ನವದೆಹಲಿ (ಮೇ.21): ಕೊರೋನಾ ಪರೀಕ್ಷೆಗೆ ಒಳಗಾದವರಿಗೆ ಫಲಿತಾಂಶ ಸಿಗಲು ಕನಿಷ್ಠ 24 ತಾಸಾದರೂ ಬೇಕು. ಈ ವಿಳಂಬವನ್ನು ತಗ್ಗಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಹೊಸ ಪರೀಕ್ಷಾ ವಿಧಾನವೊಂದನ್ನು ಶೋಧಿಸಿದ್ದಾರೆ. ಎಂಜಲನ್ನು ಬಳಸಿ ನಡೆಸಲಾಗುವ ಈ ಪರೀಕ್ಷೆಯ ಫಲಿತಾಂಶ ಕೇವಲ 1 ಸೆಕೆಂಡ್‌ನಲ್ಲಿ ಸಿಗಲಿದೆ. ಸದ್ಯ ವಿಶ್ವದಲ್ಲಿ ಲಭ್ಯವಿರುವ ಕೊರೋನಾ ಪರೀಕ್ಷಾ ವಿಧಾನಗಳಿಗಿಂತ ಇದು ಸೂಪರ್ ಫಾಸ್ಟ್ ಆಗಿದೆ.
ಹೊಸ ಪರೀಕ್ಷಾ ವಿಧಾನ ಕುರಿತು ‘ವ್ಯಾಕ್ಯೂಂ ಸೈನ್ಸ್ ಅಂಡ್ ಟೆಕ್ನಾಲಜಿ ಬಿ’ ನಿಯತಕಾಲಿಕೆಯಲ್ಲಿ ಬರೆಯಲಾಗಿದೆ. ಕೊರೋನಾ ಪರೀಕ್ಷೆಗೆ ಹಾಲಿ ಆರ್‌ಟಿ-ಪಿಸಿಆರ್ ವಿಧಾನ ಬಳಸಲಾಗುತ್ತಿದ್ದು, ಅದು ಅತ್ಯುತ್ತಮ ಎನಿಸಿಕೊಂಡಿದೆ. ಆದರೆ ಅದರ ಫಲಿತಾಂಶ ಬರಲು ವಿಳಂಬವಾಗುತ್ತಿದೆ. ಆದರೆ ಹೊಸ ವಿಧಾನದಲ್ಲಿ ಆ ರೀತಿ ಆಗುವುದಿಲ್ಲ. ಬೇಗನೆ ಪರೀಕ್ಷೆ ನಡೆದು ಫಲಿತಾಂಶ ಬರುತ್ತದೆ ಎಂದು ಲೇಖನ ಬರೆದಿರುವ ಫ್ಲೋರಿಡಾ ವಿಶ್ವವಿದ್ಯಾಲಯದ ಮಿಂಘನ್ ಕ್ಸಿಯಾನ್ ತಿಳಿಸಿದ್ದಾರೆ.
ಮನೆಯಲ್ಲೇ ಟೆಸ್ಟ್ ಮಾಡ್ಬೋದು ಕೊರೋನಾ: ರ‍್ಯಾಪಿಡ್ ಹೋಂ ಟೆಸ್ಟಿಂಗ್ ಕಿಟ್‌ಗೆ ICMR ಒಪ್ಪಿಗೆ .
ಪರೀಕ್ಷೆ ಹೇಗೆ?:
ಮಧುಮೇಹ ಪತ್ತೆಗೆ ಬಳಸಲಾಗುವ ಗ್ಲುಕೋಸ್ ಟೆಸ್ಟ್ ಸ್ಟ್ರಿಪ್ ರೀತಿಯಲ್ಲೇ ಕೊರೋನಾ ಪರೀಕ್ಷೆಯ ಬಯೋಸೆನ್ಸರ್ ಸ್ಟ್ರಿಪ್ ಇರುತ್ತದೆ. ಅದರೊಳಗೆ ಮೈಕ್ರೋಫ್ಲುಯಿಡಿಕ್ ಚಾನಲ್ ಇರುತ್ತದೆ. ಒಳಗೆ ಎಲೆಕ್ಟ್ರೋಡ್‌ಗಳು ಇದ್ದು, ಜೊಲ್ಲು ರಸ ಹಾಕಲು ಜಾಗವಿರುತ್ತದೆ. ಎಲೆಕ್ಟ್ರೋಡ್ ಪೈಕಿ ಒಂದಕ್ಕೆ ಚಿನ್ನದ ಲೇಪನ ಮಾಡಲಾಗಿರುತ್ತದೆ. ಕೋವಿಡ್ ಸಂಬಂಧಿಸಿದ ಪ್ರತಿಕಾಯಗಳನ್ನು ಚಿನ್ನದ ಲೇಪನಕ್ಕೆ ರಾಸಾಯನಿಕ ವಿಧಾನದ ಮೂಲಕ ಸೇರಿಸಿರಲಾಗುತ್ತದೆ. ಸೋಂಕು ಪರೀಕ್ಷೆ ವೇಳೆ ಸೆನ್ಸರ್ ಸ್ಟ್ರಿಪ್‌ಗಳನ್ನು ಕನೆಕ್ಟರ್ ಮೂಲಕ ಸರ್ಕಿಟ್ ಬೋರ್ಡ್‌ಗೆ ಸಂಪರ್ಕಿಸಲಾಗುತ್ತದೆ. ವಿದ್ಯುತ್ ಹಾಯಿಸಿದಾಗ ಸಿಗ್ನಲ್, ಸರ್ಕಿಟ್ ಬೋರ್ಡ್‌ಗೆ ವಾಪಸ್ ಬರುತ್ತದೆ. ಅದರ ಫಲಿತಾಂಶ ಪರದೆ ಮೇಲೆ ಬಿತ್ತರವಾಗುತ್ತದೆ. ಆ್ಯಂಟಿಜೆನ್, ವೈರಲ್ ಪ್ರೋಟಿನ್ ಆಧರಿಸಿ ಫಲಿತಾಂಶ ನೀಡಲಾಗುತ್ತದೆ.
ಒಂದು ಸಲ ಪರೀಕ್ಷೆ ನಡೆದ ಬಳಿಕ ಸ್ಟ್ರಿಪ್ ಅನ್ನು ಬಿಸಾಡಬೇಕು. ಟೆಸ್ಟ್ ಸರ್ಕಿಟ್ ಬೋರ್ಡ್ ಅನ್ನು ಮರು ಬಳಕೆ ಮಾಡಬಹುದು. ಈ ಪರೀಕ್ಷೆಯಿಂದ ಪರೀಕ್ಷಾ ಸಮಯ ಹಾಗೂ ವೆಚ್ಚ ಎರಡೂ ಉಳಿಯಲಿದೆ. ಕೋವಿಡ್ ಅಲ್ಲದೆ ಇತರೆ ರೋಗಗಳ ಪತ್ತೆಗೂ ಇದನ್ನು ಬಳಸಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.