ಶ್ರೀಲಂಕಾದಲ್ಲಿ ಆರ್ಥಿಕ ಹಿಂಜರಿತದ ಜೊತೆಗೆ ರಾಜಕೀಯ ಬಿಕ್ಕಟ್ಟು ತಲೆದೋರಿ ದೇಶವೇ ದಿವಾಳಿಯಾಗಿದೆ. ಜನರು ದಂಗೆ ಎದ್ದು ಪ್ರಧಾನಿ, ಅಧ್ಯಕ್ಷ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದೀಗ ಭಾರತವೂ ಶ್ರೀಲಂಕಾ ಹಾದಿಯಲ್ಲಿ ಎಂದು ಚರ್ಚೆಗಳು ನಡೆಯತ್ತಿದೆ. ಭಾರತದ ಆರ್ಥಿಕ, ರಾಜಕೀಯ ಪರಿಸ್ಥಿತಿಗಳು ಹೇಗಿದೆ? ದಿವಾಳಿಯಾಗುವ ಅಪಾಯ ನಮ್ಮ ಮುಂದಿದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ಶಶಿ ಶೇಖರ್, ಏಷ್ಯಾನೆಟ್ ಸುವರ್ಣನ್ಯೂಸ್
60 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಮಾಡಿಕೊಂಡು ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದೆ. 2019ರ ವರೆಗೆ ಉತ್ತಮ ಸ್ಥಿತಿಯಲ್ಲಿದ್ದ ಶ್ರೀಲಂಕಾ ಮೂರೇ ವರ್ಷಗಳಲ್ಲಿ ಬರಿಗೈ ಆಗಿದೆ. ಶ್ರೀಲಂಕಾದಲ್ಲಿ ನಡೆದ ಮತ್ತು ನಡೆಯುತ್ತಿರುವ ಬೆಳವಣಿಗೆಗಳನ್ನ ಭಾರತದಲ್ಲಿ ಕೆಲವರು ನಮ್ಮ ದೇಶದ ಜತೆಗೆ ಹೋಲಿಕೆ ಮಾಡುತ್ತಿದ್ದಾರೆ.. ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಿ ಎಂದು ಟ್ವೀಟ್ ಮಾಡಿದ್ದರು. ಭಾರತವೂ ಶ್ರೀಲಂಕಾದ ಸ್ಥಿತಿಯಲ್ಲೇ ಇದೆ ಎಂಬರ್ಥದಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಇದಾದ ಮೇಲೆ ಹಲವರು ಇದೇ ಅರ್ಥದಲ್ಲಿ ಮಾತಾಡುತ್ತಿದ್ದಾರೆ. ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಭಾರತವೂ ಶ್ರೀಲಂಕಾದಂತೆ ವಿಪರೀತ ಸಾಲ ಮಾಡಿಕೊಂಡಿದೆ... ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಭಾರತಕ್ಕೂ ಶ್ರೀಲಂಕಾದ ಸ್ಥಿತಿಯೇ ಬರಲಿದೆ.. ಮೋದಿ ಆಡಳಿತದಲ್ಲಿ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ ಎಂಬ ಚರ್ಚೆಗಳು ನಡೆಯುತ್ತಿವೆ.. ಈ ಟೀಕೆ, ಚರ್ಚೆ, ಭಾರತ ದಿವಾಳಿಯಾಗಲಿದೆ ಅನ್ನೋ ಹೇಳಿಕೆಗಳಲ್ಲಿ ಸತ್ಯ ಎಷ್ಟು..? ಸುಳ್ಳೆಷ್ಟು..? ಕೇವಲ ರಾಜಕೀಯ ಕಾರಣಕ್ಕೆ ಜನಾಭಿಪ್ರಾಯ ಮೂಡಿಸಲು ಇಂಥಾ ಚರ್ಚೆ ನಡೆಯುತ್ತಿದೆಯಾ..?
undefined
ಮೊದಲನೇದ್ದಾಗಿ ಭಾರತ ಮತ್ತು ಶ್ರೀಲಂಕಾ(India and Sri lanka) ದೇಶಗಳ ಮಧ್ಯೆ ಹೋಲಿಕೆ ಮಾಡೋದೇ ತಪ್ಪು. ಯಾಕಂದ್ರೆ ಎರಡು ಬೆಂಗಳೂರಿನಷ್ಟು ಜನಸಂಖ್ಯೆ ಇರೋ ಶ್ರೀಲಂಕಾಗೂ... 140 ಕೋಟಿ ಜನಸಂಖ್ಯೆ ಇರೋ ಭಾರತಕ್ಕೂ ಹೋಲಿಕೆ ಮಾಡಲು ಸಾಧ್ಯವಾ..? ಆರ್ಥಿಕತೆ ವಿಷಯದಲ್ಲಿಯೂ ಭಾರತವನ್ನ ಶ್ರೀಲಂಕಾದ(Economic and Political Crisis) ಜತೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಯಾಕಂದ್ರೆ 2022ರ ಆರ್ಥಿಕ ವರ್ಷದ ಪ್ರಕಾರ ಭಾರತದ ಜಿಡಿಪಿ 3 ಟ್ರಿಲಿಯನ್ ಡಾಲರ್ ಗೂ ಹೆಚ್ಚು... ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ದೇಶದ ಜಿಡಿಪಿ 236 ಲಕ್ಷ ಕೋಟಿ ಇದೆ. ಶ್ರೀಲಂಕಾದ ವಾರ್ಷಿಕ ಜಿಡಿಪಿ ಈ ವರ್ಷ ಕೇವಲ 80 ಬಿಲಿಯನ್ ಡಾಲರ್ ಇದೆ. ಭಾರತದ ರೂಪಾಯಿ ಲೆಕ್ಕದಲ್ಲಿ 6 ಲಕ್ಷದ 37 ಸಾವಿರ ಕೋಟಿಯಷ್ಟಾಗುತ್ತೆ. ಎಲ್ಲಿಯ 236 ಲಕ್ಷ ಕೋಟಿ... ಎಲ್ಲಿಯ 6 ಲಕ್ಷ ಕೋಟಿ. 2015ರಿಂದ ಶ್ರೀಲಂಕಾದ ಜಿಡಿಪಿ(gross domestic product) 80 ಬಿಲಿಯನ್ ಡಾಲರ್ ಆಸುಪಾಸಿನಲ್ಲೇ ಇದೆ. 2015ರಲ್ಲಿ 2.1 ಟ್ರಿಲಿಯನ್ ಡಾಲರ್ ಇದ್ದ ಭಾರತದ ಜಿಡಿಪಿ ಈಗ 3.05 ಟ್ರಿಲಿಯನ್ ಡಾಲರ್ ಗೆ ಬಂದು ನಿಂತಿದೆ.. 2030ರ ವೇಳೆಗೆ ಭಾರತದ ಜಿಡಿಪಿ ಮೌಲ್ಯ 5 ಟ್ರಿಲಿಯನ್ ಡಾಲರ್ ಮೀರಲಿದೆ. ಆರ್ಥಿಕತೆ ವಿಚಾರದಲ್ಲಿ ಭಾರತ ಮತ್ತು ಶ್ರೀಲಂಕಾವನ್ನ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.
Sri Lanka Crisis ಪರಾರಿಯಾಗಲ್ಲ ಎಂದಿದ್ರು ಗೊಟಬಯ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜಯಸೂರ್ಯ!
ಒಂದು ದೇಶ ತನ್ನ ಅಗತ್ಯತೆಗಳನ್ನ ಪೂರೈಸಿಕೊಳ್ಳಲು ವಿದೇಶಿ ವಿನಿಮಯ(foreign exchange) ಅಂದ್ರೆ ವಿದೇಶಿ ಕರೆನ್ಸಿಯನ್ನ ಹೊಂದಿರಬೇಕು. ಭಾರತದ ವಿದೇಶಿ ಕರೆನ್ಸಿಗಳ ಮೀಸಲು 590 ಬಿಲಿಯನ್ ಡಾಲರ್ ಇದೆ. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 47 ಲಕ್ಷ ಕೋಟಿ ರೂಪಾಯಿ. ಶ್ರೀಲಂಕಾದ ವಿದೇಶಿ ಕರೆನ್ಸಿಯ ಮೀಸಲು ಕೇವಲ 50 ಮಿಲಿಯನ್ ಡಾಲರ್ ಗೆ ಕುಸಿದಿತ್ತು. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 398 ಕೋಟಿ. ಈ ವಿಷಯದಲ್ಲೂ ಭಾರತ ಮತ್ತು ಶ್ರೀಲಂಕಾಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.
ವಿದೇಶಿ ಸಾಲದ ವಿಷಯಕ್ಕೆ ಬಂದರೆ ಶ್ರೀಲಂಕಾದ ವಿದೇಶಿ ಸಾಲ ಈಗ 60 ಬಿಲಿಯನ್ ಡಾಲರ್ ಮುಟ್ಟಿದೆ. ಭಾರತದ ಸಾಲ 620 ಬಿಲಿಯನ್ ಡಾಲರ್ ಇದೆ. ಭಾರತ ಶ್ರೀಲಂಕಾ ದಾರಿಯಲ್ಲಿದೆ ಎಂದು ವಾದಿಸುವವರಿಗೆ ಇದೇ ದೊಡ್ಡ ಅಸ್ತ್ರ. 60 ಬಿಲಿಯನ್ ನಷ್ಟು ಸಾಲ ಮಾಡಿದ ಶ್ರೀಲಂಕಾ ದಿವಾಳಿಯಾಗಿದೆ. ಇನ್ನು ಇಷ್ಟೊಂದು ಸಾಲ ಮಾಡಿರೋ ಭಾರತಕ್ಕೆ ಉಳಿಗಾಲ ಇಲ್ಲ ಅನ್ನೋ ವಾದ. ಆದ್ರೆ ವಿಷಯ ಇಷ್ಟು ಸಿಂಪಲ್ ಅಲ್ಲ. ಯಾವುದೇ ಒಂದು ದೇಶದ ಸಾಲದ ಪ್ರಮಾಣವನ್ನ ಆ ದೇಶದ ಜಿಡಿಪಿಯ ಶೇಕಡಾವಾರು ಲೆಕ್ಕ ಹಾಕಿ ಆರ್ಥಿಕ ಸುಸ್ಥಿತಿ ಅಥವಾ ದುಸ್ಥಿತಿ ಲೆಕ್ಕ ಹಾಕಲಾಗುತ್ತೆ. ಅಂದ್ರೆ ಒಂದು ವರ್ಷದ ದೇಶದ ಒಟ್ಟು ಜಿಡಿಪಿಯಲ್ಲಿ ಆ ದೇಶದ ಸಾಲದ ಪ್ರಮಾಣ ಎಷ್ಟಿದೆ ಅಂತ ಲೆಕ್ಕ ಹಾಕಲಾಗುತ್ತೆ. ಶ್ರೀಲಂಕಾದ ಒಂದು ವರ್ಷದ ಜಿಡಿಪಿ 80 ಬಿಲಿಯನ್ ಡಾಲರ್ ಇದ್ರೆ ವಿದೇಶಿ ಸಾಲ 60 ಬಿಲಿಯನ್ ಇದೆ. ಭಾರತದ ಜಿಡಿಪಿ 3.05 ಟ್ರಿಲಿಯನ್ ಡಾಲರ್ ಇದ್ರೆ ವಿದೇಶಿ ಸಾಲ 620 ಬಿಲಿಯನ್ ಡಾಲರ್ ಇದೆ. ಭಾರತದ ಒಟ್ಟು ವಿದೇಶಿ ಸಾಲ ಒಂದು ವರ್ಷದ ಜಿಡಿಪಿಯಲ್ಲಿ ಶೇ.20ರಷ್ಟಿದೆಯಷ್ಟೇ. ಆದ್ರೆ ಇದು ಶ್ರೀಲಂಕಾದಲ್ಲಿ ಶೇ.107 ರಷ್ಟನ್ನ ದಾಟಿದೆ. ಶ್ರೀಲಂಕಾದ ಪರಿಸ್ಥಿತಿ ಹೇಗಿದೆ ಅಂದ್ರೆ ತಾನು ಪಡೆದಿರೋ ಸಾಲಕ್ಕೆ ಬಡ್ಡಿಯನ್ನೂ ಕಟ್ಟಲಾಗದಂತಾ ಸ್ಥಿತಿ ಇದೆ. ಆರ್ ಬಿ ಐ ಅಂಕಿ ಅಂಶಗಳ ಪ್ರಕಾರ ಭಾರತ ಮುಂದಿನ 9 ತಿಂಗಳಲ್ಲಿ 21 ಲಕ್ಷ ಕೋಟಿ ಸಾಲವನ್ನ ಮರುಪಾವತಿಸಲಿದೆ. ಅಂದ್ರೆ ಭಾರತ ತನ್ನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ಮಾಡಿದೆ. ಆದ್ರೆ ಶ್ರೀಲಂಕಾ ತನ್ನ ದೇಶದ ಸಾಮರ್ಥ್ಯಕ್ಕಿಂತ ಸಾಲ ಮಾಡಿ ದಿವಾಳಿಯಾಗಿದೆ..
ಭಾರತದ ಒಟ್ಟು ವಿದೇಶಿ ಸಾಲ ಜಿಡಿಪಿಯ ಶೇ.20ರಷ್ಟಿದ್ದರೆ ಜಗತ್ತಿನ ಮುಂದುವರಿದ ದೇಶಗಳ ಸಾಲದ ಪ್ರಮಾಣ ಆ ದೇಶದ ಜಿಡಿಪಿಯಲ್ಲಿ ಎಷ್ಟೆಷ್ಟಿದೆ ಗೊತ್ತಾ..? 2021ರ ಅಂಕಿ ಅಂಶದ ಪ್ರಕಾರ ಜಗತ್ತಿನ ಬಲಿಷ್ಠ ಆರ್ಥಿಕತೆಯಾದ ಅಮೆರಿಕದ ವಿದೇಶಿ ಸಾಲ ಆ ದೇಶದ ವಾರ್ಷಿಕ ಜಿಡಿಪಿಯ ಶೇ.101.6 ರಷ್ಟಿತ್ತು. ಯುನೈಟೆಡ್ ಕಿಂಗ್ ಡಮ್ ನ ವಿದೇಶಿ ಸಾಲ ಆ ದೇಶದ ಒಟ್ಟು ಜಿಡಿಪಿಯ ಶೇ. 317ರಷ್ಟಿದೆ. ಫ್ರಾನ್ಸ್ ನ ಒಟ್ಟು ವಿದೇಶಿ ಸಾಲ ಆ ದೇಶದ ಜಿಡಿಪಿಯ ಶೇ.256 ರಷ್ಟಿದೆ. ಜರ್ಮನಿಯ ಒಟ್ಟು ವಿದೇಶಿ ಸಾಲ ಆ ದೇಶದ ಜಿಡಿಪಿ ಶೇ.172ರಷ್ಟಿದೆ. ಚೀನಾದ ಒಟ್ಟು ವಿದೇಶಿ ಸಾಲ ಆ ದೇಶದ ವಾರ್ಷಿಕ ಜಿಡಿಪಿಯ ಶೇ.16 ರಷ್ಟಿದೆ. ಈ ಎಲ್ಲ ದೇಶಗಳೂ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ವಿದೇಶಿ ಸಾಲ ಮಾಡಿಕೊಂಡಿವೆ. ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಗೆ ಹೋಲಿಕೆ ಮಾಡಿದ್ರೆ ಭಾರತದ ವಿದೇಶಿ ಸಾಲ, ಶ್ರೀಲಂಕಾದಂತೆ ಸಾಲದ ಸುಳಿಯಲ್ಲಿ ಸಿಲುಕುವಂತಿಲ್ಲ.
ಭಾರತದ ವಾರ್ಷಿಕ ಆರ್ಥಿಕ ಬೆಳವಣಿಗೆ ದರ 2021-22ರಲ್ಲಿ ಶೇ.8.7ರಷ್ಟಿದ್ರೆ, ಚೀನಾ ಶೇ.8.1 ರಷ್ಟಿದೆ. ಬ್ರಿಟನ್ 7.4 ರಷ್ಟು, ಅಮೆರಿಕ 5.7 ರಷ್ಟು, ಫ್ರಾನ್ಸ್ 7 ರಷ್ಟು ಜರ್ಮನಿ 2.8 ರಷ್ಟಿದೆ. ಕೋವಿಡ್ ನಂತರದ ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಜಗತ್ತಿನ ಪ್ರಬಲ ಆರ್ಥಿಕ ದೇಶಗಳಿಗಿಂತಲೂ ಮುಂದಿದೆ.
ಈಗಾಗಲೇ ತುಂಬಾ ಕಷ್ಟ ಅನುಭವಿಸಿದ್ದೇವೆ: ಲಂಕಾ ಜನರ ಅಳಲು
ಇಷ್ಟೆಲ್ಲ ಹೇಳಿದ ಮೇಲೆ ಭಾರತದ ಆರ್ಥಿಕತೆ ಹಾಲಿನಂತೆ ಪರಿಶುದ್ಧ ಅಂತೇನು ಭಾವಿಸಬೇಕಿಲ್ಲ. ಡಾಲರ್ ವಿರುದ್ಧ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದು, ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗುತ್ತಿರುವುದು, ವಿತ್ತೀಯ ಕೊರತೆ, ನಿರಂತರವಾಗಿರೋ ಬೆಲೆ ಏರಿಕೆ ಪ್ರಮಾಣ, ನಿರುದ್ಯೋಗ ಪ್ರಮಾಣ, ಕಡಿಮೆ ತಲಾದಾಯ ಎಲ್ಲವೂ ಭಾರತದ ಆರ್ಥಿಕತೆಗೆ ಸವಾಲಿನ ವಿಷಯಗಳೇ. ಹಾಗಂತ ಈ ಸವಾಲುಗಳನ್ನ ಭಾರತ ಮಾತ್ರ ಎದುರಿಸುತ್ತಿದೆಯಾ ಅಂತ ನೋಡಿದರೆ ಅದು ಸುಳ್ಳು. ಜಗತ್ತಿನ ಪ್ರಬಲ ಆರ್ಥಿಕತೆ ಹೊಂದಿರೋ ದೇಶಗಳೂ ಇದೇ ಸವಾಲುಗಳನ್ನ ಎದುರಿಸುತ್ತಿವೆ...
ಇಷ್ಟೆಲ್ಲಾ ಹೇಳಿದ ಮೇಲೆ ಭಾರತವೂ ಶ್ರೀಲಂಕಾದಂತೆ ದಿವಾಳಿಯಾಗಿಬಿಡುತ್ತೆ ಅಂತ ವಾದಿಸುತ್ತಿರುವವರಿಗೆ ಹಾಗಾಗಲೀ ಅನ್ನೋ ಬಯಕೆ ಇದ್ದಿರಬಹುದು. ರಾಜಕಾರಣಿಗಳು ರಾಜಕೀಯ ಕಾರಣಕ್ಕೆ ಇಂಥಾ ಭಯ ಸೃಷ್ಟಿಸೋ ವಾದ ಮಾಡ್ತಿದ್ದಾರೆ. ಇನ್ನು ಬುದ್ಧಿಜೀವಿಗಳ ಗೆಟಪ್ ನಲ್ಲಿರೋ ಇನ್ನೂ ಕೆಲವರು ತಾವು ನಂಬೋ ಸಿದ್ಧಾಂತಕ್ಕೆ ವಿರುದ್ಧವಾದ ಪಕ್ಷ ಅಧಿಕಾರದಲ್ಲಿದೆ ಅನ್ನೋ ಕಾರಣಕ್ಕೆ ಅಭಿಪ್ರಾಯ ಮೂಡಿಸಲು ಇಂಥಾ ಪ್ರಯತ್ನ ಮಾಡ್ತಿದ್ದಾರೆ ಅಷ್ಟೇ.