ಕೋರ್ಟ್ ಹೇಳಿದ್ದೇನು?
ನವದೆಹಲಿ: ಕ್ರಿಮಿನಲ್ ಅಪರಾಧ ಪ್ರಕರಣಗಳ ಸಂಬಂಧ ನಡೆಯುವ ಮಾಧ್ಯಮದ ವಿಚಾರಣೆ ನ್ಯಾಯದ ದಿಕ್ಕು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಇಂಥ ಪ್ರಕರಣಗಳಲ್ಲಿ ಪೊಲೀಸರು ಮಾಧ್ಯಮಗಳಿಗೆ ಯಾವ ರೀತಿ ಮಾಹಿತಿ ನೀಡಬೇಕು ಎಂಬುದರ ಕುರಿತು 3 ತಿಂಗಳಲ್ಲಿ ಮಾರ್ಗಸೂಚಿ ರಚಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡುವುದರ ಕುರಿತಾಗಿ ಪ್ರಾಮಾಣಿತ ಕಾರ್ಯಾಚರಣೆ ವ್ಯವಸ್ಥೆ (ಎಸ್‌ಒಪಿ)ಯನ್ನು ಶೀಘ್ರವಾಗಿ ಜಾರಿ ಮಾಡುವುದು ಅಗತ್ಯವಾಗಿದೆ. ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಧ್ಯಮ ವಿಚಾರಣೆಯ ಘಟನೆಗಳು ಹೆಚ್ಚಾಗುತ್ತಿರುವ ಕಾರಣ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ ಹೇಳಿದೆ.
ಅಪರಾಧ ಪ್ರಕರಣಗಳಲ್ಲಿ (criminal case) ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಏಕರೂಪತೆಯನ್ನು ಪೊಲೀಸರು ಅನುಸರಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಈ ಪೀಠ ವಿಚಾರಣೆ ನಡೆಸುತ್ತಿದೆ. ಈ ನಿಯಮವನ್ನು ಜಾರಿಗೆ ತರುವಾಗ ಮಾಧ್ಯಮಗಳ ಮೂಲಭೂತ ಹಕ್ಕಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ (Freedom of expression) ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಆರೋಪಿಗಳ ಸರಿಯಾದ ವಿಚಾರಣೆ ಮತ್ತು ಸಂತ್ರಸ್ತರ ಮಾಹಿತಿ ಗೌಪ್ಯತೆ ಕಾಪಾಡುವುದಕ್ಕೂ ಗಮನ ಹರಿಸಬೇಕು ಎಂದು ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಸಿಂಧುಗೊಂಡ ಹಾಸನ ಸಂಸದ ಪ್ರಜ್ವಲ್ ರೇವಣ್ಣ
2010ರ ಬಳಿಕ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ (central Govt) ಯಾವುದೇ ನಿಯಮಾವಳಿ ಬಿಡುಗಡೆಯಾಗಿಲ್ಲ ಎಂಬುದನ್ನು ಗಮನಿಸಿರುವ ಕೋರ್ಟ್, ಹೊಸ ನೀತಿ ರೂಪಿಸಲು 1 ತಿಂಗಳಿನೊಳಗೆ ಸಲಹೆಗಳನ್ನು ಕಳುಹಿಸುವಂತೆ ಎಲ್ಲಾ ರಾಜ್ಯಗಳ ಡಿಜಿಪಿಗಳಿಗೆ ಸೂಚಿಸಿದೆ. ಈ ವೇಳೆ ಮಾನವ ಹಕ್ಕು ಆಯೋಗದ ಸಲಹೆಗಳನ್ನು ಪಾಲಿಸಬೇಕು ಎಂದೂ ಹೇಳಿದೆ. ವಿಚಾರಣೆಯ ಆರಂಭಿಕ ಹಂತದಲ್ಲಿ ಪೊಲೀಸರು ಮಾಧ್ಯಮಗಳಿಗೆ ನೀಡುವ ಮಾಹಿತಿ ನ್ಯಾಯಾಂಗದ ವಿಚಾರಣೆಯನ್ನು ಹಾದಿ ತಪ್ಪಿಸಬಹುದು. ಅಲ್ಲದೇ ಇದು ನ್ಯಾಯಾಧೀಶರನ್ನು ಪ್ರಭಾವಿಸಬಹುದು ಎಂದು ಕೋರ್ಟ್ ಹೇಳಿದೆ.
ಮಾಧ್ಯಮಗಳಿಗೆ ಪೊಲೀಸರು ನೀಡುವ ಮಾಹಿತಿಗೆ ಸಂಬಂಧಿಸಿದಂತೆ ಏಕರೂಪದ ಕಾನೂನು ಜಾರಿ ಮಾಡದಿದ್ದರೆ ಇದರಲ್ಲಿ ಏಕತೆಯನ್ನು ತರಲು ಸಾಧ್ಯವಿಲ್ಲ. ಪ್ರಾಥಮಿಕ ಹಂತದಲ್ಲಿ ಮಾಧ್ಯಮ ವಿಚಾರಣೆ ಆರೋಪಿಗಳು ಹಾಗೂ ಸಂತ್ರಸ್ತರ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತದೆ. ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ಮತ್ತು ಗ್ರಾಹಕರು ನ್ಯಾಯಯುತ ಮತ್ತು ಪಕ್ಷಪಾತವಿಲ್ಲವಿಲ್ಲದ ಮಾಹಿತಿಯನ್ನು ಪಡೆಯುವ ಹಕ್ಕು ಹೊಂದಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗೆಯೇ ಆರೋಪಿಗಳಿಗೂ ಸಹ ನ್ಯಾಯಯುತ ಮತ್ತು ಪಕ್ಷಪಾತವಿಲ್ಲದ ತನಿಖೆ ದೊರೆಯಬೇಕು. ಆದರೆ ಮಾಧ್ಯಮಗಳಲ್ಲಿ ನಡೆಯುವ ಪಕ್ಷಪಾತದ ವಿಚಾರಣೆ ಆರೋಪಿ ಅಪರಾಧಿ ಎಂಬ ಭಾವವನ್ನು ಸಾರ್ವಜನಿಕರಲ್ಲಿ ಮೂಡಿಸುತ್ತದೆ. ಇದು ಅಪರಾಧದಲ್ಲಿ ಬಲಿಪಶುಗಳಾದವರ ಅಥವಾ ಬದುಕುಳಿದವರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋರ್ಟ್(Supreme court) ಹೇಳಿದೆ.
ಕಾವೇರಿ ನೀರಿಗಾಗಿ ಈಗ ರೈತರಿಂದಲೇ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ!
ಅಪರಾಧ ಪ್ರಕರಣಗಳ ತನಿಖೆಯನ್ನು ಬಹಿರಂಗ ಪಡಿಸುವುದಕ್ಕೆ ನಿರ್ಬಂಧ ವಿಧಿಸುವುದು ಸರಿಯಲ್ಲ. ಆದರೆ ಊಹೆಯ ಆಧಾರದಲ್ಲಿ ಮಾಧ್ಯಮಗಳಲ್ಲಿ ನಡೆಯುವ ವಿಚಾರಣೆ ಸರಿಯಲ್ಲ. ಹಾಗಾಗಿ ಇದನ್ನು ನಿಯಂತ್ರಿಸಲು ಏಕರೂಪದ ನಿಯಮವನ್ನು ಜಾರಿ ಮಾಡಬೇಕು. ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಹೇಳಿಕೆಗಳು ಆರೋಪಿಗಳ ಬಗ್ಗೆ ಪೂರ್ವಾಗ್ರಹ ಹೊಂದುವಂತೆ ಮಾಡಬಾರದು ಎಂದು ಕೋರ್ಟ್ ಸೂಚಿಸಿದೆ. ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ (Gopal shankarnarayan)ಅವರನ್ನು ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ (Amicus Curiae) ನೇಮಕ ಮಾಡಲಾಗಿದೆ.