ಭಾರತದ ಆಗಸದಲ್ಲಿ ಜೆಟ್ ಏರ್‌ವೇಸ್ ಮತ್ತೊಮ್ಮೆ ಹಾರಾಟ ನಡೆಸುವ ಕನಸು ಕಮರಿ ಹೋಗಿದೆ. 2019ರಿಂದ ಸ್ಥಗಿತಗೊಂಡಿದ್ದ ಏರ್‌ಲೈನ್‌ನ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ.
ನವದೆಹಲಿ (ನ.7): ಜೆಟ್ ಏರ್‌ವೇಸ್ ಮತ್ತೆಂದೂ ಭಾರತದ ಆಗಸದಲ್ಲಿ ಹಾರಾಟ ನಡೆಸೋದಿಲ್ಲ. ಗುರುವಾರ ಜೆಟ್ ಏರ್‌ವೇಸ್‌ನ ಎಲ್ಲಾ ಆಸ್ತಿಯನ್ನು ನಗದೀಕರಣ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಆ ಮೂಲಕ ಕಂಪನಿ ದಿವಾಳಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ದಿವಾಳಿ ಎಂದರೆ ಕಂಪನಿಯ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ಅದನ್ನು ಮಾರಾಟ ಮಾಡುವುದರಿಂದ ಪಡೆದ ಹಣವನ್ನು ಅದರ ಸಾಲ ಮತ್ತು ಕಂಪನಿ ಹೊಂದಿದ್ದ ಬಾಧ್ಯತೆಗಳನ್ನು ಪಾವತಿಸಲು ಬಳಸುವುದಾಗಿದೆ. ಈ ಆದೇಶದಲ್ಲಿ, ನ್ಯಾಯಾಲಯವು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (NCLAT) ನಿರ್ಧಾರವನ್ನು ರದ್ದುಗೊಳಿಸಿತು. ಮಾರ್ಚ್‌ನಲ್ಲಿ, ರೆಸಲ್ಯೂಶನ್ ಯೋಜನೆಯಡಿ (ವಿಮಾನಯಾನವನ್ನು ಬಿಕ್ಕಟ್ಟಿನಿಂದ ರಕ್ಷಿಸಲು ಬಳಸುವ ತತ್ರ) ಜಲನ್-ಕಾಲ್ರಾಕ್ ಕನ್ಸೋರ್ಟಿಯಂ (ಜೆಕೆಸಿ) ಗೆ ಜೆಟ್ ಏರ್‌ವೇಸ್‌ನ ಮಾಲೀಕತ್ವವನ್ನು ನೀಡಲು NCLAT ನಿರ್ಧರಿಸಿತ್ತು.
ಆರ್ಥಿಕ ಬಿಕ್ಕಟ್ಟಿನಿಂದಾಗಿ 2019 ರಿಂದ ಜೆಟ್ ಏರ್‌ವೇಸ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಆ ಸಮಯದಲ್ಲಿ, ಏರ್‌ಲೈನ್ಸ್ ಅನೇಕ ಬ್ಯಾಂಕ್‌ಗಳಿಂದ 4783 ಕೋಟಿ ರೂಪಾಯಿ ಸಾಲವನ್ನು ಹೊಂದಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಅತಿ ಹೆಚ್ಚು ಸಾಲ ನೀಡಲಾಗಿತ್ತು. ಏರ್ಲೈನ್ ನಷ್ಟಕ್ಕೆ ಹೋದ ನಂತರ, ಬ್ಯಾಂಕುಗಳು ದಿವಾಳಿತನದ ಪ್ರಕ್ರಿಯೆಗಳನ್ನು ಪ್ರಾರಂಭಿಸಿದವು. ರೆಸಲ್ಯೂಶನ್ ಯೋಜನೆಯಡಿಯಲ್ಲಿ, JKC ಮಾಲೀಕತ್ವದ ಹಕ್ಕುಗಳನ್ನು ಪಡೆಯಬೇಕಿತ್ತು. ಇದರ ವಿರುದ್ಧ ಬ್ಯಾಂಕ್‌ಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.
5 ವರ್ಷಗಳ ಅನುಮೋದನೆಯ ನಂತರವೂ ಪರಿಹಾರ ಯೋಜನೆಯನ್ನು ಜಾರಿಗೊಳಿಸಲು ಜಲನ್-ಕಾಲ್ರಾಕ್ ಒಕ್ಕೂಟ ವಿಫಲವಾದ ಕಾರಣ, ಸಾಲದಾತರು ಮತ್ತು ಉದ್ಯೋಗಿಗಳ ಹಿತಾಸಕ್ತಿಯಲ್ಲಿ ದಿವಾಳಿ ಘೋಷಣೆ ಮಾಡಲಾಗಿದೆ. ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. 'ವಿಚಿತ್ರ ಮತ್ತು ಚಿಂತಾಜನಕ' ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜೆಟ್ ಏರ್‌ವೇಸ್ ಅನ್ನು ದಿವಾಳಿ ಮಾಡಲು ಆದೇಶಿಸಲು ನ್ಯಾಯಾಲಯವು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿತು.
ರೆಸಲ್ಯೂಶನ್ ಯೋಜನೆಯ ಪ್ರಕಾರ, ಜಲನ್-ಕಾಲ್ರಾಕ್ ಕನ್ಸೋರ್ಟಿಯಂ 4783 ಕೋಟಿ ರೂಪಾಯಿ ನೀಡಬೇಕಿತ್ತು. ಮೊದಲ ಕಂತಿನಲ್ಲಿ 350 ಕೋಟಿ ರೂ. ಪಾವತಿಯಾಗಬೇಕಿದ್ದು, ಅದರಲ್ಲಿ 200 ಕೋಟಿ ಮಾತ್ರ ಪಾವತಿಸಲು ಒಕ್ಕೂಟಕ್ಕೆ ಸಾಧ್ಯವಾಗಿತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠವು ಮುಂಬೈನ ಎನ್‌ಸಿಎಲ್‌ಎಟಿಗೆ ಲಿಕ್ವಿಡೇಟರ್ ಅನ್ನು ನೇಮಿಸುವಂತೆ ಆದೇಶಿಸಿದೆ.
JKC ಎನ್ನುವುದು ಮುರಾರಿ ಲಾಲ್ ಜಲನ್ ಮತ್ತು ಕಲ್ರಾಕ್ ಕ್ಯಾಪಿಟಲ್ ನಡುವಿನ ಜಂಟಿ ಉದ್ಯಮವಾಗಿದೆ. ಜಲನ್ ದುಬೈ ಮೂಲದ ಉದ್ಯಮಿ. ಕಲ್ರಾಕ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಲಂಡನ್ ಮೂಲದ ಜಾಗತಿಕ ಸಂಸ್ಥೆಯಾಗಿದ್ದು, ಹಣಕಾಸು ಸಲಹಾ ಮತ್ತು ಪರ್ಯಾಯ ಆಸ್ತಿ ನಿರ್ವಹಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬ್ಯಾಂಕ್‌ಗಳ ಆರೋಪವೇನು?: ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳು ವಿಮಾನಯಾನ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು ನಿಗದಿಪಡಿಸಿದ ಷರತ್ತುಗಳನ್ನು ಪೂರೈಸಲು ಈ ಒಕ್ಕೂಟವು ವಿಫಲವಾಗಿದೆ ಎಂದು ಹೇಳಿದೆ. ಈಗ ವಿಮಾನಯಾನ ಸಂಸ್ಥೆಯನ್ನು ಪುನಶ್ಚೇತನಗೊಳಿಸುವ ಸ್ಥಿತಿಯಲ್ಲಿಲ್ಲ.
ಪರಿಹಾರ ಯೋಜನೆಯಡಿ ₹350 ಕೋಟಿಯಲ್ಲಿ ₹200 ಕೋಟಿ ಮಾತ್ರ ಠೇವಣಿ ಇರಿಸಿದೆ ಎಂದು ತಿಳಿಸಿತು. ಏರ್ ಆಪರೇಟರ್ ಪ್ರಮಾಣಪತ್ರ ಮತ್ತು ಅಂತರರಾಷ್ಟ್ರೀಯ ಹಕ್ಕುಗಳನ್ನು ಪಡೆಯುವುದು ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ಪೂರೈಸಲು JKC ವಿಫಲವಾಗಿದೆ. ಜೆಟ್ ಏರ್‌ವೇಸ್ ಅನ್ನು ಪುನರುಜ್ಜೀವನಗೊಳಿಸುವಲ್ಲಿ ದೀರ್ಘ ವಿಳಂಬದಿಂದಾಗಿ, ವಿಮಾನಯಾನ ಸಂಸ್ಥೆಯು ತನ್ನ ಆಸ್ತಿಗಳ ನಿರ್ವಹಣೆಗಾಗಿ ಪ್ರತಿ ತಿಂಗಳು ₹ 22 ಕೋಟಿಗಳನ್ನು ಕಳೆದುಕೊಳ್ಳುತ್ತಿದೆ. ಇದಲ್ಲದೆ, ಜೆಟ್ ಏರ್‌ವೇಸ್ ತನ್ನ ಸಾಲಗಾರರಿಗೆ ಸುಮಾರು ₹ 7,500 ಕೋಟಿಗಳನ್ನು ನೀಡಬೇಕಿದೆ, ಇದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದ್ದಾಗಿ ತಿಳಿಸಿತು.
ಪತಿ ಸಮ್ಮುಖದಲ್ಲೇ ಕಣ್ಮುಚ್ಚಿದ ಅನಿತಾ : ಜೆಟ್ ಏರ್‌ವೇಸ್‌ನ ನರೇಶ್ ಗೋಯಲ್ ಪತ್ನಿ ಕ್ಯಾನ್ಸರ್‌ಗೆ ಬಲಿ
ನರೇಶ್ ಗೋಯಲ್ ಆರಂಭಿಸಿದ್ದ ಕಂಪನಿ: 1990 ರ ದಶಕದ ಆರಂಭದಲ್ಲಿ, ಟಿಕೆಟಿಂಗ್ ಏಜೆಂಟ್ ಆಗಿದ್ದ ನರೇಶ್ ಗೋಯಲ್ ಅವರು ಜೆಟ್ ಏರ್‌ವೇಸ್ ಇಂಡಿಯಾ ಲಿಮಿಟೆಡ್ ಅನ್ನು ಪ್ರಾರಂಭಿಸಿದರು, ಜನರಿಗೆ ಏರ್ ಇಂಡಿಯಾಕ್ಕೆ ಪರ್ಯಾಯವನ್ನು ನೀಡಿದರು. ಒಂದು ಸಮಯದಲ್ಲಿ, ಜೆಟ್ ಒಟ್ಟು 120 ವಿಮಾನಗಳನ್ನು ಹೊಂದಿತ್ತು ಮತ್ತು ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿತ್ತು. 'ದಿ ಜಾಯ್ ಆಫ್ ಫ್ಲೈಯಿಂಗ್' ಎಂಬ ಟ್ಯಾಗ್ ಲೈನ್ ಹೊಂದಿರುವ ಕಂಪನಿಯು ತನ್ನ ಉತ್ತುಂಗದಲ್ಲಿದ್ದಾಗ ಪ್ರತಿದಿನ 650 ವಿಮಾನಗಳನ್ನು ನಿರ್ವಹಿಸುತ್ತಿತ್ತು. ಕಂಪನಿ ಸ್ಥಗಿತಗೊಂಡಾಗ ಕೇವಲ 16 ವಿಮಾನಗಳು ಮಾತ್ರ ಉಳಿದಿದ್ದವು. 2019ರ ಮಾರ್ಚ್ ವೇಳೆಗೆ ಕಂಪನಿಯ ನಷ್ಟ 5,535.75 ಕೋಟಿ ರೂ.ಗೆ ತಲುಪಿತ್ತು.
ಬದುಕಿನ ಭರವಸೆ ಇಲ್ಲ; ಜೈಲಲ್ಲಿ ಸಾಯೋದೇ ಲೇಸು: ಕೋರ್ಟ್‌ನಲ್ಲೇ ಗಳ ಗಳನೇ ಕಣ್ಣೀರಿಟ್ಟ ಜೆಟ್ ಏರ್‌ವೇಸ್ ಸಂಸ್ಥಾಪಕ