ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗುವುದು. ರಾಮಕಥಾ ಮ್ಯೂಸಿಯಂ ಅನ್ನು ಹೈವೆಯಲ್ಲಿ  ನಿರ್ಮಿಸಲು ಯುಪಿ ಸರ್ಕಾರದ ಬಳಿ ಮನವಿ ಮಾಡಿದ್ದೇವೆ. ಮೂರಂತಸ್ತಿನ ಆ ಕಟ್ಟಡವನ್ನು ಇಲ್ಲಿ ಕಟ್ಟುವುದಕ್ಕಿಂತ ಹೈವೇ ಬಳಿ ಕಟ್ಟಿದರೆ ಉತ್ತಮ. ಅಲ್ಲಿಗೆ ಭೇಟಿ ಕೊಡುವವರು ಇಲ್ಲಿಗೆ ಬರಬೇಕಾಗಿಲ್ಲ. ಇಲ್ಲಿಯ ಸೆಕ್ಯುರಿಟಿ, ಜನಸಂದಣಿ ಅಲ್ಲಿರುವುದಿಲ್ಲ. ಅದನ್ನು ಹೈವೇಯಲ್ಲಿ ಕಟ್ಟುತ್ತೇವೆ ಎಂದು ರಾಜ್ಯ ಸರ್ಕಾರದ ಬಳಿ ಮನವಿ ಮಾಡಿದ್ದೇವೆ. ಕೋರ್ಟ್ ಮುಂದೆ ಸಲ್ಲಿಸಿದ ಎಲ್ಲಾ ಗ್ರಂಥಗಳು, ಡಾಕ್ಯುಮೆಂಟ್ಸ್, 500 ವರ್ಷಗಳ ಕಾನೂನು ಹೋರಾಟದ ನಂತರ ದೇವಸ್ಥಾನ ಕಟ್ಟಿದ ಪ್ರಕ್ರಿಯೆ ಎಲ್ಲವನ್ನೂ ಅಲ್ಲಿ ಇಡಲಾಗುತ್ತದೆ' ಎಂದು ತಿಳಿಸಿದರು.

ನಾವು ಮೊದಲ ಬಾರಿಗೆ ಮಾತಾಡಿದಾಗ ನೀವು ವಾಲ್ಮೀಕಿ ದೇವಾಲಯ, ಶಬರಿಮಾ ದೇವಾಲಯಗಳ ಬಗ್ಗೆ ಹೇಳಿದ್ದಿರಿ. ಅವುಗಳ ನಿರ್ಮಾಣ ಕಾರ್ಯವೂ ಶುರುವಾಗಿದೆಯೇ? ಎನ್ನುವ ಪ್ರಶ್ನೆಗೆ, 'ಇಲ್ಲ, ಇಲ್ಲ. ಆ ಎಲ್ಲ ದೇವಸ್ಥಾನಗಳು ಇರಬೇಕು ಎಂಬ ನಿರ್ಧಾರವಾಗಿದೆ. ಜನರ ನಂಬಿಕೆಗೆ ತಕ್ಕಂತೆ ದೇವಸ್ಥಾನ ಸಾಮಾಜಿಕ  ಸಾಮರಸ್ಯ ಸಾರುವಂತಿರಬೇಕು. ಅದಕ್ಕಾಗಿ ಮಹರ್ಷಿ ವಾಲ್ಮೀಕಿ, ನಿಷಾದ್ ರಾಜ್, ಶಬರಿ ಮಾತಾ ಮೊದಲಾದವರ 7  ದೇವಸ್ಥಾನಗಳನ್ನು ಪ್ರಾಂಗಣದ ಹೊರಗೆ ನಿರ್ಮಿಸಲಾಗುತ್ತದೆ. ಈಗಾಗಲೇ ಅವುಗಳಿಗೆ ಸ್ಥಳ ಗುರುತಿಸಲಾಗಿದೆ. ಪ್ರಾಂಗಣದ ಹೊರಗೋಡೆ ನಿರ್ಮಾಣ ಆಗುವುದನ್ನು ಕಾಯುತ್ತಿದ್ದೇವೆ. ಬಹುಶಃ ಆ ದೇವಸ್ಥಾನಗಳ ನಿರ್ಮಾಣ ಮಾರ್ಚ್ 2024ರ ನಂತರ ಪ್ರಾರಂಭವಾಗುತ್ತದೆ' ಎಂದು ಮಾಹಿತಿ ನೀಡಿದರು.

Ram Mandir: ರಾಮ ಮಂದಿರ ನಿರ್ಮಾಣದ ಬಗ್ಗೆ ನೃಪೇಂದ್ರ ಮಿಶ್ರಾ ಹೇಳಿದ್ದೇನು 

Latest Videos

undefined

ರಾಮಮಂದಿರ ನಿರ್ಮಾಣಕ್ಕೆ ಎಲ್ಲ ಕಲಾವಿದರು, ಕುಶಲಕರ್ಮಿಗಳನ್ನು ಎಲ್ಲಿಂದ ಕರೆತಂದಿರಿ? ಎನ್ನುವ ಪ್ರಶ್ನೆಗೆ,  ಇಲ್ಲಿ ಅತ್ಯುತ್ತಮವಾದ ಶಿಲ್ಪಿಗಳಿದ್ದಾರೆ. ಅವರೆಲ್ಲಾ ಒರಿಸ್ಸಾದಿಂದ ಬಂದಿದ್ದಾರೆ. ವಿಗ್ರಹ ನಿರ್ಮಾಣ, ಹಾಗೂ ಕಂಬಗಳ ನಿರ್ಮಾಣದಲ್ಲಿ ಅವರು ಸಿದ್ಧಹಸ್ತರು. ಈ ಎಲ್ಲಾ ಕಂಬಗಳನ್ನು ಇವರೆ ನಿರ್ಮಿಸಿದ್ದರು. ನಮಗೆ ಗೊತ್ತು, ಒರಿಸ್ಸಾ, ಸಾರನ್ಪುರ್, ಆಗ್ರಾ ಅಲ್ಲೆಲ್ಲಾ ನುರಿತ ಶಿಲ್ಪಿಗಳು ಸಿಗ್ತಾರೆ. ಕೆಳಹಂತದ ಸ್ತಂಭಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದೆವು. ಅವರೆಲ್ಲಾ ಫೈಬರ್, ಹಾಗೂ ಶಿಲೆಗಳ ಕೆತ್ತನೆಯಲ್ಲಿ ಪರಿಣಿತರೇ. ಕಂಚಿನ ಮೂರ್ತಿಗಳಿಗೆ ಬೇರೆಯದೇ ಕಲಾವಿದರಿದ್ದಾರೆ. ರಾಮನ ವಿವಿಧ ಆದರ್ಶನಗಳನ್ನು ಬಿಂಬಿಸುವ ನೂರಾರು ಕಲಾಕೃತಿಗಳನ್ನು ಪ್ರಾಂಗಣದ ಬೇರೆ ಬೇರೆ ಕಡೆ ಸ್ಥಾಪಿಸಲಾಗುವುದು. ಅಂಥ ಮರ್ಯಾದಾ ಪುರುಷೋತ್ತಮನ ಆದರ್ಶಗಳು ಸನಾತನ ಧರ್ಮದಲ್ಲಿ ಹೇಗೆ ಬಿಂಬಿತವಾದವು ಎಂದು ಸಾರುವ ಕಥೆಗಳು ಕಂಚಿನ ಮ್ಯೂರಲ್ಗಳಲ್ಲಿ ಮೂಡುತ್ತವೆ. ನಮ್ಮ ಟ್ರೆಷರರ್, ಪುಣೆಯ ಪ್ರಸಿದ್ಧ ಕಥಾವಾಚಕ ಸ್ವಾಮಿ ಗೋವಿಂದದೇವ್ಗಿರಿ ಹಾಗೂ ಯತೀಂದ್ರ ಮಿಶ್ರಾ ಈ ಕಥೆಗಳನ್ನು ಆರಿಸಿದ್ದಾರೆ.  ಆ ಚಿತ್ರಗಳನ್ನೂ ಮೊದಲು ಕ್ಲೇನಲ್ಲಿ ಮಾಡಿ, ಫೈಬರ್ನಲ್ಲಿ ಮಾಡಿ ಕೊನೆಯದಾಗಿ ಕಂಚಿನಲ್ಲಿ ಮೂಡಿಸಲಾಗುತ್ತದೆ ಎಂದು ವಿವರಿಸಿದರು.

'ಲೋಕ' ಸಮರಕ್ಕೂ ಮುನ್ನ ಶ್ರೀರಾಮನ ಪ್ರತಿಷ್ಠಾಪನೆ !

click me!