ಲೋಕಸಭಾ ಚುನಾವಣಾ ಫಲಿತಾಂಶ: ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ ಕಿಂಗ್ ಮೇಕರ್!

By Kannadaprabha News  |  First Published Jun 5, 2024, 6:26 AM IST

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ ಕಡಿಮೆ ಸ್ಥಾನ ಗಳಿಸುವುದರೊಂದಿಗೆ ತೆಲುಗುದೇಶಂ ಪಕ್ಷ (ಟಿಡಿಪಿ)ದ ಸರ್ವೋಚ್ಚ ನಾಯಕ ಚಂದ್ರಬಾಬು ನಾಯ್ಡು ಹಾಗೂ ಬಿಹಾರದ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ‘ಕಿಂಗ್‌ ಮೇಕರ್‌’ಗಳಾಗಿ ಹೊರಹೊಮ್ಮಿದ್ದಾರೆ.


ನವದೆಹಲಿ :  ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ ಕಡಿಮೆ ಸ್ಥಾನ ಗಳಿಸುವುದರೊಂದಿಗೆ ತೆಲುಗುದೇಶಂ ಪಕ್ಷ (ಟಿಡಿಪಿ)ದ ಸರ್ವೋಚ್ಚ ನಾಯಕ ಚಂದ್ರಬಾಬು ನಾಯ್ಡು ಹಾಗೂ ಬಿಹಾರದ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ‘ಕಿಂಗ್‌ ಮೇಕರ್‌’ಗಳಾಗಿ ಹೊರಹೊಮ್ಮಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗೇ ಈ ಇಬ್ಬರೂ ಚುನಾವಣೆ ಎದುರಿಸಿದ್ದರು. ಬಿಜೆಪಿ ಬಹುಮತಕ್ಕೆ ಸುಮಾರು 30 ಸ್ಥಾನಗಳ ದೂರವಿದೆ. ಟಿಡಿಪಿ 16, ಜೆಡಿಯು 14 ಸ್ಥಾನದಿಂದಾಗಿ ಆ ಕೊರತೆ ಸುಲಭವಾಗಿ ನೀಗುತ್ತಿದೆ. ಹೀಗಾಗಿ ಕೇಂದ್ರದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೇರುವಲ್ಲಿ ಈ ಇಬ್ಬರದ್ದೂ ಪ್ರಮುಖ ಪಾತ್ರವಿದೆ.

Tap to resize

Latest Videos

ಆದರೆ ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌ ಅವರು ಯಾವ ಕಡೆಗೆ ಬೇಕಾದರೂ ತೂರಿಕೊಳ್ಳುವ ರಾಜಕಾರಣಿಗಳಾಗಿದ್ದಾರೆ. ಇದು ಅವರ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಸ್ಪಷ್ಟವಾಗಿ ಕಾಣುತ್ತದೆ. ಸದ್ಯ ಈ ಇಬ್ಬರೂ ಎನ್‌ಡಿಎ ಸರ್ಕಾರವನ್ನು ಬೆಂಬಲಿಸಿದ್ದರೂ, ಭವಿಷ್ಯದಲ್ಲಿ ಈ ಇಬ್ಬರೇ ಸರ್ಕಾರಕ್ಕೆ ಮುಳುವಾಗಬಹುದು. ತರಹೇವಾರಿ ಬೇಡಿಕೆಗಳನ್ನು ಇಡುವ ಮೂಲಕ ಸರ್ಕಾರವನ್ನು ಹಾಗೂ ಅದನ್ನು ಮುನ್ನಡೆಸುವವರನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎಂಬ ತರ್ಕವೂ ಇದೆ.ನಿಗೂಢ ನಡೆಯ ಚಂದ್ರಬಾಬು

1996 ಲೋಕಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಸೃಷ್ಟಿಯಾದಾಗ ಯುನೈಟೆಡ್‌ ಫ್ರಂಟ್‌ ಸರ್ಕಾರದ ಸಂಚಾಲಕರಾಗಿ ಚಂದ್ರಬಾಬು ನಾಯ್ಡ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್‌, ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಂಡ ಪಕ್ಷಗಳನ್ನು ಒಗ್ಗೂಡಿಸಿ ಸರ್ಕಾರ ರಚಿಸಿ, ಎಚ್‌.ಡಿ. ದೇವೇಗೌಡ ಅವರನ್ನು ಪ್ರಧಾನಿ ಮಾಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ಆ ಸರ್ಕಾರಕ್ಕೆ ಕಾಂಗ್ರೆಸ್‌ ಬಾಹ್ಯ ಬೆಂಬಲ ನೀಡಿತ್ತು. ದೇವೇಗೌಡರ ಪದತ್ಯಾಗ ಬಳಿಕ ಐ.ಕೆ. ಗುಜ್ರಾಲ್‌ ಸರ್ಕಾರ ರಚನೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ನಿತೀಶ್ ರಾಜೀನಾಮೆ?

1999ರಲ್ಲಿ ನಾಯ್ಡು ಅವರು ಬಿಜೆಪಿ ಜತೆಗೂಡಿ ಆಂಧ್ರದಲ್ಲಿ 29 ಸ್ಥಾನಗಳನ್ನು ಗೆದ್ದು, ವಾಜಪೇಯಿ ಅವರಿಗೆ ಬಹುಮತದ ಕೊರತೆ ಎದುರಾದಾಗ ಬಾಹ್ಯ ಬೆಂಬಲ ನೀಡಿದ್ದರು. 2004ರಲ್ಲಿ ಹೀನಾಯವಾಗಿ ಸೋತು ತೆರೆಮರೆಗೆ ಸರಿದಿದ್ದರು. 2014ರಲ್ಲಿ ಬಿಜೆಪಿ ಜತೆಗೂಡಿ ಆಂಧ್ರ ಲೋಕಸಭೆ, ವಿಧಾನಸಭೆ ಚುನಾವಣೆ ಎದುರಿಸಿದ್ದರು. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆ ಈಡೇರಿಸಲಿಲ್ಲ ಎಂದು ಕ್ರುದ್ಧರಾಗಿ ಆಂಧ್ರ ವಿಧಾನಸಭೆ ಚುನಾವಣೆಗೂ ಮುನ್ನ 2018ರಲ್ಲಿ ಎನ್‌ಡಿಎಯಿಂದ ಹೊರ ನಡೆದರು. 2024ರ ಲೋಕಸಭೆ ಚುನಾವಣೆಗೂ ಮುನ್ನ ಎನ್‌ಡಿಎ ತೆಕ್ಕೆಗೆ ಮರಳಿದ್ದಾರೆ.

ಇದೀಗ ಅತಂತ್ರ ಸಂಸತ್ತು ನಿರ್ಮಾಣವಾಗಿದೆ. ನಾಯ್ಡು ಅವರು ಎನ್‌ಡಿಎಯಲ್ಲೇ ಇದ್ದರೂ ಯಾವಾಗ ಯಾರ ಪರ ನಿಲ್ಲುತ್ತಾರೆ ಎಂಬುದನ್ನು ಊಹಿಸಲು ಆಗುವುದಿಲ್ಲ. ಅವರು ಕಾಂಗ್ರೆಸ್‌ ವಿರೋಧಿ ರಾಜಕಾರಣಿಯಾಗಿದ್ದರೂ, ತೆಲಂಗಾಣದಲ್ಲಿ ಕಾಂಗ್ರೆಸ್‌ ಜತೆಗೇ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವರು. ಹೀಗಾಗಿ ಅವರೊಬ್ಬ ನಿಗೂಢ ನಡೆಯ ರಾಜಕಾರಣಿ.

ಉಲ್ಟಾ ಹೊಡೆವ ನಿತೀಶ್‌

ಜೆಪಿ ಚಳವಳಿಯಿಂದ ಹೊರಹೊಮ್ಮಿದ ನಾಯಕರಲ್ಲಿ ನಿತೀಶ್ ಕುಮಾರ್‌ ಕೂಡ ಒಬ್ಬರು. ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. 2005ರಲ್ಲಿ ಬಿಹಾರ ಮುಖ್ಯಮಂತ್ರಿಯಾದರು. ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ದುರ್ಬಲವಾಗಿದ್ದಾಗ ಬಿಹಾರದಲ್ಲಿ ಹಿರಿಯ ಪಾಲುದಾರನಾಗಿದ್ದರು. ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗುತ್ತಿದ್ದಂತೆ ಬಿಜೆಪಿ ಮೈತ್ರಿಯನ್ನು ತೊರೆದು ಹೊರ ನಡೆದರು. ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆದ್ದರು.

ತಮ್ಮ ರಾಜಕೀಯ ಕಡು ವಿರೋಧಿ ಲಾಲು ಪ್ರಸಾದ್‌ ಯಾದವ್ ಜತೆ ಕೈಜೋಡಿಸಿ 2015ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್‌ ಗೆದ್ದರು. ಎರಡೇ ವರ್ಷಗಳಲ್ಲಿ ಲಾಲು ಜತೆಗಿನ ಮೈತ್ರಿಯನ್ನು ಕಡಿದುಕೊಂಡು ಎನ್‌ಡಿಎಗೆ ಜಿಗಿದರು. ಬಿಹಾರದಲ್ಲಿ ಬಿಜೆಪಿ- ಜೆಡಿಯು ಮಿತ್ರಕೂಟ 2019ರಲ್ಲಿ 40 ಸ್ಥಾನಗಳ ಪೈಕಿ 39 ಗೆದ್ದಿತ್ತು.

2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಯು ಮಿತ್ರಕೂಟ ಗೆಲುವು ಸಾಧಿಸಿತಾದರೂ, ಜೆಡಿಯುಗಿಂತ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿತ್ತು. ಇದರಿಂದ ಸಮಾಧಾನಗೊಳ್ಳದ ಅವರು 2022ರಲ್ಲಿ ಎನ್‌ಡಿಎಗೆ ಕೈಕೊಟ್ಟು ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿದರು. ಇಂಡಿಯಾ ಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2024ರ ಲೋಕಸಭೆ ಚುನಾವಣೆಗೆ ಮುನ್ನ ಇಂಡಿಯಾಕ್ಕೆ ಕೈಕೊಟ್ಟು ಎನ್‌ಡಿಎಗೆ ಜಿಗಿದರು.

ಜೂ.9ಕ್ಕೆ ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ, ಮೋದಿ ಭಾಗಿ!

ನಿತೀಶ್‌ ಕುಮಾರ್‌ ಅವರು ಪದೇ ಪದೇ ತಮ್ಮ ರಾಜಕೀಯ ನಡೆಗಳನ್ನು ಯಾರಿಗೂ ಹೇಳದೆ ಬದಲಿಸುತ್ತಾರೆ. ಹೀಗಾಗಿ ಅವರು ಯಾವಾಗ ಯಾವ ಕಡೆ ಹೋಗುತ್ತಾರೆ ಎಂದು ಹೇಳಲಾಗದು. ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಿದರೂ ನಾಯ್ಡು- ನಿತೀಶ್‌ ಅವರನ್ನು ಸಂಭಾಳಿಸಲು ಹೆಚ್ಚು ಸಮಯ ಮೀಸಲಿಡಬೇಕಾಗುತ್ತದೆ ಎಂಬ ವಿಶ್ಲೇಷಣೆ ಇದೆ.

click me!