ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಲತೀಫ್ ರಾಥರ್ ಸೇರಿದಂತೆ ಮೂವರು ಎಲ್‌ಇಟಿ ಭಯೋತ್ಪಾದಕರು ಹತರಾಗಿದ್ದಾರೆ. ಭಯೋತ್ಪಾದಕ ಲತೀಫ್ ರಾಥರ್, ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಅವರ ಹತ್ಯೆಯ ಸೂತ್ರಧಾರನಾಗಿದ್ದ.
ಶ್ರೀನಗರ (ಆ.10): ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ವಾಟರ್‌ಹೋಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಈ ಮೂವರ ಪೈಕಿ, ಕಾಶ್ಮೀರಿ ಪಂಡಿತ್ ರಾಹುಲ್ ಭಟ್‌ರನ್ನು ಹತ್ಯೆ ಮಾಡಿದ್ದ ಭಯೋತ್ಪಾದಕ ಕೂಡ ಸೇರಿದ್ದಾನೆ. ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದವು ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಭಯೋತ್ಪಾದಕರಲ್ಲಿ ಒಬ್ಬನಾದ ಲತೀಫ್ ರಾಥರ್, ಕಾಶ್ಮೀರಿ ಪಂಡಿತರಾದ ರಾಹುಲ್ ಭಟ್ ಮತ್ತು ಅಮ್ರಿನ್ ಭಟ್ ಸೇರಿದಂತೆ ಹಲವಾರು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ. ಎಡಿಜಿಪಿ ಪ್ರಕಾರ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮತ್ತೊಂದೆಡೆ, ಪುಲ್ವಾಮಾದಲ್ಲಿ ಭಯೋತ್ಪಾದಕರ ದೊಡ್ಡ ಸಂಚನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಇಲ್ಲಿ ಭಾರೀ ಪ್ರಮಾಣದ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಪತ್ತೆಯಾಗಿದೆ. ಈ ಎರಡೂ ಘಟನೆಗಳಿಗೂ ಸಂಬಂಧ ಕಲ್ಪಿಸಲು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ, ಪುಲ್ವಾಮಾದ ಸರ್ಕ್ಯುಲರ್ ರಸ್ತೆಯ ತಹಾಬ್ ಕ್ರಾಸಿಂಗ್ ಬಳಿ 25 ರಿಂದ 30 ಕೆಜಿ ಐಇಡಿ ವಶಪಡಿಸಿಕೊಂಡಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಎಡಿಜಿಪಿ ಕುಮಾರ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದಕರು ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ನಡೆಸುವ ಪ್ಲ್ಯಾನ್ ಮಾಡಿದ್ದರು ಎನ್ನುವುದು ಈ ಮೂಲಕ ತಿಳಿದುಬಂದಿದೆ.
ಈ ವರ್ಷ 139 ಉಗ್ರರ ಹತ್ಯೆ: ಕಣಿವೆಯಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಆಪರೇಷನ್ ಆಲೌಟ್ ನಡೆಸಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಈ ವರ್ಷ ಇದುವರೆಗೆ 139 ಭಯೋತ್ಪಾದಕರು ಹತರಾಗಿದ್ದಾರೆ. ಇವರಲ್ಲಿ 32ಕ್ಕೂ ಹೆಚ್ಚು ಮಂದಿ ವಿದೇಶಿಗರು. ಜುಲೈ ಕೊನೆಯ ವಾರದಲ್ಲಿ 6 ಉಗ್ರರು ಹತರಾಗಿದ್ದರು. ಅವರಲ್ಲಿ ಇಬ್ಬರು ಜೈಶ್-ಎ-ಮೊಹಮ್ಮದ್ ಮತ್ತು ನಾಲ್ವರು ಲಷ್ಕರ್ ಉಗ್ರರು ಸೇರಿದ್ದಾರೆ.
ಕಾಶ್ಮೀರವನ್ನು ಬಿಟ್ಟು ಹೊರಡಿ, ಪಂಡಿತರ ಮನೆಗೆ ಉಗ್ರರಿಂದ ಎಚ್ಚರಿಕೆ ಪತ್ರ..!
ಕಂದಾಯ ಇಲಾಖೆಯ ಉದ್ಯೋಗಿಯಾಗಿದ್ದ ರಾಹುಲ್ ಭಟ್: ಮೇ ತಿಂಗಳಲ್ಲಿ, ಬುದ್ಗಾಮ್‌ನಲ್ಲಿ ಕಂದಾಯ ಇಲಾಖೆಯ ಉದ್ಯೋಗಿ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಕೊಂದಿದ್ದರು. ಘಟನೆಯ ನಂತರ ಕಾಶ್ಮೀರಿ ಪಂಡಿತ್ ಸಮುದಾಯದವರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಭಯೋತ್ಪಾದಕರನ್ನು ನಂತರ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು. ಇನ್ನು ಕಾಶ್ಮೀರಿ ಕಿರುತೆರೆ ನಟಿ ಅಮ್ರೀನ್ ಭಟ್ ಅವರನ್ನು ಮೇ 26 ರಂದು ಬುದ್ಗಾಮ್‌ನ ಚದೂರ ಪ್ರದೇಶದಲ್ಲಿ ಅಪರಿಚಿತ ಭಯೋತ್ಪಾದಕರು ಹತ್ಯೆ ಮಾಡಿದ್ದರು. ಭಾನುವಾರ, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ 'ಹೈಬ್ರಿಡ್' ಭಯೋತ್ಪಾದಕನನ್ನು ಭಾರತೀಯ ಸೇನೆಯ 34 ರಾಷ್ಟ್ರೀಯ ರೈಫಲ್ಸ್ ಘಟಕವು ಬುದ್ಗಾಮ್ ಪ್ರದೇಶದಲ್ಲಿ ಬಂಧಿಸಿತ್ತು. ಆತನಿಂದ 5 ಪಿಸ್ತೂಲ್‌ಗಳು, 5 ಮ್ಯಾಗಜಿನ್‌ಗಳು, 50 ಸುತ್ತುಗಳು ಮತ್ತು ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ಒಳಗೊಂಡಿರುವ ಸ್ಪೋಟಕ ಸಾಮಗ್ರಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿತ್ತು.
ಕಾಶ್ಮೀರಿ ಹಿಂದು ರಾಹುಲ್ ಭಟ್ ಹತ್ಯೆ ಮಾಡಿದ 3 ಭಯೋತ್ಪಾದಕರಿಗೆ ಗುಂಡಿಕ್ಕಿದ ಭಾರತೀಯ ಸೇನೆ!
ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನೊಬ್ಬ ಗಾಯಗೊಂಡಿದ್ದ. ಇಬ್ಬರು ಭಯೋತ್ಪಾದಕರು ಸ್ಥಳದಿಂದ ಪರಾರಿಯಾಗಿದ್ದು, ಒಬ್ಬ ವ್ಯಕ್ತಿ ಗಾಯಗೊಂಡ ನಂತರ ಸಿಕ್ಕಿಬಿದ್ದಿದ್ದಾನೆ. ಇಷ್ಟೆಲ್ಲ ಸಾಹಸಗಳ ನಡುವೆ ಕಾಶ್ಮೀರಿ ಪಂಡಿತರ ಹತ್ಯೆಗೆ ಭಾರತೀಯ ಸೇನೆ ಪ್ರತೀಕಾರಿ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.