ಕುನೋ ಪಾರ್ಕ್‌ನಲ್ಲಿ ಮತ್ತೆರಡು ಚೀತಾ ಮರಿ ಸಾವು, ಎರಡು ತಿಂಗಳಲ್ಲಿ 6 ಚೀತಾ ಸಾವು!

By Santosh Naik  |  First Published May 25, 2023, 7:40 PM IST

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಮತ್ತೆರಡು ಚೀತಾ ಮರಿ ಸಾವು ಕಂಡಿದೆ. ಜ್ವಾಲಾ ಹೆಸರಿನ ಚೀತಾದ ಒಂದು ಮರಿ ಕೆಲ ದಿನಗಳ ಹಿಂದೆ ಸಾವು ಕಂಡಿದ್ದರೆ, ಗುರುವಾರ ಇನ್ನೆರಡು ಮರಿಗಳು ಸಾವು ಕಂಡಿದ್ದು, ಇನ್ನೊಂದರ ಸ್ಥಿತಿ ಗಂಭೀರವಾಗಿದೆ.


ಭೋಪಾಲ್‌ (ಮೇ.25): ಭಾರತದಲ್ಲಿ ಚೀತಾ ಪ್ರಾಣಿಗಳನ್ನು ಮರುಸ್ಥಾಪಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಾಜೆಕ್ಟ್‌ ಚೀತಾ ಆರಂಭಿಸಿದ್ದ ಕೇಂದ್ರ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾದಂತೆ ಕಾಣುತ್ತಿದೆ. ಎರಡು ತಿಂಗಳ ಹಿಂದೆ ಜ್ವಾಲಾ ಹೆಸರಿನ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದರಲ್ಲಿ ಒಂದು ಮರಿ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಸಾವು ಕಂಡಿದ್ದರೆ, ಗುರುವಾರ ಮತ್ತೆರಡು ಮರಿಗಳು ಪ್ರಾಣಬಿಟ್ಟಿವೆ. ಇನ್ನೊಂದರ ಸ್ಥಿತಿ ಗಂಭೀರವಾಗಿದ್ದು, ಅದು ಕೂಡ ಬದುಕುವುದು ಅನುಮಾನ ಎನ್ನಲಾಗಿದೆ. ಇದರೊಂದಿಗೆ ಕಳೆದ ಎರಡು ತಿಂಗಳಲ್ಲಿ 6 ಚೀತಾಗಳು ಸಾವು ಕಂಡಂತಾಗಿದೆ. ಅಫ್ರಿಕಾ ಖಂಡದ ದೇಶಗಳಾದ ನಮೀಬಿಯಾದಿಂದ 8 ಹಾಗೂ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಇದರಲ್ಲಿ ಜ್ವಾಲಾ ಹೆಸರಿನ ಚೀತಾ ಭಾರತದಲ್ಲಿಯೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದರಿಂದ ಒಟ್ಟು ಚೀತಾಗಳ ಸಂಖ್ಯೆ 24 ಆಗಿತ್ತು. ಆರು ಚೀತಾಗಳ ಸಾವಿನೊಂದಿಗೆ ದೇಶದಲ್ಲಿರುವ ಚೀತಾಗಳ ಸಂಖ್ಯೆ 18ಕ್ಕೆ ಇಳಿದಿದೆ.

ಹವಾಮಾನ ವೈಪರೀತ್ಯ ಮತ್ತು ನಿರ್ಜಲೀಕರಣ" ಕಾರಣದಿಂದಾಗಿ ಇವುಗಳು ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮೊದಲ ಮರಿ ಸಾವು ಕಂಡ ಎರಡು ದಿನಗಳ ಬಳಿಕ ಜ್ವಾಲಾ ಚೀತಾದ ಇನ್ನೆರಡು ಮರಿಗಳು ಸಾವು ಕಂಡಿವೆ. ಕಳೆದ ಮಾರ್ಚ್‌ನಲ್ಲಿ ಜ್ವಾಲಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ವಿಪರೀತ ದೌರ್ಬಲ್ಯದಿಂದ ಮೊದಲ ಮರಿ ಸಾವನ್ನಪ್ಪಿದ ಬಳಿಕ ವನ್ಯಜೀವಿ ವೈದ್ಯರ ನಿಗಾ ತಂಡಗಳು ಕಾರ್ಯಾಚರಣೆಗೆ ಇಳಿದಿತ್ತು ಮಾತ್ರವಲ್ಲದೆ ಉಳಿದ ಮರಿಗಳ ರಕ್ಷಣೆಗಾಗಿ ಪ್ರಯತ್ನ ಮಾಡಿದ್ದವು. ಬೆಳಗಿನ ಸಮಯದಲ್ಲಿ ಜ್ವಾಲಾಗೆ ಹೆಚ್ಚಿನ ಪೂರಕ ಆಹಾರವನ್ನು ನೀಡಲಾಗುತ್ತಿತ್ತು. ಚೀತಾಗಳ ಮರಿಗಳಲ್ಲಿ ಸಾವಿನ ಪ್ರಮಾಣ ಸಾಮಾನ್ಯವಾಗಿ ಹೆಚ್ಚಿರುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಕುನೋ ಪಾರ್ಕ್‌ನಲ್ಲಿ ತಾಪಮಾನ 46-4 ಡಿಗ್ರಿ ಸೆಲ್ಸಿಯಸ್‌ ಇದೆ. ಈ ಮರಿಗಳು ಇಂಥ ಬಿಸಿಲಿನಲ್ಲಿ ಇರುವುದು ಕಷ್ಟ ಎಂದು ನಿಗಾ ತಂಡಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲಿಯೇ ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜೆ ಎಸ್ ಚೌಹಾಣ್,  "ತಕ್ಷಣವೇ ಮೂರು ಮರಿಗಳನ್ನು ರಕ್ಷಿಸಲು ಮತ್ತು ಅಗತ್ಯ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದರು' ಎನ್ನಲಾಗಿದೆ.

ಇದನ್ನೂ ಓದಿ: ಕುನೋದಿಂದ ಮತ್ತೊಂದು ಕೆಟ್ಟ ಸುದ್ದಿ, ಎರಡು ತಿಂಗಳ ಹೆಣ್ಣು ಚೀತಾ ಸಾವು!

"ಎರಡು ಮರಿಗಳ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಚಿಕಿತ್ಸೆಗಾಗಿ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವುಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಉಳಿದ ಒಂದು ಮರಿಯು ಪಾಲ್ಪುರ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆ ಮತ್ತು ನಿಗಾದಲ್ಲಿದೆ ಎಂದು ಚೌಹಾಣ್ ಹೇಳಿದ್ದಾರೆ. ಅರಣ್ಯ ಅಧಿಕಾರಿಗಳು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಚೀತಾ ತಜ್ಞರು ಮತ್ತು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ, ಉಳಿದ ಮರಿಗಳ ಬದುಕುಳಿಯುವಿಕೆಯನ್ನು ಖಚಿತಪಡಿಸಿಕೊಳ್ಳಲು, ಇದು ಪ್ರಸ್ತುತ "ಸ್ಥಿರ" ಸ್ಥಿತಿಯಲ್ಲಿದೆ, ಆದರೆ ತೀವ್ರ ಚಿಕಿತ್ಸೆಗೆ ಒಳಗಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  ಗಂಡು ಚೀತಾದ ಆಕ್ರಮಣಕಾರಿ ಸಂಭೋಗ, ದಕ್ಷಿಣ ಆಫ್ರಿಕಾದಿಂದ ಬಂದಿದ್ದ 'ದಕ್ಷಾ' ಚೀತಾ ಸಾವು!

ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿರುವ ಪ್ರಕಾರ, ಎಲ್ಲಾ ಚೀತಾ ಮರಿಗಳು ದುರ್ಬಲ ಹಾಗೂ ಹೆಚ್ಚಿನ ತೂಕ ಕೂಡ ಹೊಂದಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ಜಲೀಕರಣ ಸಮಸ್ಯೆ ಹೊಂದಿದ್ದವು ಎಂದು ಮಾಹಿತಿ ನೀಡಿದ್ದಾರೆ. ಈ ಚೀತಾ ಮರಿಗಳು ಹುಟ್ಟಿ ಎಂಟು ವಾರವಾಗಿದೆ. ಈ ಹಂತದಲ್ಲಿ ಮರಿಗಳು ತಾಯಿ ಚೀತಾದೊಂದಿಗೆ ನಿರಂತರವಾಗಿ ನಡೆಯುತ್ತವೆ. ಆದರೆ, ಈ ಮರುಗಳು ಕೇವಲ 8-10 ದಿನಗಳ ಹಿಂದಷ್ಟೇ ನಡೆಯು ಆರಂಭ ಮಾಡಿದ್ದವು. ಇನ್ನು ಆಫ್ರಿಕಾದಲ್ಲೂ ಚೀತಾ ಮರಿಗಳ ಬದುಕುಳಿಯುವ ಪ್ರಮಾಣ ಅತ್ಯಂತ ಕಡಿಮೆ. ಈ ಮರಿಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಿದ್ದೇವೆ ಎಂದು ಚೌಹಾಣ್‌ ಹೇಳಿದ್ದಾರೆ.

click me!