ದೇಶದ ಮುಕುಟದಂತಿರುವ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5ರಂದು ಕೇಂದ್ರ ಸರ್ಕಾರ ರದ್ದು ಮಾಡಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತ್ತು. ಬಳಿಕ ಜಮ್ಮು-ಕಾಶ್ಮೀರವನ್ನು ಎರಡು ಭಾಗ ಮಾಡಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶ ಮಾಡುವುದಾಗಿ ಘೋಷಿಸಿತು. ಅದರಂತೆ ಅಕ್ಟೋಬರ್ 31ರಿಂದ ಜಮ್ಮು-ಕಾಶ್ಮೀರ ಮತ್ತು ಲಡಾಕ್ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಪಡೆಯಲಿವೆ. ಈ ಹಿನ್ನೆಲೆಯಲ್ಲಿ ಇದುವರೆಗೆ ರಾಜ್ಯದ ಸ್ಥಾನಮಾನ ಹೊಂದಿದ್ದ ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ ಏನೇನು ಬದಲಾವಣೆಗಳಾಗಲಿವೆ ಎಂಬ ವರದಿ ಇಲ್ಲಿದೆ.
ವಿಧಾನಸಭಾ ಕ್ಷೇತ್ರಗಳು ಹೆಚ್ಚಳ:
ಜಮ್ಮು-ಕಾಶ್ಮೀರ ಪುನರ್‌ವಿಂಗಡಣೆ ಮಸೂದೆ-2019ರ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ವಿಧಾನಸಭೆಸಹಿತ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಕ್‌ಗೆ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಿಲಾಗಿದೆ. ಈ ಪ್ರಕಾರ ಜಮ್ಮು-ಕಾಶ್ಮೀರದ ಒಟ್ಟು ವಿಧಾನಸಭಾ ಸ್ಥಾನಗಳನ್ನು 107ರಿಂದ 114ಕ್ಕೆ ಹೆಚ್ಚಿಸಲಾಗಿದೆ. ಅದರಲ್ಲಿ 24 ಕ್ಷೇತ್ರಗಳು ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ಸೇರಿರುವುದರಿಂದ ಅಲ್ಲಿ ಚುನಾವಣೆ ನಡೆಯುವುದಿಲ್ಲ. ಹಾಗಾಗಿ ಆ ಸ್ಥಾನಗಳು ಖಾಲಿ ಇರುತ್ತವೆ. ಜಮ್ಮು-ಕಾಶ್ಮೀರದ ಆಡಳಿತವು ಸಂವಿಧಾನದ ಆರ್ಟಿಕಲ್ 239ನಂತೆ ನಡೆಯಲಿದೆ. ಸದ್ಯ ಪುದುಚೇರಿಯು ಆರ್ಟಿಕಲ್ 239ಎ ಅಡಿಯಲ್ಲಿ ಕಾರ‍್ಯನಿರ್ವಹಿಸುತ್ತಿದೆ.
ಮೀಸಲಾತಿ ಅನ್ವಯ:
370ನೇ ವಿಧಿ ರದ್ದಾಗಿದ್ದರಿಂದ ಭಾರತದ ಇತರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಂತೆ ಇಲ್ಲೂ ವಿಧಾನಸಭೆಗೆ ಮೀಸಲಾತಿ ಅನ್ವಯವಾಗುತ್ತದೆ. ಹಾಗಾಗಿ ಪರಿಶಿಷ್ಟಜಾತಿ, ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿ ಮಾಡಲಾಗುತ್ತದೆ. ಜೊತೆಗೆ ಮಹಿಳೆಯರು ಪ್ರತಿನಿಧಿಸದೇ ಇದ್ದಲ್ಲಿ ಇಬ್ಬರು ಮಹಿಳೆಯರನ್ನು ಲೆಫ್ಟಿನೆಂಟ್ ಗವರ್ನರ್ ನೇರವಾಗಿ ವಿಧಾನಸಭೆಗೆ ನಾಮನಿರ್ದೇಶನ ಮಾಡುತ್ತಾರೆ. ಶಾಸನಸಭೆಯು 6 ವರ್ಷದ ಬದಲಿಗೆ ಇನ್ನುಮುಂದೆ 5 ವರ್ಷ ಕಾರ‍್ಯನಿರ್ವಹಿಸಲಿದೆ.
ಲೆಫ್ಟಿನೆಂಟ್ ಗವರ್ನರ್ ಮೇಲ್ವಿಚಾರಣೆ:
ಜಮ್ಮು-ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶದ ಉಸ್ತುವಾರಿಯನ್ನು ರಾಷ್ಟ್ರಪತಿಯವರಿಂದ ನೇಮಕಗೊಂಡ ಅಧಿಕಾರಿ ನೋಡಿಕೊಳ್ಳುತ್ತಾರೆ. ಆ ಅಧಿಕಾರಿಯನ್ನು ಲೆಫ್ಟಿನೆಂಟ್ ಗವರ್ನರ್ ಎಂದು ಕರೆಯಲಾಗುತ್ತದೆ. ದೆಹಲಿ ಕೇಂದ್ರಡಾಳಿತ ಪ್ರದೇಶದಂತೆ ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡಿರುವುದರಿಂದ ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲವೂ ಇರುತ್ತದೆ. ಲೆಫ್ಟಿನೆಂಟ್ ಗವರ್ನರ್‌ಗೆ ಸಲಹೆ ಸೂಚನೆಗಳನ್ನು ನೀಡಲು ಮಂತ್ರಿಮಂಡಲವನ್ನು ರಚಿಸಿರಲಾಗಿರುತ್ತದೆ. ಈ ಮಂತ್ರಿಮಂಡಲವು ವಿಧಾನಸಭೆಯ ಒಟ್ಟು ಸದಸ್ಯರ 10% ಅನ್ನು ಮೀರುವಂತಿಲ್ಲ. ದೆಹಲಿ, ಪುದುಚೇರಿಗಳಂತೆ ಇಲ್ಲಿನ ಮುಖ್ಯಮಂತ್ರಿಯ ಎಲ್ಲಾ ನಿರ್ಧಾರಗಳೂ ಲೆಫ್ಟಿನೆಂಟ್ ಗವರ್ನರ್ ಅವರ ಒಪ್ಪಿಗೆ ಪಡೆಯಬೇಕು. ಲೆಫ್ಟಿನೆಂಟ್ ಗವರ್ನರ್ ಕನಿಷ್ಠ 6 ತಿಂಗಳಿಗೊಂದು ವಿಧಾನಸಭಾ ಅಧಿವೇಶನ ನಡೆಸಬೇಕು.
ಇದನ್ನೂ ಓದಿ | ಸಂವಿಧಾನ ತಿದ್ದುಪಡಿ ಮಾಡದೆಯೇ 370ನೇ ವಿಧಿ ರದ್ದು: ಇದು ಹೇಗಾಯ್ತು? ಇಲ್ಲಿದೆ ಮಾಹಿತಿ...
ಸಾಮಾನ್ಯ ನ್ಯಾಯಾಲಯ:
ಜಮ್ಮು-ಕಾಶ್ಮೀರ ಮತ್ತು ಲಡಾಕ್ ಎರಡಕ್ಕೂ ಒಂದೇ ಹೈಕೋರ್ಟ್ ಇರುತ್ತದೆ. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಕಾನೂನು ಸಲಹೆ ನೀಡಲು ಅಡ್ವೋಕೇಟ್ ಜನರಲ್ ನೇಮಕವಾಗಿರುತ್ತಾರೆ. ಇಂದಿನಿಂದ ಜಮ್ಮು-ಕಾಶ್ಮೀರ ಹೈಕೋರ್ಟ್ ನ್ಯಾಯಾಧೀಶರು ಎರಡೂ ಕೇಂದ್ರಾಡಳಿತ ಪ್ರದೇಶಗಳ ನ್ಯಾಯಾಧೀಶರಾಗಿರುತ್ತಾರೆ.
ಹಳೆಯ 153 ಕಾನೂನುಗಳು ರದ್ದು:
ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಈ ಹಿಂದೆ ಅನ್ವಯವಾಗುತ್ತಿದ್ದ 153 ರಾಜ್ಯ ಕಾನೂನುಗಳು ರದ್ದಾಗುತ್ತವೆ. ಹಾಗೆಯೇ 166 ರಾಜ್ಯ ಕಾನೂನುಗಳೊಂದಿಗೆ ಕೇಂದ್ರದ ವ್ಯಾಪ್ತಿಯಲ್ಲಿರುವ 106 ಕಾನೂನುಗಳು ಇನ್ನುಮುಂದೆ ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನ್ವಯವಾಗುತ್ತವೆ. ಅಂದರೆ 2009ರ ಶಿಕ್ಷಣದ ಹಕ್ಕು (ಆರ್‌ಟಿಇ), 2005ರ ಮಾಹಿತಿ ಹಕ್ಕು (ಆರ್‌ಟಿಐ), 1860ರ ಭಾರತೀಯ ದಂಡಸಂಹಿತೆ, 2016ರ ಆಧಾರ್ ಕಾಯ್ದೆಗಳು ಅನ್ವಯವಾಗುತ್ತವೆ. ಹಾಗೆಯೇ ಹೊಸ ಶಾಸನಸಭೆಯು ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಜಾರಿ ಮಾಡುವಾಗಲೂ ಈ ನಿಯಮಗಳು ಅನ್ವಯವಾಗುತ್ತವೆ. ಪೊಲೀಸ್ ಮತ್ತು ಪೊಲೀಸ್ ಆರ್ಡರ್ ವಿಷಯಗಳ ಹೊರತಾಗಿ ಸಂವಿಧಾನದ ರಾಜ್ಯಪಟ್ಟಿಯಲ್ಲಿರುವ ಯಾವುದೇ ವಿಷಯಗಳ ಬಗ್ಗೆ ಮಂತ್ರಿಮಂಡಲವು ಕಾನೂನು ರಚಿಸಬಹುದು. ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕೇಂದ್ರ ಸರ್ಕಾರಕ್ಕೂ ಅಧಿಕಾರವಿರುತ್ತದೆ.
ಇದನ್ನೂ ಓದಿ | ಕಾಶ್ಮೀರ ಮತ್ತೆ ಎಲ್ಲರಿಗೂ ಮುಕ್ತ: ಆರ್ಟಿಕಲ್ 370 ರದ್ದಾದ 2 ತಿಂಗಳ ನಂತರ ಕಣಿವೆ ರಾಜ್ಯ ಹೇಗಿದೆ?...
ಹೊರಗಿನವರಿಗೂ ಆಸ್ತಿ ಹಕ್ಕು:
ಇಷ್ಟುವರ್ಷ ಜಮ್ಮು ಕಾಶ್ಮೀರದಲ್ಲಿ ಅಲ್ಲಿನ ಮೂಲನಿವಾಸಿಗಳು ಮಾತ್ರ ಆಸ್ತಿಯ ಹಕ್ಕು ಹೊಂದಬಹುದಿತ್ತು. ಈಗ ಆರ್ಟಿಕಲ್ 35ಎ ರದ್ದಾಗಿರುವುದರಿಂದ ಬೇರೆ ರಾಜ್ಯದವರು ಕೂಡ ಜಮ್ಮು ಕಾಶ್ಮೀರ ಮತ್ತು ಲಡಾಕ್‌ನಲ್ಲಿ ಆಸ್ತಿ ಖರೀದಿಸಬಹುದು. ಹಾಗೆಯೇ ದೇಶದ ಇತರ ಮಹಿಳೆಯರಂತೆ ಕಾಶ್ಮೀರಿ ಮಹಿಳೆಯೂ ಆಕೆಯ ಪೋಷಕರ ಆಸ್ತಿಯಲ್ಲಿ ಸಮಾನ ಹಕ್ಕುದಾರಳಾಗುತ್ತಾಳೆ.
ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜ, ದ್ವಿಪೌರತ್ವ ಇಲ್ಲ:
ರಾಷ್ಟ್ರಧ್ವಜಕ್ಕೆ ಸಮವಾಗಿ ಇನ್ನುಮುಂದೆ ಕಾಶ್ಮೀರದಲ್ಲಿ ಪ್ರತ್ಯೇಕ ಧ್ವಜ ಇರುವುದಿಲ್ಲ. ಪ್ರತ್ಯೇಕ ಸಂವಿಧಾನವೂ ಇರುವುದಿಲ್ಲ. ಪ್ರತ್ಯೇಕ ರಾಷ್ಟ್ರಗೀತೆ ಬದಲಿಗೆ ಭಾರತದ ರಾಷ್ಟ್ರಗೀತೆ ‘ಜನಗಣಮನ..’ವನ್ನೇ ಕಾಶ್ಮೀರಿಗಳು ಹಾಡಬೇಕಾಗುತ್ತದೆ. ಹಾಗೆಯೇ ಇದುವರೆಗೆ ಕಾಶ್ಮೀರಿಗಳು ಜಮ್ಮು-ಕಾಶ್ಮೀರ ಪೌರತ್ವ ಮತ್ತು ಭಾರತದ ಪೌರತ್ವ ಎರಡನ್ನೂ ಹೊಂದಿರುತ್ತಿದ್ದರು. ಇನ್ನುಮುಂದೆ ಇದು ರದ್ದಾಗಿ ಭಾರತದ ಎಲ್ಲ ಪ್ರಜೆಗಳಂತೆ ಏಕಪೌರತ್ವ ಹೊಂದುತ್ತಾರೆ.
ಕೇಂದ್ರದ ಸುಪರ್ದಿಯಲ್ಲಿ ಪೊಲೀಸ್ ಪಡೆ:
ಜಮ್ಮು-ಕಾಶ್ಮೀರ ಮತ್ತು ಲಡಾಕ್ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯು ಇನ್ನು ಮುಂದೆ ನೇರವಾಗಿ ಕೇಂದ್ರದ ಸುಪರ್ದಿಗೆ ಬರಲಿದೆ. ಹಾಗೆಯೇ ಸರ್ಕಾರಿ ಭೂಮಿ ಹಕ್ಕು, ಭೂಮಿ ವರ್ಗಾವಣೆ, ಕೃಷಿ ಭೂಮಿಯ ಪರಿವರ್ತನೆ, ಅಭಿವೃದ್ಧಿ, ಕೃಷಿ ಸಾಲ ಮುಂತಾದ ಹಕ್ಕು ಜಮ್ಮು-ಕಾಶ್ಮೀರದ ಚುನಾಯಿತ ಸರ್ಕಾರಕ್ಕಿರುತ್ತದೆ. ದೆಹಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಹಕ್ಕನ್ನು ಕೇಂದ್ರ ಸರ್ಕಾರದ ಘಟಕವಾದ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಹೊಂದಿದೆ. ಐಎಎಸ್, ಐಪಿಎಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗಳು ಚುನಾಯಿತ ಸರ್ಕಾರದ ಸುಪರ್ದಿಗೆ ಒಳಪಡದೆ ನೇರವಾಗಿ ಲೆಫ್ಟಿನೆಂಟ್ ಗವರ್ನರ್ ಸುಪರ್ದಿಗೆ ಒಳಪಡುತ್ತವೆ. ಎಸಿಬಿ ಲೆಫ್ಟಿನೆಂಟ್ ಗವರ್ನರ್ ಅಡಿಯಲ್ಲಿ ಕಾರ‍್ಯನಿರ್ವಹಿಸುವ ವಿಷಯವೇ ದೆಹಲಿ ಮುಖ್ಯಮಂತ್ರಿ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಡುವೆ ಭಿನ್ನಾಭಿಪ್ರಾಯ ಉಂಟಾಗಲು ಕಾರಣವಾಗಿತ್ತು.
ಕೇಂದ್ರದಿಂದ ಸಲಹಾ ಸಮಿತಿ ನೇಮಕ:
ಜಮ್ಮು-ಕಾಶ್ಮೀರವನ್ನು ಎರಡು ವಿಭಾಗ ಮಾಡಿ ಲಡಾಕ್ ಮತ್ತು ಜಮ್ಮು-ಕಾಶ್ಮೀರ ಎಂಬ ಕೇಂದ್ರಾಡಳಿತ ಪ್ರದೇಶ ಮಾಡುವ ಸಂದರ್ಭದಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು, ವಿದ್ಯುತ್ ಹಂಚಿಕೆ ಮತ್ತು ಹಣಕಾಸಿನ ಸಹಕಾರ ಮತ್ತಿತರ ವಿಚಾರವಾಗಿ ಸಮನ್ವಯತೆ ಸಾಧಿಸಲು ಕೇಂದ್ರ ಸರ್ಕಾರ ಸಲಹಾ ಸಮಿತಿಯನ್ನು ನೇಮಿಸಿದೆ. ಈ ಸಮಿತಿ ಇನ್ನಷ್ಟೇ ವರದಿ ಸಲ್ಲಿಸಬೇಕಿದೆ.
ಇದನ್ನೂ ಓದಿ | ಕಣಿವೆ ನೋಡುವುದೇ ಸುಯೋಗ: ಕಣಿವೆಗೆ ಭೇಟಿ ನೀಡಿದ ಯೂರೋಪಿಯನ್ ನಿಯೋಗ!...
ನಿರ್ಬಂಧದಲ್ಲಿ ವಿನಾಯಿತಿ:
ಜಮ್ಮು-ಕಾಶ್ಮೀರ ಕಣಿವೆ ಮತ್ತು ಅದರ ಇತರ ಭಾಗಗಳಲ್ಲಿ ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರ ಆಗಸ್ಟ್ 5ರಿಂದ ಹಲವು ನಿರ್ಬಂಧಗಳನ್ನು ಹೇರಿತ್ತು. ಇತ್ತೀಚೆಗಷ್ಟೆಕೆಲ ನಿರ್ಬಂಧ ಗಳನ್ನು ಸಡಿಲಿಸಿರುವ ಕೇಂದ್ರ ಸರ್ಕಾರ ಪೋಸ್ಟ್ ಪೇಯ್ಡ್ ಮೊಬೈಲ್ ಬಳಕೆಗೆ ಅನುಮತಿ ನೀಡಿತ್ತು. ಇದೀಗ ಜಮ್ಮು- ಕಾಶ್ಮೀರ ಮತ್ತು ಲಡಾಕ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ಮಾರ್ಪಾಡಾಗುವುದರಿಂದ ಈ ನಿರ್ಬಂಧದಲ್ಲಿ ಇನ್ನಷ್ಟು ವಿನಾಯಿತಿ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.
ರಾಜ್ಯಕ್ಕೂ ಕೇಂದ್ರಾಡಳಿತ ಪ್ರದೇಶಕ್ಕೂ ಇರುವ ವ್ಯತ್ಯಾಸವೇನು?
ಭಾರತದ ಸ್ವಾತಂತ್ರ್ಯಾನಂತರ ಸಂವಿಧಾನದಲ್ಲಿ ರಾಜ್ಯದ ಮಾನ್ಯತೆ ನೀಡಲು ತೀರಾ ಚಿಕ್ಕದಾದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿಸಲು ಅವಕಾಶ ನೀಡಲಾಗಿದೆ. ಆ ಸಮಯದಲ್ಲಿ ಈಗಿರುವ ಕೇಂದ್ರಾಡಳಿತ ಪ್ರದೇಶಗಳು ಆರ್ಥಿಕವಾಗಿ, ರಾಜಕೀಯವಾಗಿ ಸಮರ್ಥವಾಗಿರಲಿಲ್ಲ. ಹಾಗಾಗಿ ಅಲ್ಲಿ ಪ್ರತ್ಯೇಕ ಆಡಳಿತ ನಡೆಸುವುದು ತೀರಾ ವೆಚ್ಚದಾಯಕ ಎಂದು ಪರಿಗಣಿಸಿ, ಕೇಂದ್ರ ಸರ್ಕಾರದ ನೇರ ಸುಪರ್ದಿಗೆ ಒಳಪಡುವಂತೆ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಯಿತು.
ಅನಂತರದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿವೆ. ಇವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತವೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನಸಭೆಯ ಸ್ಥಾನ ಕಲ್ಪಿಸಬಹುದು. ದೆಹಲಿ ಹಾಗೂ ಪುದುಚೇರಿ ಮತ್ತು ಈಗಿನ ಜಮ್ಮು-ಕಾಶ್ಮೀರ ಇದಕ್ಕೆ ಉದಾಹರಣೆಗಳಾಗಿವೆ. ಎಲ್ಲಾ ಕೇಂದ್ರಾಡಳಿತ ಪ್ರದೇಶಗಳೂ ಪ್ರತ್ಯೇಕ ಆಡಳಿತ ಹೊಂದಿದ್ದು, ಒಂದಕ್ಕೊಂದು ಉತ್ತರದಾಯಿಗಳಲ್ಲ.