ಏಷ್ಯಾ ಹಾಗೂ ಯುರೋಪ್‌ನ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ನಮ್ಮ ದೇಶದಲ್ಲೂ ರಾಜ್ಯಗಳು ಮತ್ತೆ ಕಟ್ಟೆಚ್ಚರ ವಹಿಸಬೇಕು.
ನವದೆಹಲಿ (ಮಾ.21): ಏಷ್ಯಾ ಹಾಗೂ ಯುರೋಪ್‌ನ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ನಮ್ಮ ದೇಶದಲ್ಲೂ ರಾಜ್ಯಗಳು ಮತ್ತೆ ಕಟ್ಟೆಚ್ಚರ ವಹಿಸಬೇಕು ಹಾಗೂ ಟೆಸ್ಟಿಂಗ್ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ ದೇಶದ ಪ್ರಸಿದ್ಧ ಸಾಂಕ್ರಾಮಿಕ ರೋಗಗಳ ತಜ್ಞರು ಅದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಎಲ್ಲೋ ಕೊರೋನಾ ಹೆಚ್ಚುತ್ತಿದೆ ಎಂದು ನಾವು ಆತಂಕದಲ್ಲಿ ಬದುಕುವ ಅಗತ್ಯವಿಲ್ಲ. ಮುಂದಿನ ಕೊರೋನಾ ಅಲೆಗಳು ಭಾರತೀಯರನ್ನು ತೀವ್ರವಾಗಿ ಬಾಧಿಸುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ನಿರ್ಬಂಧಗಳನ್ನು ಸಡಿಲಿಸಿ, ಮಾಸ್ಕ್ ಕಡ್ಡಾಯದ ನಿಯಮ ಕೂಡ ಕೈಬಿಡಬಹುದು’ ಎಂದು ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
undefined
ನೈಸರ್ಗಿಕ ರೋಗನಿರೋಧಕ ಶಕ್ತಿ, ವ್ಯಾಪಕ ಲಸಿಕೆ: ಭಾರತದಲ್ಲಿ ಶೇ.80ರಿಂದ ಶೇ.90ರಷ್ಟುಜನರಿಗೆ ಕೋವಿಡ್ ಬಂದು ಹೋಗಿದೆ. ಹೀಗಾಗಿ ಅವರಲ್ಲಿ ನೈಸರ್ಗಿಕವಾಗಿ ಕೋವಿಡ್ ನಿರೋಧಕ ಶಕ್ತಿ ವೃದ್ಧಿಯಾಗಿದೆ. ಜೊತೆಗೆ ಬಹುತೇಕ ಎಲ್ಲರಿಗೂ ಲಸಿಕೆ ನೀಡಲಾಗಿದೆ. ಮೇಲಾಗಿ ನಮ್ಮ ದೇಶದಲ್ಲಿ ನೀಡಿರುವುದು ನಮ್ಮದೇ ದೇಶದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆ. ಹೀಗಾಗಿ ಬೇರೆ ದೇಶಗಳನ್ನು ನೋಡಿಕೊಂಡು ನಮ್ಮಲ್ಲೂ ಹಾಗೇ ಆಗಬಹುದು ಎಂದು ಊಹೆ ಮಾಡಬಾರದು.
ನಮ್ಮ ದೇಶದ ಸೋಂಕಿನ ಅಂಕಿಅಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಕ್ರಮ ಕೈಗೊಳ್ಳಬೇಕು. ನಮ್ಮಲ್ಲಿ ಹೊಸ ಕೋವಿಡ್ ಅಲೆ ಬಂದರೆ ಅದು ತೀವ್ರವಾಗಿರುವ ಸಾಧ್ಯತೆ ತುಂಬಾ ಕಡಿಮೆಯಿದೆ. ಹೀಗಾಗಿ ಮಾಸ್ಕ್ ಕಡ್ಡಾಯ ನಿಯಮ ಕೈಬಿಟ್ಟು, ವೃದ್ಧರು ಹಾಗೂ ಗಂಭೀರ ಅನಾರೋಗ್ಯವುಳ್ಳವರಿಗೆ ಮಾತ್ರ ಮಾಸ್ಕ್ ಧರಿಸಲು ಸಲಹೆ ನೀಡಿದರೆ ಸಾಕು ಎಂದು ತಜ್ಞರು ಹೇಳಿದ್ದಾರೆ.
Covid Crisis: ಕೇವಲ 3116 ಪ್ರಕರಣ, ಸಾರ್ವಕಾಲಿಕ ಕನಿಷ್ಠ: 47 ಸೋಂಕಿತರ ಸಾವು
ಸದಾ ಭಯದಲ್ಲಿ ಬದುಕಬೇಕಿಲ್ಲ: ಚೀನಾ, ಹಾಂಕಾಂಗ್, ವಿಯೆಟ್ನಾಂ, ದಕ್ಷಿಣ ಕೊರಿಯಾ ಹಾಗೂ ಯುರೋಪ್‌ನ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಏರಿಕೆಯಾದಾಕ್ಷಣ ನಮ್ಮಲ್ಲೂ ಏರಿಕೆಯಾಗಬೇಕು ಎಂದೇನಿಲ್ಲ. ಹೀಗಾಗಿ ರಾಜ್ಯಗಳು ನಿರ್ಬಂಧ ಸಡಿಲಿಸುತ್ತಿರುವ ಪ್ರಕ್ರಿಯೆ ಮುಂದುವರೆಯಬೇಕು. ಸದಾಕಾಲ ನಾವು ಹೆದರಿಕೆಯಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಹೆಚ್ಚುವರಿ ನಿರ್ದೇಶಕ ಡಾ.ಸಮೀರಣ್ ಪಾಂಡಾ ತಿಳಿಸಿದ್ದಾರೆ.
ಮಾಸ್ಕ್ ಬೇಡ, ಲಸಿಕೆ ಇನ್ನಷ್ಟು ನೀಡಿ: ದೆಹಲಿಯ ಏಮ್ಸ್‌ನ ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞ ಹಾಗೂ ಐಸಿಎಂಆರ್ ಸಹಯೋಗದ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗದ ಉಸ್ತುವಾರಿಯಾಗಿರುವ ಡಾ.ಸಂಜಯ್ ರಾಯ್, ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಚಂದ್ರಕಾಂತ್ ಲಹಾರಿಯಾ, ಸಫ್ದರ್‌ಜಂಗ್ ಆಸ್ಪತ್ರೆಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಜುಗಲ್ ಕಿಶೋರ್ ಮುಂತಾದವರು, ‘ದೇಶದಲ್ಲಿ ಮಾಸ್ಕ್ ಕಡ್ಡಾಯದ ನಿಯಮ ಕೈಬಿಡಬೇಕು. ಗಂಭೀರ ಅನಾರೋಗ್ಯವುಳ್ಳವರು ಮತ್ತು ವೃದ್ಧರಿಗೆ ಮಾತ್ರ ಮಾಸ್ಕ್ ಧರಿಸಲು ಸಲಹೆ ನೀಡಬೇಕು. ಲಸಿಕಾಕರಣವನ್ನು ಹೆಚ್ಚಿಸಬೇಕು’ ಎಂದು ಸಲಹೆ ನೀಡಿದ್ದಾರೆ.
ಜಗತ್ತಿನಾದ್ಯಂತ ಕೊರೋನಾ ಅಬ್ಬರ: ಭಾರತದಲ್ಲಿ ಗೊಂದಲ: ಚೀನಾ, ಹಾಂಗ್‌ಕಾಂಗ್, ವಿಯೆಟ್ನಾಂ, ದಕ್ಷಿಣ ಕೊರಿಯಾ ಮುಂತಾದ ಏಷ್ಯನ್ ರಾಷ್ಟ್ರಗಳಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ತೀವ್ರ ಪ್ರಮಾಣದಲ್ಲಿ ಏರಿಕೆಯಾದ ನಂತರ ಕೆಲ ಯುರೋಪಿಯನ್ ರಾಷ್ಟ್ರಗಳಲ್ಲೂ ವೈರಸ್ ತೀವ್ರವಾಗಿ ಹರಡತೊಡಗಿದೆ. ಈಗ ಅಮೆರಿಕದಲ್ಲೂ ಸೋಂಕಿನ ಪ್ರಮಾಣ ಭಾರಿ ವೇಗದಲ್ಲಿ ಹೆಚ್ಚುತ್ತಿದೆ. ಇತ್ತ ಭಾರತದಲ್ಲಿ ಸೋಂಕು ಸಾರ್ವಕಾಲಿಕ ಕನಿಷ್ಠಕ್ಕೆ ಇಳಿಕೆಯಾಗಿದೆ. ಮೂರನೇ ಅಲೆಯ ಲಘು ಸೋಂಕು ಹಾಗೂ ಕನಿಷ್ಠ ಹಾನಿಯ ನಂತರ ಭಾರತದಲ್ಲಿ ನಾಲ್ಕನೆ ಅಲೆ ಬಂದರೂ ಅದು ಇನ್ನಷ್ಟು ದುರ್ಬಲವಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ಆದರೆ, ಕೇಂದ್ರ ಸರ್ಕಾರವು ವಿದೇಶಗಳಲ್ಲಿ ಒಮಿಕ್ರೋನ್ ವೈರಸ್‌ನ ಎರಡನೇ ಅಲೆ ಆರಂಭವಾಗಿರುವುದರಿಂದ ನಮ್ಮ ದೇಶದಲ್ಲೂ ಕಟ್ಟೆಚ್ಚರ ವಹಿಸಬೇಕು ಎಂಬ ನಿಲುವು ತಾಳಿದೆ. ಹೀಗಾಗಿ ರಾಜ್ಯ ಸರ್ಕಾರಗಳಿಗೆ ಮತ್ತೆ ಟೆಸ್ಟಿಂಗ್ ಹೆಚ್ಚಿಸಲು ಹಾಗೂ ಇನ್ನಿತರ ಕೋವಿಡ್ ಸಂಬಂಧಿ ಶಿಷ್ಟಾಚಾರಗಳನ್ನು ಬಿಗಿಗೊಳಿಸಲು ಸೂಚಿಸಿದೆ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯೂ ಸೇರಿದಂತೆ ಪ್ರಸಿದ್ಧ ಸಾಂಕ್ರಾಮಿಕ ರೋಗಗಳ ತಜ್ಞರು ನಮ್ಮ ದೇಶದಲ್ಲಿ ಕೋವಿಡ್ ನಿರ್ಬಂಧಗಳನ್ನೆಲ್ಲ ತೆಗೆದುಹಾಕಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
Covid Crisis: ಮಾಸ್ಕ್ ಕಡ್ಡಾಯ ನಿಯಮ ರದ್ದತಿಗೆ ಮಹಾರಾಷ್ಟ್ರ ಚಿಂತನೆ
ಇನ್ನು ಕೆಲ ಸಾಂಕ್ರಾಮಿಕ ರೋಗಗಳ ತಜ್ಞರು ಮಾಸ್ಕ್ ಕೂಡ ಬೇಕಾಗಿಲ್ಲ ಎಂದು ಹೇಳತೊಡಗಿದ್ದಾರೆ. ಒಟ್ಟಿನಲ್ಲಿ ಕೋವಿಡ್ ವಿಷಯದಲ್ಲಿ ಸರ್ಕಾರಗಳಿಗೂ ಜನರಿಗೂ ಗೊಂದಲಕರ ವಾತಾವರಣ ನಿರ್ಮಾಣವಾಗಿದೆ. ಎರಡು ವರ್ಷಗಳ ಕಾಲ ಕೋವಿಡ್‌ನ ಆತಂಕದಿಂದ ಜನರು ಸಾಕಷ್ಟುನಷ್ಟಅನುಭವಿಸಿದ್ದಾರೆ. ಆರ್ಥಿಕತೆ ಕೂಡ ನಷ್ಟಎದುರಿಸಿದೆ. ಈಗಷ್ಟೇ ಎಲ್ಲವೂ ಬದಲಾಗಿ ಮೊದಲಿನ ಸಹಜ ಸ್ಥಿತಿ ಮರುಕಳಿಸುತ್ತಿದೆ. ಈ ಹಂತದಲ್ಲಿ ವಿದೇಶಗಳನ್ನು ನೋಡಿ ಮತ್ತೆ ನಿರ್ಬಂಧಗಳನ್ನು ಕಠಿಣಗೊಳಿಸಬೇಕೋ ಅಥವಾ ನಮ್ಮ ದೇಶದ ಕೆಲ ತಜ್ಞರ ಮಾತಿನಂತೆ ನಿರ್ಬಂಧಗಳನ್ನು ತೆಗೆದುಹಾಕಬೇಕೋ?
ಈ ವಿಷಯದಲ್ಲಿ ನಮ್ಮದೇ ದೇಶದ ಕೊರೋನಾ ಅಂಕಿಅಂಶ, ಇಲ್ಲಿನ ಜನರ ರೋಗನಿರೋಧಕ ಶಕ್ತಿ, ಕೋವಿಡ್ ವಿರುದ್ಧ ಪ್ರತಿಕಾಯಗಳ ಅಭಿವೃದ್ಧಿ, ಲಸಿಕಾಕರಣ, ಹವಾಮಾನ ಹಾಗೂ ಕೋವಿಡ್ ಹರಡುತ್ತಿರುವ ಟ್ರೆಂಡ್ ಮುಂತಾದವುಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದು ಒಳ್ಳೆಯದು. ಬೇರೆ ದೇಶಗಳನ್ನು ನೋಡಿ ಇಲ್ಲಿ ಹೆದರುವುದು ಮೊದಲೇ ಬೆಚ್ಚಿದವನ ಮೇಲೆ ಹಾವಿನಂತೆ ಕಾಣುವ ಹಗ್ಗ ಎಸೆದಂತಾದೀತು. ಕೋವಿಡ್ ವಿಷಯದಲ್ಲಿ ಊಹಾತ್ಮಕ ಕ್ರಮಗಳಿಗಿಂತ ಇನ್ನುಮುಂದೆ ಸ್ಪಷ್ಟಅಧ್ಯಯನ ಆಧರಿತ ಕ್ರಮಗಳು ಜಾರಿಗೆ ಬರುವಂತಾಗಬೇಕು.